ಮಧುಬಲೆ ಪ್ರಕರಣದಲ್ಲಿ ಯಾರನ್ನೂ ರಕ್ಷಿಸೋಲ್ಲ ಅಂದ್ರು ಸಿಎಂ; ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು: ಬಸವರಾಜ ಬೊಮ್ಮಾಯಿ ಆಗ್ರಹ
ಕನ್ನಡ ಸುದ್ದಿ  /  ಕರ್ನಾಟಕ  /  ಮಧುಬಲೆ ಪ್ರಕರಣದಲ್ಲಿ ಯಾರನ್ನೂ ರಕ್ಷಿಸೋಲ್ಲ ಅಂದ್ರು ಸಿಎಂ; ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು: ಬಸವರಾಜ ಬೊಮ್ಮಾಯಿ ಆಗ್ರಹ

ಮಧುಬಲೆ ಪ್ರಕರಣದಲ್ಲಿ ಯಾರನ್ನೂ ರಕ್ಷಿಸೋಲ್ಲ ಅಂದ್ರು ಸಿಎಂ; ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು: ಬಸವರಾಜ ಬೊಮ್ಮಾಯಿ ಆಗ್ರಹ

ಕರ್ನಾಟಕದಲ್ಲಿ ಚರ್ಚೆಯಾಗುತ್ತಿರುವ ಮಧುಬಲೆ( ಹನಿಟ್ರ್ಯಾಪ್‌) ಪ್ರಕರಣದಲ್ಲಿ ಯಾರನ್ನೂ ರಕ್ಷಿಸೋಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರೆ, ಸಿಎಂ ಅವರೇ ರಾಜೀನಾಮೆ ಕೊಡಬೇಕು ಎಂದು ಮಾಜಿ ಸಿಎಂ ಬೊಮ್ಮಾಯಿ ಒತ್ತಾಯಿಸಿದ್ದಾರೆ.

ಕರ್ನಾಟಕದ ಮಧುಬಲೆ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಗಳನ್ನು ನೀಡಿದ್ದಾರೆ.
ಕರ್ನಾಟಕದ ಮಧುಬಲೆ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಗಳನ್ನು ನೀಡಿದ್ದಾರೆ.

ಬೆಂಗಳೂರು:ಮಧುಬಲೆ( ಹನಿ ಟ್ರ್ಯಾಪ್) ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಪ್ರಕರಣದಲ್ಲಿ ಯಾರೇ ಆಗಿದ್ದರೂ ರಕ್ಷಣೆ ಕೊಡಬೇಕಾಗಿರುವುದು ಸರ್ಕಾರದ ಜವಾಬ್ದಾರಿ. ಕಾನೂನಿನ ಪ್ರಕಾರ ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು. ರಾಜಣ್ಣ ಅವರು ದೂರು ಕೊಟ್ಟರೆ ಉನ್ನತ ಮಟ್ಟದ ತನಿಖೆ ಮಾಡಿಸಲಾಗುತ್ತದೆ ಎಂದು ಗೃಹ ಸಚಿವರು ಉತ್ತರಿಸಿದ ಮೇಲೆ ಪುನ: ಪ್ರಸ್ತಾಪಿಸುವುದು ತರವಲ್ಲ. ಹನಿ ಟ್ರ್ಯಾಪ್ ಯಾರೇ ಮಾಡಿಸಿದ್ದರೂ ಅದು ತಪ್ಪೇ ಎಂದರು. ಎತ್ತು ಈಯಿತು ಎಂದ ಮಾತ್ರಕ್ಕೆ ಕೊಟ್ಟಿಗೆಗೆ ಕಟ್ಟು ಎಂದು ಹೇಳಲಾಗುವುದಿಲ್ಲ. ರಾಜಣ್ಣ ಅವರು ಯಾರ ಹೆಸರನ್ನೂ ಹೇಳಿಲ್ಲ. ಹೇಳಿದ್ದರೆ ಕ್ರಮ ತೆಗೆದುಕೊಳ್ಳಬಹುದಾಗಿತ್ತು. ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು .

ಸಚಿವರು ಹಾಗೂ ಪರಿಶಿಷ್ಟ ವರ್ಗದ ನಾಯಕರೂ ಆಗಿರುವ ಕೆ.ಎನ್ ರಾಜಣ್ಣ ಅವರು ಮಾಡಿರುವ ಆರೋಪಕ್ಕೆ ಈಗಾಗಲೇ ಗೃಹ ಸಚಿವರು ಉತ್ತರಿಸಿದ್ದಾರೆ. ವಿರೋಧ ಪಕ್ಷದ ನಾಯಕ ಆರ್.ಅಶೋಕ್ , ಆರಗ ಜ್ಞಾನೇಂದ್ರ , ಶಾಸಕ ಸುನೀಲ್ ಕುಮಾರ್, ಸಚಿವರಾದ ಕೆ ಎನ್ ರಾಜಣ್ಣ ಅವರು ಮಧುಬಲೆ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡಿದ್ದು ಈ ಬಗ್ಗೆ ಉತ್ತರಿಸಲು ಕೋರಿ ಇದಕ್ಕೆ ಕಾರಣರಾದವರನ್ನು ವಜಾ ಮಾಡಬೇಕು ಹಾಗೂ ಸದನದಲ್ಲಿ ಈ ಬಗ್ಗೆ ಮುಖ್ಯಮಂತ್ರಿಗಳು ಉತ್ತರಿಸಿ ಸದನದ ಮೌಲ್ಯವನ್ನು ಎತ್ತಿಹಿಡಿಯಬೇಕೆಂದು ಹಾಗೂ ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ ಸಂದರ್ಭದಲ್ಲಿ ಸಿಎಂ ಮೇಲಿನಂತೆ ಉತ್ತರಿಸಿದರು.

ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡಲಿ

ಮಧುಬಲೆ(ಪ್ರಕರಣ ಇಡೀ ದೇಶದಲ್ಲಿ ಕರ್ನಾಟಕದ ಮರ್ಯಾದೆಯನ್ನು ಹಾಳು ಮಾಡಿದೆ. ರಾಜ್ಯದಲ್ಲಿ ನೈತಿಕತೆ ಕಳೆದುಕೊಂಡಿರುವ ಕ್ರಿಮಿನಲ್ ಕ್ಯಾಬಿನೆಟ್ ರಾಜ್ಯದಲ್ಲಿದೆ. ಈ ಪ್ರಕರಣ ಮುಖ್ಯಮಂತ್ರಿಗಳ ಮೂಗಿನ ನೇರಕ್ಕೆ ನಡೆದಿರುವುದರಿಂದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.‌

ಈ ಕುರಿತು ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಧಿಕಾರದ ಲಾಲಸೆಯಿಂದ ಕಾಂಗ್ರೆಸ್ ಪಕ್ಷ ಆಡಳಿತವನ್ನು ನೈತಿಕ ಅಧಪತನಕ್ಕೆ ತೆಗೆದುಕೊಂಡು ಹೋಗಿದೆ. ಈ ಸರ್ಕಾರದ ಅವಧಿಯಲ್ಲಿ ಎರಡು ವರ್ಷದಲ್ಲಿ ಸುಮಾರು ಹತ್ತು ಹಗರಣಗಳು ಹೊರಗೆ ಬಂದಿವೆ. ಎಲ್ಲಿ ಕೈ ಹಾಕಿದರೂ ಅಲ್ಲಿ ಹಗರಣ ಸಿಗುತ್ತವೆ. ಹೀಗಾಗಿ ವಿಧಾನಸಭೆಯಲ್ಲಿ ನೈತಿಕ ಅಧಪತನ ನೋಡುತ್ತಿದ್ದೇವೆ‌.

ಇದುವರೆಗೂ ರಾಜ್ಯದಲ್ಲಿ ಮನಿ ಕ್ರೈಸಿಸ್ ಇತ್ತು‌ ಈಗ ಹನಿ ಕ್ರೈಸಿಸ್ ಶುರುವಾಗಿದೆ. ರಾಜ್ಯ ಸರ್ಕಾರ ಆರ್ಥಿಕವಾಗಿಯೂ ದಿವಾಳಿಯಾಗಿದೆ. ನೈತಿಕವಾಗಿಯೂ ದಿವಾಳಿಯಾಗಿದೆ. ಒಬ್ಬ ಸಂಪುಟ ಸಚಿವರು ವಿಧಾನಸಭೆಯಲ್ಲಿ ತಮ್ಮ ಮೇಲೆ ಮಧುಬಲೆಯ ಪ್ರಯತ್ನ ನಡೆದಿತ್ತು ಎಂದು ಹೇಳುವ ಸ್ಥಿತಿಗೆ ಬಂದಿದ್ದಾರೆ. ಕಳೆದ ಹದಿನೈದು ದಿನಗಳಿಂದ ವಿಧಾನಸಭೆಯ ಮೊಗಸಾಲೆಯಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದ್ದರೂ ಮುಖ್ಯಮಂತ್ರಿಗಳು ಸುಮ್ಮನೆ ನೋಡುತ್ತ ಕೂತಿದ್ದಾರೆ. ಇವತ್ತು ಅದು ಸ್ಪೋಟಗೊಂಡಿದೆ. ಸಚಿವ ಸಂಪುಟದಲ್ಲಿಯೇ ಈ ರೀತಿ ನಡೆಯುತ್ತಿರುವಾಗ ಈ ಸಚಿವ ಸಂಪುಟವನ್ನು ಏನೆಂದು ಕರೆಯಬೇಕು. ರಾಜ್ಯವನ್ನು ಆಳುವ ನೈತಿಕತೆ ಕಳೆದುಕೊಂಡಿರುವ ಕ್ರಿಮಿನಲ್ ಕ್ಯಾಬಿನೆಟ್ ರಾಜ್ಯದಲ್ಲಿದೆ ಎಂದು ಹೇಳಿದರು.

ನನ್ನ ಪ್ರಕಾರ ಈ ಅನೈತಿಕ ಚಟುವಟಿಕೆ ಮುಖ್ಯಮಂತ್ರಿ ಯವರ ಮೂಗಿನ ನೇರಕ್ಕೆ ನಡೆಯುತ್ತಿರುವುದರಿಂದ ಅವರು ನೈತಿಕ ಹೊಣೆ ಹೊತ್ತು ರಾಜಿನಾಮೆ ಕೊಡಬೇಕು. ಇಲ್ಲದಿದ್ದರೆ ರಾಜ್ಯದ ಜನತೆ ಯಾಕಾದರೂ ಇಂತಹ ಸರ್ಕಾರ ಅಧಿಕಾರಕ್ಕೆ ತಂದಿದ್ದೇವೆ ಎಂದು ಪಶ್ಚಾತಾಪ ಪಡುವಂತಾಗುತ್ತದೆ ಎಂದು ಹೇಳಿದರು.

ಸಹಕಾರ ಸಚಿವರು 48 ಜನರ ಸಿಡಿಗಳಿವೆ ಎಂದು ಹೇಳಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಚಿವ ರಾಜಣ್ಣ ಅವರಿಗೆ ಈ ಬಗ್ಗೆ ಇನ್ನೂ ಹೆಚ್ಚಿ ಮಾಹಿತಿ ಇರಬಹುದು ಅವರು ಅದೆಲ್ಲವನ್ನೂ ತನಿಖೆಗೆ ಒಪ್ಪಿಸಬೇಕು. ಈ ರೀತಿಯ ಅನೈತಿಕ ಚಟುವಟಿಕೆಗಳನ್ನು ಮಾಡುವ ಯಾವುದೇ ಪಕ್ಷದ ವ್ಯಕ್ತಿ ಇರಲಿ ಅವರ ವಿರುದ್ದ ಕಠಿಣ ಶಿಕ್ಷೆಯಾಗಬೇಕು. ಈ ಪ್ರಕರಣದ ತನಿಖೆಯನ್ನು ಹೈಕೋರ್ಟ್ ನ ಹಾಲಿ ಅಥವಾ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು. ಈ ಪ್ರಕರಣದ ಬಗ್ಗೆ ಈಗಾಗಲೇ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿರುವುದರಿಂದ ಕೇಂದ್ರದ ನಾಯಕರ ಗಮನಕ್ಕೂ ಬಂದಿರುತ್ತದೆ. ಈ ಪ್ರಕರಣದ ತನಿಖೆಯ ಹಾದಿಯ ನಂತರ ಮುಂದಿನ ಬೆಳವಣಿಗೆಗಳು ನಡೆಯಲಿವೆ ಎಂದು ಹೇಳಿದರು.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.
Whats_app_banner