ಮೈಕ್ರೋಫೈನಾನ್ಸ್ ಸುಗ್ರೀವಾಜ್ಞೆ ಜಾರಿ ವಿಳಂಬ, ಕರ್ನಾಟಕ ಸರ್ಕಾರದಿಂದ ಸ್ಪಷ್ಟೀಕರಣ ಕೋರಿದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್
ಕರ್ನಾಟಕ ಸರ್ಕಾರ ಕಳುಹಿಸಿದ್ದ ಮೈಕ್ರೋಫೈನಾನ್ಸ್ ಸುಗ್ರೀವಾಜ್ಞೆಯನ್ನು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ತಿರಸ್ಕರಿಸಿದ್ದಾರೆ. ಕಾನೂನು ಸಂಬಂಧಿಸಿದಂತೆ ಹಲವು ಸ್ಪಷ್ಟೀಕರಣಗಳನ್ನು ಕೇಳಿದ್ದಾರೆ ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ.

Karnataka Microfinance Law: ಬಹುನಿರೀಕ್ಷಿತ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ಜಾರಿಯಾಗುವುದು ವಿಳಂಬವಾಗಿದೆ. ಕರ್ನಾಟಕ ಸರ್ಕಾರ ಕಳುಹಿಸಿದ್ದ ಮೈಕ್ರೋಫೈನಾನ್ಸ್ ಸುಗ್ರೀವಾಜ್ಞೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸಹಿ ಹಾಕಿಲ್ಲ. ಕಾನೂನು ಸಂಬಂಧಿಸಿದಂತೆ ಇನ್ನಷ್ಟು ಸ್ಪಷ್ಟೀಕರಣಗಳು ಬೇಕು ಎಂದು ಕೇಳಿರುವುದಾಗಿ ಸಿಎಂ ಕಚೇರಿ ಮೂಲಗಳು ತಿಳಿಸಿವೆ.
ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಬಲವಂತದ ಸಾಲ ವಸೂಲಿ ಹಾಗೂ ಕಿರುಕುಳಕ್ಕೆ ಬ್ರೇಕ್ ಹಾಕುವ ಸುಗ್ರೀವಾಜ್ಞೆಯ ಪ್ರಸ್ತಾವನೆಯು ಸೋಮವಾರ ರಾಜ್ಯಪಾಲರ ಕಚೇರಿಗೆ ತಲುಪಿತ್ತು. ಅಂತಿಮ ಸುಗ್ರೀವಾಜ್ಞೆ ನಿರ್ಣಯದಲ್ಲಿ ಕಿರುಕುಳ ನೀಡುವವರಿಗೆ ಗರಿಷ್ಠ 10 ವರ್ಷಗಳ ಜೈಲು ಶಿಕ್ಷೆ ಹಾಗೂ 5 ಲಕ್ಷ ರೂಪಾಯಿ ವರೆಗೆ ದಂಡ ವಿಧಿಸಲು ಅವಕಾಶ ಮಾಡಿ ಕೊಡಲಾಗಿದೆ. ಆದರೆ ಈಗ ರಾಜ್ಯಪಾಲರು ಈ ಸುಗ್ರೀವಾಜ್ಞೆಯನ್ನು ಸರ್ಕಾರಕ್ಕೆ ಹಿಂದಿರುಗಿಸಿದ್ದು, ಹಲವು ವಿಷಯಗಳ ಬಗ್ಗೆ ಸ್ಪಷ್ಟೀಕರಣ ಕೋರಿದ್ದಾರೆ.
ಮೈಕ್ರೋಫೈನಾನ್ಸ್ ಸುಗ್ರೀವಾಜ್ಞೆ ಬೇಡ, ಮಸೂದೆ ರೂಪದಲ್ಲಿ ಮಂಡನೆಯಾಗಲಿ ಎಂದ ರಾಜ್ಯಪಾಲರು
ಸುಗ್ರೀವಾಜ್ಞೆಯಲ್ಲಿ ಸಾಲ ಪಡೆದವರ ರಕ್ಷಣೆಗೆ ಮಾತ್ರವೇ ಗಮನ ಹರಿಸಲಾಗಿದೆ. ಸಹಜ ನ್ಯಾಯದ ಪ್ರಕಾರ ಸಾಲ ಕೊಟ್ಟವರ ಹಿತದ ವಿಚಾರ ಕಾಣುತ್ತಿಲ್ಲ. ಇಂತಹ ಕಾನೂನು ದೀರ್ಘ ಅವಧಿಯಲ್ಲಿ ಮಾರಕವಾಗಬಹುದು. ಮೈಕ್ರೋ ಫೈನಾನ್ಸ್‌ಗಳು 3 ಲಕ್ಷ ರೂಪಾಯಿಗಿಂತ ಹೆಚ್ಚು ಸಾಲ ಕೊಡುವುದಿಲ್ಲ. ಇಲ್ಲಿ ಆ ಸಾಲದ ಮೊತ್ತಕ್ಕಿಂತಲೂ ಹೆಚ್ಚು ಅಂದರೆ 5 ಲಕ್ಷ ರೂಪಾಯಿ ದಂಡ ವಿಧಿಸುವ ವಿಚಾರ ಪ್ರಸ್ತಾಪವಾಗಿದೆ. ಇದನ್ನು ಸಮರ್ಥಿಸಿಕೊಳ್ಳುವುದು ಹೇಗೆ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಸಾಲ ಪಡೆಯುವನ ಬಳಿ ಅಡಮಾನ ಅಥವಾ ದಾಖಲೆಗಳು ಪಡೆಯಬಾರದು ಎಂಬ ಉಲ್ಲೇಖವಿದೆ. ಇದನ್ನೇ ಸರ್ಕಾರಿ ಸಂಸ್ಥೆಗಳು ನೀಡುವ ಸಾಲದ ವೇಳೆ ಅನುಸರಿಸಬೇಕಾದ ಪರಿಸ್ಥಿತಿ ಉಂಟಾಗಬಹುದು. ಶಿಕ್ಷೆ ಪ್ರಮಾಣ 10 ವರ್ಷಕ್ಕೆ ಏರಿಸಿದ್ದು, ಶಿಕ್ಷೆ ಪ್ರಮಾಣವನ್ನು ಸಮರ್ಥಿಸಿಕೊಳ್ಳುವುದು ಹೇಗೆ? ಪ್ರಾಮಾಣಿಕವಾಗಿ ಸಾಲ ನೀಡುತ್ತಿರುವವರ ಮೇಲೂ ಇದು ಪರಿಣಾಮ ಬೀರಲಿದೆ. ಈ ಬಗ್ಗೆ ಗಮನಹರಿಸಿದ್ದೀರಾ ಎಂದು ರಾಜ್ಯಪಾಲರು ಪ್ರಶ್ನಿಸಿದ್ದಾರೆ.
ಮೈಕ್ರೋಫೈನಾನ್ಸ್ ಸುಗ್ರೀವಾಜ್ಞೆ ತರಾತುರಿಯಲ್ಲಿ ಜಾರಿಗೊಳಿಸುವ ಬದಲು, ಸಾಧಕ ಬಾಧಕಗಳನ್ನು ಇದೇ ಬಜೆಟ್ ಅಧಿವೇಶನದಲ್ಲಿ ಚರ್ಚಿಸಿ ಸೂಕ್ತ ನಿರ್ಣಯಕ್ಕೆ ಬರುವುದು ಉತ್ತಮ ಎಂದು ರಾಜ್ಯಪಾಲರು ಸಲಹೆ ನೀಡಿದ್ದಾರೆ. ಈಗ ಇರುವಂತಹ ಕಾನೂನುಗಳಲ್ಲೇ ಪೊಲೀಸರು ಸರಿಯಾದ ಕ್ರಮಗಳನ್ನು ಜರುಗಿಸುತ್ತಿಲ್ಲ. ಹೀಗಿರುವಾಗ ಹೊಸ ಹೊಸ ಕಾನೂನುಗಳನ್ನು ರಚಿಸುವ ಅಗತ್ಯ ಇದೆಯಾ ಗಮನಿಸಿ ಅಥವಾ ಇರುವಂತಹ ಕಾನೂನುಗಳನ್ನೇ ಅಗತ್ಯ ತಿದ್ದುಪಡಿ ಮಾಡಿಕೊಂಡು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವುದು ಒಳಿತಾ ಎಂದು ಸಮಾಲೋಚನೆ ಮಾಡಿ ನಿರ್ಧರಿಸಿ ಎಂದು ರಾಜ್ಯಪಾಲರು ತಿಳಿಸಿದ್ದಾಗಿ ಮೂಲಗಳು ಹೇಳಿವೆ.
ಮೈಕ್ರೋಫೈನಾನ್ಸ್ ಸುಗ್ರೀವಾಜ್ಞೆಯಲ್ಲಿ ಏನಿದೆ
ಫೆ.1 ರಂದು ಅಂತಿಮ ಗೊಳಿಸಿದ ಕರ್ನಾಟಕ ರಾಜ್ಯ ಮೈಕ್ರೋ ಫೈನಾನ್ಸ್ (ಬಲವಂತದ ಕ್ರಮಗಳ ನಿಯಂತ್ರಣ) ಸುಗ್ರೀವಾಜ್ಞೆ -2025ರ 8ನೇ ಕರಡಿನಲ್ಲಿ ಕಿರುಕುಳ ನೀಡುವವರ ವಿರುದ್ಧ ಪೊಲೀಸರು ತತ್‌ಕ್ಷಣ ದೂರು ದಾಖಲಿಸಿಕೊಳ್ಳಬೇಕು. ಕಿರುಕುಳ ನೀಡಿರುವುದು ಸಾಬೀತಾದರೆ 3 ವರ್ಷ ಜೈಲು ಶಿಕ್ಷೆ ಹಾಗೂ 5 ಲಕ್ಷ ರೂಪಾಯಿವರೆಗೆ ಗರಿಷ್ಠ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿತ್ತು. ಸೋಮವಾರ ರಾಜ್ಯಪಾಲರ ಕಚೇರಿಗೆ ಕಳುಹಿಸಿರುವ ಅಂತಿಮ ಸುಗ್ರೀವಾಜ್ಞೆ ಆದೇಶದಲ್ಲಿ ಗರಿಷ್ಠ ಶಿಕ್ಷೆ ಪ್ರಮಾಣವನ್ನು 10 ವರ್ಷಗಳಿಗೆ ಹೆಚ್ಚಿಸಲಾಗಿದೆ. ತನ್ಮೂಲಕ ಕಿರುಕುಳ ನೀಡುತ್ತಿರುವ ಮೈಕ್ರೋಫೈನಾನ್ಸ್ ಸಂಸ್ಥೆಗಳು ಹಾಗೂ ಲೇವಾದೇವಿದಾರರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿತ್ತು ಎಂದು ಸರ್ಕಾರದ ಮೂಲಗಳು ತಿಳಿಸಿವೆ.
