Gruha lakshmi Scheme: ಕರ್ನಾಟಕದ ಗೃಹ ಲಕ್ಷ್ಮಿ ಯೋಜನೆಯ ಹೆಸರಲ್ಲಿ ನಕಲಿ ಆಪ್‌ಗಳ ಹಾವಳಿ, ಆಧಾರ್ ಬ್ಯಾಂಕ್ ವಿವರ ನೀಡುವ ಮೊದಲು ಎಚ್ಚರ
Karnataka gruha lakshmi scheme application: ಮನೆ ಯುಜಮಾನಿಗೆ ಮಾಸಿಕ 2 ಸಾವಿರ ರೂ. ನೀಡುವ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟಂತೆ ನಕಲಿ ಆಪ್‌ಗಳ ಹಾವಳಿ ಹೆಚ್ಚಾಗಿದ್ದು, ಇಂತಹ ಫೇಕ್ ಆಪ್‌ಗಳಲ್ಲಿ ಬ್ಯಾಂಕ್ ವಿವರ, ಆಧಾರ್, ಫೋನ್ ನಂಬರ್ ಇತ್ಯಾದಿಗಳನ್ನು ನೀಡಬೇಡಿ.
ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮನೆ ಯುಜಮಾನಿಗೆ ಮಾಸಿಕ 2 ಸಾವಿರ ರೂಪಾಯಿ ನೀಡುವ ಗೃಹ ಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟಂತೆ ಹಲವು ಫೇಕ್ ಆಪ್‌ಗಳು ಗೂಗಲ್ ಪ್ಲೇಸ್ಟೋರ್‌ನಲ್ಲಿ ಕಾಣಿಸಿಕೊಂಡಿವೆ. ಸದ್ಯದಲ್ಲಿಯೇ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಾರಂಭವಾಗಲಿದ್ದು, ಇಂತಹ ಸಮಯದಲ್ಲಿ ಮೊಬೈಲ್ ಅಪ್ಲಿಕೇಷನ್ ಸ್ಟೋರ್‌ನಲ್ಲಿರುವ ನಕಲಿ ಆಪ್‌ಗಳಿಂದ ಜನರು ಮೋಸ ಹೋಗುವ ಸಾಧ್ಯತೆ ಇರುತ್ತದೆ.
ಕರ್ನಾಟಕ ಸರಕಾರದ ಗೃಹಲಕ್ಷ್ಮಿ ಯೋಜನೆ, ಗೃಹ ಜ್ಯೋತಿ ಯೋಜನೆ ಸೇರಿದಂತೆ ರಾಜ್ಯ ಮತ್ತು ಕೇಂದ್ರ ಸರಕಾರದ ಹಲವು ಯೋಜನೆಗಳ ಹೆಸರಿನಲ್ಲಿ ನೂರಾರು ನಕಲಿ ಆಪ್‌ಗಳು ಆಪ್ ಸ್ಟೋರ್‌ನಲ್ಲಿ ಇರುತ್ತವೆ. ಎಲ್ಲಾದರೂ ವಾಟ್ಸಪ್‌ನಲ್ಲಿ ಇಂತಹ ಆಪ್‌ಗಳನ್ನು ಡೌನ್ ಮಾಡಿಕೊಳ್ಳಿ ಇತ್ಯಾದಿ ಸಂದೇಶಗಳು ಬಂದಾಗ ದಯವಿಟ್ಟು ಆ ಆಪ್‌ಗಳು ಅಧಿಕೃತವೇ, ಅನಾಧಿಕೃತವೇ ಎಂದು ತಿಳಿದುಕೊಳ್ಳಿ. ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟಂತೆ ಕರ್ನಾಟಕ ಸರಕಾರ ಯಾವುದೇ ಆಪ್ ಬಿಡುಗಡೆ ಮಾಡಿಲ್ಲ. ಸೇವಾ ಸಿಂಧು ಹೊರತುಪಡಿಸಿ ಬೇರೆ ಯಾವುದೇ ಪೋರ್ಟಲ್‌ಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಹೀಗಾಗಿ, ಇಂತಹ ಆಪ್‌ಗಳ ಮೂಲಕ ಅರ್ಜಿ ಸಲ್ಲಿಸಿ ಮೋಸ ಹೋಗಬೇಡಿ.
ಇಂತಹ ವಿವಿಧ ಯೋಜನೆಗಳ ಹೆಸರಿನಲ್ಲಿರುವ ಆಪ್‌ಗಳು ಜನರಿಂದ ಆಧಾರ್, ಬ್ಯಾಂಕ್ ಖಾತೆ ಸಂಖ್ಯೆ, ವೈಯಕ್ತಿಕ ಮಾಹಿತಿ, ಫೋನ್ ನಂಬರ್ ಇತ್ಯಾದಿ ಸೂಕ್ಷ್ಮ ಮಾಹಿತಿಗಳನ್ನು ಸಂಗ್ರಹಿಸುವ ದುರುದ್ದೇಶ ಹೊಂದಿರುವ ಕಾರಣ ಬಳಕೆದಾರರು ಎಚ್ಚರಿಕೆಯಿಂದ ಇರಬೇಕು. ಕೆಲವೊಂದು ಆಪ್‌ಗಳು ಗೃಹಲಕ್ಷ್ಮಿ ಯೋಜನೆಯ ಮಾಹಿತಿ ನೀಡುವ ಉದ್ದೇಶದಿಂದ ರಚಿಸಿದಂತೆ ಕಾಣಿಸುತ್ತವೆ. ಕರ್ನಾಟಕ ಸರಕಾರವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ಮೊಬೈಲ್ ಅಪ್ಲಿಕೇಷನ್‌ಗಳನ್ನು ಬಿಡುಗಡೆ ಮಾಡಿಲ್ಲ. ಹೀಗಾಗಿ, ಸ್ಮಾರ್ಟ್‌ಫೋನ್ ಆಪ್ ಸ್ಟೋರ್‌ನಲ್ಲಿ ಇಂತಹ ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳದೆ ಇರುವುದು ಉತ್ತಮ.
ಈಗಾಗಲೇ ಆಪ್ ಸ್ಟೋರ್‌ನಲ್ಲಿ ಕರ್ನಾಟಕ ಸರಕಾರದ ಗೃಹಲಕ್ಷ್ಮಿ ಯೋಜನೆ ಮಾತ್ರವಲ್ಲದೆ ಗೃಹಜ್ಯೋತಿ ಯೋಜನೆಗೆ ಸಂಬಂಧಪಟ್ಟಂತೆ ಹಲವು ನಕಲಿ ಆಪ್‌ಗಳು ಇವೆ. ಅಚ್ಚರಿಯೆಂದರೆ ಈಗಾಗಲೇ ಇಂತಹ ಆಪ್‌ಗಳಲ್ಲಿ ಕೆಲವು ಆಪ್‌ಗಳನ್ನು ಹತ್ತು ಸಾವಿರಕ್ಕೂ ಹೆಚ್ಚು ಜನರು ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಈ ರೀತಿ ಡೌನ್‌ಲೋಡ್ ಮಾಡಿಕೊಂಡವರು ತಕ್ಷಣ ಈ ಆಪ್‌ಗಳನ್ನು ತಮ್ಮ ಮೊಬೈಲ್‌ನಿಂದ ಅನ್‌ಇನ್‌ಸ್ಟಾಲ್ ಮಾಡಿಕೊಳ್ಳಿ.
ನಕಲಿ ವೆಬ್‌ಸೈಟ್‌ಗಳೂ ಇವೆ
ಗೃಹಲಕ್ಷ್ಮಿ ಅಥವಾ ಗೃಹಜ್ಯೋತಿ ಹೆಸರಿನಲ್ಲಿ ನಕಲಿ ಆಪ್‌ಗಳು ಮಾತ್ರವಲ್ಲದೆ ನಕಲಿ ವೆಬ್‌ಸೈಟ್‌ಗಳೂ ಇವೆ. ಈ ಹೆಸರಿನ ಡೊಮೈನ್ ಖರೀದಿಸಿ ಇಂತಹ ಯೋಜನೆಗಳ ಮಾಹಿತಿ ನೀಡುವ ಉದ್ದೇಶದಿಂದ ಕೆಲವು ವೆಬ್‌ಗಳನ್ನು ರಚನೆಯಾಗಿವೆ. ಕೆಲವೊಂದು ಇಂತಹ ವೆಬ್‌ಸೈಟ್‌ಗಳು ದುರುದ್ದೇಶದಿಂದ ರಚನೆಯಾಗಿರಬಹುದು. ಹೀಗಾಗಿ, ಸರಕಾರದ ಅಧಿಕೃತ ವೆಬ್‌ಸೈಟ್ ಎಂದು ಖಾತ್ರಿಪಡಿಸಿಕೊಂಡು ಮುಂದುವರೆಯಿರಿ.
ನಕಲಿ ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡರೆ ಏನಾಗುತ್ತದೆ?
- ಕೆಲವೊಂದು ಆಪ್‌ಗಳು ಜನರಿಗೆ ಮಾಹಿತಿ ನೀಡುವ ಉದ್ದೇಶದಿಂದ ರಚಿಸಿದ ಆಪ್ ಆಗಿರಬಹುದು. ಆದರೆ, ಭವಿಷ್ಯದಲ್ಲಿ ಆ ಆಪ್ ಬೇರೆ ಉದ್ದೇಶಗಳಿಗೆ ಬಳಕೆಯಾಗಬಹುದು.
- ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟ ಕೆಲವು ಆಪ್‌ಗಳಲ್ಲಿ ಒಂದು ಆಪ್ ಸೇವಾ ಸಿಂಧೂ ಪೋರ್ಟಲ್‌ಗೆ ರಿಡೈರೆಕ್ಟ್ ಆಗುವಂತಹ ವ್ಯವಸ್ಥೆ ಹೊಂದಿತ್ತು. ಈ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಡೆಯಬಹುದಾಗಿದ್ದರೂ, ಬಳಕೆದಾರರು ನೇರವಾಗಿ ಸೇವಾ ಸಿಂಧು ಪೋರ್ಟಲ್‌ಗೆ ಹೋಗುವುದು ಉತ್ತಮ.
- ಈ ರೀತಿ ಬಳಕೆದಾರರಿಂದ ಸಂಗ್ರಹಿಸಿದ ಆಧಾರ್ ಕಾರ್ಡ್, ಬ್ಯಾಂಕ್ ಖಾತೆಯ ದುರ್ಬಳಕೆ ಆಗಬಹುದು.
- ಕೆಲವು ವಂಚಕ ಆಪ್‌ಗಳು ಒಟಿಪಿ ಕಳುಹಿಸಿ ನಿಮ್ಮ ಮೊಬೈಲ್ ಫೋನ್ ಅನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಬಹುದು. ಈ ಮೂಲಕ ನಿಮ್ಮ ಬ್ಯಾಂಕ್ ಖಾತೆಯನ್ನು ತಾವೇ ನಿರ್ವಹಿಸಿ ಹಣ ಕದಿಯಬಹುದು.
- ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಇತರರಿಗೆ ಮಾರಾಟ ಮಾಡಬಹುದು. ಅಂದರೆ, ಮಾರ್ಕೆಟಿಂಗ್ ಉದ್ದೇಶಗಳಿಗೆ ಬಳಕೆಯಾಗಬಹುದು. ಒಟ್ಟಾರೆ, ಆನ್‌ಲೈನ್ ಜಗತ್ತಿನಲ್ಲಿ ನಿಮಗೆ ಮೋಸ ಮಾಡಲು ವಂಚಕರು ಕಾಯುತ್ತಿದ್ದು, ತುಸು ಹೆಚ್ಚು ಎಚ್ಚರದಿಂದ ಇರಿ.