ಎನ್‌ಎಚ್‌ಎಂ ವೈದ್ಯರು, ಶುಶ್ರೂಷಕರ ವೇತನ ಪರಿಷ್ಕರಣೆ, ಶೇ 55 ರವರೆಗೆ ವೇತನ ಹೆಚ್ಚಳ, ಷರತ್ತುಗಳು ಅನ್ವಯ ಎಂದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
ಕನ್ನಡ ಸುದ್ದಿ  /  ಕರ್ನಾಟಕ  /  ಎನ್‌ಎಚ್‌ಎಂ ವೈದ್ಯರು, ಶುಶ್ರೂಷಕರ ವೇತನ ಪರಿಷ್ಕರಣೆ, ಶೇ 55 ರವರೆಗೆ ವೇತನ ಹೆಚ್ಚಳ, ಷರತ್ತುಗಳು ಅನ್ವಯ ಎಂದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ಎನ್‌ಎಚ್‌ಎಂ ವೈದ್ಯರು, ಶುಶ್ರೂಷಕರ ವೇತನ ಪರಿಷ್ಕರಣೆ, ಶೇ 55 ರವರೆಗೆ ವೇತನ ಹೆಚ್ಚಳ, ಷರತ್ತುಗಳು ಅನ್ವಯ ಎಂದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ವೈದ್ಯರು, ಶುಶ್ರೂಷಕರ ವೇತನ ಪರಿಷ್ಕರಣೆ ಮಾಡಿರುವ ಕರ್ನಾಟಕ ಸರ್ಕಾರ, ಶೇಕಡ 55 ರವರೆಗೆ ವೇತನ ಹೆಚ್ಚಳಕ್ಕೆ ಆದೇಶ ನೀಡಿದೆ. ವೈದ್ಯರ ಕೊರತೆ ನೀಗಿಸಲು ಮುಂದಾಗಿರುವ ಸರ್ಕಾರ ಷರತ್ತುಗಳನ್ನು ಕೂಡ ಹಾಕಿದೆ. (ವರದಿ- ಎಚ್.ಮಾರುತಿ, ಬೆಂಗಳೂರು)

ಎನ್‌ಎಚ್‌ಎಂ ವೈದ್ಯರು, ಶುಶ್ರೂಷಕರ ವೇತನ ಪರಿಷ್ಕರಿಸಿದ್ದು, ಶೇ 55 ರವರೆಗೆ ವೇತನ ಹೆಚ್ಚಳ ಮಾಡಲಾಗಿದೆ. ಆದರೆ ಷರತ್ತುಗಳು ಅನ್ವಯ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಎನ್‌ಎಚ್‌ಎಂ ವೈದ್ಯರು, ಶುಶ್ರೂಷಕರ ವೇತನ ಪರಿಷ್ಕರಿಸಿದ್ದು, ಶೇ 55 ರವರೆಗೆ ವೇತನ ಹೆಚ್ಚಳ ಮಾಡಲಾಗಿದೆ. ಆದರೆ ಷರತ್ತುಗಳು ಅನ್ವಯ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಬೆಂಗಳೂರು: ವೈದ್ಯರು ಮತ್ತು ಶುಶ್ರೂಷಕರ ಕೊರತೆಯನ್ನು ನಿವಾರಿಸುವ ಪ್ರಯತ್ನವಾಗಿ, ರಾಷ್ಟ್ರೀಯ ಆರೋಗ್ಯ ಮಿಷನ್‌ (ಎನ್‌ ಎಚ್‌ ಎಂ) ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸುವ ವೈದ್ಯರು ಹಾಗೂ ಶುಶ್ರೂಷಕರ ವೇತನವನ್ನು ಆರೋಗ್ಯ ಇಲಾಖೆಯು ಹೆಚ್ಚಳ ಮಾಡಿದೆ. ಆದರೆ ಇದು ಹೊಸದಾಗಿ ನೇಮಕವಾಗುವ ವೈದ್ಯರು ಹಾಗೂ ಶುಶ್ರೂಷಕರಿಗೆ ಮಾತ್ರ ಅನ್ವಯವಾಗಲಿದೆ.

ಎನ್‌ಎಚ್‌ಎಂ ಯೋಜನೆ ವೈದ್ಯರ ಕೊರತೆ ನೀಗಿಸಲು ಸರ್ಕಾರದ ಕ್ರಮ

ಎನ್‌ ಎಚ್‌ ಎಂ ಯೋಜನೆಯಡಿ ಮಂಜೂರಾಗಿದ್ದ 1,398 ಎಂಬಿಬಿಎಸ್ ವೈದ್ಯರ ಹುದ್ದೆಗಳಲ್ಲಿ 579 ಹುದ್ದೆಗಳು, 899 ತಜ್ಞ ವೈದ್ಯರ ಹುದ್ದೆಗಳಲ್ಲಿ 305 ಹುದ್ದೆಗಳು ಹಾಗೂ 9,041 ಶುಶ್ರೂಷಕರ ಹುದ್ದೆಗಳಲ್ಲಿ 936 ಹುದ್ದೆಗಳು ಭರ್ತಿಯಾಗದೆ ಖಾಲಿ ಉಳಿದಿವೆ. 9,041 ಶುಷ್ರೂಷಕರ ಹುದ್ದೆಗಳಿದ್ದು, 8,105 ಹುದ್ದೆಗಳು ಮಾತ್ರ ಭರ್ತಿಯಾಗಿದ್ದು, 936 ಹುದ್ದೆಗಳು ಖಾಲಿ ಉಳಿದಿವೆ. ಸರ್ಕಾರ ನೀಡುವ ವೇತನ ಕಡಿಮೆ ಎಂಬ ಕಾರಣಕ್ಕೆ ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುತ್ತಿರಲಿಲ್ಲ. ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದರು. ಆದ್ದರಿಂದ ವೇತನ ಪರಿಷ್ಕರಿಸಿ, ಖಾಲಿ ಹುದ್ದೆಗಳ ನೇಮಕಾತಿಗೆ ಸರ್ಕಾರ ಮುಂದಾಗಿದೆ.

ಎನ್‌ಎಚ್‌ಎಂ ವೈದ್ಯರು, ಶುಶ್ರೂಷಕರ ವೇತನ ಪರಿಷ್ಕರಣೆ

ಎಂಬಿಬಿಎಸ್ ವೈದ್ಯರಿಗೆ ಪ್ರಸ್ತುತ ರೂ. 46,895ರಿಂದ ರೂ.50 ಸಾವಿರದವರೆಗೆ ವೇತನ ನೀಡಲಾಗುತ್ತಿದೆ. ಈಗ ಆ ವೇತನವನ್ನು 60 ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ. ಸ್ತ್ರೀ ರೋಗ ತಜ್ಞರು, ಮಕ್ಕಳ ತಜ್ಞರು, ಮೂಳೆರೋಗ ತಜ್ಞರು, ಜನರಲ್‌ ಮೆಡಿಸಿನ್‌. ಅನಸ್ತೇಶಿಯಾ ಮೊದಲಾದ ತಜ್ಞ ವೈದ್ಯರ ವೇತನವನ್ನು ರೂ.1.10 ಲಕ್ಷದಿಂದ ರೂ.1.30 ಲಕ್ಷವಿದ್ದು, ಅದನ್ನು ರೂ. 1.40 ಲಕ್ಷಕ್ಕೆ ಪರಿಷ್ಕರಿಸಲಾಗಿದೆ. ಶುಶ್ರೂಷಕರ ವೇತನ 14,186 ರೂ.ಗಳಿಂದ 18,774 ರೂ.ಗಳಿಷ್ಟಿತ್ತು. ಈಗ ಆ ವೇತನವನ್ನು ರೂ. 22 ಸಾವಿರಕ್ಕೆ ಪರಿಷ್ಕರಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

ಅನುಭವಕ್ಕೆ ತಕ್ಕಂತೆ ವೇತನದಲ್ಲಿ ಶೇ 2.5 ರಷ್ಟು ಹೆಚ್ಚಳ

ತಜ್ಞ ವೈದ್ಯರ ಹುದ್ದೆಗೆ ಅನುಭವ ಹೊಂದಿದ ಅಭ್ಯರ್ಥಿಗಳು ಆಯ್ಕೆಯಾದಲ್ಲಿ, ಪ್ರತಿ ವರ್ಷವೂ ಅವರ ಅನುಭವಕ್ಕೆ ತಕ್ಕಂತೆ ವೇತನದಲ್ಲಿ ಶೇ 2.5 ರಷ್ಟು ಹೆಚ್ಚಳ ಮಾಡಲಾಗುವುದು. ಪರಿಷ್ಕೃತ ವೇತನವು ಹೊಸದಾಗಿ ನೇಮಕಗೊಂಡ ಸಿಬ್ಬಂದಿಗೆ ಮಾತ್ರ ಅನ್ವಯಿಸಲಿದೆ. ಹಾಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರ ವೇತನವನ್ನು ಪ್ರತಿ ವರ್ಷ ಶೇ.5 ರಷ್ಟು ಹೆಚ್ಚಿಸುತ್ತಾ ಬರಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಹಾಲಿ ಪಡೆಯುತ್ತಿರುವ ವೇತನ ಶ್ರೇಣಿಯಲ್ಲಿಯೇ ಮುಂದುವರಿಯುತ್ತಾರೆ. ಬೇಕಿದ್ದಲ್ಲಿ ಅವರು ರಾಜೀನಾಮೆ ಸಲ್ಲಿಸಿ, ಹೊಸ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಅನುಭವದ ಆಧಾರದ ಮೇಲೆ ಅವರಿಗೂ ಆದ್ಯತೆ ನೀಡಲಾಗುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆ ವಿಳಂಬ ಆರೋಪ

ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆ ವಿಳಂಬವಾದ್ದರಿಂದ ಎನ್‌ ಎಚ್‌ ಎಂ ಅಡಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಹಾಗೂ ಹೊರಗುತ್ತಿಗೆ ಸಿಬ್ಬಂದಿಗೆ ಎರಡು ತಿಂಗಳ ವೇತನವನ್ನು ಬಿಡುಗಡೆ ಮಾಡಲಾಗಿಲ್ಲ. ಈ ಸಂಬಂಧ ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳ ಜತೆಗೆ ಚರ್ಚೆ ನಡೆಸಲಾಗಿದ್ದು ಎರಡು ಮೂರು ದಿನಗಳಲ್ಲಿ ಹಣ ಬಿಡುಗಡೆಯಾಗಲಿದೆ. ಆಗ ಕೂಡಲೇ ವೇತನ ಪಾವತಿಸಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಸಾಮಾನ್ಯವಾಗಿ ಆರ್ಥಿಕ ವರ್ಷದ ಆರಂಭದಲ್ಲಿ ಕೇಂದ್ರದಿಂದ ಅನುದಾನ ಬಿಡುಗಡೆಯಾಗುತ್ತಿರಲಿಲ್ಲ. ಹಿಂದೆ ರಾಜ್ಯ ಸರ್ಕಾರದ ಅನುದಾನದಲ್ಲೇ ವೇತನ ಪಾವತಿಸುತ್ತಿದ್ದೆವು. ನಂತರ ಭಾರತ ಸರ್ಕಾರದಿಂದ ಅನುದಾನ ಬರುತ್ತಿತ್ತು. ಆದರೆ ಈ ವರ್ಷ ಎನ್‌ ಎಚ್‌ ಎಂ ಕಾರ್ಯಕ್ರಮಗಳನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಮಾಡಿ ಶೇ 95 ರಷ್ಟು ಅನುದಾನ ಬಳಕೆ ಮಾಡಲಾಗಿದೆ. ಆದ್ದರಿಂದ ವೇತನ ನೀಡುವುದು ವಿಳಂಬವಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ.

(ವರದಿ- ಎಚ್.ಮಾರುತಿ, ಬೆಂಗಳೂರು)

ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.