ಬೆಂಗಳೂರಲ್ಲಿ ಫೆಬ್ರವರಿ 12ರಿಂದ ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮಾವೇಶ, 18 ದೇಶಗಳು ಭಾಗಿ, 10 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ನಿರೀಕ್ಷೆ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಲ್ಲಿ ಫೆಬ್ರವರಿ 12ರಿಂದ ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮಾವೇಶ, 18 ದೇಶಗಳು ಭಾಗಿ, 10 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ನಿರೀಕ್ಷೆ

ಬೆಂಗಳೂರಲ್ಲಿ ಫೆಬ್ರವರಿ 12ರಿಂದ ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮಾವೇಶ, 18 ದೇಶಗಳು ಭಾಗಿ, 10 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ನಿರೀಕ್ಷೆ

Karnataka Investors summit 2025: ಬೆಂಗಳೂರಿನಲ್ಲಿ ಕರ್ನಾಟಕ ಹೂಡಿಕೆದಾರರ ಸಮಾವೇಶ ಫೆಬ್ರವರಿ 12ರಿಂದ ಮೂರು ದಿನಗಳ ಕಾಲ ನಡೆಯಲಿದೆ.

ಕರ್ನಾಟಕ ಹೂಡಿಕೆದಾರರ ಸಮಾವೇಶ ಕುರಿತು ಸಭೆಯಲ್ಲಿ ಸಚಿವ ಎಂ.ಬಿ.ಪಾಟೀಲ್‌ ಮಾತನಾಡಿದರು.
ಕರ್ನಾಟಕ ಹೂಡಿಕೆದಾರರ ಸಮಾವೇಶ ಕುರಿತು ಸಭೆಯಲ್ಲಿ ಸಚಿವ ಎಂ.ಬಿ.ಪಾಟೀಲ್‌ ಮಾತನಾಡಿದರು.

Karnataka Investors summit 2025: ಕರ್ನಾಟಕದ ಹೂಡಿಕೆದಾರರ ಸಮಾವೇಶ 2025ಕ್ಕೆ ಸಿದ್ದತೆಗಳು ಪೂರ್ಣಗೊಂಡಿದ್ದು, ಇದೇ ತಿಂಗಳ 12ರಿಂದ 14ರವರೆಗೆ ಇಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶ ಬೆಂಗಳೂರಿನಲ್ಲಿ ನಡೆಯಲಿದೆ. ಈ ಸಮಾವೇಶದ ಮೂಲಕ ಸುಮಾರು 10 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯನ್ನು ರಾಜ್ಯಕ್ಕೆ ಆಕರ್ಷಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಫೆಬ್ರವರಿ 11ರ ಸಂಜೆಯೇ ಸಮಾವೇಶವನ್ನು ಉದ್ಘಾಟಿಸಲಾಗುತ್ತಿದೆ. ಈಗಾಗಲೇ 2,000ಕ್ಕೂ ಹೆಚ್ಚು ಹೂಡಿಕೆದಾರರು ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಸಕ್ತಿ ತೋರಿ, ನೋಂದಾಯಿಸಿಕೊಂಡಿದ್ದಾರೆ. ಸಮಾವೇಶದಲ್ಲಿ 18 ದೇಶಗಳು ಪಾಲ್ಗೊಳ್ಳುತ್ತಿದ್ದು, ಈ ಪೈಕಿ 9 ದೇಶಗಳು ಪ್ರತ್ಯೇಕ ಪೆವಿಲಿಯನ್ ಹೊಂದಿರಲಿವೆ.

ಮೊದಲು ಕರ್ನಾಟಕ, ಮಹಾರಾಷ್ಟ್ರ, ಗುಜರಾತಿನಂತಹ ಕೆಲವೇ ರಾಜ್ಯಗಳು ಮಾತ್ರ ಹೂಡಿಕೆದಾರರ ಸಮಾವೇಶ ನಡೆಸುತ್ತಿದ್ದವು. ಈಗ ಹೆಚ್ಚಿನ ರಾಜ್ಯಗಳು ಇಂಥ ಸಮಾವೇಶ ಹಮ್ಮಿಕೊಳ್ಳುತ್ತಿವೆ. ಈ ಸಲದ ಸಮಾವೇಶದಲ್ಲಿ ಕುಮಾರ್ ಬಿರ್ಲಾ, ಆನಂದ್ ಮಹೀಂದ್ರ, ಕಿರಣ್ ಮಜುಂದಾರ್ ಸೇರಿದಂತೆ ಖ್ಯಾತ ಉದ್ಯಮಿಗಳು ಪಾಲ್ಗೊಳ್ಳಲಿದ್ದಾರೆ. ಫೆ.12 ಮತ್ತು 13ರಂದು ಇಡೀ ಎರಡು ದಿನ ಸಮಾವೇಶದಲ್ಲಿ ಅತ್ಯಂತ ಗಂಭೀರ ಚಟುವಟಿಕೆಗಳು ನಡೆಯಲಿವೆ. ಹೀಗಾಗಿ 11ರಂದು ಸಂಜೆ 4 ಗಂಟೆಗೇ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.

60ಕ್ಕೂ ಹೆಚ್ಚು ಉದ್ಯಮ ಪರಿಣತರು ಗೋಷ್ಠಿಗಳಲ್ಲಿ ಮಾತನಾಡಲಿದ್ದಾರೆ. ಜೊತೆಗೆ ಸರಕಾರವು ರಾಜ್ಯದಲ್ಲಿ ಹೂಡಿಕೆಗೆ ಇರುವ ಪ್ರಶಸ್ತ ಅವಕಾಶಗಳನ್ನು ಮತ್ತು ನಮ್ಮಲ್ಲಿರುವ ಉದ್ಯಮಸ್ನೇಹಿ ನೀತಿ ಹಾಗೂ ಪ್ರೋತ್ಸಾಹಕ ಕ್ರಮಗಳನ್ನು ಹೂಡಿಕೆದಾರರಿಗೆ ಮನವರಿಕೆ ಮಾಡಿಕೊಡಲಿದೆ

ಬಹುತೇಕ ಜಾಗತಿಕ ಮಟ್ಟದ ಕಂಪನಿಗಳೆಲ್ಲವೂ ಬೆಂಗಳೂರಿನಲ್ಲಿ ಆರ್ & ಡಿ ಕೇಂದ್ರಗಳನ್ನು ಮತ್ತು ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು (ಜಿಸಿಸಿ) ಹೊಂದಿವೆ. ಆದ್ದರಿಂದ ಸ್ಥಳೀಯ ಮಟ್ಟದಲ್ಲೇ ಉತ್ಪಾದನೆಯೂ ಆಗುವಂತೆ ನೋಡಿಕೊಳ್ಳಲು ಸರಕಾರ ಉಪಕ್ರಮಗಳನ್ನು ತೆಗೆದುಕೊಳ್ಳಲಿದೆ. ಪರಿಸರಸ್ನೇಹಿ ಇಂಧನ ಮತ್ತು ವಿದ್ಯುತ್ ಚಾಲಿತ ವಾಹನಗಳ ತಯಾರಿಕೆಗೂ ಗಮನಹರಿಸಲಾಗುತ್ತಿದೆ.

ಸಮಾವೇಶದಲ್ಲಿ ರಫ್ತಿಗೆ ಉತ್ತೇಜನ ನೀಡುವಂತಹ, 2025-30ರವರೆಗಿನ ಐದು ವರ್ಷಗಳ ನೂತನ ಕೈಗಾರಿಕಾ ನೀತಿಯನ್ನು ಬಿಡುಗಡೆ ಮಾಡುತ್ತಿದ್ದೇವೆ. ಇದರಲ್ಲಿ ಡಾ.ಡಿ ಎಂ ನಂಜುಂಡಪ್ಪ ವರದಿಯಲ್ಲಿ ಹಿಂದುಳಿದ ಮತ್ತು ಅತೀ ಹಿಂದುಳಿದ ಜಿಲ್ಲೆಗಳಲ್ಲಿ ಹೂಡಿಕೆ ಮಾಡುವವರಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು. ಸುಲಲಿತ ವಹಿವಾಟು ಸಂಸ್ಕೃತಿ ಮತ್ತು ಏಕಗವಾಕ್ಷಿ ವ್ಯವಸ್ಥೆಗೆ ಕೂಡ ಚಾಲನೆ ನೀಡಲಾಗುತ್ತದೆ.

ಸಮಾವೇಶದ ಸಿದ್ಧತೆ ಮತ್ತು ನಾನಾ ಇಲಾಖೆಗಳ ನಡುವಿನ ಸಮನ್ವಯಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ನಡೆದ ಉನ್ನತ ಮಟ್ಟದ ಸಮಿತಿಯ ಸಭೆಯಲ್ಲಿ . ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಉಪಸ್ಥಿತರಿದ್ದರು. ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಿದರು.

ಈ ಸಮಾವೇಶಕ್ಕೆ ಎಂ ಬಿ ಪಾಟೀಲರು ಕಳೆದ ಕೆಲವು ತಿಂಗಳುಗಳಿಂದಲೇ ಶ್ರಮಿಸುತ್ತಿದ್ದಾರೆ. ಇದರ ಭಾಗವಾಗಿ ಅಮೆರಿಕ, ಯೂರೋಪ್, ದಕ್ಷಿಣ ಕೊರಿಯಾ, ಜಪಾನ್ ದೇಶಗಳಲ್ಲಿ ಅವರು ಉನ್ನತ ಮಟ್ಟದ ನಿಯೋಗದೊಂದಿಗೆ ತೆರಳಿ ರೋಡ್-ಶೋ ಮತ್ತು ಹೂಡಿಕೆದಾರರ ಜೊತೆ ಮಾತುಕತೆಗಳನ್ನು ನಡೆಸಿದ್ದಾರೆ. ಸಮಾವೇಶದಲ್ಲಿ ಕೈಗಾರಿಕಾ ಬೆಳವಣಿಗೆಗೆ ಪೂರಕವಾದ ಇನ್ನೂ ಹಲವು ನೀತಿಗಳನ್ನು ಅನಾವರಣಗೊಳಿಸಲಾಗುವುದು ಎನ್ನುವುದು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ವಿವರಣೆ.

ಜಾಗತಿಕ ಹೂಡಿಕೆದಾರರ ಸಮಾವೇಶವು `ಪ್ರಗತಿಯ ಮರುಕಲ್ಪನೆ’ ಎನ್ನುವ ಪ್ರಧಾನ ಥೀಮ್ ಒಳಗೊಂಡಿದ್ದು, ತಂತ್ರಜ್ಞಾನ-ಚಾಲಿತ, ಪರಿಸರಸ್ನೇಹಿ, ಒಳಗೊಳ್ಳುವಿಕೆ ಮತ್ತು ಕ್ಷಮತೆ (Tech-driven, Green, Inclusive & Resilient) ಎನ್ನುವ ನಾಲ್ಕು ಉಪಆಶಯಗಳನ್ನು ಹೊಂದಿದೆ. ದಾವೋಸ್ ಆರ್ಥಿಕ ಶೃಂಗಸಭೆಯಲ್ಲಿನ ಕೆಲವು ಅತ್ಯುತ್ತಮ ಅಂಶಗಳನ್ನೂ ಇಲ್ಲಿ ಅಳವಡಿಸಿಕೊಂಡಿದ್ದೇವೆ. ಅಂಕಿತ ಹಾಕುವ ಒಡಂಬಡಿಕೆಗಳ ಪೈಕಿ ಶೇಕಡ 70-80ರಷ್ಟಾದರೂ ನಿಜವಾದ ಹೂಡಿಕೆಯಾಗಿ ಪರಿವರ್ತನೆಯಾಗಬೇಕು ಎನ್ನುವುದು ಸರಕಾರದ ಗುರಿಯಾಗಿದೆ ಎನ್ನುತ್ತಾರೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ.

 

Whats_app_banner