Salary Hike: ಕರ್ನಾಟಕ ಸಿಎಂ, ಸಚಿವರು, ಶಾಸಕರ ವೇತನ ಶೇಕಡ 100 ಹೆಚ್ಚಳ, ಸಮರ್ಥನೆ ಮಾಡಿಕೊಂಡ ಸರ್ಕಾರ
Salary Hike: ಕರ್ನಾಟಕ ಸಿಎಂ, ಸಚಿವರು, ಶಾಸಕರ ವೇತನ ಶೇಕಡ 100 ಹೆಚ್ಚಳಕ್ಕೆ ಸರ್ಕಾರ ತೀರ್ಮಾನಿಸಿದೆ. ಇದಕ್ಕೆ ಸಂಬಂಧಿಸಿದ 2 ಮಸೂದೆಗಳನ್ನು ವಿಧಾನ ಮಂಡಲದಲ್ಲಿ ಮಂಡಿಸಲು ಸಜ್ಜಾಗಿದೆ. ವೇತನ ಹೆಚ್ಚಳವನ್ನು ಸಚಿವ ಸಂಪುಟ ಸದಸ್ಯರು ಸಮರ್ಥಿಸಿಕೊಂಡಿದ್ದಾರೆ.

Salary Hike: ಕರ್ನಾಟಕದ ಸಿಎಂ, ಸಚಿವರು, ಶಾಸಕರು ಈಗ ಪಡೆಯುತ್ತಿರುವ ವೇತನ ಮತ್ತು ಭತ್ಯೆಯನ್ನು ಶೇಕಡ 100 ಹೆಚ್ಚಿಸಲು ಕರ್ನಾಟಕ ಸರ್ಕಾರ ತೀರ್ಮಾನಿಸಿದೆ. ಇದಕ್ಕೆ ಸಂಬಂಧಿಸಿದ ಕರ್ನಾಟಕ ಸಚಿವರ ವೇತನ ಮತ್ತು ಭತ್ಯೆಗಳ (ತಿದ್ದುಪಡಿ) ಮಸೂದೆ 2025 ಮತ್ತು ಕರ್ನಾಟಕ ಶಾಸಕಾಂಗ ಸದಸ್ಯರ ವೇತನ, ಪಿಂಚಣಿ ಮತ್ತು ಭತ್ಯೆಗಳ (ತಿದ್ದುಪಡಿ) ಮಸೂದೆ 2025 ಎಂಬ ಎರಡು ಮಸೂದೆಗಳನ್ನು ಸರ್ಕಾರ ವಿಧಾನ ಮಂಡಲದಲ್ಲಿ ಮಂಡಿಸಲು ಮುಂದಾಗಿದೆ.
ಕರ್ನಾಟಕ ಸಿಎಂ, ಸಚಿವರು, ಶಾಸಕರ ವೇತನ ಶೇಕಡ 100 ಹೆಚ್ಚಳ
ಸದ್ಯದ ಮಾಹಿತಿ ಪ್ರಕಾರ, ಶಾಸಕರ ವೇತನ 40,000 ದಿಂದ 80,000 ರೂಪಾಯಿ, ವಿಧಾನಸಭಾಧ್ಯಕ್ಷರ ಮತ್ತು ವಿಧಾನ ಪರಿಷತ್ ಸಭಾಪತಿ ವೇತನ 75,000ದಿಂದ 1.25 ಲಕ್ಷ ರೂಪಾಯಿ, ಸಚಿವರ ವೇತನ 60,000 ದಿಂದ 1.25 ಲಕ್ಷ ರೂಪಾಯಿ, ಮುಖ್ಯಮಂತ್ರಿಯ ವೇತನ 75,000 ದಿಂದ 1.50 ಲಕ್ಷ ರೂಪಾಯಿಗೆ ಹೆಚ್ಚಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಆ ಮೂಲಕ, ಸಿಎಂ, ಸಚಿವರು, ಶಾಸಕರ ವೇತನ ಶೇಕಡ 100 ಹೆಚ್ಚಳವಾಗಲಿದೆ.
ಶಾಸಕರು, ವಿಧಾನ ಪರಿಷತ್ ಸದಸ್ಯರು, ವಿಧಾನ ಸಭಾಧ್ಯಕ್ಷರು, ಸಭಾಪತಿ, ವಿರೋಧ ಪಕ್ಷದ ನಾಯಕರು, ಮುಖ್ಯ ಸಚೇತಕರ ವೇತನ, ಭತ್ಯೆ ಹೆಚ್ಚಳದಿಂದ 50 ಕೋಟಿ ರೂಪಾಯಿ, ಮುಖ್ಯಮಂತ್ರಿ, ಸಚಿವರುಗಳ ವೇತನ ಭತ್ಯೆ ಹೆಚ್ಚಳದಿಂದ 10 ಕೋಟಿ ರೂಪಾಯಿ ಸೇರಿ ರಾಜ್ಯದ ಬೊಕ್ಕಸಕ್ಕೆ ವಾರ್ಷಿಕ 62 ಕೋಟಿ ರೂಪಾಯಿ ಹೆಚ್ಚುವರಿ ಹೊರೆ ಬೀಳಬಹುದು ಎಂದು ಅಂದಾಜಿಸಲಾಗಿದೆ.
ಶಾಸಕರ ವೇತನ ಮತ್ತು ಭತ್ಯೆಗಳನ್ನು 2015ರಲ್ಲಿ ಪರಿಷ್ಕರಿಸಿದ ಬಳಿಕ ಬಿಜೆಪಿ ಸರ್ಕಾರದ ಅವಧಿಯಲ್ಲಿ 2022ರಲ್ಲಿ ಮತ್ತೆ ಪರಿಷ್ಕರಿಸಲಾಗಿತ್ತು.
ಶಾಸಕರ ವೇತನ ಹೆಚ್ಚಳವನ್ನು ಸಮರ್ಥನೆ ಮಾಡಿಕೊಂಡ ಗೃಹ ಸಚಿವ ಜಿ ಪರಮೇಶ್ವರ
ಮೂಲಗಳ ಪ್ರಕಾರ, ಕರ್ನಾಟಕ ವಿಧಾನಸಭೆಯಲ್ಲಿ ಈ ಎರಡೂ ಮಸೂದೆಗಳನ್ನು ಸರ್ಕಾರ ಬೇಗ ಮಂಡಿಸಲಿದೆ. ಕರ್ನಾಟಕ ಸಿಎಂ, ಸಚಿವರು, ಶಾಸಕರ ವೇತನ ಶೇಕಡ 100 ಹೆಚ್ಚಳವನ್ನು ಗೃಹ ಸಚಿವ ಡಾ ಜಿ ಪರಮೇಶ್ವರ ಅವರು ಸಮರ್ಥನೆ ಮಾಡಿಕೊಂಡಿದ್ದಾರೆ. ಹೆಚ್ಚುತ್ತಿರುವ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಶಾಸಕಾಂಗ ಸದಸ್ಯರು ತಮ್ಮ ಜೀವನ ಮಟ್ಟವನ್ನು ಕಾಪಾಡಿಕೊಳ್ಳುವುದಕ್ಕೆ ಈ ಕ್ರಮ ಎಂದು ಹೇಳಿಕೊಂಡಿದ್ದಾರೆ.
ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರಂತೆ ಶಾಸಕರು ಕೂಡ ಬಳಲುತ್ತಿದ್ದಾರೆ. ಆದ್ದರಿಂದ ಶಾಸಕರು, ಸಚಿವರು, ಮುಖ್ಯಮಂತ್ರಿಗಳ ವೇತನ ಹೆಚ್ಚಳದ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೈಗೊಂಡಿದ್ದಾರೆ. ಕೆಲವು ಖಾತೆಗಳಿಂದ ಹಣವನ್ನು ಮುಖ್ಯಮಂತ್ರಿಯವರು ಇದಕ್ಕಾಗಿ ಸರಿ ಹೊಂದಿಸುವರು ಎಂದು ಸಚಿವ ಜಿ ಪರಮೇಶ್ವರ ಹೇಳಿದರು.
ವೇತನ ಹೆಚ್ಚಳದ ಪ್ರಸ್ತಾವನೆಯನ್ನು ಸಮರ್ಥಸಿಕೊಂಡ ಸಚಿವ ಎಂಬಿ ಪಾಟೀಲ್, ಸ್ವತಂತ್ರ ಸಮಿತಿಯ ಶಿಫಾರಸು ಪ್ರಕಾರ ವೇತನ ಮತ್ತು ಭತ್ಯೆ ಹೆಚ್ಚಿಸಿದರೆ ಅದು ಸ್ವೀಕಾರಾರ್ಹ. ಪ್ರಧಾನಿ, ಸಚಿವರು ಮತ್ತು ಸಂಸದರ ವೇತನ ಜಗತ್ತಿನಲ್ಲೇ ಹೆಚ್ಚಿದ್ದು, ಈ ರೀತಿ ಇದ್ದರೆ ಭ್ರಷ್ಟಾಚಾರ ಕಡಿಮೆಯಾಗಲಿದೆ ಎಂದು ಹೇಳಿದರು.
