Karnataka Kumbhamela 2025: ಕರ್ನಾಟಕದಲ್ಲಿ ಕುಂಭಮೇಳಕ್ಕೆ ಭರದ ಸಿದ್ದತೆ, ತಿ.ನರಸೀಪುರದಲ್ಲಿ ಫೆಬ್ರವರಿ 10ರಿಂದ 12ನೇ ಕುಂಭಮೇಳ ಆಯೋಜನೆ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Kumbhamela 2025: ಕರ್ನಾಟಕದಲ್ಲಿ ಕುಂಭಮೇಳಕ್ಕೆ ಭರದ ಸಿದ್ದತೆ, ತಿ.ನರಸೀಪುರದಲ್ಲಿ ಫೆಬ್ರವರಿ 10ರಿಂದ 12ನೇ ಕುಂಭಮೇಳ ಆಯೋಜನೆ

Karnataka Kumbhamela 2025: ಕರ್ನಾಟಕದಲ್ಲಿ ಕುಂಭಮೇಳಕ್ಕೆ ಭರದ ಸಿದ್ದತೆ, ತಿ.ನರಸೀಪುರದಲ್ಲಿ ಫೆಬ್ರವರಿ 10ರಿಂದ 12ನೇ ಕುಂಭಮೇಳ ಆಯೋಜನೆ

Karnataka Kumbhamela 2025: ಮೈಸೂರು ಜಿಲ್ಲೆಯ ತಿ.ನರಸೀಪುರದಲ್ಲಿ ಮೂರು ದಿನಗಳ ಕಾಲ ನಡೆಯುವ ಕುಂಭಮೇಳ ಫೆಬ್ರವರಿ 10ರಿಂದ ಆರಂಭವಾಗಲಿದ್ದು, ಇದಕ್ಕಾಗಿ ಭರದ ಸಿದ್ದತೆಗಳು ನಡೆದಿವೆ.

ಮೈಸೂರು ಜಿಲ್ಲೆ ತಿ.ನರಸೀಪುರದಲ್ಲಿ ಕುಂಭಮೇಳಕ್ಕೆ ಸಿದ್ದತೆ ನಡೆದಿದೆ.
ಮೈಸೂರು ಜಿಲ್ಲೆ ತಿ.ನರಸೀಪುರದಲ್ಲಿ ಕುಂಭಮೇಳಕ್ಕೆ ಸಿದ್ದತೆ ನಡೆದಿದೆ.

Karnataka Kumbhamela 2025: ಉತ್ತರ ಭಾರತದಲ್ಲಿ ಕೋಟ್ಯಂತರ ಭಕ್ತರ ಪುಣ್ಯಸ್ನಾನಕ್ಕೆ ಮಹಾ ಕುಂಭಮೇಳ ಸಾಕ್ಷಿಯಾಗುತ್ತಿದೆ. ಅದೇ ರೀತಿ ದಕ್ಷಿಣ ಭಾರತದ ಪ್ರಯಾಗ ಎಂದೇ ಹೆಸರು ಪಡೆದಿರುವ ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರದ ಕಾವೇರಿ- ಕಬಿನಿ ಹಾಗೂ ಗುಪ್ತಗಾಮಿನಿಯಾಗಿರುವ ಸ್ಪಟಿಕ ಸರೋವರಗಳು ಸಂಧಿಸುವ ಸಂಗಮ ತಾಣದಲ್ಲಿ ಕುಂಭಮೇಳ ನಡೆಯುತ್ತಿದೆ. ಕರ್ನಾಟಕದ ಕುಂಭಮೇಳ ಎಂದೇ ಜನಪ್ರಿಯವಾಗಿರುವ ತಿ.ನರಸೀಪುರ ಕುಂಭಮೇಳ 2025ಕ್ಕೆ ದಿನಗಣನೆ ಶುರುವಾಗಿದ್ದು, ತಯಾರಿಗಳು ಜೋರಾಗಿಯೇ ನಡೆದಿವೆ. ಮೈಸೂರು ಜಿಲ್ಲೆ ತಿ ನರಸೀಪುರದ ತ್ರಿವೇಣಿ ಸಂಗಮದಲ್ಲಿ ಫೆಬ್ರವರಿ 10ರಿಂದ ಮೂರು ದಿನಗಳ ಕಾಲ ನಡೆಯಲಿರುವ 12ನೇ ಕುಂಭಮೇಳಕ್ಕೆ ಮೈಸೂರು ಜಿಲ್ಲಾಡಳಿತ, ಮುಜರಾಯಿ ಇಲಾಖೆ ಹಾಗೂ ಜಿಲ್ಲಾಪಂಚಾಯಿತಿ ಇಲಾಖೆಯಿಂದ ಭಕ್ತರಿಗಾಗಿ ಭಾರೀ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

ಈ ಪವಿತ್ರ ಕ್ಷೇತ್ರದಲ್ಲಿ ಮೂರು ವರ್ಷಗಳಿಗೊಮ್ಮೆ ನಡೆಯುವ ಕುಂಭಮೇಳ ನಡೆಯುತ್ತದೆ. ಆದರೆ 2021ರಲ್ಲಿ ಕೋವಿಡ್ ಕಾರಣದಿಂದಾಗಿ ಕುಂಭಮೇಳ‌ ನಡೆದಿರಲಿಲ್ಲ. ಆರು ವರ್ಷಗಳ ಬಳಿಕ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಈಗಾಗಲೇ ಗುಂಜಾನರಸಿಂಹಸ್ವಾಮಿ ಸನ್ನಿಧಿಯಲ್ಲಿ ತಯಾರಿಗಳು ನಡೆದಿವೆ.

ಫೆಬ್ರವರಿ 12ರಂದು ಕುಂಭಸ್ನಾನ ಮಾಡಲಿರುವ ಸಾವಿರಾರು ಭಕ್ತರಿಗಾಗಿ ಸೌಲಭ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಅಂದು ಬೆಳಿಗ್ಗೆ 9:00 ರಿಂದ 9:30 ರೊಳಗಿನ ಶುಭ ಮೀನ ಲಗ್ನ ಮತ್ತು ಮಧ್ಯಾಹ್ನ 12 ರಿಂದ 1 ಗಂಟೆಯೊಳಗಿನ ಶುಭ ವೃಷಭ ಲಗ್ನದಲ್ಲಿ ಕುಂಭಮೇಳದ ಪುಣ್ಯಸ್ನಾನ ಮಾಡಲು ಮುಹೂರ್ತ ಅರ್ಚಕ ವೃಂದ ನಿಗದಿ ಮಾಡಿದೆ.

ಈಗಾಗಲೇ ಸುತ್ತೂರು ಮಠಾಧಿಪತಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆದಿರುವ ಕುಂಭಮೇಳದ ಪೂರ್ವಸಿದ್ದತಾ ಸಭೆಯೂ ನಡೆದಿದೆ.

ರಾಜ್ಯ ಸರ್ಕಾರದಿಂದಲೂ ಅಗತ್ಯ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದು , ಆರು ಕೋಟಿ ರೂ.ಗಳನ್ನು ಮುಜರಾಯಿ ಇಲಾಖೆಯಿಂದ ಒದಗಿಸಲಾಗಿದೆ.

ಇದರ ಬೆನ್ನಲ್ಲೇ ಮೈಸೂರು ಜಿಲ್ಲಾಡಳಿತದಿಂದ ತ್ರಿವೇಣಿ ಸಂಗಮ ಸೇರಿದಂತೆ ಆಸುಪಾಸಿನ ಪ್ರದೇಶಗಳಲ್ಲಿ ಭರದಿಂದ ಸಾಗಿರುವ ಸಿದ್ದತಾ ಕಾರ್ಯಕ್ಕಾಗಿ ಹತ್ತಾರು ಮಂದಿ ಕೈ ಜೋಡಿಸಿದ್ದಾರೆ. ಧಾರ್ಮಿಕ ಕಾರ್ಯಕ್ರಮಕ್ಕಾಗಿ ವೇದಿಕೆ ನಿರ್ಮಾಣ ಕಾರ್ಯ, ಸ್ವಚ್ಛತಾ ಕಾರ್ಯ, ಲೈಟಿಂಗ್ಸ್ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ.

ನದಿಯ ಒಳಗೆ ಬೊಂಬುಗಳಿಂದ ತಡೆ ಬೇಲಿ ನಿರ್ಮಾಣವೂ ಸಾಗಿದೆ. ನದಿ ಪಾತ್ರದಲ್ಲಿ ಅಹಿತಕರ ಘಟನೆಗಳು ಜರುಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದ್ದು. ನದಿ ಪಾತ್ರದ ಹಲವೆಡೆ ಮುಳುಗು ತಜ್ಞರು ನಿಯೋಜನೆ ಮಾಡಲಾಗುತ್ತಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ನೂರಾರು ಪೋಲೀಸರನ್ನು ಕುಂಭಮೇಳದ ಭದ್ರತೆಗೆ ನಿಯೋಜನೆ ಮಾಡಲಾಗುತ್ತಿದೆ.

ಕುಂಭಮೇಳದ ಪುಣ್ಯಸ್ನಾನಕ್ಕೆ ಆಗಮಿಸುವ ಭಕ್ತರಿಗೆ ಬಟ್ಟೆ ಬದಲಾಯಿಸಲು ತಾತ್ಕಾಲಿಕ ಕೊಠಡಿಗಳ ವ್ಯವಸ್ಥೆಯನ್ನೂ ನದಿ ಪಾತ್ರದಲ್ಲಿಯೇ ಮಾಡಲಾಗಿದೆ. ಅಲ್ಲಲ್ಲಿ ಕುಡಿಯುವ ನೀರು, ತಾತ್ಕಾಲಿಕ ಶೌಚಾಲಯಗಳ ವ್ಯವಸ್ಥೆ.

ನೂಕು ನುಗ್ಗುಲು ಉಂಟಾಗುವುದನ್ನು ತಡೆಯಲು ಹಲವೆಡೆ ಬ್ಯಾರಿಕೇಡ್ ಅಳವಡಿಕೆ ಮಾಡಲಾಗುತ್ತಿದೆ.

ತಿ. ನರಸೀಪುರ ಪಟ್ಟಣದ ಹಲವೆಡೆ ವಾಹನಗಳ ನಿಲುಗಡೆಗೆ ಪಾರ್ಕಿಂಗ್ ಸ್ಥಳ ನಿಗದಿ ಮಾಡಲಾಗಿದೆ. ಅಲ್ಲಿಯೆ ವಾಹನ ನಿಲುಗಡೆ ಮಾಡಿ ಭಕ್ತರು ಆಗಮಿಸಲು ವ್ಯವಸ್ಥೆ ಮಾಡಲಾಗಿದೆ.

ಕುಂಭಮೇಳದ ವೇಳೆ ಅಗಸ್ತೇಶ್ವರ ದೇವಾಲಯ, ಗುಂಜಾನರಸಿಂಹಸ್ವಾಮಿ, ಭಿಕ್ಷೇಶ್ವರ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಲಿರುವ ಭಕ್ತರು ಪುಣ್ಯ ಸ್ನಾನದಲ್ಲೂ ಭಾಗಿಯಾಗುವರು. ಇದಕ್ಕಾಗಿ ಸಿದ್ದತೆಗಳು ಆಗುತ್ತಿವೆ. ಒಂದೆರಡು ದಿನದಲ್ಲಿ ಎಲ್ಲಾ ಸಿದ್ದತೆ ಪೂರ್ಣಗೊಳ್ಳಲಿವೆ. ಕುಂಭಮೇಳ ಯಶಸ್ವಿಯಾಗಿ ನೆರವೇರಲು ಮೈಸೂರು ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತದ ವತಿಯಿಂದ ಸಕಲ ಸಿದ್ಧತೆ ನಡೆದಿದೆ ಎನ್ನುವುದು ಅಧಿಕಾರಿಗಳು ನೀಡುವ ವಿವರಣೆ.

Whats_app_banner