Karnataka Kumbh Mela 2025: ತಿ.ನರಸೀಪುರ ಕುಂಭಮೇಳದಲ್ಲಿ ಕಾವೇರಿ ಆರತಿ ವೈಭವ, ರಾತ್ರಿಯೇ ಪುಣ್ಯಸ್ನಾನ ಮಾಡಿ ಆರತಿಯಲ್ಲಿ ಭಾಗಿಯಾದ ಡಿಕೆಶಿ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Kumbh Mela 2025: ತಿ.ನರಸೀಪುರ ಕುಂಭಮೇಳದಲ್ಲಿ ಕಾವೇರಿ ಆರತಿ ವೈಭವ, ರಾತ್ರಿಯೇ ಪುಣ್ಯಸ್ನಾನ ಮಾಡಿ ಆರತಿಯಲ್ಲಿ ಭಾಗಿಯಾದ ಡಿಕೆಶಿ

Karnataka Kumbh Mela 2025: ತಿ.ನರಸೀಪುರ ಕುಂಭಮೇಳದಲ್ಲಿ ಕಾವೇರಿ ಆರತಿ ವೈಭವ, ರಾತ್ರಿಯೇ ಪುಣ್ಯಸ್ನಾನ ಮಾಡಿ ಆರತಿಯಲ್ಲಿ ಭಾಗಿಯಾದ ಡಿಕೆಶಿ

ತಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಮಂಗಳವಾರ ಬೆಳಕಿನ ವೈಭವ, ಶಿವಸ್ತುತಿಯ ನಿನಾದದ ನಡುವೆ ಭಕ್ತರ ಉದ್ಘೋಷ. ಕುಂಭಮೇಳದ ಭಾಗವಾಗಿ ಕಾವೇರಿ ಆರತಿ ಭಿನ್ನ ಲೋಕವನ್ನೇ ಸೃಷ್ಟಿಸಿತು.

ತಿ.ನರಸೀಪುರದಲ್ಲಿ ಕಾವೇರಿ ಆರತಿ ವೈಭವ.
ತಿ.ನರಸೀಪುರದಲ್ಲಿ ಕಾವೇರಿ ಆರತಿ ವೈಭವ.

ಮೈಸೂರು: ಉತ್ತರ ಭಾರತದಲ್ಲಿ ಕೋಟ್ಯಂತರ ಭಕ್ತರ ಪಾಲ್ಗೊಳ್ಳುವಿಕೆ ನಡುವೆ ಮಹಾ ಕುಂಭಮೇಳ ನಡೆಯುತ್ತಿರುವ ನಡುವೆಯೇ ದಕ್ಷಿಣ ಭಾರತದಲ್ಲೂ ಮೂರು ದಿನಗಳ ಕುಂಭಮೇಳ ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರದಲ್ಲಿ ಕಳೆಗಟ್ಟಿದೆ. ಭಕ್ತರು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡುವ ಜತೆಯಲ್ಲಿ ಕಾವೇರಿ ಆರತಿಯ ವೈಭವದಲ್ಲಿ ಭಾಗಿಯಾದರು. ಮಂಗಳವಾರ ರಾತ್ರಿ ತ್ರಿವೇಣಿ ಸಂಗಮ ವಿಭಿನ್ನ ಬೆಳಕಿನ ಲೋಕವನ್ನೇ ಸೃಷ್ಟಿಸಿತು. ಮೊದಲ ದಿನ ಕುಂಭಮೇಳದ ಆರಂಭ, ಪುಣ್ಯಸ್ನಾನ ನಡೆದರೆ, ಎರಡನೇ ದಿನದಂದು ಕಾವೇರಿ- ಕಪಿಲಾ ನದಿ ಹಾಗೂ ಸ್ಪಟಿಕ ಸರೋವರ ಗುಪ್ತಗಾಮಿನಿ ತ್ರಿವೇಣಿ ಸಂಗಮದಲ್ಲಿ ಧಾರ್ಮಿಕ ಚಟುವಟಿಕೆಗಳು ನಡೆದವು.

ದಕ್ಷಿಣ ಪ್ರಯಾಗ ಎಂದೇ ಪ್ರಸಿದ್ಧಿ ಪಡೆದಿರುವ ಮೈಸೂರು ಜಿಲ್ಲೆಯ ತಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಹರಿದು ಬಂದಿದ್ದ ಭಕ್ತ ಸಾಗರವು ಮಂಗಳವಾರ ರಾತ್ರಿ ‘ಕಾವೇರಿ ಆರತಿ’ಯ ಬೆಳಗನ್ನು ಕಣ್ತುಂಬಿಕೊಂಡಿತು. ಕುಂಭಮೇಳದ ಎರಡನೇ ದಿನವಾದ ಮಂಗಳವಾರ, ಅಗಸ್ತ್ಯೇಶ್ವರ ಸ್ವಾಮಿ ದೇಗುಲದ ಸ್ನಾನಘಟ್ಟದಲ್ಲಿ ಗಂಗೆಯನ್ನು ನಮಿಸಿದ ಅರ್ಚಕರು ಬೆಳಗಿದ ದೀಪಗಳು ಕಾವೇರಿ, ಕಪಿಲೆ, ಸ್ಪಟಿಕ ನದಿಗಳ ಸಂಗಮದಲ್ಲಿ ಹೊಳೆದವು. ಜೀವನದಿಗಳಾದ ‘ಕಾವೇರಿ’, ‘ಕಪಿಲೆ’ಗೆ ಜಯಕಾರ ಹಾಕಿದರು. ಸ್ವರ್ಗಸದೃಶ ವಾತಾವರಣ ನೋಡಿದವರ ಎದೆಯಲ್ಲಿ ಭಕ್ತಿರಸವು ಹರಿಯಿತು. ಎಲ್ಲವನ್ನು ಮರೆತು ಭಕ್ತರು ಕಾವೇರಿ ಆರತಿಯಲ್ಲಿ ಭಾಗಿಯಾದರು.

ಸುತ್ತೂರು ಶ್ರಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ತಿರುಚ್ಚಿ ಸಂಸ್ಥಾನ ಮಠದ ಜಯೇಂದ್ರಪುರಿ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಸ್ವಾಮೀಜಿಗಳನ್ನು ಮೆರವಣಿಗೆಯಲ್ಲಿ ಮಂಗಳವಾದ್ಯಗಳಲ್ಲಿ ಕರೆತರಲಾಯಿತು.

ಶಿವಸ್ತುತಿಯ ನಿನಾದ

ನಂತರ ರಾತ್ರಿ 8 ಗಂಟೆಗೆ ಕಾವೇರಿ ಆರತಿಗೆ ಓಂಕಾರದ ಮೂಲಕದ ಚಾಲನೆ ದೊರಕಿತು. ದೂಪಾರತಿಯನ್ನು ಮಾಡಿದ ಅರ್ಚಕರ ತಂಡವು, ಗಂಟೆಗಳ ನಾದವನ್ನು ಹೊಮ್ಮಿಸಿತು. ಚಾಮರಗಳನ್ನು ಬೀಸಿದರು.

ಶಿವಸ್ತುತಿಯು ಮೊಳಗುತ್ತಿದ್ದಂತೆ ದೀಪಗಳನ್ನು ಒಂಬತ್ತು ಅರ್ಚಕರು ಹೊತ್ತಿಸಿದರು. ಕಾವೇರಿ ಮಾತೆಗೆ ಮೂರು ಸುತ್ತು ಬೆಳಗಿ, ಆಗಸಕ್ಕೆ ತೋರಿದರು. ನೋಡುತ್ತಿದ್ದ ಭಕ್ತರು, ಕೈ ಮುಗಿದರು. ‘ಕಾಲಭೈರವ’, ‘ರುದ್ರ’ ಶ್ಲೋಕಗಳ ಗೀತೆಗಳ ಹಿಮ್ಮೇಳವು ಭಾವ ತೀವ್ರತೆಯನ್ನು ಹೆಚ್ಚಿಸಿತು. ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಯಲ್ಲದೇ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ಈ ವಿಶೇಷ ಕ್ಷಣಗಳಿಗೆ ಸಾಕ್ಷಿಯಾದರು. ಭಕ್ತರು ಕುಳಿತು ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು.

ಈ ರೀತಿಯ ಆರತಿಗಳು ಉತ್ತರ ಭಾರತದಲ್ಲಿ ನಡೆಯುವುದನ್ನು ಗಮನಿಸಿದ್ದೆ. ಆದರೆ ನಮ್ಮೂರಿನಲ್ಲಿಯೇ ರೂಪಿಸಿದ ಕಾವೇರಿ ಆರತಿ ಗಮನ ನಿಜಕ್ಕೂ ಖುಷಿ ನೀಡಿತು. ಅಷ್ಟೇ ಅಲ್ಲದೇ ಭಕ್ತಿ ಭಾವದಲ್ಲಿ ತೇಲುವಂತೆ ಮಾಡಿತು. ತಿ.ನರಸೀಪುರದಲ್ಲೂ ಕಾವೇರಿ ಆರತಿ ನಡೆಸಲು ಮುಜರಾಯಿ ಇಲಾಖೆ ಮುಂದಾಗಬೇಕು ಎಂದು ತಿ.ನರಸೀಪುರದ ಹಲವರು ಹೇಳಿದರು.

ಡಿಸಿಎಂ ಡಿಕೆಶಿ ಭಾಗಿ

ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಎರಡು ದಿನದ ಹಿಂದೆಯಷ್ಟೇ ಉತ್ತರ ಭಾರತದ ಪ್ರಯಾಗ್‌ರಾಜ್‌ನ ಮಹಾ ಕುಂಭಮೇಳದಲ್ಲಿ ಭಾಗಿಯಾಗಿದ್ದರು. ಪತ್ನಿ ಹಾಗೂ ಗುರುಗಳ ಸಮೇತರಾಗಿ ಹೋಗಿ ಪುಣ್ಯಸ್ನಾನ ಮಾಡಿ ಪೂಜೆ ಸಲ್ಲಿಸಿ ಬಂದಿದ್ದರು. ತಿ.ನರಸೀಪುರಕ್ಕೂ ಆಗಮಿಸಿದ ಅವರು ಕಾವೇರಿ ಆರತಿಯಲ್ಲಿ ಭಾಗಿಯಾದರು. ರಾತ್ರಿಯೇ ಪುಣ್ಯಸ್ನಾನವನ್ನು ಮಾಡಿ ತ್ರಿವೇಣಿ ಸಂಗಮದಲ್ಲಿ ಪೂಜೆ ಸಲ್ಲಿಸಿದರು. ಒಂದು ಗಂಟೆಗೂ ಹೆಚ್ಚು ಕಾಲ ತ್ರಿವೇಣಿ ಸಂಗಮದಲ್ಲಿದ್ದರು. ಶಾಸಕರಾದ ಗಣಿಗ ರವಿಕುಮಾರ್‌, ಕೆ.ಎಂ. ಉದಯ ಮತ್ತಿತರರು ಸಾಥ್‌ ನೀಡಿದರು.

ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತರೆಡ್ಡಿ, ದಕ್ಷಿಣ ವಲಯ ಐಜಿಪಿ ಡಾ.ಬೋರಲಿಂಗಯ್ಯ, ಎಸ್ಪಿ ಎನ್‌.ವಿಷ್ಣುವರ್ಧನ್‌ ಹಾಗೂ ಅಧಿಕಾರಿಗಳು ಹಾಜರಿದ್ದರು.

 

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.
Whats_app_banner