ಕನ್ನಡ ಸುದ್ದಿ / ಕರ್ನಾಟಕ /
Karnataka Investors Meet 2025: ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಕರ್ನಾಟಕಕ್ಕೆ ಬಂದ ಪ್ರಮುಖ 10 ಹೂಡಿಕೆಗಳು
ಬೆಂಗಳೂರಿನಲ್ಲಿ ನಡೆದ ಹೂಡಿಕೆದಾರರ ಸಮಾವೇಶದಲ್ಲಿ ಕರ್ನಾಟಕದ ಹಲವು ನಗರಗಳಲ್ಲಿ ಹೂಡಿಕೆ ಆಗುವ ಒಪ್ಪಂದಗಳು ಆಗಿವೆ. ಯಾವ ನಗರ, ಎಲ್ಲೆಲ್ಲಿ ಎಷ್ಟು ಹೂಡಿಕೆ ಎನ್ನುವ ಮಾಹಿತಿ ಇಲ್ಲಿದೆ.

ಬೆಂಗಳೂರಿನಲ್ಲಿ ನಡೆದ ಹೂಡಿಕೆದಾರರ ಸಮಾವೇಶದಲ್ಲಿ ಕರ್ನಾಟಕದ ಹಲವು ನಗರಗಳಿಗೆ ಹೂಡಿಕೆ ಮಾಡಲಾಗಿದೆ.
ಬೆಂಗಳೂರು: ಬೆಂಗಳೂರಿನಲ್ಲಿ ಮುಕ್ತಾಯಗೊಂಡ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಕರ್ನಾಟಕದ ಹಲವು ನಗರಗಳಲ್ಲಿ ಹೂಡಿಕೆಯ ಒಪ್ಪಂದಗಳಾಗಿವೆ. ಬೆಂಗಳೂರು, ಮೈಸೂರು, ತುಮಕೂರು, ಬೆಳಗಾವಿ, ಕಲಬುರಗಿ, ಧಾರವಾಡ, ವಿಜಯಪುರ ಸಹಿತ ಹಲವು ಜಿಲ್ಲೆಗಳಲ್ಲಿ ಹೂಡಿಕೆಗಳಾಗಲಿವೆ. ಹೂಡಿಕೆಯಿಂದ ಈ ಭಾಗದ ಕೈಗಾರಿಕಾ ಪ್ರದೇಶಗಳು, ಆರೋಗ್ಯ, ಶಿಕ್ಷಣ, ಮೂಲಸೌಕರ್ಯ, ಸಕ್ಕರೆ ಉದ್ಯಮದ ಪ್ರಗತಿಗೆ ಒತ್ತು ಸಿಗಲಿದೆ. ಉದ್ಯೋಗಗಳ ಲಭ್ಯತೆಗೂ ದಾರಿ ಮಾಡಿಕೊಡಲಾಗಿದೆ. ಮಧ್ಯಮ ಹಾಗೂ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರ ನೇತೃತ್ವದಲ್ಲಿ ನಡೆದ ಮೂರು ದಿನಗಳ ಜಾಗತಿಕ ಹೂಡಿಕೆದಾರರ ಸಮಾವೇಶ ಶುಕ್ರವಾರ ಮುಕ್ತಾಯಗೊಂಡಿತು. ಭಾರತ ಮಾತ್ರವಲ್ಲದೇ ವಿಶ್ವದ ನಾನಾ ಭಾಗಗಳಿಂದ ವಿವಿಧ ಕ್ಷೇತ್ರಗಳ ಉದ್ಯಮಿಗಳು ಸಮಾವೇಶದಲ್ಲಿ ಭಾಗಿಯಾಗಿದ್ದರು.
ಪ್ರಮುಖ ಹೂಡಿಕೆಗಳ ಪಟ್ಟಿ
- ವಿಪ್ರೋ-ಜಿಇ ಹೆಲ್ತ್ ಕೇರ್ ಸಂಸ್ಥೆಯು ಕರ್ನಾಟಕದ ಆರೋಗ್ಯಸೇವೆಗಳ ಕ್ಷೇತ್ರದಲ್ಲಿ ಮುಂದಿನ 5 ವರ್ಷಗಳಲ್ಲಿ ಇನ್ನೂ 8,000 ಕೋಟಿ ರೂ. ಹೂಡಿಕೆ ಮಾಡಲಿದೆ. ಇದು ಕಳೆದ ಎರಡು ದಶಕಗಳಲ್ಲಿ ವಿನಿಯೋಗಿಸಿರುವ 32 ಸಾವಿರ ಕೋಟಿ ರೂ. ಬಂಡವಾಳದ ಮುಂದುವರಿದ ಭಾಗವಾಗಿದೆ
- ಗೌರಿಬಿದನೂರು, ಧಾರವಾಡ ಮ್ತತು ಹಾರೋಹಳ್ಳಿಯಲ್ಲಿ ಪರಿಸರಸ್ನೇಹಿ ಇಂಧನ ಕ್ಲಸ್ಟರ್ ಗಳನ್ನು ಸ್ಥಾಪಿಸಲಾಗುವುದು
- ಆರೋಗ್ಯ ಸೇವೆಗಳ ಕ್ಷೇತ್ರದಲ್ಲಿ ಅಗತ್ಯವಿರುವ ಶಿಕ್ಷಣ, ಸೇವೆ ಮತ್ತು ಸಂಶೋಧನೆಗಳಿಗೆ ಕ್ವಿನ್ ಸಿಟಿಯಲ್ಲಿ ಮುಂದಿನ 5 ವರ್ಷಗಳಲ್ಲಿ 1,000 ಕೋಟಿ ರೂ. ಹೂಡುವುದಾಗಿ ಬೆಳಗಾವಿಯ ಕೆಎಲ್ಇ ಸೊಸೈಟಿ ಹೇಳಿದೆ
- ಸವದತ್ತಿಯ ಶಿವಶಕ್ತಿ ಶುಗರ್ಸ್ ಮತ್ತು ಇನಾಂದಾರ್ ಶುಗರ್ಸ್ ಕಾರ್ಖಾನೆಗಳು ಸಕ್ಕರೆ ಮತ್ತು ಎಥೆನಾಲ್ ಉತ್ಪಾದನೆಗೆ ಮುಂದಿನ 2 ವರ್ಷಗಳಲ್ಲಿ ಕ್ರಮವಾಗಿ 1,000 ಕೋಟಿ ರೂ. ಮತ್ತು 250 ಕೋಟಿ ರೂ. ಹೂಡಿಕೆ ಮಾಡಲಿದೆ.
- ಬಸ್ ಮತ್ತು ಟ್ರಕ್ ತಯಾರಿಕೆಗೆ ಹೆಸರಾಗಿರುವ ಸ್ವೀಡನ್ನ ಮೂಲದ ವೋಲ್ವೊ ಕಂಪನಿಯು ಹೊಸಕೋಟೆಯಲ್ಲಿರುವ ತನ್ನ ತಯಾರಿಕಾ ಸ್ಥಾವರವನ್ನು ವಿಸ್ತರಿಸಲು ತೀರ್ಮಾನಿಸಿದ್ದು, ಇದಕ್ಕಾಗಿ 1,400 ಕೋಟಿ ರೂ. ಬಂಡವಾಳ ಹೂಡಿಕೆ ಮಾಡುವುದಾಗಿ ಘೋಷಿಸಿದೆ.
- ತುಮಕೂರಿನಲ್ಲಿ 8,000 ಎಕರೆ ವಿಸ್ತೀರ್ಣದಲ್ಲಿ ಪ್ಲೇ ಅಂಡ್ ಪ್ಲಗ್ ಮಾದರಿಯಲ್ಲಿ ಇಂಡಸ್ಟ್ರಿಯಲ್ ಸ್ಮಾರ್ಟ್ ಸಿಟಿಗೆ ಚಾಲನೆ ನೀಡಲಾಗಿದೆ. 1,736 ಎಕರೆಯಲ್ಲಿ ಇದರ ಮೊದಲ ಹಂತದ ಅಭಿವೃದ್ಧಿ ಪ್ರಗತಿಯಲ್ಲಿದ್ದು, 2026ರ ಕೊನೆಯ ಹೊತ್ತಿಗೆ ಇದು ಮುಗಿಯಲಿದೆ.
- ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗೆ 1 ಲಕ್ಷ ಕೋಟಿ ರೂಪಾಯಿ ವಿನಿಯೋಗಿಸಲಾಗುವುದು. ಇದರಲ್ಲಿ ಫ್ಲೈಓವರ್, ಸೇತುವೆಗಳು, ಡಬ್ಬಲ್ ಡೆಕ್ಕರ್ ಮಾರ್ಗಗಳು, ಹೊಸ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು
- ಮೈಸೂರು, ಮಂಗಳೂರು, ಕಲ್ಬುರ್ಗಿ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಸೇರಿದಂತೆ ಹಲವು ನಗರಗಳಲ್ಲಿ ನವೋದ್ಯಮಗಳಿಗೆ ಪೂರಕ ವಾತಾವರಣ ಸೃಷ್ಟಿಸಲಾಗುತ್ತಿದೆ. ಕೃತಕ ಬುದ್ಧಿಮತ್ತೆ, ಡಾಟಾ ಸೈನ್ಸ್ ತಂತ್ರಜ್ಞಾನಕ್ಕೆ ಉತ್ತೇಜನ ನೀಡಲಾಗುತ್ತಿದ್ದು, ಪರಿಪೋಷಕ (ಇನ್ ಕ್ಯುಬೇಷನ್) ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ
- ವಿಜಯಪುರದಲ್ಲಿ 3000 ಮೆಗಾವಾಟ್ ಸಾಮರ್ಥ್ಯದ ಗಾಳಿ ವಿದ್ಯುತ್ ಉತ್ಪಾದನೆ ಅಭಿವೃದ್ಧಿಪಡಿಸಲು ಮತ್ತು ಅತ್ಯಾಧುನಿಕ ವಿಂಡ್ ಟರ್ಬೈನ್ ಬ್ಲೇಡ್ ತಯಾರಿಕಾ ಘಟಕ ಸ್ಥಾಪಿಸಲು ಸುಜ್ಲಾನ್ ಕಂಪನಿಯು ರಾಜ್ಯ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡಿದೆ.
- ವಿಜಯಪುರ ಅಥವಾ ಕಲಬುರಗಿಯಲ್ಲಿ ಪ್ರತಿ ದಿನ 800 ಟನ್ ಸಾಮರ್ಥ್ಯದ ಬಹುಬಗೆಯ ಬೇಳೆಕಾಳು ಸಂಸ್ಕರಣಾ ಘಟಕ ಸ್ಥಾಪಿಸಲು ವಿಂಗ್ಸ್- ವಿಟೆರಾ ಕಂಪನಿಯು 250 ಕೋಟಿ ಬಂಡವಾಳ ತೊಡಗಿಸಲಿದೆ. ಈ ಘಟಕವು ಕಾರ್ಯಾರಂಭ ಮಾಡಿದ 2ನೇ ವರ್ಷದಿಂದ ₹ 800 ಕೋಟಿ ವಾರ್ಷಿಕ ವಹಿವಾಟು ನಡೆಸಲಿದೆ. ದಕ್ಷಿಣ ಭಾರತದಲ್ಲಿನ ಬೇಳೆಕಾಳುಗಳ ಅತಿದೊಡ್ಡ ಸಂಸ್ಕರಣಾ ಘಟಕ ಇದಾಗಿರಲಿದೆ.
