ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಅಶ್ಲೀಲ ಪದ ಬಳಕೆ ಕೇಸ್: ಪ್ರಕರಣ ರದ್ದು ಕೋರಿ ಬಿಜೆಪಿ ಶಾಸಕ ಸಿಟಿ ರವಿ ಸಲ್ಲಿಸಿದ್ದ ಅರ್ಜಿ ವಜಾ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಅಶ್ಲೀಲ ಪದ ಬಳಕೆ ಕೇಸ್ ರದ್ದು ಕೋರಿ ಬಿಜೆಪಿ ಶಾಸಕ ಸಿಟಿ ರವಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಇದರೊಂದಿಗೆ ಬಿಜೆಪಿ ಮುಖಂಡನಿಗೆ ಹಿನ್ನಡೆಯಾಗಿದೆ. (ವರದಿ- ಎಚ್.ಮಾರುತಿ, ಬೆಂಗಳೂರು)

ಬೆಂಗಳೂರು: ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅಶ್ಲೀಲ ಪದ ಬಳಸಿದ ಪ್ರಕರಣದಲ್ಲಿ ಬಿಜೆಪಿ ಮುಖಂಡ, ವಿಧಾನಪರಿಷತ್ ಸದಸ್ಯ ಸಿಟಿ ರವಿ ಹೈಕೋರ್ಟ್ ನಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ತಮ್ಮ ವಿರುದ್ಧ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ದಾಖಲಿಸಿರುವ ಎಫ್ ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಸಿ.ಟಿ. ರವಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಇಂದು ವಜಾಗೊಳಿಸಿದೆ.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಅಶ್ಲೀಲ ಪದ ಬಳಕೆ ಕೇಸ್ ರದ್ದು ಕೋರಿದ್ದ ಸಿಟಿ ರವಿ ಅರ್ಜಿ ವಜಾ
ತಾನು ಜನಪ್ರತಿನಿಧಿ ಎಂಬ ಕಾರಣಕ್ಕೆ ಇಂತಹ ಹೇಳಿಕೆ ಅಥವಾ ವರ್ತನೆಗೆ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆಯಿಂದ ರಕ್ಷಣೆ ಪಡೆಯಲಾಗದು. ಇದು ಶಾಸನಸಭೆಯ ವಿನಾಯಿತಿಗೆ ಒಳಪಡುವುದಿಲ್ಲ ಎಂದು ಎಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿದೆ. ಶಾಸಕಾಂಗ ವ್ಯವಹಾರಗಳಿಗೆ ಸಂಬಂಧಪಟ್ಟ ಪದ ಬಳಕೆ ಅಥವಾ ಕ್ರಿಯೆಯಾಗಿದ್ದರೆ ರಕ್ಷಣೆ ಕೊಡಬಹುದಾಗಿತ್ತು. ಆದರೆ ರವಿ ಅವರು ಆಡಿರುವ ಮಾತುಗಳು ಮತ್ತು ವರ್ತನೆಗೆ ಯಾವುದೇ ಕಾರಣಕ್ಕೂ ರಕ್ಷಣೆ ನೀಡಲು ಬಾರದು ಎಂದೂ ಹೇಳಿದ್ದಾರೆ.
ರವಿ ಅವರು ದೂರು ನೀಡಿರುವವರನ್ನು ಅವಾಚ್ಯ ಪದ ಬಳಸಿ ನಿಂದಿಸಿದ್ದಾರೆ. ಬಾರತೀಯ ನ್ಯಾಯಸಂಹಿತೆಯ ಸೆ.75, ಮತ್ತು 79ರ ಅಡಿಯಲ್ಲಿ ಒಪ್ಪಿಕೊಳ್ಳುವಂತಹ ಪದಗಳಲ್ಲ. ಇಂತಹ ಪದ ಬಳಕೆ ಉದ್ಧೇಶಪೂವಕವಾಗಿ ಮಹಿಳೆಗೆ ಸಂಬಂಧಪಟ್ಟವೇ ಆಗಿರುತ್ತವೆಯೇ ಹೊರತು ಶಾಸಕಾಂಗ ವ್ಯವಹಾರಕ್ಕೆ ಸಂಬಂಧಪಟ್ಟಿರಲು ಸಾಧ್ಯವೇ ಇಲ್ಲ ಎಂದು ನ್ಯಾಯಮೂರ್ತಿ ಅಭಿಪ್ರಾಯಪಟ್ಟರು.
ಏನಿದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಅಶ್ಲೀಲ ಪದ ಬಳಕೆ ಕೇಸ್
2024, ಡಿಸೆಂಬರ್ 19ರಂದು ನಡೆದ ಘಟನೆಗೆ ಸಂಬಂಧಪಟ್ಟ ಪ್ರಕರಣ ಇದಾಗಿದೆ. ಬೆಳಗಾವಿಯಲ್ಲಿ ವಿಧಾನ ಪರಿಷತ್ ಕಲಾಪ ಮುಂದೂಡಲ್ಪಟ್ಟಾಗ ಅಂಬೇಡ್ಕರ್ ಅವರನ್ನು ಕುರಿತು ಅಮಿತ್ ಶಾ ಆಡದ ಮಾತಿಗೆ ಜಟಾಪಟಿ ನಡೆಯುತ್ತಿತ್ತು. ಆಗ ರವಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಅವಾಚ್ಯ ಪದ ಬಳಸಿ ನಿಂದಿಸಿದ್ದರು. ಈ ಪ್ರಕರಣ ಸಂಬಂಧ ದೂರು ದಾಖಲಾಗುತ್ತಿದ್ದಂತೆ ರವಿ ಅವರನ್ನು ಬಂಧಿಸಲಾಗಿತ್ತು. ನಂತರ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದ ನಂತರ ಅವರನ್ನು ಬಿಡುಗಡೆ ಮಾಡಲಾಗಿತ್ತು.
ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ವಿಧಾನ ಪರಿಷತ್ತಿನಲ್ಲಿ ಸಿಟಿ ರವಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಅಶ್ಲೀಲವಾಗಿ ನಿಂದಿಸಿದ್ದಾರೆ ಎಂದು ಆರೋಪ ಕೇಳಿ ಬಂದಿತ್ತು. ಆದರೆ ಈ ಆರೋಪವನ್ನು ಸಿಟಿ ರವಿ ಅಲ್ಲಗಳದಿದ್ದರು. ರವಿ ಅವರು ಅಶ್ಲೀಲವಾಗಿ ನಿಂದಿಸಿರುವುದು ಸರ್ಕಾರಿ ಟಿವಿಯಲ್ಲಿ ದಾಖಲಾಗಿರುವುದು ಇತ್ತೀಚೆಗೆ ದೃಢಪಟ್ಟಿತ್ತು. ಆದರೆ ಅದು ಸಿಟಿ ರವಿ ಅವರ ಧ್ವನಿಯೇ ಎಂಬುದನ್ನು ಖಚಿತಪಡಿಸಲು ಅವರ ಧ್ವನಿ ಮಾದರಿ ಕೋರಲಾಗಿತ್ತು. ಅದರೆ ಧ್ವನಿ ಮಾದರಿ ನೀಡಲು ರವಿ ನಿರಾಕರಿಸಿದ್ದರು.
ಕೋರ್ಟ್‌ನಲ್ಲಿ ವಿಚಾರಣೆ ಏನಾಯಿತು
ಸಿಟಿ ರವಿ ಅವರ ಪರವಾಗಿ ಹಿರಿಯ ವಕೀಲರಾದ ಪ್ರಭುಲಿಂಗ ನಾವದಗಿ, ಸಿ.ವಿ. ನಾಗೇಶ್ ಮತ್ತು ಸಿದ್ದಾರ್ಥ ಸುಮನ್ ವಾದಿಸಿದರು. ಪ್ರಭುಲಿಂಗ ನಾವದಗಿ ವಾದ ಮಂಡಿಸಿ, ವಿಧಾನ ಪರಿಷತ್ನಲ್ಲಿ ಘಟನೆ ನಡೆದಿರುವುದರಿಂದ ರವಿ ಅವರಿಗೆ ಶಾಸಕಾಂಗದ ವಿನಾಯಿತಿ ಇದೆ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು. ಸಚಿವರ ಪರ ಹಾಜರಿದ್ದ ವಕೀಲರು ಅವರ ಇಂತಹ ಹೇಳಿಕೆ ಶಾಸನ ಸಭೆಯ ವಿನಾಯಿತಿಗೆ ಒಳಪಡುವುದಿಲ್ಲ ಎಂದು ವಾದಿಸಿದರು.
ಒಂದು ಹಂತದಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳು ಏನನ್ನೋ ಮಾತನಾಡಲು ಸ್ವಾತಂತ್ರ್ಯ ಇದೆ ಎಂದು ಈ ಪ್ರಕರಣದಲ್ಲಿ ಆಡಿದ್ದಾರೆ ಎನ್ನಲಾದ ಮಾತುಗಳನ್ನೂ ಆಡಬಹುದೇ ಎಂದು ಪ್ರಶ್ನಿಸಿದರು. ಆಗ ಸಿಟಿ ರವಿ ಪರ ವಕೀಲರು ಮಾತನಾಡಿದ ವಿಷಯವನ್ನು ಕಾನೂನಿನಡಿಯಲ್ಲಿ ದೂಷಣೆ ಎಂದು ಪರಿಗಣಿಸಿದರೂ, ಆ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಹಕ್ಕನ್ನು ಸದನ ಮಾತ್ರ ಹೊಂದಿರುತ್ತದೆ ಮತ್ತು ಯಾವುದೇ ಬಾಹ್ಯ ಸಂಸ್ಥೆ ಅಲ್ಲ ಎಂದು ವಾದಿಸಿದ ಪ್ರಸಂಗವೂ ನಡೆಯಿತು.
ಲಕ್ಷ್ಮಿ ಹೆಬ್ಬಾಳ್ಕರ್ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಬಿಎ ಬೆಳ್ಳಿಯಪ್ಪ, ಎಸ್ ಪಿಪಿ ಬಿ.ಎನ್. ಜಗದೀಶ ಮತ್ತು ಕೆ.ಎ. ಫಣೀಂದ್ರ ಹಾಜರಿದ್ದರು.
(ವರದಿ- ಎಚ್.ಮಾರುತಿ, ಬೆಂಗಳೂರು)