ವ್ಹೀಲಿಂಗ್ ನಿಯಂತ್ರಣಕ್ಕೆ ಕಠಿಣ ಕ್ರಮ ಜರುಗಿಸಿ; ಕರ್ನಾಟಕ ಸರ್ಕಾರಕ್ಕೆ ಹೈಕೋರ್ಟ್ ಸ್ಪಷ್ಟ ನಿರ್ದೇಶನ, 5 ಮುಖ್ಯ ಅಂಶಗಳು
ಕನ್ನಡ ಸುದ್ದಿ  /  ಕರ್ನಾಟಕ  /  ವ್ಹೀಲಿಂಗ್ ನಿಯಂತ್ರಣಕ್ಕೆ ಕಠಿಣ ಕ್ರಮ ಜರುಗಿಸಿ; ಕರ್ನಾಟಕ ಸರ್ಕಾರಕ್ಕೆ ಹೈಕೋರ್ಟ್ ಸ್ಪಷ್ಟ ನಿರ್ದೇಶನ, 5 ಮುಖ್ಯ ಅಂಶಗಳು

ವ್ಹೀಲಿಂಗ್ ನಿಯಂತ್ರಣಕ್ಕೆ ಕಠಿಣ ಕ್ರಮ ಜರುಗಿಸಿ; ಕರ್ನಾಟಕ ಸರ್ಕಾರಕ್ಕೆ ಹೈಕೋರ್ಟ್ ಸ್ಪಷ್ಟ ನಿರ್ದೇಶನ, 5 ಮುಖ್ಯ ಅಂಶಗಳು

ಅಪಾಯಕಾರಿ ವ್ಹೀಲಿಂಗ್‌ ಮುಂತಾದ ದುಸ್ಸಾಹಸ ಚಟುವಟಿಕೆಗಳನ್ನು ತಡೆಗಟ್ಟಲು ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. (ವರದಿ-ಎಚ್.ಮಾರುತಿ, ಬೆಂಗಳೂರು)

ವ್ಹೀಲಿಂಗ್ ನಿಯಂತ್ರಣಕ್ಕೆ ಕಠಿಣ ಕ್ರಮ ಜರುಗಿಸಿ ಎಂದು ಕರ್ನಾಟಕ ಸರ್ಕಾರಕ್ಕೆ ಹೈಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದೆ.
ವ್ಹೀಲಿಂಗ್ ನಿಯಂತ್ರಣಕ್ಕೆ ಕಠಿಣ ಕ್ರಮ ಜರುಗಿಸಿ ಎಂದು ಕರ್ನಾಟಕ ಸರ್ಕಾರಕ್ಕೆ ಹೈಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದೆ.

ಬೆಂಗಳೂರು: ಜೀವಕ್ಕೆ ಅಪಾಯ ತೊಂದೊಡ್ಡುವ ವ್ಹೀಲಿಂಗ್‌ನಂತಹ ಅಪಾಯಕಾರಿ ಚಟುವಟಿಕೆಗಳನ್ನು ನಿಯಂತ್ರಿಸಲು ಕಠಿಣ ಕ್ರಮ ಕೈಗೊಳ್ಳಬೇಕು. ಈ ಅಪಾಯಕಾರಿ ಚಟುವಟಿಕೆ ಈಗ ಗ್ರಾಮಗಳಿಗೂ ತಲುಪಿದ್ದು, ತಡೆಯುವ ಕೆಲಸವಾಗಬೇಕು ಎಂದು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸ್ಪಷ್ಟ ಸೂಚನೆ ನೀಡಿದೆ. ವ್ಹೀಲಿಂಗ್‌ ನಡೆಸುವುದನ್ನು ಹವ್ಯಾಸವನ್ನಾಗಿ ಮಾಡಿಕೊಂಡು ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಕೊಪ್ಪಳ ಜಿಲ್ಲೆ ಗಂಗಾವತಿಯ ಅರ್ಬಾಜ್‌ ಖಾನ್‌ ಅಲಿಯಾಸ್‌ ಅರ್ಬಾಜ್‌ (29) ಸಲ್ಲಿಸಿದ್ದ ಜಾಮೀನು ಕೋರಿಕೆಯನ್ನು ನ್ಯಾಯಪೀಠ ತಿರಸ್ಕರಿಸುತ್ತ ಈ ಸೂಚನೆ ನೀಡಿದೆ.

ವ್ಹೀಲಿಂಗ್ ತಡೆಗೆ ಕರ್ನಾಟಕ ಸರ್ಕಾರ ಹೈಕೋರ್ಟ್ ಸೂಚನೆ; 5 ಮುಖ್ಯ ಅಂಶಗಳು

ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ನಡೆದ ವ್ಹೀಲಿಂಗ್ ದುಸ್ಸಾಹಸದ ಕೇಸ್‌ನ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರಿದ್ದ ಏಕಸದಸ್ಯ ನ್ಯಾಯಪೀಠ (ಧಾರವಾಡ) ರಾಜ್ಯ ಸರ್ಕಾರಕ್ಕೆ ಇದನ್ನು ತಡೆಯುವುದಕ್ಕೆ ಅಗತ್ಯ ಕ್ರಮಕೈಗೊಳ್ಳು ನಿರ್ದೇಶನ ನೀಡಿದರು. ಇದರಲ್ಲಿ ಗಮನಸೆಳೆದ 5 ಅಂಶಗಳಿವು.

1) ಅಪಾಯಕಾರಿ ವ್ಹೀಲಿಂಗ್‌ ಮುಂತಾದ ದುಸ್ಸಾಹಸ ಚಟುವಟಿಕೆಗಳನ್ನು ತಡೆಗಟ್ಟಲು ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು.

2) ವಿವೇಚನಾರಹಿತ ವಾಹನ ಚಾಲನೆಯನ್ನು ನಿಯಂತ್ರಿಸಲು ಹಾಲಿ ಇರುವ ಕಾನೂನಿನ ನಿಬಂಧನೆಗಳು ಸಾಕಾಗುವುದಿಲ್ಲ ಎಂಬುದನ್ನು ಶಾಸಕಾಂಗ ಮನಗಾಣಬೇಕು.

3) ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ–2023 (ಬಿಎನ್‌ ಎಸ್‌ ಎಸ್‌) ಮತ್ತು ಭಾರತೀಯ ಮೋಟಾರು ವಾಹನ ಕಾಯ್ದೆ–1988ಕ್ಕೆ ಕಠಿಣ ನಿಬಂಧನೆಗಳನ್ನು ಸೇರ್ಪಡೆಗೊಳಿಸುವ ಮೂಲಕ ಅಗತ್ಯ ತಿದ್ದುಪಡಿ ತರಬೇಕು

4) ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ವ್ಹೀಲಿಂಗ್‌ ಎನ್ನುವುದು ಈಗ ಗ್ರಾಮೀಣ ಪ್ರದೇಶಗಳಿಗೂ ಲಗ್ಗೆಯಿಟ್ಟಿದೆ. ಇದನ್ನು ಸಾಹಸಮಯ ಸಾಧನೆ ಎಂದು ಯುವಜನಾಂಗ ನಂಬಿದೆ. ಆದರೆ ಇದರಿಂದಾಗುವ ಗಂಭೀರ ಹಾನಿಯ ಬಗ್ಗೆ ಅವರಿಗೆ ಅರಿವೇ ಇರುವುದಿಲ್ಲ.

5) ಅಪಾಯಕಾರಿ ವ್ಹೀಲಿಂಗ್‌ ಮುಂತಾದ ದುಸ್ಸಾಹಸ ಚಟುವಟಿಕೆ ಕೃತ್ಯದಲ್ಲಿ ತೊಡಗುವವರು ನಿಸ್ಸಂಶಯವಾಗಿ ಸಮಾಜದ ಸ್ವಾಸ್ಥ್ಯ ಮತ್ತು ನೆಮ್ಮದಿಗೆ ಭಂಗ ಉಂಟು ಮಾಡುತ್ತಿದ್ದಾರೆ

ಆರೋಪಿಗೆ ಜಾಮೀನು ನೀಡುವ ವಿಚಾರ; ನ್ಯಾಯಪೀಠ ಹೇಳಿದ್ದು ಇಷ್ಟು

ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರಿದ್ದ ಏಕಸದಸ್ಯ ನ್ಯಾಯಪೀಠ (ಧಾರವಾಡ) ಗಂಗಾವತಿಯ ಅರ್ಬಾಜ್‌ ಖಾನ್‌ ಅಲಿಯಾಸ್‌ ಅರ್ಬಾಜ್‌ (29) ಸಲ್ಲಿಸಿದ್ದ ಜಾಮೀನು ಕೋರಿಕೆಯನ್ನು ತಿರಸ್ಕರಿಸಿದೆ. ಅರ್ಬಾಜ್‌ ಪರ ಹೈಕೋರ್ಟ್‌ ವಕೀಲ ಸಾದಿಕ್‌ ಎನ್‌.ಗೂಡ್‌ವಾಲಾ ಹಾಗೂ ಪ್ರಾಸಿಕ್ಯೂಷನ್‌ ಪರ ಗಿರಿಜಾ ಎಸ್‌.ಹಿರೇಮಠ ವಾದ ಮಂಡಿಸಿದ್ದರು. ಇದಕ್ಕೂ ಮೊದಲು, ವಿಚಾರಣಾ ನ್ಯಾಯಾಲಯಗಳು ಕೂಡ ಆರೋಪಿಯ ಜಾಮೀನು ಕೋರಿಕೆಯನ್ನು ತಿರಸ್ಕರಿಸಿದ್ದವು.

ಈ ಪ್ರಕರಣದಲ್ಲಿ ಅರ್ಜಿದಾರನಿಗೆ ಜಾಮೀನು ನೀಡಬಹುದಾಗಿದೆ. ಆದರೆ, ಈತನಿಗೆ ವ್ಹೀಲಿಂಗ್‌ ಮಾಡುವುದು ಹವ್ಯಾಸವಾಗಿದೆ ಎನ್ನುವುದು ಪ್ರಾಸಿಕ್ಯೂಷನ್‌ ವಾದದಿಂದ ದೃಢಪಟ್ಟಿದೆ. ಹಾಗಾಗಿ, ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ ಎಂದ ಮಾತ್ರಕ್ಕೆ ಜಾಮೀನು ನೀಡಬೇಕು ಎಂದೇನೂ ಇಲ್ಲ ಎಂದು ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರಿದ್ದ ಏಕಸದಸ್ಯ ನ್ಯಾಯಪೀಠ (ಧಾರವಾಡ) ಅಭಿಪ್ರಾಯಪಟ್ಟಿದೆ.

ಏನಿದು ವ್ಹೀಲಿಂಗ್ ಪ್ರಕರಣ

ಗಂಗಾವತಿಯ ಹೇಮಗುಡ್ಡ ದುರ್ಗಮ್ಮ ದೇವಸ್ಥಾನದ ಸಮೀಪ 2024ರ ಅಕ್ಟೋಬರ್‌ 9ರಂದು ದಸರಾ ಉತ್ಸವ ನಡೆಯುತ್ತಿದ್ದ ವೇಳೆ, ಮೂವರು ಯುವಕರು ಯಮಹಾ ಆರ್‌ಎಕ್ಸ್‌–135 ಬೈಕಿನಲ್ಲಿ ವ್ಹೀಲಿಂಗ್‌ ಮಾಡುತ್ತಿದ್ದರು. ಪೊಲೀಸರು ಇವರನ್ನು ಹಿಡಿಯಲು ಮುಂದಾದಾಗ ವ್ಹೀಲಿಂಗ್‌ ಮಾಡುತ್ತಿದ್ದವರು ಆಯತಪ್ಪಿ ನೆಲಕ್ಕೆ ಬಿದ್ದಿದ್ದರು. ಆಗ ಪೊಲೀಸರು ನೆರವಿಗೆ ಧಾವಿಸಿದ್ದರು. ಆದರೆ, ನೆಲಕ್ಕೆ ಬಿದ್ದವರು ಪೊಲೀಸರನ್ನು ಅವಾಚ್ಯ ಪದಗಳಿಂದ ನಿಂದಿಸಿ, ಅವರ ಮೇಲೆಯೇ ಹಲ್ಲೆ ನಡೆಸಿ, ಅವರ ಮೊಬೈಲ್‌ ಫೋನ್‌ಗಳನ್ನೂ ಕಸಿದುಕೊಂಡು ತುಂಗಭದ್ರಾ ನಾಲೆಗೆ ಎಸೆದಿದ್ದರು ಎಂದು ದೂರು ದಾಖಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

(ವರದಿ- ಎಚ್ ಮಾರುತಿ, ಬೆಂಗಳೂರು)

ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.