HSRP Number Plate: ನಿಮ್ಮ ವಾಹನಕ್ಕೆ ಎಚ್‌ಎಸ್‌ಆರ್‌ಪಿ ಪ್ಲೇಟ್ ಹಾಕಿಸಿಲ್ಲವೇ, ಜ. 31ರವರೆಗೆ ಉಂಟು ಗಡುವು, ನಂತರ ದಂಡ ಬೀಳುವ ಸಾಧ್ಯತೆ
ಕರ್ನಾಟಕ ಸರ್ಕಾರದ ಸಾರಿಗೆ ಇಲಾಖೆಯು ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಸಂಖ್ಯೆ ಅಳವಡಿಸಲು ಇದ್ದ ಗಡುವಿನ ದಿನಾಂಕವನ್ನು 2025ರ ಜನವರಿ 31 ರವರೆಗೆ ವಿಸ್ತರಣೆ ಮಾಡಿದೆ. ವರದಿ: ಎಚ್.ಮಾರುತಿ, ಬೆಂಗಳೂರು
ಬೆಂಗಳೂರು: ವಾಹನಗಳಿಗೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಲು ಮತ್ತೊಮ್ಮೆ ಗಡುವು ವಿಸ್ತರಿಸಲಾಗಿದೆ. ರಾಜ್ಯ ಸಾರಿಗೆ ಇಲಾಖೆ ಈವರೆಗೆ 6 ಬಾರಿ ಗಡುವು ವಿಸ್ತರಣೆ ಮಾಡಿದ್ದರೂ ವಾಹನಗಳ ಮಾಲೀಕರು ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ಆಸಕ್ತಿ ತೋರುತ್ತಿಲ್ಲ. ಹೀಗಾಗಿ, ರಾಜ್ಯ ಸಾರಿಗೆ ಇಲಾಖೆ ಮತ್ತೊಂದು ಅವಕಾಶ ನೀಡಿದೆ. ಇದೀಗ ಸಾರಿಗೆ ಇಲಾಖೆ ಜನವರಿ 31ರವರೆಗೆ ಸಮಯಾವಕಾಶ ನೀಡಿ ಆದೇಶ ಹೊರಡಿಸಿದೆ. ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಅಳವಡಿಕೆಗೆ ಮತ್ತೆ ಮತ್ತೆ ಅವಕಾಶ ನೀಡುತ್ತಲೇ ಇದ್ದರೂ ಗ್ರಾಹಕರು ನಿರಾಸಕ್ತಿ ಹೊಂದಿದ್ದಾರೆ. 2019ಕ್ಕೂ ಮೊದಲು ನೋಂದಣಿಯಾದ ವಾಹನಗಳಿಗೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಆನಂತರ ದಂಡ ಬೀಳುವ ಸಾಧ್ಯತೆಗಳೂ ಇವೆ.
ರಾಜ್ಯದಲ್ಲಿ 2019ರ ಏಪ್ರಿಲ್ 1ಕ್ಕೂ ಮೊದಲು ನೋಂದಣಿಯಾಗಿರುವ 2 ಕೋಟಿ ವಾಹನಗಳಲ್ಲಿ ಅಂದಾಜು 57 ಲಕ್ಷ ವಾಹನಗಳು ಮಾತ್ರ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಂಡಿದ್ದು, ಇನ್ನೂ 1.45 ಕೋಟಿ ವಾಹನಗಳು ಎಚ್‌ಎಸ್‌ಆರ್‌ಪಿ ಫಲಕವನ್ನು ಅಳವಡಿಸಿಕೊಳ್ಳಬೇಕಿವೆ ಎಂದು ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ.
2019ರ ಏಪ್ರಿಲ್ 1ಕ್ಕೂ ಮೊದಲು ನೋಂದಣಿಯಾಗಿರುವ ವಾಹನಗಳು ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕೆಂಬ ಸರ್ಕಾರದ ಅಧಿಸೂಚನೆಯನ್ನು ಪ್ರಶ್ನಿಸಿ ಅಖಿಲ ಭಾರತ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಉತ್ಪಾದಕರ ಸಂಘ ಹೈಕೋರ್ಟ್ ಮೊರೆ ಹೋಗಿದೆ. ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಲು ಎಲ್ಲಾ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಉತ್ಪಾದಕರಿಗೂ ಅಂಗೀಕೃತ ಪ್ರಮಾಣ ಪತ್ರ ನೀಡಬೇಕು, ಆಟೋಮೊಬೈಲ್ ಕಂಪನಿ ಮತ್ತು ವಿತರಕರೊಂದಿಗೆ ಒಪ್ಪಂದ ಮಾಡಿಕೊಂಡಿರುವ ಕಂಪನಿಗಳಿಗೆ ಮಾತ್ರ ಅನುಕೂಲವಾಗುತ್ತದೆ. ಇದು ಸರಿಯಾದ ಕ್ರಮ ಅಲ್ಲ. ಎಲ್ಲ ಉತ್ಪಾದಕರಿಗೂ ಅವಕಾಶ ನೀಡಬೇಕು ಎಂದು ವಾದಿಸುತ್ತಿದೆ.
ನಾಲ್ಕು ಬಾರಿ ಗಡುವು ವಿಸ್ತರಣೆ
ಆರಂಭದಲ್ಲಿ 2023 ಆಗಸ್ಟ್ ತಿಂಗಳಲ್ಲಿ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳುವಂತೆ ಅಧಿಸೂಚನೆ ಹೊರಡಿಸಿ ನವೆಂಬರ್ 17 ಕ್ಕೆ ಅಂತಿಮ ಗಡುವು ನೀಡಲಾಗಿತ್ತು. ಆದರೆ ನಿರೀಕ್ಷಿತ ಪ್ರತಿಕ್ರಿಯೆ ಬಾರದಿದ್ದರಿಂದ 2023ರ ನವೆಂಬರ್ 17, 2024ರ ಫೆಬ್ರವರಿ 17 ಮತ್ತು 2024ರ ಮೇ 17 ಸೆ.15 ಹಾಗೂ ನವೆಂಬರ್ 30 ಡಿಸೆಂಬರ್ 31ರವರೆಗೆ ಗಡುವು ವಿಸ್ತರಿಸಲಾಗಿತ್ತು. ಇದೀಗ ಮತ್ತೊಮ್ಮೆ ಗಡುವು ವಿಸ್ತರಣೆಯಾಗಿದೆ.
ಭದ್ರತೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಮೋಟಾರು ವಾಹನ ಕಾಯ್ದೆ-1989 ಸೆಕ್ಷನ್ 50 ಹಾಗೂ 51 ಅನ್ವಯ ಎಲ್ಲಾ ವಾಹನಗಳಿಗೆ ಗರಿಷ್ಠ ಭದ್ರತೆಯ ನಂಬರ್ ಪ್ಲೇಟ್‌ಗಳನ್ನು ಅಳವಡಿಸಬೇಕಿದೆ. ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಎಂದರೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಶನ್ ಪ್ಲೇಟ್ ಎಂದರ್ಥ. ಕರ್ನಾಟಕದ ವಾಹನಗಳಿಗೆ ಇದನ್ನು ಕಡ್ಡಾಯಗೊಳಿಸಲಾಗಿದೆ. ಒಂದು ವೇಳೆ ಹೆಚ್‌ಎಸ್‌ಆರ್‌ಪಿ ಅಳವಡಿಸದಿದ್ದರೆ ಮಾಲೀಕತ್ವದ ಬದಲಾವಣೆ, ವಿಳಾಸ ಬದಲಾವಣೆ, ನಕಲಿ ಆರ್‌ಸಿ, ವಿಮೆ ಹಾಗೂ ಇನ್ನಿತರ ಕೆಲಸಗಳನ್ನು ಮಾಡಲಾಗುವುದಿಲ್ಲ. ಸಾರಿಗೆ ಇಲಾಖೆ ಹೊರಡಿಸಿರುವ ಈ ಸೂಚನೆಯಿಂದ ಅಧಿಕೃತವಾಗಿಲ್ಲದ ವಾಹನಗಳು ರಸ್ತೆಯಲ್ಲಿ ಓಡಾಡುವುದನ್ನು ಸುಲಭವಾಗಿ ಪತ್ತೆ ಹಚ್ಚಲು ಸಹಾಯಕವಾಗಲಿದೆ.
ನಂಬರ್ ಪ್ಲೇಟ್ ಪಡೆಯುವುದು ಸುಲಭ
https://transport.karnataka.gov.in ಅಥವಾ www.siam.in ಪೋರ್ಟಲ್‌ನಲ್ಲಿ ಲಾಗಿನ್ ಆಗಬೇಕು. ಇಲ್ಲಿ Book HSRP ಕ್ಲಿಕ್ ಮಾಡಿ ನಂತರ ನಿಮ್ಮ ವಾಹನ ತಯಾರಕ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿ ವಾಹನದ ವಿವರವನ್ನು ನಮೂದಿಸಿ ಸಮೀಪದ ಅಥವಾ ಡೀಲರ್ ಶೋ ರೂಂ ಆಯ್ಕೆ ಮಾಡಿಕೊಳ್ಳಬೇಕು. ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗೆ ಅಲ್ಲಿ ಕಾಣಿಸುವ ಹಣವನ್ನು ಆನ್‌ಲೈನ್‌ನಲ್ಲಿ ಪಾವತಿ ಮಾಡಬೇಕು. ನಂತರ ಮೊಬೈಲ್ ಗೆ ಬರುವ ಒಟಿಪಿಯನ್ನು ನಮೂದಿಸಬೇಕು. ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಲು ಅನುಕೂಲದ ದಿನಾಂಕವನ್ನು ಆಯ್ಕೆ ಮಾಡಿಕೊಂಡರೆ ಆ ದಿನದಂದು ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬಹುದಾಗಿದೆ.
ವರದಿ: ಎಚ್.ಮಾರುತಿ, ಬೆಂಗಳೂರು