Karnataka Kumbha Mela 2025: ತಿ.ನರಸೀಪುರ ಕುಂಭಮೇಳದಲ್ಲಿ ಪುಣ್ಯಸ್ನಾನ ಎಂದು, ಮೂರು ದಿನದಲ್ಲಿ ಏನೇನು ಧಾರ್ಮಿಕ ಕಾರ್ಯಕ್ರಮ ಉಂಟು
ಕನ್ನಡ ಸುದ್ದಿ  /  ಕರ್ನಾಟಕ  /  Karnataka Kumbha Mela 2025: ತಿ.ನರಸೀಪುರ ಕುಂಭಮೇಳದಲ್ಲಿ ಪುಣ್ಯಸ್ನಾನ ಎಂದು, ಮೂರು ದಿನದಲ್ಲಿ ಏನೇನು ಧಾರ್ಮಿಕ ಕಾರ್ಯಕ್ರಮ ಉಂಟು

Karnataka Kumbha Mela 2025: ತಿ.ನರಸೀಪುರ ಕುಂಭಮೇಳದಲ್ಲಿ ಪುಣ್ಯಸ್ನಾನ ಎಂದು, ಮೂರು ದಿನದಲ್ಲಿ ಏನೇನು ಧಾರ್ಮಿಕ ಕಾರ್ಯಕ್ರಮ ಉಂಟು

Karnataka Kumbha Mela 2025: ಮೈಸೂರು ಜಿಲ್ಲೆ ತಿನರಸೀಪುರದ ತ್ರಿವೇಣಿ ಸಂಗಮದಲ್ಲಿ ಕುಂಭಮೇಳ ನಡೆಯಲಿದ್ದು, ಮೂರು ದಿನದ ಕಾರ್ಯಕ್ರಮಗಳ ವಿವರ ಇಲ್ಲಿದೆ.

ತಿ.ನರಸೀಪುರದ ನದಿಗಳ ಸಂಗಮ ನೋಟ.
ತಿ.ನರಸೀಪುರದ ನದಿಗಳ ಸಂಗಮ ನೋಟ. (Dr Rajith ML)

ಮೈಸೂರು: ಕಾವೇರಿ, ಕಪಿಲಾ ಹಾಗೂ ಗುಪ್ತಗಾಮಿನಿಯಾಗಿರುವ ಸ್ಪಟಿಕ ಸರೋವರ ಸಂಧಿಸುವ ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರ ಪಟ್ಟಣದಲ್ಲಿ ಕುಂಭಮೇಳ 2025ಕ್ಕೆ ಸಿದ್ದತೆಗಳು ಅಂತಿಮ ಹಂತದಲ್ಲಿವೆ. ಫೆಬ್ರವರಿ 10ರಿಂದ ಮೂರು ದಿನಗಳ ಕಾಲ ನಡೆಯುವ ಕಾರ್ಯಕ್ರಮಗಳ ಪಟ್ಟಿ ಹಾಗೂ ಪುಣ್ಯಸ್ನಾನ, ಧಾರ್ಮಿಕ ಕಾರ್ಯಕ್ರಮಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಮೈಸೂರು ಜಿಲ್ಲಾಡಳಿತ, ತಿ.ನರಸೀಪುರ ತಾಲ್ಲೂಕು ಆಡಳಿತ, ಮುಜರಾಯಿ ಇಲಾಖೆಯ ಸಹಯೋಗ, ವಿವಿಧ ಸಂಘ ಸಂಸ್ಥೆಗಳು, ಮೈಸೂರಿನ ಸುತ್ತೂರು ಮಠ, ಆದಿಚುಂಚನಗಿರಿ ಮಠದ ಸಹಭಾಗಿತ್ವದಲ್ಲಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಧಾರ್ಮಿಕ ಕಾರ್ಯಕ್ರಮಗಳು

3 ದಿನಗಳ ಕಾಲ ನಡೆಯುವ ಕುಂಭಮೇಳದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆಯೋಜನೆಗೊಂಡಿವೆ.

  • 2025 ಫೆಬ್ರವರಿ 10 ರ ಸೋಮವಾರ, ತ್ರಯೋದಶಿ, ಪುಷ್ಯ ಪ್ರಾತ:ಕಾಲ 9 ಗಂಟೆಗೆ ಶ್ರೀ ಅಗಸ್ತೇಶ್ವರ ಸನ್ನಿಧಿಯಲ್ಲಿ, ಅನುಜ್ಞೆ, ಪುಣ್ಯಾಹ, ಗಣಹೋಮ, ಪೂರ್ಣಾಹುತಿ, ಅಭಿಷೇಕ, ಮಹಾಮಂಗಳಾರತಿ ನೆರವೇರಿಕೆ.

ಸಂಜೆ 5 ಗಂಟೆಗೆ-ಧರ್ಮಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಧ್ವಜಾರೋಹ ನೆರವೇರಿಕೆ.

  • 2025 ಫೆಬ್ರವರಿ 11 ರಮಂಗಳವಾರ, ಚತುರ್ದಶಿ, ಆಶ್ಲೇಷ, ಪ್ರಾತ: ಪುಣ್ಯಾಹ- ನವಗ್ರಹಗಹೋಮ, ಸುದರ್ಶನಹೋಮ ನೆರವೇರಿಕೆ.

ಬೆಳ್ಳಿಗ್ಗೆ 11 ಗಂಟೆಗೆ ಧರ್ಮಸಭೆ. ಸಂಜೆ 4 ಗಂಟೆಗೆ ಮಹಾತ್ಮರ ಸಂತರ, ಮಹಾಮಂಡಲೇಶ್ವರರ ತ್ರಿವೇಣಿ ಸಂಗಮ ಕ್ಷೇತ್ರ ಪ್ರವೇಶ: ಗುಂಜಾನರಸಿಂಹ ಸ್ವಾಮಿದೇವಸ್ಥಾನದಿಂದ ತಿ. ನರಸೀಪುರದ ಪ್ರಮುಖ ಬೀದಿಗಳಲ್ಲಿ ನಡೆಯಲಿರುವ ಮೆರವಣಿಗೆ.

ಸಂಜೆ 6 ಗಂಟೆಗೆ ಶ್ರೀರುದ್ರಹೋಮ, ಪೂರ್ಣಾಹುತಿ, ರಾತ್ರಿ 7 ಗಂಟೆಗೆ ನಡೆಯುವ ಗಂಗಾಪೂಜೆಯ ವೇಳೆ ವಾರಣಾಸಿಮಾದರಿಯಲ್ಲಿ ದೀಪಾರತಿಕಾರ್ಯಕ್ರಮ ಆಯೋಜನೆ.

  • 2025 ಫೆಬ್ರವರಿ 12 ಮಾಘ ಪೂರ್ಣಿಮೆಯಂದು ಬೆಳಿಗ್ಗೆ ಮಖಾ ನಕ್ಷತ್ರದಲ್ಲಿ ಚಂಡಿಹೋಮ, ಪೂರ್ಣಾಹುತಿ, ಕುಂಭೋಧ್ವಾಸನ ಹಾಗೂ ಸಪ್ತ ಪವಿತ್ರ ನದಿಗಳಿಂದ ತಂದ ತೀರ್ಥಗಳನ್ನು ತ್ರಿವೇಣಿಸಂಗಮದಲ್ಲಿ ಸಂಯೋಜನೆ, ಪುಣ್ಯಸ್ನಾನ, ಧರ್ಮಸಭೆ ಮೊದಲಾದ ಕಾರ್ಯಕ್ರಮಗಳು ಆಯೋಜನೆ‌.

ಮಹೋದಯ ಕಾಲದ ಮಹಾಮಾಘ ಪುಣ್ಯಸ್ನಾನಕ್ಕೆ ಬೆಳಿಗ್ಗೆ 9.00 ರಿಂದ 9.30ರವರೆಗಿನ ಮೀನ ಲಗ್ನ‌ ಮತ್ತು ಮಧ್ಯಾಹ್ನ 12.00ರಿಂದ 1.00ರ ವರೆಗಿನ ವೃಷಭ ಲಗ್ನ ಪ್ರಶಸ್ತ ಎಂದು ಸಮಯ ನಿಗದಿ.

ಏನೇನು ಕಾರ್ಯಕ್ರಮ

ಮೈಸೂರು ಜಿಲ್ಲಾಡಳಿತ ಹಾಗೂ ಕುಂಭಮೇಳ ಆಚರಣಾ ಸಮಿತಿ(ರಿ), ತ್ರಿವೇಣಿ ಸಂಗಮ ತಿ.ನರಸೀಪುರ, ಮೈಸೂರು ಜಿಲ್ಲೆ ಇವರ ಸಹಯೊಗದೊಂದಿಗೆ 13 ನೇ ಕುಂಭಮೇಳವನ್ನು ಫೆಬ್ರವರಿ 10, 11, ಮತ್ತು 12 ರಂದು ತಿ. ನರಸೀಪುರದ ಶ್ರೀ ಕ್ಷೇತ್ರ ತಿರುಮಕೂಡಲು ಇಲ್ಲಿ ಹಮ್ಮಿಕೊಳ್ಳಲಾಗಿದೆ.

ಫೆಬ್ರವರಿ 10 ರಂದು ಬೆಳಗ್ಗೆ 8.30 ಗಂಟೆಗೆ ಶ್ರೀ ಅಗಸ್ತ್ಯೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಅನುಜ್ಙಾ ಕಾರ್ಯಕ್ರಮ ಅಂಕುರಾರ್ಪಣೆ ಮತ್ತು ಧ್ವಜಾರೋಹಣವನ್ನು ನೇರವೇರಿಸಲಿದ್ದಾರೆ.

ಮುಖ್ಯ ಮಂತ್ರಿಸಿದ್ದರಾಮಯ್ಯನವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಉಕ್ಕು ಮತ್ತು ಬೃಹತ್ ಕೈಗಾರಿಕಾ ಕೇಂದ್ರ ಸಚಿವರಾದ ಎಚ್.ಡಿ ಕುಮಾರಸ್ವಾಮಿ ಅವರ ಉಪಸ್ಥಿತಿಯಲ್ಲಿ, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಡಾ.ಹೆಚ್.ಸಿ ಮಹದೇವಪ್ಪ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ.

ಫೆಬ್ರವರಿ 11 ರಂದು ಬೆಳಗ್ಗೆ 11 ಗಂಟೆಗೆ ಧಾರ್ಮಿಕ ಸಭೆಯನ್ನು ಏರ್ಪಡಿಸಲಾಗಿದ್ದು, ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯನವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಉಕ್ಕು ಮತ್ತು ಬೃಹತ್ ಕೈಗಾರಿಕಾ ಕೇಂದ್ರ ಸಚಿವರಾದ ಎಚ್.ಡಿ ಕುಮಾರಸ್ವಾಮಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಡಾ.ಹೆಚ್.ಸಿ ಮಹದೇವಪ್ಪ ಅವರ ಉಪಸ್ಥಿತಿಯಲ್ಲಿ, ಪಶು ಸಂಗೋಪನೆ ಮತ್ತು ರೇಷ್ಮೆ ಇಲಾಖೆ ಸಚಿವರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರರಾದ ಕೆ.ವೆಂಕಟೇಶ್ ಅವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರಾದ ಎಂ.ಬಿ. ಪಾಟೀಲ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್, ಉನ್ನತ ಶಿಕ್ಷಣ ಸಚಿವರಾದ ಎಂ.ಸಿ. ಸುಧಾಕರ್ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು ಆಗಮಿಸಲಿದ್ದಾರೆ.

ಫೆಬ್ರವರಿ 12 ರಂದು ಬೆಳಗ್ಗೆ 12 ಗಂಟೆಗೆ ಧರ್ಮ ಸಭೆಯನ್ನು ಏರ್ಪಡಿಸಲಾಗಿದ್ದು, ಮುಖ್ಯ ಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಉಕ್ಕು ಮತ್ತು ಬೃಹತ್ ಕೈಗಾರಿಕಾ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರ ಉಪಸ್ಥಿತಿಯಲ್ಲಿ, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಕಾರ್ಯಕ್ರಮ ಸಮಾರೋಪ ಭಾಷಣ ಮಾಡಲಿದ್ದಾರೆ.

Whats_app_banner