ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಒಳ ಮೀಸಲಾತಿಗೆ ಮೇ 5ರಿಂದ ಗಣತಿ; ಮೂರು ಹಂತಗಳಲ್ಲಿ ನಡೆಯಲಿದೆ ಸಮೀಕ್ಷೆ
ಪರಿಶಿಷ್ಟ ಜಾತಿ ಒಳ ಮೀಸಲಾತಿ ಸಮೀಕ್ಷೆ: ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿಗಾಗಿ ಮೇ 5 ರಿಂದ ಪರಿಶಿಷ್ಟ ಜಾತಿ, ಉಪ ಜಾತಿ ಸಮಗ್ರ ಸಮೀಕ್ಷೆ–2025 ನಡೆಯಲಿದೆ. ಮೂರು ಹಂತಗಳಲ್ಲಿ ಈ ಸಮೀಕ್ಷೆಯ ಮೊದಲ ಹಂತದಲ್ಲಿ ಗಣತಿ ನಡೆಯಲಿದೆ.

ಪರಿಶಿಷ್ಟ ಜಾತಿ ಒಳ ಮೀಸಲಾತಿ ಸಮೀಕ್ಷೆ: ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಒದಗಿಸುವುದಕ್ಕಾಗಿ ಮೇ 5 ರಿಂದ ಪರಿಶಿಷ್ಟ ಜಾತಿ, ಉಪ ಜಾತಿ ಸಮಗ್ರ ಸಮೀಕ್ಷೆ–2025 ನಡೆಯಲಿದೆ. ಈ ಸಮೀಕ್ಷೆ ಮೂರು ಹಂತಗಳಲ್ಲಿ ನಡೆಯಲಿದ್ದು, ಮೊದಲ ಹಂತದಲ್ಲಿ ಗಣತಿ ನಡೆಯಲಿದೆ. ಈ ಗಣತಿಯ ಮೂಲಕ ಉಪಜಾತಿಗಳು, ಅವುಗಳ ಜನಸಂಖ್ಯೆ, ಆರ್ಥಿಕ ಸ್ಥಿತಿಗತಿ, ಉದ್ಯೋಗ, ಭೂಮಾಲೀಕತ್ವ ಇತ್ಯಾದಿ ಮಾಹಿತಿಗಳನ್ನೂ ಕಲೆಹಾಕಲಾಗುತ್ತದೆ. ಎಲ್ಲ ದತ್ತಾಂಶಗಳನ್ನು ಸಂಗ್ರಹಿಸಿದ ಬಳಿಕ ವಿಶ್ಲೇಷಣೆ ಮಾಡಿ ಪರಿಶಿಷ್ಟ ಜಾತಿ ಮೀಸಲಾತಿಯಲ್ಲಿ ಒಳಮೀಸಲು ಒದಗಿಸುವುದಕ್ಕೆ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ.
ಕರ್ನಾಟಕದ ಪರಿಶಿಷ್ಟ ಜಾತಿ ಒಳ ಮೀಸಲಾತಿಗೆ ಮೇ 5 ರಿಂದ ಗಣತಿ
ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಸಮುದಾಯದಲ್ಲಿ ಅನೇಕ ಉಪಜಾತಿಗಳಿದ್ದು ಅವುಗಳ ಜನಸಂಖ್ಯೆ ಮತ್ತು ಇತರೆ ಪೂರಕ ಮಾಹಿತಿಗಳನ್ನು ಕಲೆಹಾಕುವ ಕೆಲಸ ಮೇ ಮೊದಲ ವಾರದಿಂದ ಶುರುವಾಗಲಿದೆ. ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸುವುದಕ್ಕಾಗಿ ಮೇ 5 ರಿಂದ ಗಣತಿಯನ್ನು ನಡೆಸಲಾಗುತ್ತದೆ. ಇದಕ್ಕೆ ‘ಪರಿಶಿಷ್ಟ ಜಾತಿ, ಉಪ ಜಾತಿ ಸಮಗ್ರ ಸಮೀಕ್ಷೆ–2025’ ಎಂದು ಹೆಸರಿಡಲಾಗಿದೆ. ಕರ್ನಾಟಕ ಸರ್ಕಾರವು ಒಳಮೀಸಲಾತಿಗಾಗಿ ರಚಿಸಿರುವ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ದಾಸ್ ನೇತೃತ್ವದ ಆಯೋಗದ ಶಿಫಾರಸಿನ ಅನ್ವಯ ಈ ಸಮೀಕ್ಷೆ ನಡೆಯಲಿದೆ ಎಂದು ಪ್ರಜಾವಾಣಿ ವರದಿ ಹೇಳಿದೆ.
ಸಮೀಕ್ಷೆಗಾಗಿ ರಾಜ್ಯಮಟ್ಟದ ಸಮನ್ವಯ ಸಮಿತಿ ರಚನೆ
‘ಪರಿಶಿಷ್ಟ ಜಾತಿ, ಉಪ ಜಾತಿ ಸಮಗ್ರ ಸಮೀಕ್ಷೆ–2025’ ನಡೆಸುವುದಕ್ಕಾಗಿ ರಾಜ್ಯಮಟ್ಟದ ಸಮನ್ವಯ ಸಮಿತಿ ರಚಿಸಲಾಗಿದೆ. ಅಭಿವೃದ್ಧಿ ಆಯುಕ್ತೆ ಉಮಾ ಮಹಾದೇವನ್ ಈ ಸಮಿತಿಗೆ ಅಧ್ಯಕ್ಷರಾಗಿದ್ದು, ಅವರು ಇತ್ತೀಚೆಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ವಿಡಿಯೊ ಸಂವಾದ ನಡೆಸಿದರು. ಇನ್ನು ಗಣತಿದಾರರಿಗೆ ಏಪ್ರಿಲ್ 28ರಂದು ಜಿಲ್ಲಾಮಟ್ಟದಲ್ಲಿ, 29 ಮತ್ತು 30ರಂದು ತಾಲ್ಲೂಕುಮಟ್ಟದಲ್ಲಿ ತರಬೇತಿ ಆಯೋಜಿಸಲು ಸಮಿತಿ ನಿರ್ಧರಿಸಿದೆ.
ಮೂರು ಹಂತಗಳಲ್ಲಿ ಪರಿಶಿಷ್ಟ ಜಾತಿ, ಉಪ ಜಾತಿ ಸಮಗ್ರ ಸಮೀಕ್ಷೆ
ಪರಿಶಿಷ್ಟ ಜಾತಿ, ಉಪ ಜಾತಿ ಸಮಗ್ರ ಸಮೀಕ್ಷೆ 2025 ಅನ್ನು ಮೂರು ಹಂತಗಳಲ್ಲಿ ನಡೆಸಲಾಗುತ್ತಿದೆ. ಮೊಬೈಲ್ ಆ್ಯಪ್ ಬಳಸಿ ಸಮೀಕ್ಷೆ ನಡೆಸಲಾಗುತ್ತಿದೆ. ಮೂರು ಹಂತಗಳ ವಿವರ ಹೀಗಿದೆ -
ಹಂತ 1: ಮೊದಲ ಹಂತದಲ್ಲಿ ಗಣತಿದಾರರು ಮನೆ ಮನೆಗೆ ತೆರಳಿ ದತ್ತಾಂಶಗಳನ್ನು ಸಂಗ್ರಹಿಸಲಿದ್ದಾರೆ. ಇದರಲ್ಲಿ ಅವರು ಪರಿಶಿಷ್ಟ ಜಾತಿಯವರ ಉಪ ಜಾತಿ ಮತ್ತು ಇತರೆ ಮಾಹಿತಿಗಳನ್ನು ಸಂಗ್ರಹಿಸಲಿದ್ದಾರೆ. ಈ ಗಣತಿಯು ಮೇ 5 ರಿಂದ ಮೇ 17 ರ ತನಕ ನಡೆಯಲಿದೆ.
ಹಂತ 2: ಎರಡನೇ ಹಂತದಲ್ಲಿ ಮತಗಟ್ಟೆ ಪ್ರದೇಶವಾರು ವಿಶೇಷ ಶಿಬಿರಗಳನ್ನು ಏರ್ಪಡಿಸಿ ಮಾಹಿತಿ ನೀಡಲು ಅವಕಾಶ ನೀಡಲಾಗುತ್ತದೆ. ಎರಡನೇ ಹಂತದ ಸಮೀಕ್ಷೆ ಮೇ 19 ರಿಂದ 21ರ ತನಕ ನಡೆಯಲಿದೆ.
ಹಂತ 3: ಮೊದಲ ಎರಡೂ ಹಂತಗಳಲ್ಲಿ ಸಮೀಕ್ಷೆಯಲ್ಲಿ ಭಾಗವಹಿಸುವುದಕ್ಕೆ ಸಾಧ್ಯವಾಗದೇ ಬಾಕಿಯಾದವರು ಮೂರನೇ ಹಂತದಲ್ಲಿ ಭಾಗವಹಿಸಬಹುದು. ಅಂಥವರು ಆನ್ಲೈನ್ ಮೂಲಕ ಸ್ವಯಂ ಘೋಷಣೆ ಮಾಡಿಕೊಂಡು ಸಮೀಕ್ಷೆಗೆ ಮಾಹಿತಿ ಒದಗಿಸಬಹುದು. ಇದಕ್ಕಾಗಿ ಅವರು ಆಧಾರ್ ಸಂಖ್ಯೆ ಮತ್ತು ಜಾತಿ ಪ್ರಮಾಣಪತ್ರದ ಆರ್ಡಿ ಸಂಖ್ಯೆ ನೀಡಬೇಕಾದ್ದು ಕಡ್ಡಾಯ. ಈ ಹಂತವು ಮೇ 19 ರಿಂದ 21ರ ತನಕ ನಡೆಯಲಿದೆ.
ಸಮೀಕ್ಷೆಯಲ್ಲಿ ಯಾವ ಮಾಹಿತಿ ಸಂಗ್ರಹಿಸುತ್ತಾರೆ
ಪರಿಶಿಷ್ಟ ಜಾತಿ, ಉಪ ಜಾತಿ ಸಮಗ್ರ ಸಮೀಕ್ಷೆ 2025ರಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಉಪ ಜಾತಿಗಳ ಮಾಹಿತಿಯನ್ನು ಅಂದರೆ, ಉದಾಹರಣೇಗೆ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂದು ನಮೂದಿಸಿದ್ದರೆ ಅಂಥವರು ತಮ್ಮ ಉಪ ಜಾತಿಯನ್ನೂ ಕಡ್ಡಾಯವಾಗಿ ನಮೂದಿಸಬೇಕು. ಅದೇ ರೀತಿ, ಉಪಜಾತಿಗಳ ಜನಸಂಖ್ಯೆ, ಕುಟುಂಬ ಸಂಖ್ಯೆ, ಪಡೆದಿರುವ ಶಿಕ್ಷಣ, ಮಾಡುತ್ತಿರುವ ವೃತ್ತಿ, ವಾಸಿಸುವ ಪ್ರದೇಶ, ಹೊಂದಿರುವ ಸೌಲಭ್ಯ ಮುಂತಾದ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಆರ್ಥಿಕ ಪರಿಸ್ಥಿತಿಗೆ ಸಂಬಂಧಿಸಿದ ಮಾಹಿತಿಗಳು, ಸರ್ಕಾರಿ ಉದ್ಯೋಗ, ಖಾಸಗಿ ಉದ್ಯೋಗ, ಭೂಮಿಯ ಒಡೆತನ, ಆದಾಯ, ಸರ್ಕಾರದಿಂದ ಪಡೆದಿರುವ ಸೌಲಭ್ಯಗಳು, ರಾಜಕೀಯ ಪ್ರಾತಿನಿಧ್ಯದ ಮಾಹಿತಿ ಸಂಗ್ರಹಿಸಲಾಗುತ್ತದೆ ಎಂದು ವರದಿ ಹೇಳಿದೆ.