Jds New President: ಕರ್ನಾಟಕ ಜೆಡಿಎಸ್‌ಗೆ ನೂತನ ಸಾರಥಿ ಯಾರು; ನಿಖಿಲ್‌ ಕುಮಾರಸ್ವಾಮಿಗೆ ಸಿಗಲಿದೆಯಾ ಪಕ್ಷದ ಹೊಣೆ
ಕನ್ನಡ ಸುದ್ದಿ  /  ಕರ್ನಾಟಕ  /  Jds New President: ಕರ್ನಾಟಕ ಜೆಡಿಎಸ್‌ಗೆ ನೂತನ ಸಾರಥಿ ಯಾರು; ನಿಖಿಲ್‌ ಕುಮಾರಸ್ವಾಮಿಗೆ ಸಿಗಲಿದೆಯಾ ಪಕ್ಷದ ಹೊಣೆ

Jds New President: ಕರ್ನಾಟಕ ಜೆಡಿಎಸ್‌ಗೆ ನೂತನ ಸಾರಥಿ ಯಾರು; ನಿಖಿಲ್‌ ಕುಮಾರಸ್ವಾಮಿಗೆ ಸಿಗಲಿದೆಯಾ ಪಕ್ಷದ ಹೊಣೆ

Jds New President: ಜಾತ್ಯತೀತ ಜನತಾದಳ ಕರ್ನಾಟಕ ಘಟಕಕ್ಕೆ ನೂತನ ಅಧ್ಯಕ್ಷರನ್ನು ಭಾನುವಾರ ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ಆಯ್ಕೆ ಮಾಡುವ ಸಾಧ್ಯತೆಗಳಿವೆ.

ಕರ್ನಾಟಕ ಜೆಡಿಎಸ್‌ ಅಧ್ಯಕ್ಷರಾಗಿ ನಿಖಿಲ್‌ ಕುಮಾರಸ್ವಾಮಿ ಇಲ್ಲವೇ ಬಂಡೆಪ್ಪ ಕಾಶೆಂಪುರ್‌ ಅವರ ಹೆಸರು ಮುಂಚೂಣಿಯಲ್ಲಿವೆ.
ಕರ್ನಾಟಕ ಜೆಡಿಎಸ್‌ ಅಧ್ಯಕ್ಷರಾಗಿ ನಿಖಿಲ್‌ ಕುಮಾರಸ್ವಾಮಿ ಇಲ್ಲವೇ ಬಂಡೆಪ್ಪ ಕಾಶೆಂಪುರ್‌ ಅವರ ಹೆಸರು ಮುಂಚೂಣಿಯಲ್ಲಿವೆ.

ಬೆಂಗಳೂರು:ವಿಧಾನಸಭೆಗೆ ಇನ್ನೂ ಮೂರು ವರ್ಷ ಕಾಲವಿದ್ದರೂ ಈಗಲೇ ಜಾತ್ಯತೀತ ಜನತಾದಳ( ಜೆಡಿಎಸ್‌) ಪಕ್ಷ ಬಲಪಡಿಸಲು ಯೋಜನೆ ಹಾಕಿಕೊಂಡಿದೆ. ಇದಕ್ಕೆ ಪೂರಕವಾಗಿ ಪಕ್ಷದ ಕರ್ನಾಟಕ ಘಟಕಕ್ಕೆ ನೂತನ ಅಧ್ಯಕ್ಷರನ್ನು ನೇಮಿಸುವ ಪ್ರಕ್ರಿಯೆಗೆ ಚಾಲನೆ ನೀಡಿದ್ದು. 2025 ರ ಜನವರಿ 12ರಂದು ಬೆಂಗಳೂರಿನಲ್ಲಿ ಜೆಡಿಎಸ್‌ ಹಿರಿಯ ನಾಯಕರು, ಮಾಜಿ ಸಚಿವರು ಹಾಗೂ ಮಾಜಿ ಶಾಸಕರ ಸಭೆಯನ್ನು ಕರೆಯಲಾಗಿದೆ. ಇಲ್ಲಿ ಜೆಡಿಎಸ್‌ನ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡುವ ಸಾಧ್ಯತೆಗಳು ಹೆಚ್ಚಿವೆ. ಈಗಾಗಲೇ ಸಿ.ಎಂ. ಇಬ್ರಾಹಿಂ ರಾಜೀನಾಮೆ ನಂತರ ಅಡ್‌ಹಾಕ್‌ ಸಮಿತಿ ರಚಿಸಿ ಬಳಿಕ ಕೇಂದ್ರ ಸಚಿವರಾಗಿರುವ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಅಧ್ಯಕ್ಷರನ್ನು ನೇಮಿಸಲಾಗಿದೆ. ಆದರೂ ಪೂರ್ಣ ಪ್ರಮಾಣದ ಅಧ್ಯಕ್ಷರನ್ನು ನೇಮಿಸಿ ಯುವಕರಿಗೆ ಆದ್ಯತೆ ನೀಡುವ ಸಾಧ್ಯತೆಗಳ ಕುರಿತು ಚರ್ಚೆಗಳು ನಡೆದಿದ್ದು. ಯಾರು ಅಧ್ಯಕ್ಷರಾಗಬಹುದು ಎನ್ನುವುದು ಭಾನುವಾರ ಸ್ಪಷ್ಟವಾಗಲಿದೆ.

ಯಾರಿಗುಂಟು ಅವಕಾಶ

ಈಗಾಗಲೇ ಬಿಜೆಪಿಯಲ್ಲಿ ಯುವ ಮುಖಕ್ಕೆ ಮಣೆ ಹಾಕಲಾಗಿದೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾರೆ. ಇದರಿಂದ ಜೆಡಿಎಸ್‌ ನಲ್ಲೂ ಯುವ ಮುಖಕ್ಕೆ ಮಣೆಹಾಕಬೇಕು ಎನ್ನುವ ಚರ್ಚೆಗಳು ಪ್ರಬಲವಾಗಿವೆ.

ಲೋಕಸಭೆ ಚುನಾವಣೆ ನಂತರ ವಿಧಾನಸಭೆ ಚುನಾವಣೆಯಲ್ಲಿ ಸತತ ಎರಡು ಬಾರಿ ಸೋತಿರುವ, ಹಾಲಿ ಜೆಡಿಎಸ್‌ ಯುವ ಘಟಕದ ಅಧ್ಯಕ್ಷರೂ ಆಗಿರುವ ನಿಖಿಲ್‌ ಕುಮಾರಸ್ವಾಮಿ ಅವರ ಹೆಸರು ಮುಂಚೂಣಿಯಲ್ಲಿದೆ. ಬಿಜೆಪಿಯಂತೆ ನಮ್ಮಲ್ಲೂ ಯುವಕರಿಗೆ ಆದ್ಯತೆ ನೀಡಲಾಗುವುದು ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಹೇಳಿದ್ದಾರೆ. ಅಲ್ಲದೇ ಕೇಂದ್ರ ಸಚಿವರೂ ಆಗಿರುವ ಹಾಲಿ ಜೆಡಿಎಸ್‌ ರಾಜ್ಯಾಧ್ಯಕ್ಷರಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರು ಕೆಲ ದಿನಗಳ ಹಿಂದೆಯೇ ನಿಖಿಲ್‌ ಕುಮಾರಸ್ವಾಮಿ ಹೊಸ ಜವಾಬ್ದಾರಿ ಹೊರಬಹುದು ಎಂದು ಸೂಚ್ಯವಾಗಿ ಹೇಳಿದ್ದಾರೆ. ಸತತ ಮೂರು ಚುನಾವಣೆಯಲ್ಲಿ ಸೋತಿರುವ ನಿಖಿಲ್‌ಗೆ ಪಕ್ಷ ಸಂಘಟನೆ ಜವಾಬ್ದಾರಿ ನೀಡಿದರೆ ಮುಂದಿನ ವಿಧಾನಸಭೆ ಚುನಾವಣೆ ಹೊತ್ತಿಗೆ ಪಕ್ಷಕ್ಕೆ ಲಾಭವಾಗಬಹುದು. ಯುವಕರನ್ನು ಪಕ್ಷಕ್ಕೆ ಸೆಳೆಯಬಹುದು ಎನ್ನುವ ಲೆಕ್ಕಾಚಾರ ಪಕ್ಷದ ವಲಯದಲ್ಲಿದೆ.

ಮತ್ತೆ ಯಾರ ಹೆಸರಿದೆ?

ನಿಖಿಲ್‌ ಕುಮಾರಸ್ವಾಮಿ ಅವರ ಜತೆಯಲ್ಲಿಯೇ ಮಾಜಿ ಸಚಿವರಾದ ಬೀದರ್‌ನ ಬಂಡೆಪ್ಪ ಕಾಶೆಂಪುರ್‌ ಅವರ ಹೆಸರೂ ಮುಂಚೂಣಿಯಲ್ಲಿದೆ. ಎರಡೂವರೆ ದಶಕದಿಂದಲೂ ಪಕ್ಷದೊಂದಿಗೆಯೇ ಇರುವ ಅವರು ಎರಡು ಬಾರಿ ಶಾಸಕರಾಗಿ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ಹಿಂದುಳಿದ ಕುರುಬ ಸಮುದಾಯದವರಾದ ಬಂಡೆಪ್ಪ ಅವರಿಗೆ ಪಕ್ಷದ ಅಧ್ಯಕ್ಷ ಹುದ್ದೆಯ ಅವಕಾಶ ಮಾಡಿಕೊಟ್ಟರೆ ಹೇಗೆ ಎನ್ನುವ ಚರ್ಚೆಯೂ ಪಕ್ಷದ ಹಂತದಲ್ಲಿದೆ. ಎಚ್‌.ಡಿ.ಕುಮಾರಸ್ವಾಮಿ ಆಪ್ತರೂ ಆಗಿರುವ ಬಂಡೆಪ್ಪ ಅವರ ಹೆಸರು ಕೂಡ ಸಭೆಯಲ್ಲಿ ಪ್ರಸ್ತಾಪವಾಗಬಹುದು.

ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರ ನೇತೃತ್ವದಲ್ಲಿ ಅಡ್‌ ಹಾಕ್‌ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಅವರನ್ನು ಅಧ್ಯಕ್ಷರನ್ನಾಗಿ ನೇಮಿಸುವ ಚರ್ಚೆಗಳೂ ನಡೆದಿದ್ದವು. ಅವರು ಈಗ ಪಕ್ಷದ ಶಾಸಕರಾಗಿದ್ದರೂ ಯಾವುದೇ ಚಟುವಟಿಕೆಯಲ್ಲಿ ಭಾಗಿಯಾಗುತ್ತಿಲ್ಲ. ನಾಯಕರೊಂದಿಗೆ ಮುನಿಸಿಕೊಂಡಿರುವ ಕಾರಣ ಅವರ ಹೆಸರು ಪರಿಗಣನೆಗೆ ಬರುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

ಯಾರು ಅಧ್ಯಕ್ಷರಾಗಿದ್ದಾರೆ

1999 ರಲ್ಲಿ ಜನತಾದಳ ಇಬ್ಬಾಗವಾಗಿ ಜೆಡಿಎಸ್‌ ಹಾಗೂ ಜೆಡಿಯು ಪಕ್ಷಗಳು ರಚನೆಗೊಂಡಿದ್ದವು. ಆಗ ಮಾಜಿ ಪ್ರಧಾನಿ ಎಚ್‌ಡಿದೇವೇಗೌಡ ಅವರ ನೇತೃತ್ವದಲ್ಲಿ ಜಾತ್ಯತೀತ ಜನತಾದಳ ಪಕ್ಷ ರೂಪುಗೊಂಡಿತ್ತು. 2000ರಲ್ಲಿ ಜೆಡಿಎಸ್‌ ಅಧ್ಯಕ್ಷರಾಗಿ ಹಾಲಿ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ನೇಮಕಗೊಂಡಿದ್ದರು. ಹಲವಾರು ನಾಯಕರು ಜೆಡಿಎಸ್‌ನಲ್ಲಿ ಗುರುತಿಸಿಕೊಂಡಿದ್ದರು. 2004ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ಗೆ ನಿರೀಕ್ಷೆಯಲ್ಲದೇ ಇದ್ದರೂ 58 ಸ್ಥಾನಗಳು ಲಭಿಸಿದ್ದವು. ಆಗ ಸಿದ್ದರಾಮಯ್ಯ ಅವರು ಸಿಎಂ ಹುದ್ದೆ ನಿರೀಕ್ಷಿಸಿದ್ದರು. ಅವರಿಗೆ ಸಿಕ್ಕಿದ್ದು ಡಿಸಿಎಂ ಹುದ್ದೆ. ಇದಾದ ಎರಡು ವರ್ಷದೊಳಗೆ ನಡೆದ ಬೆಳವಣಿಗೆಗಳಿಂದ ಸಿದ್ದರಾಮಯ್ಯ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿದರು.

ಪಕ್ಷದ ಹಿರಿಯ ನಾಯಕರಾಗಿದ್ದ ಎಂ.ಪಿ.ಪ್ರಕಾಶ್‌ ಅವರನ್ನು ನಿಯೋಜಿಸಲಾಯಿತು. ಬಳಿಕ ಹಿರಿಯೂರಿನವರಾದ ಮಾಜಿ ಸಚಿವ ಡಿ. ಮಂಜುನಾಥ್‌, ನಂತರ ಬೀದರ್‌ನವರಾದ ಮೆರಾಜುದ್ದೀನ್‌ ಪಟೇಲ್‌ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಪಟೇಲ್‌ ಕಾಲವಾದ ನಂತರ ಪಕ್ಷದ ರಾಜ್ಯಾಧ್ಯಕ್ಷರಾಗಿ ಎಚ್‌ಡಿ ಕುಮಾರಸ್ವಾಮಿ ನೇಮಕಗೊಂಡರು. ಕೆಲ ವರ್ಷ ಕುಮಾರಸ್ವಾಮಿ ಅಧ್ಯಕ್ಷರಾಗಿದ್ದರು. ಇದಾದ ನಂತರ ಕಾಂಗ್ರೆಸ್‌ನಿಂದ ಜೆಡಿಎಸ್‌ ಸೇರಿದ್ದ ಮಾಜಿ ಸಚಿವ ಎ.ಕೃಷ್ಣಪ್ಪ ಅವರನ್ನು ಅಧ್ಯಕ್ಷರಾಗಿ ನೇಮಕ ಮಾಡಲಾಯಿತು. ಇದಾದ ನಂತರ ಮತ್ತೆ ಕುಮಾರಸ್ವಾಮಿ ಅವರೇ ಪಕ್ಷದ ಅಧ್ಯಕ್ಷರಾದರು. ಕಾಂಗ್ರೆಸ್‌ ಬಿಟ್ಟು ಜೆಡಿಎಸ್‌ ಸೇರಿ ಹುಣಸೂರು ಶಾಸಕರಾಗಿದ್ದ ಎಚ್.ವಿಶ್ವನಾಥ್‌ ಅವರು ಕೆಲ ದಿನ ಪಕ್ಷಾಧ್ಯಕ್ಷರಾದರು. ಅವರು ಬಿಜೆಪಿ ಸೇರಿದ ಬಳಿಕ ಮಾಜಿ ಸಚಿವ ಸಕಲೇಶಪುರದ ಎಚ್‌ಕೆ ಕುಮಾರಸ್ವಾಮಿ ಅವರನ್ನು ಪಕ್ಷದ ಅಧ್ಯಕ್ಷರಾಗಿ ಕೆಲಸ ಮಾಡಿದರು. ಆನಂತರ ಮತ್ತೊಬ್ಬ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಅವರು ಪಕ್ಷದ ಅಧ್ಯಕ್ಷರಾದರು. ಅವರ ಉಚ್ಚಾಟನೆ ಬಳಿಕ ರಾಜ್ಯ ಸಮಿತಿ ವಿಸರ್ಜನೆ ಮಾಡಲಾಗಿತ್ತು. ಮತ್ತೆ ಎಚ್‌ಡಿಕುಮಾರಸ್ವಾಮಿ ಅವರೇ ಕಳೆದ ವಿಧಾನಸಭೆ ಚುನಾವಣೆ ವೇಳೆ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.

 

Whats_app_banner