ಆಶಾ ಕಾರ್ಯಕರ್ತೆಯರಿಗೆ ಸರ್ಕಾರದಿಂದ ಸಿಹಿ ಸುದ್ದಿ; ಏಪ್ರಿಲ್ನಿಂದ ಪ್ರತಿ ತಿಂಗಳು 10 ಸಾವಿರ ಮುಂಗಡ ಪಾವತಿ
ಆಶಾ ಕಾರ್ಯಕರ್ತೆಯರಿಗೆ ಏಪ್ರಿಲ್ ತಿಂಗಳಿನಿಂದ 10 ಸಾವಿರ ಮುಂಗಡವಾಗಿ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ರಾಜ್ಯ ಸರ್ಕಾರದಿಂದ ಆಶಾ ಕಾರ್ಯಕರ್ತೆಯರಿಗೆ ಹೆಚ್ಚಿನ ಸಹಕಾರ ನೀಡಲಾಗಿದೆ. ಆದರೆ ಕೇಂದ್ರ ಸರ್ಕಾರ ಗೌರವಧನ ಹೆಚ್ಚಿಸಿಲ್ಲ ಎಂದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಬೆಳ್ತಂಗಡಿ (ದಕ್ಷಿಣ ಕನ್ನಡ): ಆಶಾ ಕಾರ್ಯಕರ್ತೆಯರಿಗೆ ಕರ್ನಾಟಕ ಸರ್ಕಾರ (Karnataka government) ಸಿಹಿ ಸುದ್ದಿ ನೀಡಿದೆ. ಏಪ್ರಿಲ್ನಿಂದಲೇ ಪ್ರತಿ ತಿಂಗಳೂ 10 ಸಾವಿರ ಮುಂಗಡ ಪಾವತಿಸಲು ತೀರ್ಮಾನಿಸಿದೆ. ಇದರೊಂದಿಗೆ ಆಶಾ ಕಾರ್ಯಕರ್ತೆಯರ (ASHA workers) ಬಹು ದಿನಗಳ ಬೇಡಿಕೆ ಈಡೇರಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಅವರು ಖಚಿತಪಡಿಸಿದ್ದಾರೆ. ಆಶಾ ಕಾರ್ಯಕರ್ತೆಯರಿಗೆ ಏಪ್ರಿಲ್ ತಿಂಗಳಿನಿಂದ 10 ಸಾವಿರ ಮುಂಗಡವಾಗಿ ನೀಡಲು ಈಗಾಗಲೇ ಸರ್ಕಾರ ತೀರ್ಮಾನಿಸಿದೆ. ರಾಜ್ಯ ಸರ್ಕಾರದಿಂದ ಆಶಾ ಕಾರ್ಯಕರ್ತೆಯರಿಗೆ ಹೆಚ್ಚಿನ ಸಹಕಾರ ನೀಡಲಾಗಿದೆ. ಆದರೆ ಕೇಂದ್ರ ಸರ್ಕಾರ (Central Government) ಗೌರವಧನ ಹೆಚ್ಚಿಸುವ ಕಾರ್ಯ ಮಾಡಬೇಕು ಎಂದು ಸಚಿವ ಒತ್ತಾಯಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಮಚ್ಚಿನ ಗ್ರಾಮದಲ್ಲಿ ಇಂದು (ಜನವರಿ 18) ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ದಿನೇಶ್ ಗುಂಡೂರಾವ್, ನೀವು, ನಿಮ್ಮ ಸಂಸದರು ಕೇಂದ್ರದಲ್ಲಿ ಪ್ರಭಾವ ಬಳಸಿ ಆಶಾ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ವಿಸುವಂತೆ ಒತ್ತಾಯಿಸಿ ಎಂದು ಶಾಸಕ ಹರೀಶ್ ಪುಂಜಾ ಅವರಿಗೆ ಇದೇ ವೇಳೆ ಸೂಚಿಸಿದರು. ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರ 5 ಸಾವಿರ ಗೌರವಧನ ನೀಡುತ್ತಿದೆ. ಕೇಂದ್ರ ಸರ್ಕಾರ 3 ಸಾವಿರ ನೀಡುತ್ತಿದ್ದು , ಅದರಲ್ಲೂ ಶೇ 40 ರಷ್ಟು ಪಾಲನ್ನ ರಾಜ್ಯ ಸರ್ಕಾರವೇ ಭರಿಸುತ್ತಿದೆ. ಪ್ರತಿ ಬಾರಿ ರಾಜ್ಯ ಸರ್ಕಾರ ಗೌರವಧನ ಹೆಚ್ಚಳ ಮಾಡಿಕೊಂಡು ಬರುತ್ತಿದೆ. ಆದರೆ ಕೇಂದ್ರ ಸರ್ಕಾರದಿಂದ ಆಶಾ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಳವಾಗಿಯೇ ಇಲ್ಲ ಎಂದು ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಶಾಸಕ ಹರೀಶ್ ಪುಂಜಾ ಅವರು ವೇದಿಕೆಯ ಮೇಲಿದ್ದ ದಿನೇಶ್ ಗುಂಡೂರಾವ್ ಎದುರು ಎರಡು ಬೇಡಿಕೆಗಳನ್ನು ಮುಂದಿಟ್ಟರು. ನಾನೊಬ್ಬ ಆಶಾ ಕಾರ್ಯಕರ್ತೆಯರ ಕುಟುಂಬದಿಂದ ಬಂದವನಾಗಿದ್ದು, ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಿಸಬೇಕು. ಹಾಗೂ 70 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಆಯುಷ್ಮಾನ್ ಭಾರತ್ ಯೋಜನೆಯನ್ನ ರಾಜ್ಯ ಸರ್ಕಾರ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ದಿನೇಶ್ ಅವರು ಕೇಂದ್ರದಿಂದ ಗೌರವಧನ ಹೆಚ್ಚಳವಾಗಿಯೇ ಇಲ್ಲ ಎಂದು ತಿರುಗೇಟು ನೀಡಿದರು. ಇದೇ ವೇಳೆ ಆಯುಷ್ಮಾನ್ ಭಾರತ್ ಯೋಜನೆ ಜಾರಿಗೊಳಿಸುವ ಕುರಿತು ಮಾತನಾಡಿದ ಗುಂಡೂರಾವ್, 70 ವರ್ಷ ಮೇಲ್ಪಟ್ಟವರಿಗೆ ಆಯುಷ್ಮಾನ್ ಭಾರತ್ ಯೋಜನೆಯಡಿ ವಯೋ ವಂದನ ಯೋಜನೆ ಅನುಷ್ಠಾನ ವಿಚಾರದಲ್ಲಿ ರಾಜ್ಯ ಸರ್ಕಾರ ಮುಕ್ತವಾಗಿದೆ ಎಂದಿದ್ದಾರೆ.
ರಾಜ್ಯ ಸರ್ಕಾರವೇ 75ರಷ್ಟು ಭರಿಸುತ್ತಿದೆ ಎಂದ ದಿನೇಶ್ ಗುಂಡೂರಾವ್
ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕೆಲವು ಸ್ಪಷ್ಟನೆ ಕೇಳಿ ನವೆಂಬರ್ ತಿಂಗಳಿನಲ್ಲಿಯೇ ಪತ್ರ ಬರೆಯಲಾಗಿದೆ. ಕೇಂದ್ರದಿಂದ ಇನ್ನೂ ಉತ್ತರ ಬಂದಿಲ್ಲ. ಆಯುಷ್ಮಾನ್ ಭಾರತ್ ಯೋಜನೆಯ ಪ್ರಕಾರ ಶೇ 60 ರಷ್ಟು ಕೇಂದ್ರ ಹಾಗೂ ಶೇ 40 ರಷ್ಟು ರಾಜ್ಯ ಸರ್ಕಾರ ಅನುದಾನ ನೀಡಬೇಕು. ಆದರೆ ಪ್ರಸ್ತುತ ಕರ್ನಾಟಕ ರಾಜ್ಯ ಸರ್ಕಾರ ಶೇ 75 ರಷ್ಟು ಅನುದಾನದ ಪಾಲನ್ನು ಭರಿಸುತ್ತಿದ್ದು, ಶೇ 25 ರಷ್ಟು ಅನುದಾನವನ್ನು ಮಾತ್ರ ಕೇಂದ್ರ ಸರ್ಕಾರ ನೀಡುತ್ತಿದೆ. ರಾಜ್ಯ ಸರ್ಕಾರ 1 ಕೋಟಿ 20 ಲಕ್ಷ ಕುಟುಂಬಗಳಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯನ್ನು ಜೋಡಿಸಿದೆ. ಆದರೆ ಕೇಂದ್ರ ಸರ್ಕಾರ ರಾಜ್ಯದ 65 ಲಕ್ಷ ಕುಟುಂಬಗಳನ್ನು ಈ ಯೋಜನೆಗೆ ಪರಿಗಣಿಸಿದೆ. ರಾಜ್ಯ ಸರ್ಕಾರ 1 ಕೋಟಿ 20 ಲಕ್ಷ ಕುಟುಂಬಗಳನ್ನು ಯೋಜನೆಯ ವ್ಯಾಪ್ತಿಗೆ ತಂದಿರುವುದರಿಂದ ಬಹುತೇಕ 70 ವರ್ಷ ಮೇಲ್ಪಟ್ಟವರು ಯೋಜನೆಯ ಲಾಭ ಪಡೆಯಬಹುದಾಗಿದೆ. ಈ ಎಲ್ಲ ವಿಚಾರಗಳ ಕುರಿತು ಕೇಂದ್ರ ಸರ್ಕಾರದಿಂದ ಸ್ಪಷ್ಟ ಉತ್ತರ ಸಿಕ್ಕ ಬಳಿಕ ವಯೋ ವಂದನ ಯೋಜನೆಯನ್ನ ರಾಜ್ಯ ಅನುಷ್ಠಾನಗೊಳಿಸಲಿದೆ ಎಂದು ಸ್ಪಷ್ಟಪಡಿಸಿದರು.
ತಾಲೂಕು ಆಸ್ಪತ್ರೆಗಳ ಮೇಲ್ದರ್ಜೆಗೆ ಯೋಜನೆ
ರಾಜ್ಯದ ಪ್ರತಿಯೊಂದು ತಾಲೂಕು ಆಸ್ಪತ್ರೆಗಳನ್ನು ಜಿಲ್ಲಾಸ್ಪತ್ರೆಗಳ ಮಟ್ಟಕ್ಕೆ ಮೇಲ್ದರ್ಜೆಗೆ ಏರಿಸಲು ಯೋಜನೆ ಸಿದ್ಧಪಡಿಸಲಾಗಿದೆ. ಸಾರ್ವಜನಿಕರಿಗೆ ತಾಲೂಕು ಆಸ್ಪತ್ರೆಗಳಲ್ಲಿಯೇ ಹೆಚ್ಚಿನ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಿಕೊಡುವುದು ಅತಿ ಮುಖ್ಯವಾಗಿದೆ. ಜನರು ಜಿಲ್ಲಾಸ್ಪತ್ರೆಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಜಿಲ್ಲಾಸ್ಪತ್ರೆಗಳಲ್ಲಿ ಸಿಗುವ ಸೌಲಭ್ಯಗಳನ್ನ ತಾಲೂಕು ಆಸ್ಪತ್ರೆಗಳಲ್ಲಿಯೇ ನೀಡುವ ಮೂಲಕ ಜನರ ಸಮೀಪಕ್ಕೆ ಆರೋಗ್ಯ ಸೇವೆಗಳನ್ನು ಒದಗಿಸುತ್ತ ಮುಂಬರುವ ಬಜೆಟ್ನಲ್ಲಿ ಮಹತ್ವದ ಯೋಜನೆ ಘೋಷಣೆಯಾಗಲಿದೆ. ಈ ನಿಟ್ಟಿನಲ್ಲಿ ಪ್ರಸ್ತುತ ತಾಲೂಕು ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಸಂಖ್ಯೆಯನ್ನ ದ್ವಿಗುಣಗೊಳಿಸಲು ನಿರ್ಧರಿಸಲಾಗಿದೆ. ಇದರಿಂದ ರಾತ್ರಿ ವೇಳೆಯಲ್ಲಿಯೂ ಆಸ್ಪತ್ರೆಗಳಿಗೆ ಬರುವ ಜನರಿಗೆ ತಜ್ಞ ವೈದ್ಯರ ಸೇವೆ ಲಭ್ಯವಾಗಲಿದೆ ಎಂದು ಗುಂಡೂರಾವ್ ಹೇಳಿದ್ದಾರೆ.
ಅಲ್ಲದೇ ತಜ್ಞ ವೈದ್ಯರಿಗೆ ಬೇಕಾಗುವ ಎಲ್ಲ ವೈದ್ಯಕೀಯ ಪರಿಕರಿಗಳನ್ನು ಸರ್ಕಾರ ತಾಲೂಕು ಆಸ್ಪತ್ರೆಗಳಲ್ಲಿಯೂ ಒದಗಿಸಲಿದೆ. ದಿನದ 24 ಗಂಟೆಯೂ ತಾಲೂಕು ಆಸ್ಪತ್ರೆಗಳು ಸಕ್ರೀಯವಾಗಿ ಕಾರ್ಯನಿರ್ವಹಿಸುವಂತೆ ಯೋಜನೆ ರೂಪಿಸಲಾಗಿದೆ. ಮಚ್ಚನ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ನೂತನ ಕಟ್ಟಡವನ್ನು 4 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, 11 ಕೋಟಿ ವೆಚ್ಚದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಯುಷ್ಮಾನ್ ಆರೋಗ್ಯ ಮಂದಿರಗಳನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಕಟ್ಟಡ ದುರಸ್ಥಿ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ವಿಸ್ತ್ರತವಾದ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
