ಗೃಹಲಕ್ಷ್ಮಿ ಹಣ ಬಂದಿಲ್ಲ ಎಂಬ ಚಿಂತೆಯೇ, 2 ಕಂತು ಇನ್ನೊಂದು ವಾರ ಬಿಟ್ಟು ಹಾಕ್ತಾರಂತೆ; ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟ ನುಡಿ
Grihalakshmi Scheme: ಬಹುತೇಕ ಗೃಹಲಕ್ಷ್ಮಿಯರಿಗೆ ಗೃಹಲಕ್ಷ್ಮಿ ಹಣ ಯಾಕೆ ಬಂದಿಲ್ಲ ಎಂಬ ಚಿಂತೆ. ಎರಡು ಕಂತು ಬಾಕಿ ಇದ್ದು, ಅದು ಯಾವಾಗ ಖಾತೆಗೆ ಬರುವುದೋ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಈ ಚಿಂತೆ ನೀಗಿಸುವಂತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, 2 ಕಂತು ಇನ್ನೊಂದು ವಾರ ಬಿಟ್ಟು ಹಾಕುವುದಾಗಿ ಹೇಳಿದ್ಧಾರೆ.

Grihalakshmi Scheme: ಗೃಹಲಕ್ಷ್ಮಿ ಹಣ ಬಂದಿಲ್ಲ ಅಂತ ಚಿಂತೆ ಮಾಡ್ತಾ ಇದ್ದೀರಾ?. ಹಾಗಾದ್ರೆ ಇಲ್ಲಿ ಕೇಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸ್ವಲ್ಪ ಸಮಾಧಾನ ನೀಡುವ ವಿಚಾರ ಹೇಳಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಎರಡು ಕಂತುಗಳ ಹಣವನ್ನು ಮಾರ್ಚ್ 31ರ ಬಳಿಕ ಅಂದರೆ ಇನ್ನೊಂದು ವಾರ ಬಿಟ್ಟು ಹಾಕಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಅವರು ಬೆಳಗಾವಿಯಲ್ಲಿ ಭಾನುವಾರ ಸುದ್ದಿಗಾರರ ಜತೆಗೆ ಮಾತನಾಡುತ್ತ, ನಮ್ಮ ಸರ್ಕಾರದ ಅವಧಿಯಲ್ಲೆ ಅಂಗನವಾಡಿ ಕಾರ್ಯಕರ್ತೆಯರ ಗೌರವಧನವನ್ನು 2000 ರೂಪಾಯಿ ಹೆಚ್ಚಿಸಿದೆವು. ಅದಾದ ನಂತರ ಯಾವುದೇ ಸರ್ಕಾರ ಗೌರವಧನ ಹೆಚ್ಚಿಸಿರಲಿಲ್ಲ. ಈಗ ಈ ಸಲದ ಬಜೆಟ್‌ನಲ್ಲಿ ಅಂಗವಾಡಿ ಕಾರ್ಯಕರ್ತೆಯರ ಗೌರವಧನ 1,000 ರೂಪಾಯಿ, ಅಂಗನವಾಡಿ ಸಹಾಯಕಿಯರ ಗೌರವಧನ 750 ರೂಪಾಯಿ ಹೆಚ್ಚಿಸಿದ್ದೇವೆ. ಅದನ್ನು ಏಪ್ರಿಲ್ 1 ರಿಂದ ಶುರುವಾಗುವ ಹೊಸ ಹಣಕಾಸು ವರ್ಷದಿಂದಲೇ ಜಾರಿಗೆ ತರುತ್ತೇವೆ ಎಂದು ಹೇಳಿದರು.
ಹನಿಟ್ರ್ಯಾಪ್ ವಿಚಾರ ದುರದೃಷ್ಟಕರ
ರಾಜ್ಯದ ಸಚಿವರೊಬ್ಬರಿಗೆ ಹನಿಟ್ರ್ಯಾಪ್ ಮಾಡಲು ಯತ್ನಿಸಿರುವುದು ದುರದೃಷ್ಟಕರ ಸಂಗತಿ. ಸದನದಲ್ಲಿ ರಾಜ್ಯದ ಹಿರಿಯ ಸಚಿವರು ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಪ್ರತಿಕ್ರಿಯಿಸಿದ್ದಾರೆ.
ಹನಿಟ್ರ್ಯಾಪ್ ಯತ್ನಕ್ಕೆ ಸಂಬಂಧಿಸಿ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಗೃಹಸಚಿವ ಡಾ ಜಿ ಪರಮೇಶ್ವರ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಈ ಪ್ರಕರಣದ ವಿದ್ಯಮಾನಗಳನ್ನು ಗೃಹ ಸಚಿವ ಡಾ ಜಿ ಪರಮೇಶ್ವರ ಅವರೇ ಗಮನಿಸುತ್ತಾರೆ. ಎಲ್ಲರೂ ಅವರವರ ಕೆಲಸಗಳನ್ನು ಮಾಡುತ್ತಿದ್ದು, ನಾನು ಅದರ ಕುರಿತು ಹೆಚ್ಚು ಮಾತನಾಡಲ್ಲ ಎಂದರು. ಘರ್ಜಿಸುವ ಹುಲಿಗಳಿಗೆ ಸಿಡಿ ತೋರಿಸಿ ಹೆದರಿಸಲಾಗುತ್ತಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ನೀಡಿದ್ದ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಅದಕ್ಕೆ ನೀವು ( ಮಾಧ್ಯಮದವರು) ಅವರಿಂದಲೇ ಉತ್ತರ ಪಡೆಯಬೇಕು. ನಾನು ಅದಕ್ಕೆ ಉತ್ತರ ನೀಡುವುದು ಸಮಂಜಸವಲ್ಲ. ಅಲ್ಲದೆ ಇಂತಹ ವಿಚಾರಗಳ ಕುರಿತು ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಸಚಿವರ ಮಾಧ್ಯಮ ಸಲಹೆಗಾರ ಎಂ.ಕೆ.ಹೆಗಡೆ, ಇಲಾಖೆಯ ಉಪನಿರ್ದೇಶಕ ನಾಗರಾಜ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
