ಕನ್ನಡ ಸುದ್ದಿ  /  Karnataka  /  Karnataka Govt Decision To Change The Name Of Salam Arathi Is Correct: Home Minister Araga Jnanendra

Salam Arathi: ಸಲಾಂ ಆರತಿ ಹೆಸರು ಬದಲಿಸುವ ಸರಕಾರದ ನಿರ್ಧಾರ ಸರಿ ಎಂದ ಗೃಹ ಸಚಿವ ಆರಗ ಜ್ಞಾನೇಂದ್ರ

ಯಾವುದೋ ಗುಲಾಮಿ ಪರಿಸ್ಥಿತಿಯಲ್ಲಿ ಸಲಾಂ ಆರತಿ ಪದ್ಧತಿ ಚಾಲ್ತಿಗೆ ಬಂದಿತ್ತು. ಈಗ ಅಂತಹ ಪದ್ಧತಿ ಬದಲಾಗಬೇಕು. ಕನಿಷ್ಠ ನಮ್ಮ ದೇವಾಲಯಗಳಲ್ಲಿ ಸಾಂಸ್ಕೃತಿಕ ನೆಲೆಗಟ್ಟು ಗಟ್ಟಿಗೊಳಿಸದಿದ್ದಲ್ಲಿ ಮತ್ತೆ ಎಲ್ಲಿ ಆಗೋದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಶ್ನೆ ಮಾಡಿದ್ದಾರೆ.

ಕರ್ನಾಟಕದ ಗೃಹ ಸಚಿವ ಆರಗ ಜ್ಞಾನೇಂದ್ರ
ಕರ್ನಾಟಕದ ಗೃಹ ಸಚಿವ ಆರಗ ಜ್ಞಾನೇಂದ್ರ (HT_PRINT)

ಮಂಗಳೂರು: ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಾಲಯಗಳಲ್ಲಿ ರೂಢಿಯಾಗಿ ಬಂದಿರುವ "ದೀವಟಿಗೆ ಸಲಾಂ” “ಸಲಾಂ ಆರತಿ” ಮತ್ತು “ಸಲಾಂ ಮಂಗಳಾರತಿ” ಎಂಬ ಪೂಜಾಕಾರ್ಯಗಳ ಹೆಸರನ್ನು ಬದಲಾಯಿಸಿ ನಮ್ಮ ಸಂಪ್ರದಾಯದ ಹೆಸರನ್ನು ನೀಡುವ ಸರಕಾರದ ನಿರ್ಧಾರ ಸರಿಯಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅಭಿಪ್ರಾಯಪಟ್ಟಿದ್ದಾರೆ.

ಯಾವುದೋ ಗುಲಾಮಿ ಪರಿಸ್ಥಿತಿಯಲ್ಲಿ ಸಲಾಂ ಆರತಿ ಪದ್ಧತಿ ಚಾಲ್ತಿಗೆ ಬಂದಿತ್ತು. ಈಗ ಅಂತಹ ಪದ್ಧತಿ ಬದಲಾಗಬೇಕು. ಕನಿಷ್ಠ ನಮ್ಮ ದೇವಾಲಯಗಳಲ್ಲಿ ಸಾಂಸ್ಕೃತಿಕ ನೆಲೆಗಟ್ಟು ಗಟ್ಟಿಗೊಳಿಸದಿದ್ದಲ್ಲಿ ಮತ್ತೆ ಎಲ್ಲಿ ಆಗೋದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಶ್ನೆ ಮಾಡಿದ್ದಾರೆ.

‘ಸಲಾಂ ಆರತಿ’ ಹೆಸರು ಬದಲಿಸುವ ಸರ್ಕಾರದ ನಿರ್ಧಾರ ಸರಿಯಾಗಿದೆ. ನಮ್ಮ ಸಂಸ್ಕೃತಿಯನ್ನು ಬಲಪಡಿಸುವ ಕೆಲಸವನ್ನು ದೇವಸ್ಥಾನಗಳಲ್ಲಿ ಕೈಗೊಳ್ಳದಿದ್ದರೆ ಇನ್ನೆಲ್ಲಿ ಆಗಬೇಕು? ಎಂದು ಅವರು ಪ್ರಶ್ನಿಸಿದ್ದಾರೆ.

ಮಂಗಳೂರಿಗೆ ಖಾಸಗಿ ಕಾರ್ಯಕ್ರಮವೊಂದಕ್ಕೆ ಆಗಮಿಸಿದ ವೇಳೆ ಸುದ್ದಿಗಾರರ ಪ್ರಶ್ನೆಗೆ ಈ ರೀತಿ ಅವರು ಉತ್ತರಿಸಿದ್ದಾರೆ.

ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ನೈತಿಕ ಪೊಲೀಸ್ ಗಿರಿ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಾನೂನನ್ನು ಯಾರೂ ಕೈಗೆ ತೆಗೆದುಕೊಳ್ಳಬಾರದು. ಯಾರೂ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಬಾರದು ಎಂದು ಅವರು ಹೇಳಿದ್ದಾರೆ. "ಶಾಂತಿ ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಸಹಕಾರ ನೀಡಬೇಕು. ಇತ್ತೀಚಿಗೆ ದ.ಕ.ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಎಲ್ಲವೂ ಸರಿಯಾಗಿದೆ. ಒಂದೆರಡು ಹತ್ಯೆ ಪ್ರಕರಣಗಳು ಬಿಟ್ಟರೆ ಮತ್ತೆಲ್ಲವೂ ಆ ಮಟ್ಟದಲ್ಲಿ ಯಾವುದೂ ನಡೆದಿಲ್ಲʼʼ ಎಂದು ಅವರು ಹೇಳಿದ್ದಾರೆ.

ಏನಿದು ಸಲಾಂ ಆರತಿ?

ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ಕೆಲವು ದೇವಾಲಯಗಳಲ್ಲಿ ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆಯ ಸಂಧರ್ಭಗಳಲ್ಲಿ ದೀವಟಿಗೆ ಹಿಡಿದು ದೇವಾಲಯಕ್ಕೆ ಮತ್ತು ದೇವರಿಗೆ ಆರತಿಯಂತೆ ನಡೆಸುವ ಕಾರ್ಯಕ್ಕೆ ದೀವಟಿಗೆ ಸಲಾಂ, ಸಲಾಂ ಮಂಗಳಾರತಿ ಮತ್ತು ಸಲಾಂ ಆರತಿ ಎಂದು ಕೆಲವು ದೇವಾಲಯಗಳಲ್ಲಿ ಕರೆಯಲಾಗುತ್ತಿದೆ.

ಇದೀಗ ಈ ರೀತಿಯ ಆರತಿ ಹೆಸರುಗಳನ್ನು ಬದಲಾಯಿಸಲು ಸರಕಾರ ಮುಂದಾಗಿದೆ. "ಇಂತಹ ಹೆಸರುಗಳನ್ನು ನ್ನ ಬದಲಾಯಿಸಬೇಕು ಎನ್ನುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಕ್ತಾದಿಗಳಿಂದ ಸಾಕಷ್ಟು ಒತ್ತಾಯ ಇರುವ ಬಗ್ಗೆ, ಧಾರ್ಮಿಕ ಪರಿಷತ್ತಿನ ಸದಸ್ಯರು ಸಭೆಯ ಗಮನಕ್ಕೆ ತಂದರು. ಇದರ ಹಿನ್ನಲೆಯಲ್ಲಿ ರಾಜ್ಯ ಧಾರ್ಮಿಕ ಪರಿಷತ್ತಿನಲ್ಲಿ ಚರ್ಚೆಯನ್ನು ನಡೆಸಲಾಗಿದೆʼʼ ಎಂದು ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ , ಹಜ್‌ ಮತ್ತು ವಕ್ಫ್‌ ಸಚಿವರಾದ ಶ್ರೀಮತಿ ಶಶಿಕಲಾ ಅ ಜೊಲ್ಲೆ ಹೇಳಿದ್ದರು.

ಈ ಹಿನ್ನಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಹಿರಿಯ ಆಗಮ ಪಂಡಿತರ ಅಭಿಪ್ರಾಯದಂತೆ ದೇವಾಲಯಗಳಲ್ಲಿ ಇನ್ನು ಮುಂದೆ “ದೀವಟಿಗೆ ಸಲಾಂ” ಎಂಬ ಪದದ ಬದಲಾಗಿ “ದೀವಟಿಗೆ ನಮಸ್ಕಾರ” ಎಂದು, “ಸಲಾಂ ಆರತಿ” ಎಂಬ ಪದದ ಬದಲಾಗಿ “ಆರತಿ ನಮಸ್ಕಾರ” ಎಂದು ಹಾಗೂ ʼಸಲಾಂ ಮಂಗಳಾರತಿ” ಎಂಬ ಪದದ ಬದಲಾಗಿ “ಮಂಗಳಾರತಿ ನಮಸ್ಕಾರ” ಎಂದು ಹೆಸರನ್ನು ಬದಲಾಯಿಸಿಕೊಂಡು ಸೇವೆಗಳನ್ನು ಮತ್ತು ಸೇವಾಕಾರ್ಯಗಳನ್ನು ಮುಂದುವರೆಸಲು ಸುತ್ತೋಲೆ ಹೊರಡಿಸಲು ನಿರ್ಧರಿಸಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದರು.

ರಾಜ್ಯ ಸರಕಾರವು ಕೇವಲ ಈ ಸಲಾಂ ಆರತಿಗಳ ಹೆಸರನ್ನು ಮಾತ್ರ ಬದಲಾಯಿಸಿದೆ. ಕೇವಲ ಬೇರೆ ಭಾಷೆಯ ಪದಗಳನ್ನು ಬದಲಾಯಿಸಿ, ನಮ್ಮ ಭಾಷೆಯ ಪದವನ್ನು ಅಳವಡಿಸಿ ಈ ಹಿಂದಿನಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವನ್ನು ಮತ್ತು ಪೂಜೆಗಳನ್ನು ಮುಂದುವರೆಸಲಾಗುವುದು. ಪೂಜಾ ಕಾರ್ಯಗಳನ್ನು ರದ್ದುಪಡಿಸಲಾಗುವುದಿಲ್ಲ ಎಂದು ಸರಕಾರ ಸ್ಪಷ್ಟಪಡಿಸಿದೆ.

IPL_Entry_Point