Karnataka Kumbha Mela 2025: ನಾಳೆಯಿಂದ ಕುಂಭಮೇಳ ಶುರು, ಮೈಸೂರು ತ್ರಿವೇಣಿ ಸಂಗಮದಲ್ಲಿ ಸಿದ್ದತೆ ಪೂರ್ಣ, 3 ದಿನದ ಕಾರ್ಯಕ್ರಮದಲ್ಲಿ ಏನಿದೆ
Karnataka Kumbha Mela 2025: ಮೈಸೂರು ಜಿಲ್ಲೆಯ ತಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಮೂರು ದಿನಗಳ ಕುಂಭಮೇಳ ಸೋಮವಾರ ಆರಂಭವಾಗಲಿದೆ.

Karnataka Kumbha Mela 2025: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳದ ಸಡಗರ ಜೋರು ಇರುವಾಗಲೇ ಕರ್ನಾಟಕದಲ್ಲೂ ಕುಂಭಮೇಳ ಫೆಬ್ರವರಿ 10ರ ಸೋಮವಾರದಿಂದ ಆರಂಭವಾಗಲಿದೆ. ಕಾವೇರಿ-ಕಪಿಲಾ ನದಿಗಳ ಜತೆಗೆ ಸ್ಪಟಿಕ ಸರೋವರ ಗುಪ್ತಗಾಮಿನಿ ನದಿಯ ಸಂಗಮ ಕ್ಷೇತ್ರವಾಗಿರುವ ಮೈಸೂರು ಜಿಲ್ಲೆಯ ತಿ.ನರಸೀಪುರದಲ್ಲಿ ಮೂರು ದಿನಗಳ ಕಾಲ ಕುಂಭಮೇಳ ನಡೆಯಲಿದೆ. ಆರು ವರ್ಷಗಳ ನಂತರ ಕುಂಭಮೇಳ ತಿರುಮಕೂಡಲು ನರಸೀಪುರದ ಗುಂಜಾನರಸಿಂಹಸ್ವಾಮಿ ದೇಗುಲದ ಸನ್ನಿಧಿಯಲ್ಲಿ ನಡೆಯುತ್ತಿರುವುದರಿಂದ ಸಿದ್ದತೆಗಳು ಬಹುತೇಕ ಪೂರ್ಣಗೊಂಡಿವೆ. ಮೂರು ದಿನ ಕಾಲವೂ ಕುಂಭಮೇಳದ ಸ್ನಾನವಿದ್ದರೂ ಬುಧವಾರದಂದು ಹೆಚ್ಚಿನ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಇದಕ್ಕಾಗಿ ಮೈಸೂರು ಜಿಲ್ಲಾಡಳಿತ ಹಾಗೂ ಮುಜರಾಯಿ ಇಲಾಖೆ ಭಕ್ತರಿಗಾಗಿ ಹಲವು ಕಾರ್ಯಕ್ರಮಗಳನ್ನು ರೂಪಿಸಿವೆ.
ಡಿಸಿ ಪರಿಶಿಲನೆ
ಸೋಮವಾರದಂದು 13ನೇ ಕುಂಭಮೇಳ ತಿ. ನರಸೀಪುರ ಪಟ್ಟಣದ ತ್ರಿವೇಣಿ ಸಂಗಮದಲ್ಲಿ ನಡೆಯಲಿದ್ದು. ತ್ರಿವೇಣಿ ಸಂಗಮ ಸ್ಥಳಕ್ಕೆ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಭೇಟಿ ನೀಡಿ ಪರಿಶೀಲಿಸಿದರು.
ಕುಂಭಮೇಳದ ಸಿದ್ದತಾ ಕಾರ್ಯಗಳನ್ನು ಪರಿಶೀಲಿಸಿದ ಡಿಸಿ ಲಕ್ಷ್ಮಿಕಾಂತರೆಡ್ಡಿ ಪುಣ್ಯಸ್ನಾನ ಮಾಡುವ ಸ್ಥಳ, ಮೂಲಭೂತ ಸೌಕರ್ಯಗಳನ್ನು ವೀಕ್ಷಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಭಕ್ತರು ಸುಸೂತ್ರವಾಗಿ ಸ್ನಾನ ಮಾಡಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಲು ಬೇಕಾದ ತಯಾರಿಯನ್ನು ನದಿತೀರದಲ್ಲಿ ಮಾಡಿಕೊಳ್ಳಲಾಗಿದೆ.
ಮೂರು ದಿನದ ಕಾರ್ಯಕ್ರಮ ಪಟ್ಟಿ
3 ದಿನಗಳ ಕಾಲ ನಡೆಯುವ ಕುಂಭಮೇಳದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆಯೋಜನೆಗೊಂಡಿವೆ.
ಮೊದಲ ದಿನ
2025 ಫೆಬ್ರವರಿ 10 ರ ಸೋಮವಾರ, ತ್ರಯೋದಶಿ, ಪುಷ್ಯ ಪ್ರಾತ:ಕಾಲ 9 ಗಂಟೆಗೆ ಶ್ರೀ ಅಗಸ್ತೇಶ್ವರ ಸನ್ನಿಧಿಯಲ್ಲಿ, ಅನುಜ್ಞೆ, ಪುಣ್ಯಾಹ, ಗಣಹೋಮ, ಪೂರ್ಣಾಹುತಿ, ಅಭಿಷೇಕ, ಮಹಾಮಂಗಳಾರತಿ ನೆರವೇರಿಕೆ.
ಸಂಜೆ 5 ಗಂಟೆಗೆ-ಧರ್ಮಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಧ್ವಜಾರೋಹ ನೆರವೇರಿಕೆ.
ಎರಡನೇ ದಿನ
2025 ಫೆಬ್ರವರಿ 11 ರಮಂಗಳವಾರ, ಚತುರ್ದಶಿ, ಆಶ್ಲೇಷ, ಪ್ರಾತ: ಪುಣ್ಯಾಹ- ನವಗ್ರಹಗಹೋಮ, ಸುದರ್ಶನಹೋಮ ನೆರವೇರಿಕೆ.
ಬೆಳ್ಳಿಗ್ಗೆ 11 ಗಂಟೆಗೆ ಧರ್ಮಸಭೆ. ಸಂಜೆ 4 ಗಂಟೆಗೆ ಮಹಾತ್ಮರ ಸಂತರ, ಮಹಾಮಂಡಲೇಶ್ವರರ ತ್ರಿವೇಣಿ ಸಂಗಮ ಕ್ಷೇತ್ರ ಪ್ರವೇಶ: ಗುಂಜಾನರಸಿಂಹ ಸ್ವಾಮಿದೇವಸ್ಥಾನದಿಂದ ತಿ. ನರಸೀಪುರದ ಪ್ರಮುಖ ಬೀದಿಗಳಲ್ಲಿ ನಡೆಯಲಿರುವ ಮೆರವಣಿಗೆ.
ಸಂಜೆ 6 ಗಂಟೆಗೆ ಶ್ರೀರುದ್ರಹೋಮ, ಪೂರ್ಣಾಹುತಿ, ರಾತ್ರಿ 7 ಗಂಟೆಗೆ ನಡೆಯುವ ಗಂಗಾಪೂಜೆಯ ವೇಳೆ ವಾರಣಾಸಿಮಾದರಿಯಲ್ಲಿ ದೀಪಾರತಿಕಾರ್ಯಕ್ರಮ ಆಯೋಜನೆ.
ಮೂರನೇ ದಿನ
2025 ಫೆಬ್ರವರಿ 12 ಮಾಘ ಪೂರ್ಣಿಮೆಯಂದು ಬೆಳಿಗ್ಗೆ ಮಖಾ ನಕ್ಷತ್ರದಲ್ಲಿ ಚಂಡಿಹೋಮ, ಪೂರ್ಣಾಹುತಿ, ಕುಂಭೋಧ್ವಾಸನ ಹಾಗೂ ಸಪ್ತ ಪವಿತ್ರ ನದಿಗಳಿಂದ ತಂದ ತೀರ್ಥಗಳನ್ನು ತ್ರಿವೇಣಿಸಂಗಮದಲ್ಲಿ ಸಂಯೋಜನೆ, ಪುಣ್ಯಸ್ನಾನ, ಧರ್ಮಸಭೆ ಮೊದಲಾದ ಕಾರ್ಯಕ್ರಮಗಳು ಆಯೋಜನೆ.
ಮಹೋದಯ ಕಾಲದ ಮಹಾಮಾಘ ಪುಣ್ಯಸ್ನಾನಕ್ಕೆ ಬೆಳಿಗ್ಗೆ 9.00 ರಿಂದ 9.30ರವರೆಗಿನ ಮೀನ ಲಗ್ನ ಮತ್ತು ಮಧ್ಯಾಹ್ನ 12.00ರಿಂದ 1.00ರ ವರೆಗಿನ ವೃಷಭ ಲಗ್ನ ಪ್ರಶಸ್ತ ಎಂದು ಸಮಯ ನಿಗದಿ ಮಾಡಲಾಗಿದೆ.
ಉದ್ಘಾಟನೆಗೆ ಸಿದ್ದತೆ
ಮೈಸೂರು ಜಿಲ್ಲಾಡಳಿತ ಹಾಗೂ ಕುಂಭಮೇಳ ಆಚರಣಾ ಸಮಿತಿ(ರಿ), ತ್ರಿವೇಣಿ ಸಂಗಮ ತಿ.ನರಸೀಪುರ, ಮೈಸೂರು ಜಿಲ್ಲೆ ಇವರ ಸಹಯೊಗದೊಂದಿಗೆ 13 ನೇ ಕುಂಭಮೇಳವನ್ನು ಫೆಬ್ರವರಿ 10, 11, ಮತ್ತು 12 ರಂದು ತಿ. ನರಸೀಪುರದ ಶ್ರೀ ಕ್ಷೇತ್ರ ತಿರುಮಕೂಡಲಿನಲ್ಲಿ ಹಮ್ಮಿಕೊಳ್ಳಲಾಗಿದೆ.
ಫೆಬ್ರವರಿ 10 ರಂದು ಬೆಳಗ್ಗೆ 8.30 ಗಂಟೆಗೆ ಶ್ರೀ ಅಗಸ್ತ್ಯೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಅನುಜ್ಙಾ ಕಾರ್ಯಕ್ರಮ ಅಂಕುರಾರ್ಪಣೆ ಮತ್ತು ಧ್ವಜಾರೋಹಣ ನೇರವೇರಿಸಲಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಉಕ್ಕು ಮತ್ತು ಬೃಹತ್ ಕೈಗಾರಿಕಾ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರ ಉಪಸ್ಥಿತಿಯಲ್ಲಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ.
ಫೆಬ್ರವರಿ 11 ರಂದು ಬೆಳಗ್ಗೆ 11 ಗಂಟೆಗೆ ಧಾರ್ಮಿಕ ಸಭೆಯನ್ನು ಏರ್ಪಡಿಸಲಾಗಿದ್ದು, ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಉಕ್ಕು ಮತ್ತು ಬೃಹತ್ ಕೈಗಾರಿಕಾ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಅವರ ಉಪಸ್ಥಿತಿಯಲ್ಲಿ, ಪಶು ಸಂಗೋಪನೆ ಮತ್ತು ರೇಷ್ಮೆ ಇಲಾಖೆ ಸಚಿವರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ವೆಂಕಟೇಶ್ ಅವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರಾದ ಎಂ.ಬಿ. ಪಾಟೀಲ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್, ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಆಗಮಿಸಲಿದ್ದಾರೆ.
ಫೆಬ್ರವರಿ 12 ರಂದು ಬೆಳಗ್ಗೆ 12 ಗಂಟೆಗೆ ಧರ್ಮ ಸಭೆಯನ್ನು ಏರ್ಪಡಿಸಲಾಗಿದ್ದು, ಮುಖ್ಯ ಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಉಕ್ಕು ಮತ್ತು ಬೃಹತ್ ಕೈಗಾರಿಕಾ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರ ಉಪಸ್ಥಿತಿಯಲ್ಲಿ, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಕಾರ್ಯಕ್ರಮ ಸಮಾರೋಪ ಭಾಷಣ ಮಾಡಲಿದ್ದಾರೆ.
