ಕರ್ನಾಟಕದಲ್ಲಿ ಪೂರ್ವ ಮುಂಗಾರು ಅಬ್ಬರ: ಸಿಡಿಲು ಬಡಿದು ಒಂದೇ ಕುಟುಂಬದ ಮೂವರು ಸೇರಿ ಹತ್ತಕ್ಕೂ ಹೆಚ್ಚು ಮಂದಿ ದುರ್ಮರಣ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕದಲ್ಲಿ ಪೂರ್ವ ಮುಂಗಾರು ಅಬ್ಬರ: ಸಿಡಿಲು ಬಡಿದು ಒಂದೇ ಕುಟುಂಬದ ಮೂವರು ಸೇರಿ ಹತ್ತಕ್ಕೂ ಹೆಚ್ಚು ಮಂದಿ ದುರ್ಮರಣ

ಕರ್ನಾಟಕದಲ್ಲಿ ಪೂರ್ವ ಮುಂಗಾರು ಅಬ್ಬರ: ಸಿಡಿಲು ಬಡಿದು ಒಂದೇ ಕುಟುಂಬದ ಮೂವರು ಸೇರಿ ಹತ್ತಕ್ಕೂ ಹೆಚ್ಚು ಮಂದಿ ದುರ್ಮರಣ

ಕರ್ನಾಟಕದಲ್ಲಿ ಮಂಗಳವಾರ ಸುರಿದ ಗುಡುಗು, ಮಿಂಚು ಸಹಿತ ಭಾರೀ ಮಳೆಗೆ ಅನಾಹುತ ಆಗಿದೆ. ಹತ್ತಕ್ಕೂ ಹೆಚ್ಚು ಮಂದಿ ನಾನಾ ಭಾಗಗಳಲ್ಲಿ ಸಿಡಿಲಿಗೆ ಬಲಿಯಾಗಿದ್ದಾರೆ.

ಬಳ್ಳಾರಿ ಜಿಲ್ಲೆಯ ಸಿರಗುಪ್ಪದಲ್ಲಿ ಭಾರೀ ಮಳೆ ಸುರಿದಿದೆ.
ಬಳ್ಳಾರಿ ಜಿಲ್ಲೆಯ ಸಿರಗುಪ್ಪದಲ್ಲಿ ಭಾರೀ ಮಳೆ ಸುರಿದಿದೆ. (ಪ್ರಜಾವಾಣಿ)

ಬೆಂಗಳೂರು: ಕರ್ನಾಟಕದಲ್ಲಿ ಪೂರ್ವ ಮುಂಗಾರು ಅಬ್ಬರ ಜೋರಾಗಿದೆ. ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಮಂಗಳವಾರ ಸಂಜೆ ಸುರಿದ ಭಾರೀ ಮಳೆಗೆ ಅನಾಹುತಗಳೂ ಆಗಿವೆ. ಹತ್ತಕ್ಕೂ ಹೆಚ್ಚು ಮಂದಿ ಕರ್ನಾಟಕದ ನಾನಾ ಕಡೆಗಳಿಗೆ ಸಿಡಿಲಿನಿಂದ ಜೀವ ಕಳೆದುಕೊಂಡಿದ್ದಾರೆ. ಒಂದೇ ಕುಟುಂಬದ ಮೂವರು ಸಿಡಿಲಿನಿಂದಾಗಿ ಮೃತಪಟ್ಟಿದ್ದಾರೆ. ಅಲ್ಲದೇ ಭಾರೀ ಮಳೆದಿಂದ ಗದಗ ಜಿಲ್ಲೆಯ ಬೆನಕೊಪ್ಪ, ಬೆಳಗಾವಿ ಜಿಲ್ಲೆಯ ಗೋಕಾಕ್‌ ಪಟ್ಟಣದಿಂದ ನೀರು ಉಕ್ಕಿ ಹರಿದು ಕೊಚ್ಚಿಕೊಂಡು ಹೋಗಿದ್ದಾರೆ. ಬೆಂಗಳೂರು ನಗರದಲ್ಲೂ ಎಡಬಿಡದೇ ಸುರಿದ ಭಾರೀ ಮಳೆಯಿಂದ ನೀರು ರಸ್ತೆಯಲ್ಲಿಯೇ ಹರಿದು ಜನ ತೊಂದರೆ ಅನುಭವಿಸಿದ್ದಾರೆ. ಮೈಸೂರು ಹಾಗೂ ಸುತ್ತಮುತ್ತಲಿನ ಭಾಗದಲ್ಲೂ ಭಾರೀ ಮಳೆ ಸುರಿದಿದೆ. ಇನ್ನೂ ಮೂರ್ನಾಲ್ಕು ದಿನ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಬಳ್ಳಾರಿಯ ಸಿರಗುಪ್ಪ ತಾಲೂಕಿನ ರಾರಾವಿ ಗ್ರಾಮದಲ್ಲಿ ಸಿಡಿಲಿಗೆ ಒಂದೇ ಕುಟುಂಬದ ಮೂವರು ಬಲಿಯಾಗಿದ್ಧಾರೆ. ಬೀರಪ್ಪ (45), ಸುನೀಲ (26) ಕುರಿ ಮೇಯಿಸಲು ಹೋದಾಗ ಏಕಾಏಕಿ ಗುಡುಗು ಸಿಡಿಲು ಸಹಿತ ಮಳೆ ಆರಂಭವಾಗಿದ್ದು, ಮರದ ಕೆಳಗೆ ಆಶ್ರಯ ಪಡೆದುಕೊಂಡಿದ್ದ ವೇಳೆ ದುರಂತ ಸಂಭವಿಸಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ವಿಜಯಪುರ ಜಿಲ್ಲೆಯ ಮುದ್ದೆಬಿಹಾಳ ತಾಲೂಕಿನಲ್ಲಿ ಸಿಡಿಲಿಗೆ ಇಬ್ಬರು ಜೀವ ಕಳೆದುಕೊಂಡಿದ್ದಾರೆ. ತಾಲ್ಲೂಕಿನ ತಂಗಡಗಿ ಗ್ರಾಮದಲ್ಲಿ ಸಿಡಿಲು ಬಡಿದು ರೈತನೋರ್ವ ಮೃತಪಟ್ಟಿದ್ದಾರೆ. ಮಲ್ಲಪ್ಪ ತಾಳಿಕೋಟೆ (45) ಮೃತರು. ಇದಲ್ಲದೇ ಮುದ್ದೆ ಬಿಹಾಳ ತಾಲ್ಲೂಕಿನ ಆಲೂರ ಗ್ರಾಮಕ್ಕೆ ಕೂಲಿ ಕೆಲಸಕ್ಕೆ ಬಂದಿದ್ದ ಮಹಾರಾಷ್ಟ್ರದ ಸಾಂಗ್ಲಿಜಿಲ್ಲೆ ಜತ್ತ ತಾಲ್ಲೂಕಿನ ಮಣಿಕನಾಳ ಗ್ರಾಮದ ಶ್ರೀಶೈಲ ರಾಮಲಿಂಗ ಮುಗಳಕೋಡ ಸಿಡಿಲು ಬಡಿದು ಮೃತಪಟ್ಟಿದ್ದಾರೆ.

ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ಜಮೀನಿನಲ್ಲಿ ಕೆಲಸ ಮಾಡುವಾಗ ರೈತರೊಬ್ಬರು ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಯಂಕಪ್ಪ ಜಾಡಿ ಮೃತರು ಎಂದು ಗುರುತಿಸಲಾಗಿದೆ. ಇದೇ ವೇಳೆ ಸಿಡಿಲಬ್ಬರಕ್ಕೆ ಎರಡು ಎತ್ತುಗಳು ಮೃತಪಟ್ಟಿವೆ ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ.

ಚಿಕ್ಕಮಗಳೂರಿನ ಕಡೂರು ತಾಲೂಕಿನ ಗೆದ್ಲೆಹಳ್ಳಿಯಲ್ಲಿ ಸಿಡಿಲಿಗೆ ಕುರಿಗಾಹಿ ಲೋಕೇಶಪ್ಪ (65) ಎಂಬುವವರು ಭಾರೀ ಮಳೆ ಹಾಗೂ ಸಿಡಿಲಿಗೆ ಬಲಿಯಾಗಿದ್ದಾರೆ.

ಹಾವೇರಿ ಜಿಲ್ಲೆಯಲ್ಲೂ ಸೋಮವಾರ ಹಾಗೂ ಮಂಗಳವಾರ ಭಾರೀ ಮಳೆಯಾಗಿದೆ. ಪ್ರತ್ಯೇಕ ಪ್ರಕರಣದಲ್ಲಿ ಜಿಲ್ಲೆಯಲ್ಲಿ ಮೂವರು ಮೃತಪಟ್ಟಿದ್ದಾರೆ. ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಡಮ್ಮಳ್ಳಿಯ ನಾಗಪ್ಪ ಬಸವಣ್ಣೆಪ್ಪ ಕಣಸೋಗಿ, ರಟ್ಟಿಹಳ್ಳಿ ತಾಲ್ಲೂಕಿನ ಕುಡುಪಲಿ ಗ್ರಾಮದ ಸುನೀಲ ಕಾಳೇರ, ಬಸಾಪುರ ಗ್ರಾಮದ ಮರಿಯವ್ವ ನಾಯ್ಕರ್‌ ಎಂಬುವವರು ಸಿಡಿಲು ಬಡಿದು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಳಗಾವಿಯಲ್ಲೂ ಭಾರೀ ಮಳೆಯಾಗಿದ್ದು ಕೆಲವೆಡೆ ಅನಾಹುತ ಸಂಭವಿಸಿದೆ. ಗೋಕಾಕ ನಗರದ ಅಂಬೇಡ್ಕರ್‌ ನಗರದ ನಿವಾಸಿ ಕಾಟೆಪ್ಪ ದುರುಗಪ್ಪ ಶಿರಹಟ್ಟಿ ಎಂಬಾತ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಅವರ ಹುಡುಕಾಟ ನಡೆದರೂ ಪ್ರಯೋಜನವಾಗಿಲ್ಲ. ಬುಧವಾರ ಮತ್ತೆ ಹುಡುಕಾಟ ಆರಂಭಿಸುವಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗದಗ ತಾಲ್ಲೂಕಿನ ಬೆನಕೊಪ್ಪ ಗ್ರಾಮದಲ್ಲಿ ಬೈಕ್‌ನಲ್ಲಿ ಬರುತ್ತಿದ್ದ ಶ್ರೀಶೈಲ ಎಂಬುವವರು ಕೊಚ್ಚಿಕೊಂಡು ಹೋಗಿರುವ ಘಟನೆ ನಡೆದಿದೆ. ಭಾರೀ ಮಳೆಯಿಂದ ರಸ್ತೆಯಲ್ಲಿ ನೀರು ಹರಿದು ಬಂದು ಈ ದುರ್ಘಟನೆ ನಡೆದಿದೆ. ಅವರಿಗಾಗಿಯೂ ಹುಡುಕಾಟ ನಡೆದಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲೂ ಮಂಗಳವಾರ ಮಳೆಯಾಗಿದೆ. ಅಂಕೋಲಾ ತಾಲೂಕಿನ ಹಾರವಾಡ ಗ್ರಾಮದಲ್ಲಿ ಸಿಡಿಲು ಬಡಿದು ಎರಡು ಮನೆಗಳಿಗೆ ಹಾನಿಯಾಗಿವೆ. ಎರಡು ಮನೆಯ ಕುಟುಂಬ ಸದಸ್ಯರು ಅದೃಷ್ಟವಶಾತ್ ಯಾವುದೇ ಅನಾಹುತ ಆಗದೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಲಾಗಿದೆ.

ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.