Aero India 2023: 'ಏರೋಸ್ಪೇಸ್ ಮತ್ತು ರಕ್ಷಣಾ ವಲಯದಲ್ಲಿ ಮುಂಚೂಣಿಯಲ್ಲಿದೆ ಕರ್ನಾಟಕ.. 1940 ರಿಂದ ಹಿಂತಿರುಗಿ ನೋಡಿಲ್ಲ' - ಸಿಎಂ ಬೊಮ್ಮಾಯಿ
ಕನ್ನಡ ಸುದ್ದಿ  /  ಕರ್ನಾಟಕ  /  Aero India 2023: 'ಏರೋಸ್ಪೇಸ್ ಮತ್ತು ರಕ್ಷಣಾ ವಲಯದಲ್ಲಿ ಮುಂಚೂಣಿಯಲ್ಲಿದೆ ಕರ್ನಾಟಕ.. 1940 ರಿಂದ ಹಿಂತಿರುಗಿ ನೋಡಿಲ್ಲ' - ಸಿಎಂ ಬೊಮ್ಮಾಯಿ

Aero India 2023: 'ಏರೋಸ್ಪೇಸ್ ಮತ್ತು ರಕ್ಷಣಾ ವಲಯದಲ್ಲಿ ಮುಂಚೂಣಿಯಲ್ಲಿದೆ ಕರ್ನಾಟಕ.. 1940 ರಿಂದ ಹಿಂತಿರುಗಿ ನೋಡಿಲ್ಲ' - ಸಿಎಂ ಬೊಮ್ಮಾಯಿ

ಏರೋಸ್ಪೇಸ್ ಮತ್ತು ರಕ್ಷಣಾ ವಲಯದಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಕರ್ನಾಟಕ. ರಕ್ಷಣಾ ವಲಯದ ಶೇ 65 ಉತ್ಪಾದನೆ ಬೆಂಗಳೂರಿನಲ್ಲಿ ಆಗುತ್ತಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ಇಂದಿನಿಂದ ಫೆಬ್ರವರಿ 17ರ ವರೆಗೆ ನಡೆಯಲಿರುವ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನವಾದ 'ಏರೋ ಇಂಡಿಯಾ-2023' ಅನ್ನು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. 14ನೇ ಆವೃತ್ತಿಯ ಏರೋ ಇಂಡಿಯಾ ಶೋ ಇದಾಗಿದೆ.

ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಜ್ಯಪಾಲರಾದ ಥಾವರ್​ ಚಂದ್​ ಗೆಹ್ಲೋಟ್​​, ಸಚಿವರಾದ ಆರಗ ಜ್ಞಾನೇಂದ್ರ, ನಿರಾಣಿ, ಆರ್​. ಅಶೋಕ್​​ ಸೇರಿ ಹಲವರು ಭಾಗಿ​​ಯಾಗಿದ್ದಾರೆ.

ಈ ವೇಳೆ ಮಾತನಾಡಿದ ಸಿಎಂ ಬೊಮ್ಮಾಯಿ, ಭಾರತವನ್ನು ಜಾಗತಿಕ ನಾಯಕವಾಗಿಸಲು ಕರ್ನಾಟಕ ಅತ್ಯಂತ ದೊಡ್ಡ ಕೊಡುಗೆ ನೀಡಲಿದೆ. ಈ ಕಾರ್ಯಸಾಧನೆಗೆ ಪ್ರಧಾನಿಗಳ ಆಶಯದಂತೆ ಕರ್ನಾಟಕ ಆರ್ಥಿಕತೆ, ಸಾಮಾಜಿಕ ವ್ಯವಸ್ಥೆ ಹಾಗೂ ರಕ್ಷಣಾ ವಲಯದಲ್ಲಿ ಕೊಡುಗೆ ನೀಡಲಿದೆ ಎಂದರು.

ಏರೋ ಇಂಡಿಯಾ ಶೋನ 14ನೇ ಆವೃತ್ತಿಯು ಗಾತ್ರ, ಪ್ರದರ್ಶನ ಮತ್ತು ಕಾರ್ಯವೈಖರಿಯ ದೃಷ್ಟಿಯಿಂದ ಅತ್ಯಂತ ವಿಶೇಷ ಆವೃತ್ತಿಯಾಗಿದ್ದು, ಅಂತರರಾಷ್ಟ್ರೀಯ ಮಟ್ಟದ ಅತಿ ದೊಡ್ಡ ಏರ್ ಶೋ ಆಗಿದೆ. ರಕ್ಷಣಾ ವಲಯ ಹಾಗೂ ಏರ್ ಶೋ ಪ್ರದರ್ಶನದಲ್ಲಿ ಭಾರತ ತನ್ನ ಸಾಮರ್ಥ್ಯವನ್ನು ನಿರೂಪಿಸಿದೆ. ಕೋವಿಡ್ ಸಂದರ್ಭದಲ್ಲಿ ಪ್ಯಾರಿಸ್ ಏರ್ ಶೋ ನಡೆಯದಿದ್ದಾಗ, ನಮ್ಮ ಏರ್ ಶೋ ಯಶಸ್ವಿಯಾಗಿ ಜರುಗಿತು. ಈ ಬಾರಿ ವಸ್ತು ಪ್ರದರ್ಶನದ ವಿಸ್ತೀರ್ಣ, ಪ್ರದರ್ಶಕರ ಸಂಖ್ಯೆಯೂ ಹೆಚ್ಚಾಗಿದೆ ಎಂದು ತಿಳಿಸಿದರು.

ಕರ್ನಾಟಕ ಹಿಂತಿರುಗಿ ನೋಡಿಲ್ಲ

ಕರ್ನಾಟಕದಲ್ಲಿ 1940 ರಲ್ಲಿ ಹೆಚ್.ಎ.ಎಲ್, 1950 ರಲ್ಲಿ ಬಿ.ಹೆಚ್.ಇ.ಎಲ್, ಬಿ.ಇ.ಎಲ್, ಡಿ.ಆರ್.ಡಿ.ಒ ಸ್ಥಾಪನೆಗೊಂಡವು. 1960 ರಲ್ಲಿ ಇಸ್ರೋ ಕಾರ್ಯಾರಂಭ ಮಾಡಿದರೆ, 1970 ರಲ್ಲಿ ಮೊದಲ ಸ್ಯಾಟಲೈಟ್ ಆರ್ಯಭಟ ಉಪಗ್ರಹವನ್ನು ಬೆಂಗಳೂರಿನಲ್ಲಿ ತಯಾರಿಸಲಾಯಿತು. ಅಲ್ಲಿಂದ ನಾವು ಹಿಂತಿರುಗಿ ನೋಡಿಲ್ಲ. ಈಗ ಏರೋಸ್ಪೇಸ್ ಮತ್ತು ರಕ್ಷಣಾ ವಲಯದಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಕರ್ನಾಟಕ. ರಕ್ಷಣಾ ವಲಯದ ಶೇ 65 ಉತ್ಪಾದನೆ ಬೆಂಗಳೂರಿನಲ್ಲಿ ಆಗುತ್ತಿದೆ ಎಂದರು.

45 ಸಾವಿರಕ್ಕೂ ಹೆಚ್ಚು ಯುವಕರ ಬಳಕೆ

ರಾಜ್ಯದಲ್ಲಿ ಏರೋಸ್ಪೇಸ್ ಹಾಗೂ ರಕ್ಷಣಾ ನೀತಿಯು ಜಾರಿಯಲ್ಲಿದ್ದು, ರಕ್ಷಣಾ ಹಾಗೂ ಏರೋಸ್ಪೇಸ್ ಕೈಗಾರಿಕೆಗಳನ್ನು ಅಭಿವೃದ್ಧಿ ಪಡಿಸಲು 45 ಸಾವಿರಕ್ಕೂ ಹೆಚ್ಚು ಯುವಕರನ್ನು ತೊಡಗಿಸಿಕೊಳ್ಳಲಾಗುವುದು ಎಂದರು.

ಕರ್ನಾಟಕ 14 ನೇ ಏರೋ ಶೋ ಆಯೋಜಿಸಲು ಅವಕಾಶ ಮಾಡಿಕೊಟ್ಟಿರುವ ಪ್ರಧಾನಿಗಳು ಹಾಗೂ ರಕ್ಷಣಾ ಸಚಿವರಿಗೆ ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಧನ್ಯವಾದ ಅರ್ಪಿಸಿದರು. ರಕ್ಷಣಾ ವಲಯದ ಶಕ್ತಿ ಹಾಗೂ ಸಾಮರ್ಥ್ಯ ವೃದ್ಧಿಗೆ ಕರ್ನಾಟಕ ತನ್ನ ಕೊಡುಗೆಯನ್ನು ನಿರಂತರವಾಗಿ ನೀಡಲಿದೆ ಎಂದರು.

'ಒಂದು ಬಿಲಿಯನ್ ಅವಕಾಶಗಳಿಗೆ ರನ್ವೇ' (The Runway to a Billion Opportunities) ಥೀಮ್​ನಡಿ ಏರೋ ಇಂಡಿಯಾ ಶೋ ನಡೆಯಲಿದೆ. ಏರೋ ಇಂಡಿಯಾ ವೆಬ್‌ಸೈಟ್‌ ಪ್ರಕಾರ ಐದು ದಿನಗಳ ಕಾಲ ನಡೆಯುವ ವೈಮಾನಿಕ ಪ್ರದರ್ಶನದಲ್ಲಿ 809 ಎಕ್ಸಿಬಿಟರ್‌ಗಳು ನೋಂದಣಿ ಮಾಡಿದ್ದಾರೆ. ಇದರಲ್ಲಿ 699 ಭಾರತದ ಪ್ರದರ್ಶಕರಾಗಿದ್ದಾರೆ, 110 ವಿದೇಶಿ ಪ್ರದರ್ಶಕರಾಗಿದ್ದಾರೆ. 2021ರಲ್ಲಿ ನಡೆದ ಏರ್‌ಶೋನಲ್ಲಿ 55 ದೇಶಗಳ 540 ಕ್ಕೂ ಹೆಚ್ಚು ಪ್ರದರ್ಶಕರು ಪಾಲ್ಗೊಂಡಿದ್ದರು.

Whats_app_banner