ರೇವ್‌ ಪಾರ್ಟಿ ಕೇಸ್‌: ತೆಲುಗು ಚಿತ್ರನಟಿ ಹೇಮಾ ವಿರುದ್ಧದ ತನಿಖೆಗೆ ತಡೆಯಾಜ್ಞೆ ನೀಡಿದ ಕರ್ನಾಟಕ ಹೈಕೋರ್ಟ್‌
ಕನ್ನಡ ಸುದ್ದಿ  /  ಕರ್ನಾಟಕ  /  ರೇವ್‌ ಪಾರ್ಟಿ ಕೇಸ್‌: ತೆಲುಗು ಚಿತ್ರನಟಿ ಹೇಮಾ ವಿರುದ್ಧದ ತನಿಖೆಗೆ ತಡೆಯಾಜ್ಞೆ ನೀಡಿದ ಕರ್ನಾಟಕ ಹೈಕೋರ್ಟ್‌

ರೇವ್‌ ಪಾರ್ಟಿ ಕೇಸ್‌: ತೆಲುಗು ಚಿತ್ರನಟಿ ಹೇಮಾ ವಿರುದ್ಧದ ತನಿಖೆಗೆ ತಡೆಯಾಜ್ಞೆ ನೀಡಿದ ಕರ್ನಾಟಕ ಹೈಕೋರ್ಟ್‌

ಬೆಂಗಳೂರು ರೇವ್‌ ಪಾರ್ಟಿ ಸಂಬಂಧಿಸಿ ತೆಲುಗು ಚಿತ್ರನಟಿ ಹೇಮಾ ವಿರುದ್ಧದ ತನಿಖೆಗೆ ಕರ್ನಾಟಕ ಹೈಕೋರ್ಟ್‌ ಬುಧವಾರ (ಜನವರಿ 1) ತಡೆಯಾಜ್ಞೆ ನೀಡಿದೆ. ಇನ್ನೊಂದೆಡೆ, ಕರ್ನಾಟಕದಲ್ಲಿ ವರ್ಷದ ಕೊನೆಯ ನಾಲ್ಕು ದಿನಗಳಲ್ಲಿ 713 ಕೋಟಿ ರೂ ಮದ್ಯ ಮಾರಾಟವಾಗಿದೆ ಎಂಬ ಅಂಶ ಗಮನಸೆಳೆದಿದೆ. (ವರದಿ- ಎಚ್.ಮಾರುತಿ, ಬೆಂಗಳೂರು)

ರೇವ್‌ ಪಾರ್ಟಿ ಕೇಸ್‌ ಸಂಬಂಧಿಸಿ ತೆಲುಗು ಚಿತ್ರನಟಿ ಹೇಮಾ ವಿರುದ್ಧದ ತನಿಖೆಗೆ ಕರ್ನಾಟಕ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.
ರೇವ್‌ ಪಾರ್ಟಿ ಕೇಸ್‌ ಸಂಬಂಧಿಸಿ ತೆಲುಗು ಚಿತ್ರನಟಿ ಹೇಮಾ ವಿರುದ್ಧದ ತನಿಖೆಗೆ ಕರ್ನಾಟಕ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿನ ಹೊರವಲಯದ ಹೆಬ್ಬಗೋಡಿ ಸಮೀಪದ ಸಿಂಗೇನ ಅಗ್ರಹಾರದಲ್ಲಿರುವ ಜಿ.ಆರ್‌.ಫಾರ್ಮ್‌ ಹೌಸ್‌ನಲ್ಲಿ ರೇವ್ ಪಾರ್ಟಿ ನಡೆಸಿದ್ದ ಆರೋಪಕ್ಕೆ ಸಂಬಂಧಿಸಿ ತೆಲುಗು ಭಾಷೆಯ ನಟಿ ಕೊಲ್ಲ ಹೇಮಾ ವಿರುದ್ಧ ವಿಚಾರಣಾ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ವಿಚಾರಣೆ ಸಂದರ್ಭದಲ್ಲಿ ಹಾಜರಿದ್ದ ಹೇಮಾ ಪರ ವಕೀಲರು, ಈ ಪ್ರಕರಣದಲ್ಲಿ ಸಹ ಆರೋಪಿಗಳ ಹೇಳಿಕೆ ಆಧರಿಸಿ ಹೇಮಾ ವಿರುದ್ಧ, ಮಾದಕ ದ್ರವ್ಯ ನಿಗ್ರಹ ಕಾಯ್ದೆ–1985ರ (ಎನ್‌ಡಿಪಿಎಸ್‌) ಕಲಂ 27 (ಬಿ) ಅಡಿಯಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ. ಆದರೆ, ಅವರು ಮಾದಕ ವಸ್ತು ಸೇವಿಸಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಹಾಗಾಗಿ, ಪ್ರಕರಣಕ್ಕೆ ತಡೆ ನೀಡಬೇಕು ಎಂದು ಮನವಿ ಮಾಡಿಕೊಂಡರು. ಈ ವಾದವನ್ನು ಪುರಸ್ಕರಿಸಿದ ನ್ಯಾಯಪೀಠ, ಅರ್ಜಿಗೆ ಸಂಬಂಧಿಸಿ ರಾಜ್ಯ ಪ್ರಾಸಿಕ್ಯೂಷನ್‌ಗೆ ನೋಟಿಸ್ ಜಾರಿಗೊಳಿಸಲು ಆದೇಶ ನೀಡಿತು. ಹಾಗೆಯೇ ಮುಂದಿನ ಆದೇಶದವರೆಗೆ ವಿಚಾರಣೆಯನ್ನು ನಡೆಸದಂತೆ ಮಧ್ಯಂತರ ತಡೆ ನೀಡಿ ಆದೇಶ ಹೊರಡಿಸಿತು.

ಜಿ.ಆರ್‌.ಫಾರ್ಮ್‌ ಹೌಸ್‌ನಲ್ಲಿ ರೇವ್ ಪಾರ್ಟಿ ಪ್ರಕರಣದ ಹಿನ್ನೆಲೆ

ಜಿ.ಎಂ.ಫಾರ್ಮ್ ಹೌಸ್‌ ನಲ್ಲಿ 2024ರ ಮೇ 19 ರಂದು ಬರ್ತ್‌ಡೇ ಪಾರ್ಟಿ ಹೆಸರಿನಲ್ಲಿ ಮದ್ಯ ಹಾಗೂ ಮಾದಕ ದ್ರವ್ಯ ಸೇವಿಸುವ ರೇವ್‌ ಪಾರ್ಟಿ ನಡೆಯುತ್ತಿದೆ ಎಂಬ ಮಾಹಿತಿ ಹೆಬ್ಬಗೋಡಿ ಪೊಲೀಸರಿಗೆ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದ ಪೊಲೀಸರು, ಈ ಸ್ಥಳದಲ್ಲಿ ಬರ್ತ್‌ಡೇ ಪಾರ್ಟಿ ಹೆಸರಿನಲ್ಲಿ ಮದ್ಯ ಹಾಗೂ ಮಾದಕ ದ್ರವ್ಯ ಸೇವಿಸುವ ರೇವ್‌ ಪಾರ್ಟಿ ನಡೆಯುತ್ತಿರುವುದು ಕಂಡುಬಂದಿದೆ. ಈ ರೇವ್ ಪಾರ್ಟಿಯಲ್ಲಿ ನಟಿ ಹೇಮಾ ಅವರೂ ಭಾಗಿಯಾಗಿದ್ದರು ಎಂದು ಆರೋಪಿಸಿ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದರು. ಕೋರ್ಟ್‌ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಈ ಮಧ್ಯೆ ಹೇಮಾ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದರು.

ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು, ಬೆಂಗಳೂರು ಗ್ರಾಮಾಂತರ, 8ನೇ ಹೆಚ್ಚುವರಿ ಸೆಷನ್ಸ್‌ನ ವಿಶೇಷ ನ್ಯಾಯಾಲಯಕ್ಕೆ 1,086 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ರೇವ್ ಪಾರ್ಟಿಯಲ್ಲಿ ನಟಿ ಹೇಮಾ ಸೇರಿದಂತೆ ಹಲವು ಉದ್ಯಮಿಗಳು ಭಾಗವಹಿಸಿದ್ದರು. ಇವರಲ್ಲಿ ಹಲವರು ಡ್ರಗ್ಸ್ ಸೇವನೆ ಮಾಡಿದ್ದರು ಎಂದು ದೋಷಾರೋಪ ಪಟ್ಟಿಯಲ್ಲಿ ಹೇಳಲಾಗಿತ್ತು.

ವರ್ಷದ ಕೊನೆಯ ನಾಲ್ಕು ದಿನಗಳಲ್ಲಿ 713 ಕೋಟಿ ರೂ ಮದ್ಯ ಮಾರಾಟ

ಕರ್ನಾಟಕ ರಾಜ್ಯ ಮದ್ಯ ಮಾರಾಟಗಾರರ ಸಂಘದ ಮಾಹಿತಿ ಪ್ರಕಾರ ಡಿಸೆಂಬರ್‌ 28ರಿಂದ ಡಿಸೆಂಬರ್‌ 31ರ ಮಧ್ಯಾಹ್ನದವರೆಗೆ 713.58 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದೆ. ಈ ನಾಲ್ಕು ದಿನಗಳಲ್ಲಿ 6.97 ಲಕ್ಷ ಕಾರ್ಟನ್‌ ಬಾಕ್ಸ್‌ ಗಳಷ್ಟು ಬಿಯರ್‌ ಮತ್ತು ಐಎಂಎಲ್‌ ನ 11.05 ಲಕ್ಷ ಕಾರ್ಟನ್‌ ಬಾಕ್ಸ್‌ ಸೇರಿ 18.3 ಲಕ್ಷ ಕಾರ್ಟನ್‌ ಬಾಕ್ಸ್‌ ಗಳಷ್ಟು ಬಿಯರ್‌ ಮಾರಾಟವಾಗಿದೆ.

ಮದ್ಯ ಮಾರಾಟದಿಂದ ಸರ್ಕಾರದ ಬೊಕ್ಕಸಕ್ಕೆ ವರ್ಷದಿಂದ ವರ್ಷಕ್ಕೆ ಆದಾಯ ಹೆಚ್ಚುತ್ತಲೇ ಹೋಗುತ್ತಿದೆ. 2024ರ ಏಪ್ರಿಲ್‌ -ಡಿಸೆಂಬರ್‌ ಅವಧಿಯಲ್ಲಿ ಶೇ.4.63 ರಷ್ಟು ಮದ್ಯ ಮಾರಾಟ ಹೆಚ್ಚಳ ಕಂಡಿದೆ. ಆದರೆ ಜುಲೈ ತಿಂಗಳಲ್ಲಿ ಮದ್ಯ ಮಾರಾಟ ಶೇ.9.86 ರಷ್ಟು ಮತ್ತು ಡಿಸೆಂಬರ್‌ ನಲ್ಲಿ ಶೇ.11.78ರಷ್ಟು ಕುಸಿತ ಕಂಡಿದೆ. ಮೇ ಮತ್ತು ಸೆಪ್ಟಂಬರ್‌ ತಿಂಗಳಲ್ಲಿ ಶೇ.27ರಷ್ಟು ಹೆಚ್ಚಳವಾಗಿದೆ. 2023ರಲ್ಲಿ ವರ್ಷದ ಕೊನೆ ದಿನ ಭಾನುವಾರ ಬಂದಿದ್ದರೆ 2024 ರಲ್ಲಿ ವಾರದ ದಿನ ಬಂದಿರುವುದೇ ಕಾರಣ ಎನ್ನಲಾಗುತ್ತದೆ. ಅಬಕಾರಿ ಇಲಾಖೆ 2024-25ರ ಆರ್ಥಿಕ ವರ್ಷದ ಶೇ.69.13 ರಷ್ಟು ಆದಾಯ ಏಪ್ರಿಲ್‌ -ಡಿಸೆಂಬರ್‌ ಅವಧಿಯಲ್ಲಿ ಗಳಿಸಿದೆ. ಇದೇ ಅವಧಿಯಲ್ಲಿ ಕಳೆದ ವರ್ಷ ಶೇ.73.78ರಷ್ಟು ಆದಾಯ ಗಳಿಸಿತ್ತು. ಕಳೆದ ವರ್ಷ ಅಬಕಾರಿ ಇಲಾಖೆ 34,628,98 ಕೋಟಿ ಆದಾಯ ಗಳಿಸಿತ್ತು.

(ವರದಿ- ಎಚ್.ಮಾರುತಿ, ಬೆಂಗಳೂರು)

Whats_app_banner