HSRP Number Plate: ವಾಹನಗಳ ಎಚ್‌ಎಸ್‌ಆರ್‌ಪಿ ನೋಂದಣಿಗೆ ಹೊಸ ವರ್ಷದ ಮೊದಲ ತಿಂಗಳವರೆಗೂ ಉಂಟು ಗಡುವು; ಜನವರಿ 31ರವರೆಗೂ ವಿಸ್ತರಣೆ
ಕರ್ನಾಟಕದಲ್ಲಿ ವಾಹನಗಳಿಗೆ ಎಚ್‌ಎಸ್‌ಆರ್ ಪಿ ನೋಂದಣಿಗೆ ಕಡ್ಡಾಯಗೊಳಿಸಿದ್ದರೂ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಗಡುವನ್ನು ಜನವರಿ 31 ರವರೆಗೂ ವಿಸ್ತರಿಸಲಾಗಿದೆ.
ಬೆಂಗಳೂರು: ಕರ್ನಾಟಕದಲ್ಲಿ ವಾಹನಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ (ಹೆಚ್ಎಸ್ಆರ್ಪಿ) ಅಳವಡಿಸುವುದು ಕಡ್ಡಾಯವಾಗಿದ್ದರೂ ಪ್ರಕರಣ ನ್ಯಾಯಾಲಯದ ವಿಚಾರಣೆಯಲ್ಲಿರುವುದರಿಂದ ಗಡುವು ಮುಂದೆ ಹೋಗುತ್ತಲೇ ಇದೆ. ನ್ಯಾಯಾಲಯದಿಂದ ಅಂತಿಮ ಆದೇಶ ಹೊರ ಬೀಳುವವರೆಗೂ ದಂಡ ಪ್ರಯೋಗ ಬೇಡ ಎಂದು ಕರ್ನಾಟಕ ಹೈಕೋರ್ಟ್ ಈಗಾಗಲೇ ಸಾರಿಗೆ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಈ ಕಾರಣದಿಂದ ಐದನೇ ಬಾರಿಗೆ ಗಡುವನ್ನು ಕರ್ನಾಟಕ ಸಾರಿಗೆ ಇಲಾಖೆ ವಿಸ್ತರಿಸಿದೆ. 2025ರ ಜನವರಿ 31ರವರೆಗೂ ಸಾರಿಗೆ ಇಲಾಖೆ ವಿಸ್ತರಣೆ ಮಾಡಿದೆ. ಡಿಸೆಂಬರ್ ಅಂತ್ಯದವರೆಗೂ ನೋಂದಣಿಗೆ ಗಡುವು ನಿಗದಿ ಮಾಡಲಾಗಿತ್ತು. ಈಗ ಮತ್ತೆ ಗಡುವು ವಿಸ್ತರಣೆಯಾಗುತ್ತಿದೆ. ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು. ಶುಕ್ರವಾರ ಆದೇಶ ಹೊರ ಬೀಳಬೇಕಾಗಿತ್ತಾದರೂ ಮನಮೋಹನಸಿಂಗ್ ಅವರ ನಿಧನದ ಕಾರಣದಿಂದ ರಜೆ ಬಂದಿದ್ದರಿಂದ ಸೋಮವಾರ ಆಧಿಕೃತ ಆದೇಶ ಪ್ರಕಟವಾಗಲಿದೆ.
ಹೊಸ ಆದೇಶ
ಭಾರತದಾದ್ಯಂತ ಏಕ ರೂಪದ ನಂಬರ್‌ಪ್ಲೇಟ್‌ಗಳು ಸೂಕ್ತ ಭದ್ರತೆ ಹಾಗೂ ಸುರಕ್ಷತೆಯೊಂದಿಗೆ ಅಳವಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಈಗಾಗಲೇ ಹಲವು ರಾಜ್ಯಗಳಲ್ಲಿ ಇದು ಜಾರಿಯಾಗಿದ್ದರೂ ಕರ್ನಾಟದಲ್ಲಿ ಕಳೆದ ವರ್ಷ ವಾಹನಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ (ಹೆಚ್ಎಸ್ಆರ್ಪಿ) ಅಳವಡಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ಸುಮಾರು ಒಂದೂವರೆ ವರ್ಷದಲ್ಲಿ ಈವರೆಗೂ 57 ವಾಹನಗಳಿಗೆ ಮಾತ್ರ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಲಾಗಿದೆ. ಇನ್ನೂ 1.44 ಕೋಟಿ ವಾಹನಗಳಿಗೆ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆ ಬಾಕಿಯಿದೆ.
ಇದರ ನಡುವೆ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಮಾಡಿಸಿಕೊಳ್ಳದ ವಾಹನ ಸವಾರರಿಗೆ ದಂಡ ವಿಧಿಸಲು ಸಾರಿಗೆ ಇಲಾಖೆ ಮುಂದಾಗಿದೆ. ಗಡುವು ಮುಗಿದ ನಂತರವೂ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸದ ದಂಡ ಪ್ರಯೋಗ ಶುರುವಾಗುವ ಮುನ್ನವೇ ಇದನ್ನು ಪ್ರಶ್ನಿಸಿ ವಾಹನ ಸವಾರರು ಕೋರ್ಟ್ ಮೊರೆ ಹೋದರು. ಕರ್ನಾಟಕ ಹೈಕೋರ್ಟ್‌ನಲ್ಲಿ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಆದೇಶ ರದ್ದುಪಡಿಸುವಂತೆ ಕೋರಲಾಗಿತ್ತು. ಈ ಪ್ರಕರಣದ ವಿಚಾರಣೆ ಮುಂದುವರಿದಿದೆ. ಕಳೆದ ತಿಂಗಳು ವಿಚಾರಣೆ ನಡೆಸಿದ್ದ ಹೈಕೋರ್ಟ್ ಈ ಕುರಿತು ವಿವರವಾದ ವರದಿ ನೀಡುವಂತೆ ಸಾರಿಗೆ ಇಲಾಖೆಗೆ ಆದೇಶ ನೀಡಿದೆ. 2025ರ ಜನವರಿ 15ರ ನಂತರ ಹೈಕೋರ್ಟ್ ನಲ್ಲಿ ಈ ಪ್ರಕರಣ ವಿಚಾರಣೆಗೆ ಬರಲಿದೆ. ಇದರಿಂದಾಗಿ ಕರ್ನಾಟಕ ಸಾರಿಗೆ ಇಲಾಖೆಯು 2025ರ ಜನವರಿ 31 ರವರೆಗೂ ಗಡುವನ್ನು ವಿಸ್ತರಿಸಲು ಮುಂದಾಗಿದೆ.
ಸಾರಿಗೆ ಆಯುಕ್ತರು ಹೇಳೋದೇನು
ವಾಹನಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಪ್ರಕ್ರಿಯೆ ಜಾರಿಯಲ್ಲಿದೆ. ಇದರ ನಡುವೆ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದು,. ನ್ಯಾಯಾಲಯದ ತೀರ್ಪು ಬಾಕಿ ಇರುವುದರಿಂದ ದಂಡ ಪ್ರಯೋಗ ಶುರುವಾಗಿಲ್ಲ. ಈಗಲೂ ನೋಂದಣಿಗೆ ಅವಕಾಶವಿದೆ. ಗಡುವನ್ನು 2025ರ ಜನವರಿ 31 ರವರೆಗೂ ವಿಸ್ತರಿಸಿದ ಪ್ರಸ್ತಾವನೆ ಸಲ್ಲಿಕೆಯಾಗಿದ್ದು. ಆದೇಶ ಒಂದೆರಡು ದಿನದಲ್ಲಿ ಜಾರಿಯಾಗಲಿದೆ. ಇದರೊಟ್ಟಿಗೆ ಸಾರಿಗೆ ಇಲಾಖೆಯಿಂದಲೂ ಹೈಕೋರ್ಟ್‌ಗೆ ಹೆಚ್ಎಸ್ಆರ್ಪಿ ನೋಂದಣಿಗೆ ಮಹತ್ವವನ್ನು ತಿಳಿಸಿಕೊಡುತ್ತೇವೆ ಎನ್ನುವುದು ಸಾರಿಗೆ ಇಲಾಖೆ ಆಯುಕ್ತರಾದ ಎ.ಎಂ.ಯೋಗೀಶ್ ನೀಡುವ ವಿವರಣೆ.
ಇತರೆ ರಾಜ್ಯಗಳಲ್ಲಿ ಹೇಗೆ
ಭಾರತದಲ್ಲಿ ಪಶ್ಚಿಮ ಬಂಗಾಳದಲ್ಲಿ ಹೆಚ್ಚಿನ ಪ್ರಮಾಣದಲ್ಲ ವಾಹನ ನೋಂದಣಿಯಾಗಿದೆ.ಕರ್ನಾಟಕದಲ್ಲಿ ಈ ಪ್ರಮಾಣ ಕಡಿಮೆ.ಇತರೆ ರಾಜ್ಯಗಳಲ್ಲೂ ಇದು ಪ್ರಗತಿಯಲ್ಲಿದೆ. ನ್ಯಾಯಾಲಯದ ಅಂತಿಮ ನಿರ್ದೇಶನ ಆಧರಿಸಿ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸಾರಿಗೆ ಇಲಾಖೆ ಮುಂದಾಗಿದೆ.
ಹೆಚ್ಚಿನ ವಾಹನ ಮಾಲೀಕರು ಹೆಚ್ಎಸ್ಆರ್ಪಿ ಆಳವಡಿಕೆಗೆ ನಿರಾಸಕ್ತಿ ತೋರುತ್ತಿದ್ದಾರೆ. ಹೀಗಾಗಿ ಸಾರಿಗೆ ಇಲಾಖೆಯು ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಅರಿವು ಮೂಡಿಸಲು ಶಿಬಿರಗಳನ್ನು ಆಯೋಜನೆ ಮಾಡಲು ತೀರ್ಮಾನ ಮಾಡಿದೆ.