ಕರ್ನಾಟಕದ ನರ್ಸಿಂಗ್ ಕಾಲೇಜುಗಳ ಶುಲ್ಕ ಮೇಲ್ವಿಚಾರಣೆ-ನಿಯಂತ್ರಣಕ್ಕೆ ಸಮಿತಿ ರಚನೆ; ಹೆಚ್ಚು ಫೀಸ್ ವಿಧಿಸಿದರೆ ಶಿಸ್ತು ಕ್ರಮ-karnataka govt forms fee regulatory committee to monitor and regulate fee structures of nursing colleges jra ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕದ ನರ್ಸಿಂಗ್ ಕಾಲೇಜುಗಳ ಶುಲ್ಕ ಮೇಲ್ವಿಚಾರಣೆ-ನಿಯಂತ್ರಣಕ್ಕೆ ಸಮಿತಿ ರಚನೆ; ಹೆಚ್ಚು ಫೀಸ್ ವಿಧಿಸಿದರೆ ಶಿಸ್ತು ಕ್ರಮ

ಕರ್ನಾಟಕದ ನರ್ಸಿಂಗ್ ಕಾಲೇಜುಗಳ ಶುಲ್ಕ ಮೇಲ್ವಿಚಾರಣೆ-ನಿಯಂತ್ರಣಕ್ಕೆ ಸಮಿತಿ ರಚನೆ; ಹೆಚ್ಚು ಫೀಸ್ ವಿಧಿಸಿದರೆ ಶಿಸ್ತು ಕ್ರಮ

ವೈದ್ಯಕೀಯ ಶಿಕ್ಷಣ ಇಲಾಖೆಯ ಜಂಟಿ ಕಾರ್ಯದರ್ಶಿ ನೇತೃತ್ವದಲ್ಲಿ ಹೊಸದಾಗಿ ಶುಲ್ಕ ಮೇಲ್ವಿಚಾರಣೆ ಹಾಗೂ ನಿಯಂತ್ರಣಕ್ಕೆ ಸಮಿತಿ ರಚಿಸಲಾಗಿದೆ. ಐದು ಸದಸ್ಯರ ಸಮಿತಿಗೆ, ಕರ್ನಾಟಕದ ನರ್ಸಿಂಗ್‌ ಕಾಲೇಜುಗಳ ಶುಲ್ಕ ರಚನೆಯನ್ನು ಪರಿಶೀಲಿಸುವ ಕೆಲಸವನ್ನು ವಹಿಸಲಾಗಿದೆ.

ನರ್ಸಿಂಗ್ ಕಾಲೇಜುಗಳ ಶುಲ್ಕದ ಮೇಲ್ವಿಚಾರಣೆ, ನಿಯಂತ್ರಣಕ್ಕೆ ಸಮಿತಿ ರಚಿಸಿದ ಕರ್ನಾಟಕ ಸರ್ಕಾರ
ನರ್ಸಿಂಗ್ ಕಾಲೇಜುಗಳ ಶುಲ್ಕದ ಮೇಲ್ವಿಚಾರಣೆ, ನಿಯಂತ್ರಣಕ್ಕೆ ಸಮಿತಿ ರಚಿಸಿದ ಕರ್ನಾಟಕ ಸರ್ಕಾರ

ಬೆಂಗಳೂರು: ಕರ್ನಾಟಕದ ನರ್ಸಿಂಗ್ ಕಾಲೇಜುಗಳು ವಿಧಿಸುತ್ತಿರುವ ಶುಲ್ಕವನ್ನು ನಿಭಾಯಿಸಲು ಶುಲ್ಕ ನಿಯಂತ್ರಣ ಸಮಿತಿಯನ್ನು (fee regulatory committee) ರಚಿಸಲು ಕರ್ನಾಟಕ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ (Dr Sharan Prakash Patil) ಆದೇಶಿಸಿದ್ದಾರೆ. ವಿಕಾಸಸೌಧ ಕಚೇರಿಯಲ್ಲಿ ಇತ್ತೀಚೆಗೆ ನಡೆದ ನರ್ಸಿಂಗ್ ಸಂಸ್ಥೆಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಡಾ.ಶರಣಪ್ರಕಾಶ್ ಪಾಟೀಲ್, ನರ್ಸಿಂಗ್ ಕಾಲೇಜುಗಳು ಹೆಚ್ಚಿನ ಶುಲ್ಕ ವಿಧಿಸುತ್ತಿರುವ ಬಗ್ಗೆ ತಮ್ಮ ಕಚೇರಿಗೆ ಹಲವಾರು ದೂರುಗಳು ಬಂದಿವೆ. ಇದರಿಂದ ವಿದ್ಯಾರ್ಥಿಗಳ ಮೇಲೆ ಭಾರಿ ಆರ್ಥಿಕ ಹೊರೆ ಬೀಳುತ್ತಿದೆ. ಹೀಗಾಗಿ ಇದನ್ನು ಸಮರ್ಪಕವಾಗಿ ನಿಭಾಯಿಸಿ ಏಕರೂಪತೆ ತರಬೇಕು ಹೇಳಿದರು.

ವೈದ್ಯಕೀಯ ಶಿಕ್ಷಣ ಇಲಾಖೆಯ ಜಂಟಿ ಕಾರ್ಯದರ್ಶಿ ನೇತೃತ್ವದಲ್ಲಿ ಹೊಸದಾಗಿ ರಚಿಸಲಾದ ಐದು ಸದಸ್ಯರ ಶುಲ್ಕ ನಿಯಂತ್ರಣ ಸಮಿತಿಗೆ, ಶುಲ್ಕ ರಚನೆಗಳನ್ನು ಪರಿಶೀಲಿಸುವ ಕಾರ್ಯವನ್ನು ವಹಿಸಲಾಗುತ್ತದೆ. ಸರ್ಕಾರ ನಿಗದಿಪಡಿಸಿದ ಮಿತಿಯನ್ನು ಮೀರಿ ಯಾವುದೇ ನರ್ಸಿಂಗ್ ಕಾಲೇಜುಗಳು ಹೆಚ್ಚುವರಿ ಶುಲ್ಕ ವಿಧಿಸುವುದು ಕಂಡುಬಂದರೆ ಅಗತ್ಯ ಪ್ರಮಾಣಪತ್ರ ಮತ್ತು ಕಾರ್ಯಸಾಧ್ಯತಾ ಪ್ರಮಾಣಪತ್ರವನ್ನು (ಇಸಿ ಮತ್ತು ಎಫ್‌ಸಿ) ಹಿಂತೆಗೆದುಕೊಳ್ಳಬೇಕು ಎಂದು ಇಲಾಖೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆ.

ಪ್ರಸ್ತುತ, ನರ್ಸಿಂಗ್‌ ಕಾಲೇಜು ಶುಲ್ಕ ರಚನೆಯು ಸರ್ಕಾರಿ ಕೋಟಾದಡಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ 10,000 ರೂ., ಮ್ಯಾನೇಜ್ಮೆಂಟ್ ಕೋಟಾದಡಿ 1 ಲಕ್ಷ ರೂ., ಮತ್ತು ಕರ್ನಾಟಕದ ಹೊರಗಿನ ವಿದ್ಯಾರ್ಥಿಗಳಿಗೆ 1.40 ಲಕ್ಷ ರೂಪಾಯಿ ಶುಲ್ಕ ವಿಧಿಸಬಹುದು.

ರಾಜ್ಯದಲ್ಲಿರುವ ಒಟ್ಟು 611 ನರ್ಸಿಂಗ್ ಕಾಲೇಜುಗಳಲ್ಲಿ 35,000 ಸೀಟುಗಳು ಲಭ್ಯವಿವೆ. ಶುಲ್ಕ ರಚನೆಯನ್ನು ಶೇಕಡಾ 20ರಷ್ಟು ಹೆಚ್ಚಿಸುವಂತೆ ನರ್ಸಿಂಗ್ ಕಾಲೇಜು ಆಡಳಿತ ಮಂಡಳಿಯ ಮನವಿಯನ್ನು ಡಾ.ಪಾಟೀಲ್ ಇತ್ತೀಚೆಗೆ ತಿರಸ್ಕರಿಸಿದರು.

ವೈದ್ಯಕೀಯ ಶಿಕ್ಷಣ ಪ್ರಧಾನ ಕಾರ್ಯದರ್ಶಿಗೆ ನಿರ್ದೇಶನ

ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಜಿಎನ್ಎಂ ಕಾಲೇಜುಗಳಲ್ಲಿನ ಮೂಲಸೌಕರ್ಯ ಮತ್ತು ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಲು ಜಿಲ್ಲಾಧಿಕಾರಿಗಳೊಂದಿಗೆ ಸಭೆ ಕರೆಯುವಂತೆ ಡಾ.ಪಾಟೀಲ್ ವೈದ್ಯಕೀಯ ಶಿಕ್ಷಣ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೋಶಿನ್ ಅವರಿಗೆ ನಿರ್ದೇಶನ ನೀಡಿದರು. ಪರಿಶೀಲನಾ ವರದಿಗಳನ್ನು ಒಂದು ತಿಂಗಳೊಳಗೆ ಸಲ್ಲಿಸಬೇಕು. ಬಿಎಸ್‌ಸಿ ನರ್ಸಿಂಗ್ ಕಾಲೇಜುಗಳ ಪರಿಶೀಲನೆಗಾಗಿ ಸಮಿತಿಯನ್ನು ರಚಿಸಿ, ಶೀಘ್ರ ವರದಿ ಸಲ್ಲಿಸುವಂತೆ ವೈದ್ಯಕೀಯ ಶಿಕ್ಷಣ ನಿರ್ದೇಶಕಿ ಡಾ.ಸುಜಾತಾ ರಾಥೋಡ್ ಅವರಿಗೆ ಸೂಚನೆ ನೀಡಲಾಯಿತು.

ನರ್ಸಿಂಗ್ ಸಂಸ್ಥೆಗಳು ಪ್ರತ್ಯೇಕವಾಗಿ ನರ್ಸಿಂಗ್ ಕೋರ್ಸ್‌ಗಳನ್ನು ನಡೆಸುತ್ತಿವೆ ಎಂದು ಖಚಿತಪಡಿಸಿಕೊಳ್ಳಲು ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಒಂದೇ ಕಟ್ಟಡದಲ್ಲಿ ಅನೇಕ ಕೋರ್ಸ್‌ಗಳನ್ನು ನಡೆಸುತ್ತಿರುವ ಸಂಸ್ಥೆಗಳ ಅನುಮತಿ ಹಿಂಪಡೆಯಿರಿ ಎಂದು ಅವರು ಹೇಳಿದರು.