JDS Politics: ಕರ್ನಾಟಕ ಜೆಡಿಎಸ್‌ನ ಏಳೆಂಟು ಶಾಸಕರು ಪಕ್ಷಾಂತರಗೊಳ್ಳಲು ಅಣಿಯಾಗುತ್ತಿರುವುದಕ್ಕೆ ಕಾರಣವೇನು: ಇಲ್ಲಿವೆ 10 ಅಂಶ
ಕನ್ನಡ ಸುದ್ದಿ  /  ಕರ್ನಾಟಕ  /  Jds Politics: ಕರ್ನಾಟಕ ಜೆಡಿಎಸ್‌ನ ಏಳೆಂಟು ಶಾಸಕರು ಪಕ್ಷಾಂತರಗೊಳ್ಳಲು ಅಣಿಯಾಗುತ್ತಿರುವುದಕ್ಕೆ ಕಾರಣವೇನು: ಇಲ್ಲಿವೆ 10 ಅಂಶ

JDS Politics: ಕರ್ನಾಟಕ ಜೆಡಿಎಸ್‌ನ ಏಳೆಂಟು ಶಾಸಕರು ಪಕ್ಷಾಂತರಗೊಳ್ಳಲು ಅಣಿಯಾಗುತ್ತಿರುವುದಕ್ಕೆ ಕಾರಣವೇನು: ಇಲ್ಲಿವೆ 10 ಅಂಶ

JDS Politics: 25 ವರ್ಷದ ಹಿಂದೆ ಹುಟ್ಟು ಪಡೆದ ಜಾತ್ಯತೀತ ಜನತಾದಳ ಎರಡೂವರೆ ದಶಕದಲ್ಲಿ ಹಲವು ಪರ್ವಗಳನ್ನು ಎದುರಿಸಿ ದೇವೇಗೌಡರ ಕುಟುಂಬದ ಚೌಕಟ್ಟಿನೊಂದಿಗೆ ಬೆಳೆದಿದೆ. ಈಗಲೂ ಚನ್ನಪಟ್ಟಣ ಚುನಾವಣೆ ನಂತರ ಪಕ್ಷದ ಶಾಸಕರ ವಲಸೆ ಪರ್ವ ನಡೆಯುವ ಸೂಚನೆಯಿದೆ. ಈ ಬೆಳವಣಿಗೆಗಳ ನೋಟ ಇಲ್ಲಿದೆ.

ಜೆಡಿಎಸ್‌ ಪಕ್ಷವನ್ನು ಗಟ್ಟಿಯಾಗಿ ಉಳಿಸಿಕೊಳ್ಳುವ ಸವಾಲು ಕುಮಾರಸ್ವಾಮಿ ಅವರ ಮೇಲಿದೆ.
ಜೆಡಿಎಸ್‌ ಪಕ್ಷವನ್ನು ಗಟ್ಟಿಯಾಗಿ ಉಳಿಸಿಕೊಳ್ಳುವ ಸವಾಲು ಕುಮಾರಸ್ವಾಮಿ ಅವರ ಮೇಲಿದೆ.

JDS Politics: ಕರ್ನಾಟಕದ ಪ್ರಮುಖ ಪ್ರಾದೇಶಿಕ ಪಕ್ಷ ಜೆಡಿಎಸ್‌ನ ರಾಜಕೀಯ ಏರಳಿತ ಮುಂದುವರಿದಿದೆ. ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ಆಘಾತ ಅನುಭವಿಸಿದರೂ ಲೋಕಸಭೆ ಚುನಾವಣೆಯಲ್ಲಿ ತಕ್ಕ ಮಟ್ಟಿಗೆ ಸಾಧನೆ ಮಾಡಿ ಬಿಜೆಪಿಗೂ ಆಸರೆಯಾಗಿದ್ದ ಜೆಡಿಎಸ್‌ ಮತ್ತೊಮ್ಮೆ ಮುಗ್ಗರಿಸಿದೆ. ಅದೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿನ ಸೋಲು ಪಕ್ಷಕ್ಕೆ ಭಾರೀ ಹೊಡೆತವನ್ನೇ ನೀಡಿದೆ. ಜೆಡಿಎಸ್‌ನ ಮೂರನೇ ತಲೆಮಾರಿನ ನಾಯಕರಾಗಿ ಹೊರ ಹೊಮ್ಮಿರುವ ನಿಖಿಲ್‌ ಕುಮಾರಸ್ವಾಮಿ ಅವರ ಸೋಲು ಪಕ್ಷಕ್ಕೆ ಪೆಟ್ಟು ಕೊಟ್ಟಿದೆ. ಈ ಚುನಾವಣೆಯ ಸೋಲು ಜೆಡಿಎಸ್‌ಗೆ ಆತ್ಮವಿಮರ್ಶೆ ಪರ್ವಕ್ಕಿಂತ ಪಕ್ಷವನ್ನು ಉಳಿಸಿಕೊಳ್ಳಲು ಮತ್ತೊಮ್ಮೆ ಹರಸಾಹಸ ಪಡುವ ಸನ್ನಿವೇಶವನ್ನಂತೂ ಸೃಷ್ಟಿಸಿದೆ. ಅದರಲ್ಲೂ ಮತ್ತೊಂದು ಶಾಸಕರ ಗುಂಪು ಕಾಂಗ್ರೆಸ್‌ಗೆ ಪಕ್ಷಾಂತರ ಮಾಡುವ ಸನ್ನಿವೇಶಗಳು ಸೃಷ್ಟಿಯಾಗುತ್ತಿವೆ. ಜೆಡಿಎಸ್‌ನ ರಾಜಕೀಯ ಬೆಳವಣಿಗೆಗಳ ಪ್ರಮುಖ ಅಂಶಗಳು ಇಲ್ಲಿವೆ.

ಇದನ್ನೂ ಓದಿರಿ: Inside Details: ತಾಯಿ ಅನಿತಾ ಕುಮಾರಸ್ವಾಮಿ ಮಾತು ಮೀರಿ ಎಲೆಕ್ಷನ್ ನಿಲ್ಲಬೇಕಾದ ಸ್ಥಿತಿ ನಿಖಿಲ್‌ಗೆ ಬಂದಿದ್ದು ಏಕೆ? -ಎಕ್ಸ್‌ಕ್ಲೂಸೀವ್ ವಿವರ

  1. ಜೆಡಿಎಸ್‌ ಪಕ್ಷ ಕುಟುಂಬಕ್ಕೆ ಮಾತ್ರ ಸೀಮಿತವಾಗಿದೆ ಎನ್ನುವ ಆರೋಪಗಳು ಹಿಂದಿನಿಂದಲೂ ಇದೆ. ಇದರ ನಡುವೆಯೇ ಸಿದ್ದರಾಮಯ್ಯ, ಎಂ.ಪಿ. ಪ್ರಕಾಶ್‌, ಪಿಜಿಆರ್‌ ಸಿಂಧ್ಯಾ ಸಹಿತ ಹಲವು ನಾಯಕರು ಪಕ್ಷ ತ್ಯಜಿಸಿದ್ದಾರೆ. ಈಗಲೂ ಇಂತಹದೇ ಆರೋಪಗಳು ಪಕ್ಷದ ನಾಯಕರ ಮೇಲೆ ಕೇಳಿ ಬಂದಿದೆ
  2. ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆಯಲ್ಲಿ ನಿಖಿಲ್‌ ಕುಮಾರಸ್ವಾಮಿ ಅವರ ಬದಲಿಗೆ ಸಿ.ಪಿ.ಯೋಗೇಶ್ವರ್‌ಗೆ ಅವಕಾಶ ನೀಡಬಹುದಿತ್ತು. ಈ ಮೂಲಕ ಮೈತ್ರಿ ಧರ್ಮ ಪಾಲಿಸಬಹುದಿತ್ತು. ಕ್ಷೇತ್ರವನ್ನು ಉಳಿಸಿಕೊಳ್ಳಬಹುದಿತ್ತು ಎನ್ನುವ ಮಾತುಗಳು ಪಕ್ಷದ ವಲಯದಲ್ಲಿ ಗಟ್ಟಿಯಾಗಿದೆ.
  3. ಕುಮಾರಸ್ವಾಮಿ ಅವರು ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಂಡರು. ಈ ಲೋಕಸಭೆ ಚುನಾವಣೆಗೆ ಬಿಜೆಪಿ ಜತೆ ಹೋದರು. ಹೀಗೆ ಮೈತ್ರಿ ಬದಲಿಸುವುದರಿಂದ ಪಕ್ಷದ ಮತ ಬ್ಯಾಂಕ್‌ ಮೇಲೆ ಪರಿಣಾಮ ಬೀರಲಿದೆ. ಮುಂದೆ ಗೆಲ್ಲಲು ಕಷ್ಟಪಡಬೇಕಾಗುತ್ತದೆ ಎನ್ನುವುದು ಶಾಸಕರ ಆತಂಕ.

    ಇದನ್ನೂ ಓದಿರಿ: JDS MLA Politics: ಕರ್ನಾಟಕದಲ್ಲಿ ಮತ್ತೊಂದು ಪಕ್ಷಾಂತರ ಸದ್ದು, ಕಾಂಗ್ರೆಸ್‌ ಸೆಳೆಯುವ ಪಟ್ಟಿಯಲ್ಲಿ ಜೆಡಿಎಸ್‌ ಶಾಸಕರು ಯಾರಿದ್ದಾರೆ?
  4. ಹಿರಿಯ ನಾಯಕ ಜಿ.ಟಿ.ದೇವೇಗೌಡ ಅವರು ವಿಧಾನಸಭೆಯಲ್ಲಿ ಪಕ್ಷದ ನಾಯಕನ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದರು. ಇಲ್ಲವೇ ಪಕ್ಷದ ಅಧ್ಯಕ್ಷ ಸ್ಥಾನವನ್ನು ನೀಡುವರು ಎನ್ನುವ ನಿರೀಕ್ಷೆಯಲ್ಲಿದ್ದರು. ಎರಡೂ ಸಿಗದೇ ಇದ್ದಾಗ ಬೇಸರಗೊಂಡು ಚನ್ನಪಟ್ಟಣ ಚುನಾವಣೆಯಲ್ಲಿ ದೂರವೇ ಉಳಿದಿದ್ದು ಪರಿಣಾಮವನ್ನು ಬೀರಿದೆ.
  5. ಹಿರಿಯ ಶಾಸಕರನ್ನು ಪಕ್ಷದ ನಾಯಕರು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಗೌರವ ಕೊಡುತ್ತಿಲ್ಲ ಎನ್ನುವ ಭಾವನೆ ಕಾರ್ಯಕರ್ತರಲ್ಲಿ ಮಾತ್ರವಲ್ಲದೇ ಹಲವು ಶಾಸಕರಲ್ಲಿದೆ. ಇದು ನಿಧಾನವಾಗಿ ಹಲವು ಶಾಸಕರು ಪಕ್ಷಾಂತರ ಮಾಡಲು ದಾರಿ ಮಾಡಿಕೊಡುತ್ತಿದೆ.
  6. ಹಾಸನದಲ್ಲಿ ಬಯಲಾದ ಪ್ರಜ್ವಲ್‌ ರೇವಣ್ಣ ಅವರ ಪೆನ್‌ಡ್ರೈವ್‌ ಪ್ರಕರಣದ ನಂತರ ಕಾರ್ಯಕರ್ತರು, ಮುಖಂಡರ ಹಂತದಲ್ಲಿ ಇರುವ ಗೊಂದಲ ಬಗೆಹರಿಸುವ ಕೆಲಸವಾಗಿಲ್ಲ. ಇದು ನೈತಿಕತೆಯ ಪ್ರಶ್ನೆಯೂ ಆಗಿರುವುದರಿಂದ ಉತ್ತರ ನೀಡಬೇಕಿತ್ತು ಎನ್ನುವ ಅಭಿಪ್ರಾಯವೂ ಇದೆ.
  7. ಪಕ್ಷದಲ್ಲಿ ಅಧಿಕಾರಕೋಸ್ಕರ ಯಾರನ್ನೋ ಹೊಗಳುವುದು, ಇನ್ಯಾರನ್ನೋ ಅತಿಯಾಗಿ ತೆಗಳುವುದು ಇದೆ. ಇದರಿಂದ ಕೆಳ ಹಂತದ ನಾಯಕರು ಹಾಗೂ ನಾಯಕರಲ್ಲಿ ಗೊಂದಗಳು ಆಗುತ್ತಲೇ ಇವೆ. ಇದಕ್ಕೆ ಕೆಳ ಹಂತದಲ್ಲೂ ಉತ್ತರ ಕೊಡಲು ಹೆಣಗಾಡುವ ಸ್ಥಿತಿಯಿದೆ ಎನ್ನುವ ಅಭಿಪ್ರಾಯಗಳಿವೆ.

    ಇದನ್ನೂ ಓದಿರಿ: ಅಧಿಕಾರ ಇದೆ ಅಂತ ನನ್ನ ಹೆದರಿಸೋಕೆ ಬರಬೇಡಿ; ಲಾರಿಗಟ್ಟಲೆ ದಾಖಲೆಗಳು ನನ್ನ ಹತ್ರ ಇವೆ; ಹೆಚ್‌ಡಿ ಕುಮಾರಸ್ವಾಮಿ ಟಾಂಗ್
  8. ಒಂದೂವರೆ ವರ್ಷದಿಂದ ಜೆಡಿಎಸ್‌ ಸಂಘಟನೆಗೆ ಒತ್ತನ್ನೇ ನೀಡಿಲ್ಲ. ಜಿಲ್ಲಾಮಟ್ಟಗಳಲ್ಲೂ ಸಭೆಗಳನ್ನು ಕರೆದಿಲ್ಲ. ಪದಾಧಿಕಾರಿಗಳನ್ನೂ ನೇಮಿಸಿಲ್ಲ. ಇದರಿಂದ ಕಾರ್ಯಕರ್ತರು, ಮುಖಂಡರ ಹಂತದಲ್ಲಿ ಬೇಸರವೂ ಇದೆ.
  9. ಈಗಾಗಲೇ ರಾಷ್ಟ್ರೀಯ ಅಧ್ಯಕ್ಷರು, ರಾಜ್ಯ ಅಧ್ಯಕ್ಷರು, ಯುವ ಘಟಕದ ಅಧ್ಯಕ್ಷರೂ ಕುಟುಂಬದವರೇ ಇದ್ದಾರೆ. ಇಲ್ಲಿಯೂ ಹೊಸಬರಿಗೆ ಹಾಗೂ ದೇವೇಗೌಡರ ಕುಟುಂಬ ಹೊರತುಪಡಿಸಿದವರಿಗೆ ಅವಕಾಶ ಮಾಡಿಕೊಡಬೇಕು ಎನ್ನುವ ಬೇಡಿಕೆಯೂ ಇದೆ
  10. ರಾಜಕೀಯವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸಮಷ್ಟಿ ದೃಷ್ಟಿ ಬೇಕು. ಅದನ್ನು ರೂಢಿಸಿಕೊಳ್ಳದೇ ಹೋದರೆ ರಾಜಕೀಯವಾಗಿ ಮುಂದೆ ಚುನಾವಣೆ ಎದುರಿಸುವುದು ಶಾಸಕರಿಗೆ ಕಷ್ಟವಾಗಲಿದೆ. ಇದರಿಂದ ಪ್ರಬಲ ಪಕ್ಷಗಳು, ಆಡಳಿತ ಇರುವ ಕಡೆಗೆ ಹೋಗುವುದು ಸೂಕ್ತ ಎನ್ನುವ ನಿರ್ಧಾರಕ್ಕೆ ಜೆಡಿಎಸ್ ನ ಹಲವು ಶಾಸಕರು ಬಂದಂತಿದೆ.

Whats_app_banner