ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಂಜಾರಿಯಾ ವರ್ಗ, ಮಹಾರಾಷ್ಟ್ರ ಮೂಲದ ವಿಭು ಬಖ್ರು ನೂತನ ಸಿಜೆ
ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿರುವ ಮಹಾರಾಷ್ಟ್ರ ನಾಗಪುರ ಮೂಲದ ವಿಭು ಖಬ್ರು ಅವರನ್ನು ನೇಮಕ ಮಾಡಲು ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸ್ಸು ಮಾಡಿದೆ.

ಬೆಂಗಳೂರು: ಹದಿನೈದು ತಿಂಗಳ ಹಿಂದೆ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನಿಯೋಜನೆಗೊಂಡಿದ್ದ ಎನ್.ವಿ. ಅಂಜಾರಿಯಾ ಅವರನ್ನು ವರ್ಗ ಮಾಡಲಾಗಿದೆ. ಅವರಿಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗಿದ್ದು. ಕರ್ನಾಟಕದ ಮುಖ್ಯ ನ್ಯಾಯಮೂರ್ತಿಯಾಗಿ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಗಳಾಗಿದ್ದ ಮಹಾರಾಷ್ಟ್ರ ಮೂಲದ ವಿಭು ಖಬ್ರು ಅವರನ್ನು ನೇಮಕ ಮಾಡಲಾಗಿದೆ. ದೆಹಲಿಯಲ್ಲಿ ನಡೆದ ಸುಪ್ರೀಂ ಕೋರ್ಟ್ ಕೊಲಿಜಿಯಂ ಸಭೆಯಲ್ಲಿ ಹಲವು ನ್ಯಾಯಮೂರ್ತಿಗಳಿಗೆ ಬಡ್ತಿ ನೀಡುವ ಹಾಗೂ ಈಗಾಗಲೇ ಮುಖ್ಯ ನ್ಯಾಯಮೂರ್ತಿಗಳಾಗಿರುವ ಕೆಲವರನ್ನು ಸುಪ್ರೀಂಕೋರ್ಟ್‌ಗೆ ನಿಯೋಜಿಸಲು ನಿರ್ಧರಿಸಲಾಗಿದೆ. ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿನ್ಯಾಯಮೂರ್ತಿ ನಿಲಯ್ ವಿಪಿನ್‌ಚಂದ್ರ ಅಂಜಾರಿಯಾ, ಗುವಾಹಟಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿಷ್ಣೋಯ್, ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ಎ.ಎಸ್. ಚಂದೂರ್ಕರ್ ಅವರನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳನ್ನಾಗಿ ನಿಯೋಜಿಸಲಾಗಿದೆ. ಅದೇ ರೀತಿ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ವಿಭು ಬಖ್ರು ಅವರನ್ನು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಿಸುವುದಕ್ಕೆ ಶಿಫಾರಸ್ಸು ಮಾಡಲಾಗಿದೆ.
ಅಂಜಾರಿಯಾ ಅವರ ಶಿಫಾರಸ್ಸಿನಿಂದ ತೆರವಾದ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಮಹಾರಾಷ್ಟ್ರದ ನಾಗಪುರ ಮೂಲದವರಾದ ವಿಭು ಖಬ್ರು ಅವರನ್ನು ನೇಮಿಸಲು ಕೊಲಿಜಿಯಂ ಶಿಫಾರಸ್ಸು ಮಾಡಿದೆ. ಸುಪ್ರೀಂಕೋರ್ಟ್, ದೆಹಲಿ ಹೈಕೋರ್ಟ್, ಕಂಪನಿ ಕಾನೂನು ಮಂಡಳಿ ಮತ್ತು ಇತರೆ ನ್ಯಾಯ ಮಂಡಳಿಗಳಲ್ಲಿಯೂ ವಕೀಲರಾಗಿ ಕೆಲಸ ಮಾಡಿರುವ ಅನುಭವ ಹೊಂದಿರುವ ಖಬ್ರು ಅವರು ಈಗ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ.
1966ರಲ್ಲಿ ನಾಗಪುರದಲ್ಲಿ ಜನಿಸಿದ ನ್ಯಾಯಮೂರ್ತಿ ಬಖ್ರು ಅವರು ದೆಹಲಿಯ ಡೆಲ್ಲಿ ಪಬ್ಲಿಕ್ ಶಾಲೆಯಲ್ಲಿ ಪ್ರಾಥಮಿಕ, ಪ್ರೌಢಶಿಕ್ಷಣ ಪಡೆದವರು. 1987ರಲ್ಲಿ ವಾಣಿಜ್ಯ ವಿಷಯದಲ್ಲಿ ದೆಹಲಿ ವಿಶ್ವವಿದ್ಯಾಲಯದ ಪದವಿ ಪಡೆಕೊಂಡರು. ಆನಂತರ 1989ರಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿಯೂ ಅರ್ಹತೆ ಪಡೆದುಕೊಂಡರು. ಆದರೆ ಕಾನೂನು ವಿಷಯದಲ್ಲಿ ಅವರಿಗೆ ಆಸಕ್ತಿ ಇದ್ದುದರಿಂದ 1990ರಲ್ಲಿ ದೆಹಲಿಯಲ್ಲೇ ಕಾನೂನು ಪದವಿ ಪಡೆದರು.ಪದವಿ ಮುಗಿದ ವರ್ಷವೇ ದೆಹಲಿ ವಕೀಲರ ಪರಿಷತ್‌ನಲ್ಲಿ ವಕೀಲರಾಗಿ ನೋಂದಣಿ ಪಡೆದುಕೊಂಡಿದ್ದರು.
ಎರಡು ದಶಕಗಳ ವಕೀಲಿ ವೃತ್ತಿಯ ಬಳಿಕ 2011ರಲ್ಲಿ ಹಿರಿಯ ವಕೀಲರಾಗಿ ಪದೋನ್ನತಿ ಪಡೆದಿದ್ದರು. ದೆಹಲಿ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ 2013ರ ಏಪ್ರಿಲ್ 17ರಂದು ನೇಮಕಗೊಂಡ ಅವರು 2015ರ ಮಾರ್ಚ್ 18ರಂದು ಖಾಯಂಗೊಂಡಿದ್ದರು. ಹತ್ತು ವರ್ಷದಿಂದ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಆಗಿದ್ದು. ಈಗ ಬಡ್ತಿ ಪಡೆದುಕೊಂಡಿದ್ದಾರೆ.