ಸಂಸದ ಯದುವೀರ ಒಡೆಯರ್ಗೆ ಹೈಕೋರ್ಟ್ ನೋಟಿಸ್; ಮಹಿಳೆಯರಿಗೆ ಶೇ 30ರಷ್ಟು ಮೀಸಲಾತಿ, ವಕೀಲರ ಸಂಘದ ಚುನಾವಣೆ ರದ್ದು
Karnataka High court: ಚುನಾವಣಾ ತಕರಾರು ಕಾರಣ ಮೈಸೂರು ಸಂಸದ ಯದುವೀರ ಒಡೆಯರ್ಗೆ ಹೈಕೋರ್ಟ್ ನೋಟಿಸ್ ನೀಡಿದೆ. ಮಹಿಳೆಯರಿಗೆ ಶೇ. 30ರಷ್ಟು ಮೀಸಲಾತಿಗೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. (ವರದಿ: ಎಚ್. ಮಾರುತಿ)

ಬೆಂಗಳೂರು: ಮೈಸೂರು-ಕೊಡಗು ಸಂಸದ ಯದುವೀರ ಒಡೆಯರ್ (Yaduveer Wadiyar) ಆಯ್ಕೆಯನ್ನು ಅಸಿಂಧು ಎಂದು ಘೋಷಿಸಿ, ಈ ಕ್ಷೇತ್ರಕ್ಕೆ ಹೊಸದಾಗಿ ಚುನಾವಣೆ ನಡೆಸಬೇಕು ಎಂದು ಕೋರಲಾದ ಅರ್ಜಿಗೆ ಸಂಬಂಧಪಟ್ಟಂತೆ ಪ್ರತಿವಾದಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ಭಾರತೀಯ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿದೆ. ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಅಭ್ಯರ್ಥಿ ಆಕಾಂಕ್ಷಿಯಾಗಿದ್ದ ರೇವತಿ ರಾಜ್ ಅಲಿಯಾಸ್ ಭೀಮಪುತ್ರಿ ರೇವತಿ ರಾಜ್ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಎಸ್ಜಿ ಪಂಡಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ (ಜನವರಿ 24) ವಿಚಾರಣೆ ನಡೆಸಿ ಈ ಈ ರೀತಿ ಆದೇಶಿಸಿದೆ.
ರೇವತಿ ರಾಜ್ ಅವರು ನಾನು 2024ರ ಏಪ್ರಿಲ್ 4ರಂದು ನಾಮಪತ್ರ ಸಲ್ಲಿಸಿದ್ದೆ. ಆದರೆ, ನಾಮಪತ್ರದ ಕಲಂ 7, 7(ಎ), 7(ಎ)(ಬಿ)ಗಳನ್ನು ಸೂಕ್ತ ರೀತಿಯಲ್ಲಿ ಭರ್ತಿ ಮಾಡಿರಲಿಲ್ಲ. ಆದ್ದರಿಂದ ನಾಮಪತ್ರವನ್ನು ಸರಿಯಾಗಿ ಭರ್ತಿ ಮಾಡಿ ಏಪ್ರಿಲ್ 5ರ ಬೆಳಿಗ್ಗೆ 11 ಗಂಟೆ ಒಳಗಾಗಿ ಸಲ್ಲಿಸಬೇಕು ಎಂದು ಚುನಾವಣಾಧಿಕಾರಿಗಳು ಸೂಚಿಸಿದ್ದರು. ನಿಗದಿತ ಸಮಯದ ಒಳಗಾಗಿಯೇ ನಾನು ಸಲ್ಲಿಸಿದ್ದರೂ ನಾಮಪತ್ರ ತಿರಸ್ಕರಿಸಲಾಗಿದೆ. ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಮತ್ತು ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿಯಲ್ಲಿ ವಿವರಿಸಿದ್ದಾರೆ. ತಮ್ಮ ನಾಮಪತ್ರ ತಿರಸ್ಕರಿಸಿದ್ದ ಅಂದಿನ ಚುನಾವಣಾಧಿಕಾರಿಗಳೂ ಆಗಿದ್ದ ಮೈಸೂರು ಜಿಲ್ಲಾಧಿಕಾರಿ ಕೆವಿ ರಾಜೇಂದ್ರ ಅವರ ಆದೇಶವನ್ನು ಬದಿಗೆ ಸರಿಸಬೇಕು. ಯದುವೀರ್ ಅವರ ಆಯ್ಕೆಯನ್ನು ಅಸಿಂಧುಗೊಳಿಸಿ, ಭಾರತೀಯ ಚುನಾವಣಾ ಆಯೋಗ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ಹೊಸದಾಗಿ ಚುನಾವಣೆ ನಡೆಸಲು ಆದೇಶಿಸಬೇಕು ಎಂದು ರೇವತಿರಾಜ್ ಮನವಿ ಮಾಡಿಕೊಂಡಿದ್ದಾರೆ.
ಮಹಿಳೆಯರಿಗೆ ಶೇ. 30ರಷ್ಟು ಮೀಸಲಾತಿಗೆ ಸುಪ್ರೀಂ ಕೋರ್ಟ್ ಆದೇಶ
ಮಹಿಳಾ ವಕೀಲ ಅಭ್ಯರ್ಥಿಗಳಿಗೆ ಕನಿಷ್ಠ 30ರಷ್ಟು ಮೀಸಲಾತಿ ಕಲ್ಪಿಸುವ ಬಗ್ಗೆ ಪರಿಶೀಲಿಸಿ ಎಂದು ಸುಪ್ರೀಂ ಕೋರ್ಟ್ ನೀಡಿರುವ ಮಹತ್ವದ ಆದೇಶದ ಬೆನ್ನಲ್ಲೇ ಬೆಂಗಳೂರು ವಕೀಲರ ಸಂಘಕ್ಕೆ (ಎಎಬಿ) ಫೆಬ್ರುವರಿ 2ರಂದು ನಡೆಯಬೇಕಿದ್ದ ಚುನಾವಣೆಯನ್ನು ರದ್ದುಪಡಿಸಲಾಗಿದೆ. ಚುನಾವಣೆಯ ಉಸ್ತುವಾರಿ ಹೊತ್ತಿರುವ ಉನ್ನತಾಧಿಕಾರಿ ಸಮಿತಿ ಅಧ್ಯಕ್ಷ ಹಿರಿಯ ವಕೀಲ ಕೆಎನ್ ಫಣೀಂದ್ರ ಅವರು ಶುಕ್ರವಾರ (ಜನವರಿ 24) ನೋಟಿಸ್ ಹೊರಡಿಸಿದ್ದು, ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ 2025ರ ಜನವರಿ 8ರಂದು ಪ್ರಕಟಿಸಿರುವ ಚುನಾವಣಾ ವೇಳಾಪಟ್ಟಿಯನ್ನು ಅಮಾನತುಗೊಳಿಸಲಾಗಿದೆ. ಫೆಬ್ರುವರಿ 2ಕ್ಕೆ ನಿಗದಿಯಾಗಿದ್ದ ಸಂಘದ ಚುನಾವಣೆಯನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಎಎಬಿ ಆಡಳಿತ ಮಂಡಳಿಯ ಸದಸ್ಯತ್ವದಲ್ಲಿ ಮಹಿಳೆಯರಿಗೆ ಕನಿಷ್ಠ ಪಕ್ಷ ಶೇ 30ರಷ್ಟು ಪ್ರಾತಿನಿಧ್ಯ ನೀಡಬೇಕು. ಖಜಾಂಚಿ ಹುದ್ದೆಯನ್ನು ಮಹಿಳಾ ವಕೀಲರಿಗೆ ಮೀಸಲಿಡಬೇಕು. ಅಗತ್ಯಬಿದ್ದರೆ ಉನ್ನತಾಧಿಕಾರ ಸಮಿತಿ ಮತ್ತು ಮುಖ್ಯ ಚುನಾವಣಾಧಿಕಾರಿ ನಾಮಪತ್ರ ಸ್ವೀಕಾರ ದಿನಾಂಕ ಮತ್ತು ಚುನಾವಣೆಯನ್ನು ಮುಂದೂಡಬಹುದು ಎಂದು ಸುಪ್ರೀಂ ಕೋರ್ಟ್ ಶುಕ್ರವಾರವಷ್ಟೇ ಆದೇಶಿಸಿತ್ತು. ಬೆಂಗಳೂರಿನ ವಕೀಲರ ಸಂಘದ (ಎಎಬಿ) ಆಡಳಿತ ಮಂಡಳಿಯಲ್ಲಿ ಖಜಾಂಚಿ ಹುದ್ದೆಯನ್ನು ಮಹಿಳಾ ಅಭ್ಯರ್ಥಿಗಳಿಗೆ ಮೀಸಲಿಡುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಆದೇಶಿಸಿದೆ. ಎಎಬಿ ಆಡಳಿತ ಮಂಡಳಿಯಲ್ಲಿ ಮಹಿಳಾ ವಕೀಲರಿಗೆ ಶೇ 33ರಷ್ಟು ಮೀಸಲಾತಿ ನೀಡುವಂತೆ ಕೋರಿಕರ್ನಾಟಕ ಮಹಿಳಾ ವಕೀಲರ ಒಕ್ಕೂಟ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರ ದ್ವಿಸದಸ್ಯ ಪೀಠ ಈ ಆದೇಶ ಪ್ರಕಟಿಸಿದೆ.
140 ಮಂದಿ ಸ್ಪರ್ಧಿಸಿದ್ದರು
ಸಂವಿಧಾನದ 142ನೇ ವಿಧಿಯಡಿ, ಖಜಾಂಚಿ ಹುದ್ದೆ ಮಹಿಳಾ ಅಭ್ಯರ್ಥಿಗೆ ಮಾತ್ರ ಮೀಸಲು ಎಂದು ನಾವು ನಿರ್ದೇಶಿಸುತ್ತೇವೆ. ಈ ಉದ್ದೇಶಕ್ಕಾಗಿ ಉನ್ನತ ಅಧಿಕಾರದ ಸಮಿತಿ ಮತ್ತು ಮುಖ್ಯ ಚುನಾವಣಾಧಿಕಾರಿ ನಾಮನಿರ್ದೇಶನದ ದಿನಾಂಕ ವಿಸ್ತರಿಸಿ ಚುನಾವಣಾ ದಿನಾಂಕವನ್ನು ಮುಂದೂಡುವ ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ ಎಂದು ನ್ಯಾಯಮೂರ್ತಿಗಳು ಆದೇಶದಲ್ಲಿ ತಿಳಿಸಿದ್ದಾರೆ. ನಾಮಪತ್ರ ವಾಪಸ್ ಪಡೆಯುವ ಪ್ರಕ್ರಿಯೆ ಇದೇ ತಿಂಗಳ 20ರಂದು ಪೂರ್ಣಗೊಂಡಿತ್ತು. ವಿವಿಧ ಹುದ್ದೆಗಳಿಗೆ 140 ಮಂದಿ ಸ್ಪರ್ಧಿಸಿದ್ದರು. ಹಾಲಿ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಮತ್ತು ಎಪಿ ರಂಗನಾಥ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು ಬಿರುಸಿನ ಪ್ರಚಾರ ಕೈಗೊಂಡಿದ್ದರು.
