ಕರ್ನಾಟಕ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಎಲ್ಲರಿಗೂ ಮುಕ್ತ ಅವಕಾಶ
Karnataka News: ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಎಲ್ಲರಿಗೂ ಮುಕ್ತ ಅವಕಾಶ ನೀಡಲು ಬೆಂಗಳೂರಿನಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. (ವರದಿ: ಎಚ್. ಮಾರುತಿ)
Karnataka News: ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಎಲ್ಲರಿಗೂ ಮುಕ್ತ ಅವಕಾಶ ನೀಡಲು ಬೆಂಗಳೂರಿನಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ. ಬೆಂಗಳೂರು ರಸ್ತೆಗಳ ಅಭಿವೃದ್ಧಿ 694 ಕೋಟಿ ರೂ. ಅನುದಾನ ಮತ್ತು ವಿಶ್ವಬ್ಯಾಂಕ್ ನೆರವಿನಿಂದ ಸರ್ಕಾರಿ ಕಾಲೇಜುಗಳ ಮೂಲಸೌಕರ್ಯ ಅಭಿವೃದ್ಧಿ ಮಾಡಲು ಅನುಮೋದನೆ ನೀಡಿದೆ.
ಬೆಂಗಳೂರಿನಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಕಾನೂನು ಸಚಿವ ಎಚ್.ಕೆ ಪಾಟೀಲ್ ಅವರು, ಇನ್ನು ಮುಂದೆ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಎಲ್ಲರಿಗೂ ಮಕ್ತ ಅವಕಾಶವಿರಲಿದೆ. ಅಲ್ಪಸಂಖ್ಯಾತ ಶಿಕ್ಷಣ ಕಾಯ್ದೆಯಲ್ಲಿ ಮೊದಲು ನಿರ್ಬಂಧಗಳಿದ್ದವು ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿನ ಒಟ್ಟು ಅಲ್ಪಸಂಖ್ಯಾತರ ಜನಸಂಖ್ಯೆಯಲ್ಲಿ ಮುಸ್ಲಿಂ, ಕ್ರೀಶ್ಚಿಯನ್, ಸಿಖ್, ಜೈನ್, ಬೌದ್ದ ಮತ್ತು ಪಾರ್ಸಿ ಸಮುದಾಯಗಳ ಜನಸಂಖ್ಯೆ ಪ್ರಮಾಣವು ಕಡಿಮೆಯಿರುವುದರಿಂದ ಅಲ್ಪಸಂಖ್ಯಾತರ ಸಮುದಾಯದವರು ನಡೆಸುವ ಶೈಕ್ಷಣಿಕ ಸಂಸ್ಥೆಗಳನ್ನು ಅಲ್ಪಸಂಖ್ಯಾತರ ಶೈಕ್ಷಣಿಕ ಸಂಸ್ಥೆಗಳೆಂದು ಘೋಷಿಸಲು ಹಾಲಿ ಜಾರಿಯಲ್ಲಿರುವ ನಿಯಮ ಮತ್ತು ಆದೇಶಗಳಲ್ಲಿ ನಿಗದಿಪಡಿಸಿರುವ ಶೇಕಡಾವಾರು ವಿದ್ಯಾರ್ಥಿಗಳು ಲಭ್ಯವಾಗುವುದು ಕಷ್ಟಕರವಾಗಿದೆ. ಆದ್ದರಿಂದ ಈ ನಿಯಮಗಳಿಗೆ ತಿದ್ದುಪಡಿ ತರಲು ಪ್ರಸ್ತಾಪಿಸಲಾಗಿತ್ತು ಎಂದರು.
ರಾಜಧನ ಪರಿಷ್ಕರಣೆಯಿಂದ ರೂ.311 ಕೋಟಿ ಹೆಚ್ಚುವರಿ ಆದಾಯ ನಿರೀಕ್ಷೆ
ರಾಜ್ಯ ಸರ್ಕಾರವು ಉಪಖನಿಜಗಳ ಮೇಲಿನ ರಾಜಧನವನ್ನು 3 ವರ್ಷಗಳ ಅವಧಿಯಲ್ಲಿ ಒಂದು ಬಾರಿ ಪರಿಷ್ಕರಿಸಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚುವರಿ ರಾಜಸ್ವ ಸಂಗ್ರಹಣೆಗೆ ಇದರಿಂದ ಅನುಕೂಲವಾಗುವುದರಿಂದ ರಾಜಧನ ಪರಿಷ್ಕರಣೆಗೆ ಅನುಕೂಲವಾಗುವ ನಿಯಮಗಳಿಗೆ ತಿದ್ದುಪಡಿ ಮಾಡಲು ಪ್ರಸ್ತಾಪಿಸಲಾಗಿತ್ತು. ಕರ್ನಾಟಕ ಉಪಖನಿಜ ರಿಯಾಯಿತಿ (ತಿದ್ದುಪಡಿ) ನಿಯಮಗಳು, 2024ಕ್ಕೆ ಅನುಮೋದನೆ ಸಚಿವ ಸಂಪುಟ ನಿರ್ಣಯಿಸಿದೆ. ಈ ಪರಿಷ್ಕರಣೆಯಿಂದ ಒಟ್ಟಾರೆಯಾಗಿ ರೂ. 311.55 ಕೋಟಿಗಳ ಹೆಚ್ಚುವರಿ ಮೊತ್ತ ಸಂಗ್ರಹಣೆ ಅಂದಾಜಿಸಲಾಗಿದೆ. ಕಟ್ಟಡ ಕಲ್ಲು ಉಪಖನಿಜದ ರಾಜಧನವನ್ನು ಪ್ರತಿ ಮೆಟ್ರಿಕ್ ಟನ್‌ಗೆ ರೂ.80 ರಂತೆ ನಿಗದಿಪಡಿಸಲಾಗಿದೆ.
ಬಿಬಿಎಂಪಿ ವ್ಯಾಪ್ತಿಯ ರಸ್ತೆಗಳ ಸುಧಾರಣೆಗೆ ಅಸ್ತು
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಇರುವ 1611.49 ಕಿ.ಮೀ ಉದ್ದದ ಮುಖ್ಯ ಮತ್ತು ಉಪ ಮುಖ್ಯ ರಸ್ತೆ ಜಾಲದ ಕೆಲವು ರಸ್ತೆಗಳು ಹಾಳಾಗಿದ್ದು, ವ್ಯಾಪಕ ಸಾರ್ವಜನಿಕ ಟೀಕೆಗೆ ಗುರಿಯಾಗುತ್ತಿದೆ. ತುರ್ತು ಅಭಿವೃದ್ಧಿಯಿಂದ ಸುಗಮ ಸಂಚಾರ ಉಂಟಾಗಿ ವಾಹನ ಸಾಂದ್ರತೆ ಕಡಿಮೆಯಾಗುವ ನಿರೀಕ್ಷೆ ಹೊಂದಿದೆ. ಆದ್ದರಿಂದ ಬಿ.ಬಿ.ಎಂ.ಪಿ. ವ್ಯಾಪ್ತಿಯ 389.68 ಕಿ.ಮೀ.ಉದ್ದದ ಮುಖ್ಯ ಮತ್ತು ಉಪ ಮುಖ್ಯ ರಸ್ತೆಗಳ ಅಭಿವೃದ್ಧಿ ಯೋಜನೆಗೆ ಅಗತ್ಯವಿರುವ ರೂ.694 ಕೋಟಿಗಳ ಮೊತ್ತವನ್ನು ವೆಚ್ಚ ಮಾಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ಬಿ.ಬಿ.ಎಂ.ಪಿ.ಯ ಆಯವ್ಯಯದಲ್ಲಿ 2024-25ನೇ ಸಾಲಿನಲ್ಲಿ ರೂ.300 ಕೋಟಿ ಹಾಗೂ 2025-26 ಸಾಲಿನಲ್ಲಿ ರೂ.398 ಕೋಟಿಗಳನ್ನು ಭರಿಸಿಕೊಳ್ಳಲು ಸಂಪುಟ ಸಮ್ಮತಿ ನೀಡಿದೆ.
ವಿಶ್ವಬ್ಯಾಂಕ್ ನೆರವಿನಿಂದ ಸರ್ಕಾರಿ ಕಾಲೇಜುಗಳ ಮೂಲಸೌಕರ್ಯ ಅಭಿವೃದ್ಧಿ
ಮುಂದಿನ 4 ವರ್ಷಗಳಲ್ಲಿ ರೂ.250೦ ಕೋಟಿಗಳ (ರೂ.1750 ಕೋಟಿ ವಿಶ್ವ ಬ್ಯಾಂಕ್‌ನಿಂದ ಮತ್ತು ರೂ.750 ಕೋಟಿ ರಾಜ್ಯ ಸರ್ಕಾರದಿಂದ) ಬಾಹ್ಯ ನಿಧಿ ಸಹಯೋಗದೊಂದಿಗೆ ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಬಲಪಡಿಸುವ ಯೋಜನೆಯನ್ನು ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ. ಭಾರತ ಸರ್ಕಾರದ ಆರ್ಥಿಕ ವ್ಯವಹಾರಗಳ ಇಲಾಖೆಯ ಮೂಲಕ ಪ್ರಾಥಮಿಕ ಯೋಜನೆಯ ವರದಿಯನ್ನು ವಿಶ್ವಬ್ಯಾಂಕ್‌ಗೆ ಸಲ್ಲಿಸಲು ಸಚಿವ ಸಂಪುಟ ನಿರ್ಣಯಿಸಿದೆ.
ಸುಧಾರಿತ ಕೌಶಲ್ಯಗಳೊಂದಿಗೆ ಉತ್ಕೃಷ್ಟತೆ ಹೊಂದಿರುವ ವಿಭಾಗಗಳ ಸ್ಥಾಪನೆ, ಪಠ್ಯಕ್ರಮದ ಉನ್ನತೀಕರಣ, ಶಿಕ್ಷಕರ ತರಬೇತಿ, ಇಂಟರ್ನಶಿಪ್ ಮತ್ತು ಡಿಜಿಟಲ್ ಅಪ್ರೇಂಟಿಶಿಪ್‌ಗಳ ಮೂಲಕ ಸುಧಾರಿತ ಉದ್ಯೋಗಾವಕಾಶ ಒದಗಿಸುವುದು. ಸಮಾನ ಪ್ರವೇಶ ಹೆಚ್ಚಿಸುವುದು. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ದಾಖಲಾತಿಯನ್ನು ಹೆಚ್ಚಿಸುವುದು ಪ್ರಮುಖ ಉದ್ದೇಶವಾಗಿದೆ.
ರಾಜ್ಯ ಸರ್ಕಾರದ ಅಂತರ್ ನಿಗಮ ಠೇವಣಿಗಳಿಗೆ ಅಸ್ತು
ಬ್ಯಾಂಕ್‌ಗಳು ನೀಡುವ ಬಡ್ಡಿ ದರಗಳಿಗಿಂತ ಅಂತರ್ ನಿಗಮದ ಠೇವಣಿಗಳಲ್ಲಿ ಹೆಚ್ಚಿನ ಬಡ್ಡಿದರಗಳು ಲಭ್ಯವಾಗುವುದರಿಂದ ಸಾರ್ವಜನಿಕ ಉದ್ದಿಮೆಗಳು ತಮ್ಮ ಹೆಚ್ಚುವರಿ
ನಿಧಿಯನ್ನು ಅಂತರ್ ನಿಗಮ ಠೇವಣಿಗಳಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಆದಾಯ ಗಳಿಸಲು ಪ್ರಸ್ತಾಪಿಸಿದೆ. ಸಾರ್ವಜನಿಕ ವಲಯ ಉದ್ದಿಮೆಗಳು ಎದುರಿಸುತ್ತಿರುವ ನಷ್ಟದಿಂದ ಆರ್ಥಿಕ ಒತ್ತಡ ಹೆಚ್ಚಾಗಿದ್ದರಿಂದ ಸಾಲಕ್ಕೆ ಮೊರೆ ಹೊಗುವುದನ್ನು ತಪ್ಪಿಸಲು ಅಂತರ್ ನಿಗಮ ಠೇವಣಿ ಹೂಡಿಕೆಯನ್ನು ಪ್ರಸ್ತಾಪಿಸಿದೆ. ಮಾನದಂಡಗಳಿಗನುಸಾರವಾಗಿ ಸಾಲ ಪಡೆಯುವವರನ್ನು ಮತ್ತು ಸಾಲದಾತರನ್ನು ಅಧಿಸೂಚಿಸಲು ಮತ್ತು ಅಗತ್ಯವಿದ್ದರೆ ಸಾಲ ಪಡೆಯುವವರ ಮತ್ತು ಸಾಲ ನೀಡುವವರ ಪಟ್ಟಿಯನ್ನು ನಿಯತಕಾಲಿಕವಾಗಿ ಪರಿಷ್ಕರಿಸಲು ಹಣಕಾಸು ಇಲಾಖೆಗೆ ಅಧಿಕಾರ ನೀಡಲು ಸಚಿವ ಸಂಪುಟ ನಿರ್ಣಯಿಸಿದೆ.
ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ ಮಸೂದೆಗೆ ತಿದ್ದುಪಡಿ
ವಂಚಕ ಹಣಕಾಸು ಸಂಸ್ಥೆಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಹರಾಜು ಮೂಲಕ ಅವುಗಳನ್ನು ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ಬಾಧಿತ ಠೇವಣಿದಾರರಿಗೆ ಹಂಚಿಕೆ ಮಾಡುವ ಮೂಲಕ ನ್ಯಾಯ ಒದಗಿಸಲು ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಮತ್ತು ಸಂರಕ್ಷಣೆ ವಿಧೇಯಕ ಜಾರಿಗೆ ತರಲಾಗಿತ್ತು. ಈ ಕಾಯ್ದೆಗೆ ಎರಡು ಬಾರಿ ತಿದ್ದುಪಡಿ ಮಾಡಲಾಗಿದೆ.
ಈಗ ಹೊಸದಾಗಿ ಕಂದಾಯ ಇಲಾಖೆಯು ಈ ಕಾಯ್ದೆಗೆ 35 ತಿದ್ದುಪಡಿಗಳನ್ನು ಮತ್ತು ಹಣಕಾಸು ಇಲಾಖೆ ಒಂದು ತಿದ್ದುಪಡಿಯನ್ನು ಪ್ರಸ್ತಾಪಿಸಿದೆ. ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ (ತಿದ್ದುಪಡಿ) ಮಸೂದೆ, 2024 ಸಚಿವ ಸಂಪುಟ ಅನುಮೋದನೆ ನೀಡಿದೆ. ಠೇವಣಿದಾರರ ವ್ಯಾಖ್ಯೆಯನ್ನು ಮಾರ್ಪಡಿಸಲಾಗಿದ್ದು, ವಂಚನೆ ಚಟುವಟಿಕೆಯಲ್ಲಿ ಭಾಗಿಯಾಗಿರುವುವರೆಂದು ಸಾಬೀತಾಗಿರುವ ಹಣಕಾಸು ಸಂಸ್ಥೆಯ ಅಥವಾ ಅಧೀನ ಸಂಸ್ಥೆಗಳಿಗೆ ಸಂಬಂಧಿಸಿದ ವ್ಯಕ್ತಿಗಳನ್ನು ಹೊರಗಿಡಲಾಗುವುದು. ಠೇವಣಿದಾರರು ಎಂದರೆ ನಗದು ಅಥವಾ ಇನ್ನಿತರೆ ಯಾವುದೇ ರೂಪದಲ್ಲಿ ಅಥವಾ ಕೃಷಿ ಉತ್ಪನ್ನದ ರೂಪದಲ್ಲಿ ಠೇವಣಿ
ಮಾಡುವ ರೈತ ಅಥವಾ ಸಾರ್ವಜನಿಕರು ಮತ್ತು ವಸತಿ ಅಭಿವೃದ್ಧಿ ಸೊಸೈಟಿಯಲ್ಲಿ ಅಥವಾ ಸಂಸ್ಥೆಯಲ್ಲಿ ಆಸ್ತಿಯನ್ನು ಹೊಂದಲು ಠೇವಣಿ ಮಾಡುವ ವ್ಯಕ್ತಿಯೆಂದು ನಿರ್ಧರಿಸಲಾಗಿದೆ.
ಎಸ್.ಸಿ / ಎಸ್.ಟಿ ಹಾಸ್ಟೆಲ್‌ಗಳಿಗೆ ಮಂಚ-ಹಾಸಿಗೆ ಪೂರೈಕೆಗೆ ಒಪ್ಪಿಗೆ.
ಕಲ್ಯಾಣ ಕರ್ನಾಟಕ ಹಿಂದುಳಿದ ಪ್ರದೇಶ ಅಭಿವೃದ್ಧಿಪಡಿಸುವ ಸಲುವಾಗಿ ಕಲ್ಯಾಣ ಕರ್ನಾಟಕದ ಎಸ್.ಸಿ/ ಎಸ್.ಟಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಸರ್ಕಾರಿ ವಸತಿ ಶಾಲೆಗಳು ಮತ್ತು ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಸತಿ ನಿಲಯಗಳಿಗೆ ಟೂ ಟಯರ್ ಕಾಟ್, ಕಾಯರ್ ಮ್ಯಾಟ್ರಸ್ ಹಾಗೂ ಎಲೆಕ್ಟ್ರಿಕ್ ಹೀಟರ್ ಪಂಪ್‌ಗಳನ್ನು ಪೂರೈಸಲು ಪ್ರಸ್ತಾಪಿಸಲಾಗಿದೆ. ಇದಕ್ಕಾಗಿ 436 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುತ್ತದೆ.
ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಪೌಷ್ಠಿಕ ಆಹಾರ
2024-25 ಸಾಲಿನಲ್ಲಿ ಪ್ರತಿ ವಿದ್ಯಾರ್ಥಿಗೆ ಪ್ರತಿ ತಿಂಗಳು ರೂ.100 ಗಳ ವೆಚ್ಚದಲ್ಲಿ ವಿದ್ಯಾರ್ಥಿಗಳ ಪೌಷ್ಠಿಕಾಂಶ ಹೆಚ್ಚಿಸಲು ಮತ್ತು ಆರೋಗ್ಯ ಬಲವರ್ಧನೆಗಾಗಿ ಪೌಷ್ಠಿಕಾಂಶದ ಪುಡಿ, ಮೊಟ್ಟೆ ಮತ್ತು ಶೇಂಗಾ ಚೆಕ್ಕಿಯನ್ನು ಖರೀದಿಸಿ ಒದಗಿಸಲು ಪ್ರಸ್ತಾಪಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿಗಳಿಗೆ ಒಟ್ಟು ರೂ. 11 ಕೋಟಿಗಳ ವೆಚ್ಚದಲ್ಲಿ ಕೋಟಿ ಮೊಟ್ಟೆಯನ್ನು ಪ್ರಸ್ತುತ ಜಾರಿಯಲ್ಲಿರುವ ಆಹಾರ ಟೆಂಡರ್ ಪ್ರಕ್ರಿಯೆ ಮೂಲಕ ಖರೀದಿಸಿ ಒದಗಿಸಲು ನಿರ್ಣಯಿಸಿದೆ.
ವರದಿ: ಎಚ್. ಮಾರುತಿ