Fellowships: ಕುವೆಂಪು ಭಾಷಾ ಭಾರತಿ ಫೆಲೊಷಿಪ್‌ಗೆ ಅರ್ಜಿ ಆಹ್ವಾನ, ಸಾಹಿತ್ಯ ಸಂಶೋಧನೆಗೆ 3 ಲಕ್ಷ ಗೌರವಧನ ಕೊಡುವ ಅಪರೂಪದ ಯೋಜನೆ
Kuvempu bhasha bharati fellowships : ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ರಾಷ್ಟ್ರಕವಿ ಕುವೆಂಪು ಅವರ ಹೆಸರಿನಲ್ಲಿ ನೀಡಲಾಗುವ ಹಿರಿಯ ಮತ್ತು ಕಿರಿಯ ಫೆಲೋಶಿಪ್‌ಗಾಗಿ ಅಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಇದು ಸಾಹಿತ್ಯ ಸಂಶೋಧನೆಗೆ 3/ 2 ಲಕ್ಷ ರೂಪಾಯಿ ಗೌರವಧನ ನೀಡುವ ಅಪರೂಪದ ಯೋಜನೆಯಾಗಿದೆ.

ಬೆಂಗಳೂರು: ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ರಾಷ್ಟ್ರಕವಿ ಕುವೆಂಪು ಅವರ ಹೆಸರಿನಲ್ಲಿ ನೀಡಲಾಗುವ ಹಿರಿಯ ಮತ್ತು ಕಿರಿಯ ಫೆಲೋಶಿಪ್ ಗಾಗಿ ಅಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಇದು ಸಾಹಿತ್ಯ ಸಂಶೋಧನೆಗೆ 3/2 ಲಕ್ಷ ರೂಪಾಯಿ ಗೌರವಧನ ನೀಡುವ ಅಪರೂಪದ ಯೋಜನೆಯಾಗಿದೆ. ಆಸಕ್ತರು ಅರ್ಜಿ ನಮೂನೆಯನ್ನು ಪ್ರಾಧಿಕಾರದ ಜಾಲತಾಣ www.kuvempubhashabharathi,karanataka.gov.inದಿಂದ ಪಡೆದುಕೊಳ್ಳಬಹುದು ಎಂದು ಕುವೆಂಪು ಭಾಷಾಭಾರತಿ ಪ್ರಕಟಣೆಯಲ್ಲಿ ತಿಳಿಸಿದೆ.
ಕುವೆಂಪು ಫೆಲೋಶಿಪ್ (ಹಿರಿಯ ಮತ್ತು ಕಿರಿಯ)
ಕುವೆಂಪು ಅವರ ಸಾಹಿತ್ಯ, ಕುವೆಂಪು ಅವರ ವಿಚಾರಗಳು ಅಥವಾ ಚಿಂತನೆಗಳಿಗೆ ಸಂಬಂಧಿಸಿದ ಸಂಶೋಧನಾ ಯೋಜನೆಗಳು, ಕುವೆಂಪು ಸಾಹಿತ್ಯದ ಅನುವಾದ ಯೋಜನೆಗಳು ಮುಂತಾದ ವಿಷಯಗಳ ಬಗ್ಗೆ ಕನಿಷ್ಟ 5 ಪುಟಗಳ ಸೂಕ್ತ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಅಗತ್ಯ ದಾಖಲೆಗಳು ಹಾಗೂ ಅರ್ಜಿಯೊಂದಿಗೆ (ಹಾರ್ಡ್ ಕಾಪಿ) ನಿಗದಿತ ಕೊನೆಯ ದಿನಾಂಕದ ಒಳಗೆ ಪ್ರಾಧಿಕಾರಕ್ಕೆ ತಲುಪಿಸಬೇಕು. ಪ್ರಸ್ತಾವನೆ ಹಾಗೂ ಅರ್ಜಿಯನ್ನು ಕಳುಹಿಸಬೇಕಾದ ವಿಳಾಸ: ರಿಜಿಸ್ಟ್ರಾರ್, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಕಲಾಗ್ರಾಮ, ಮಲ್ಲತ್ತಹಳ್ಳಿ, ಜ್ಞಾನಭಾರತಿ , -560056. :080-23183311/12.
ಅರ್ಜಿ ನಮೂನೆ ಎಲ್ಲಿ ದೊರಕುತ್ತದೆ?
ಅರ್ಜಿ ನಮೂನೆಯನ್ನು ಪ್ರಾಧಿಕಾರದ ಜಾಲತಾಣ www.kuvempubhashabharathi,karanataka.gov.in ದಿಂದ ಪಡೆದುಕೊಳ್ಳಬಹುದು. ಇದೇ ಸುದ್ದಿಯ ಕೊನೆಗೆ ಅರ್ಜಿ ನಮೂನೆ ಪಿಡಿಎಫ್ ನೀಡಲಾಗಿದೆ. ಸರಕಾರಿ ಅಥವಾ ಸರಕಾರಿ ಅನುದಾನ ಪಡೆಯುವ ಸಂಸ್ಥೆಗಳಲ್ಲಿ ಖಾಯಂ ಉದ್ಯೋಗಿಗಳಾಗಿರುವವರು ಅಥವಾ ಸಂಶೋಧನೆ ಇತ್ಯಾದಿ ಕಾರ್ಯಗಳಿಗಾಗಿ ಶಿಷ್ಯವೇತನ ಪಡೆಯುತ್ತಿದ್ದವರು ಸಂಬಂಧಪಟ್ಟ ಮೇಲಧಿಕಾರಿಗಳಿಂದ ನಿರಾಕ್ಷೇಪಣಾಪತ್ರವನ್ನು ಪಡೆದು ಅರ್ಜಿಯ ಜೊತೆಗೆ ಸಲ್ಲಿಸತಕ್ಕದ್ದು.
ಅರ್ಜಿ ಸಲ್ಲಿಸಲು ಕೊನೆಯ ದಿನ ಯಾವಾಗ?
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:28.02.2025 ಸಂಜೆ 5.00. ಅಪೂರ್ಣ ಅರ್ಜಿ ಹಾಗೂ ಕೊನೆಯ ದಿನಾಂಕದ ನಂತರ ಸಲ್ಲಿಕೆಯಾಗುವ ಮನವಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟು?
- ಹಿರಿಯ ಫೆಲೋಶಿಪ್ಪಿಗೆ ಅರ್ಜಿದಾರರ ವಯಸ್ಸು ಕನಿಷ್ಠ 35 ವರ್ಷ ಪೂರ್ಣವಾಗಿರಬೇಕು. (ಎಸ್. ಎಸ್. ಎಲ್. ಸಿ. ಪ್ರಮಾಣಪತ್ರದ ಪ್ರತಿ ಲಗತ್ತಿಸುವುದು)
- ಕಿರಿಯ ಫೆಲೋಶಿಪ್ಪಿಗೆ ಅರ್ಜಿದಾರರ ವಯಸ್ಸು ಕನಿಷ್ಠ 18 ಹಾಗೂ ಗರಿಷ್ಠ 35 ವರ್ಷ. (ಎಸ್. ಎಸ್. ಎಲ್. ಸಿ. ಪ್ರಮಾಣಪತ್ರದ ಪ್ರತಿ ಲಗತ್ತಿಸುವುದು)
ಇನ್ನಿತರ ನಿಯಮಗಳು
ಫೆಲೋಶಿಪ್ಪಿನ ಯೋಜನೆಯಲ್ಲಿ ಕೈಗೊಳ್ಳುವ ಕೆಲಸಕ್ಕಾಗಿ ಬೇರೆ ಇಲಾಖೆ/ವಿಶ್ವದ್ಯಾನಿಲಯಗಳಿಂದ ಅನುದಾನ ಪಡೆದಿರಬಾರದು. ಪ್ರಾಧಿಕಾರವು ನಿಗದಿಪಡಿಸುವ ದಿನಾಂಕದ ಒಳಗೆ ಯೋಜನೆಯನ್ನು ಪೂರೈಸಿ ಪ್ರಾಧಿಕಾರಕ್ಕೆ ಸಲ್ಲಿಸಬೇಕು. ಪ್ರಾಧಿಕಾರವು ಸೂಚಿಸಿದ ಎರಡು ಕಡೆಗಳಲ್ಲಿ ಉಪನ್ಯಾಸ ನೀಡಬೇಕು. ಕ್ಕುಸ್ವಾಮ್ಯಕ್ಕೆ ಒಳಪಟ್ಟ ಸಂದರ್ಭದಲ್ಲಿ ಅನುವಾದ ಮಾಡಲು ಹಾಗೂ ಅದನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಪ್ರಕಟಿಸಲು ಮೂಲಲೇಖಕರ ಅನುಮತಿಯ ಅಗತ್ಯವಿರುತ್ತದೆ. ಅಂಥ ಅನುಮತಿಯನ್ನು ಪಡೆಯಲು ಪ್ರಾಧಿಕಾರವು ಯತ್ನಿಸಬಹುದಾದರೂ ಅನುಮತಿ ದೊರೆಯದೆ ಇದ್ದರೆ ಪ್ರಾಧಿಕಾರವು ಹೊಣೆಯಾಗುವುದಿಲ್ಲ ಮತ್ತು ಅನುಮತಿ ದೊರೆಯದ ಸಂದರ್ಭಗಳಲ್ಲಿ ಫೆಲೋಶಿಪ್ ರದ್ದುಗೊಳ್ಳುತ್ತದೆ. ಮೂರು ತಿಂಗಳಿಗೊಮ್ಮೆ ಯೋಜನೆಯ ಪ್ರಗತಿವರದಿಯನ್ನು ಪ್ರಾಧಿಕಾರಕ್ಕೆ ಸಲ್ಲಿಸಬೇಕು. ಯೋಜನೆಯನ್ನು ವಹಿಸಿದ ಮೂರು ತಿಂಗಳ ಒಳಗೆ ತೃಪ್ತಿಕರ ಪ್ರಗತಿಯನ್ನು ತೋರಿಸದಿದ್ದರೆ ಫೆಲೋಶಿಪ್ಪನ್ನು ರದ್ದುಪಡಿಸಲಾಗುವುದು.
ಅನುವಾದದ ಯೋಜನೆಯಾದರೆ ಸ್ವತಂತ್ರವಾಗಿ ಮಾಡಿದ ಅನುವಾದವಾಗಿರತಕ್ಕದ್ದು. ಸಂಶೋಧನಾ ಯೋಜನೆಯಾದರೆ ಸ್ವತಂತ್ರ ಸಂಶೋಧನೆಯಾಗಿರಬೇಕು. ಯೋಜನೆಯನ್ನು ಪೂರೈಸಿ ಅನುವಾದದ/ಯೋಜನಾ ವರದಿ/ಮಹಾಪ್ರಬಂಧದ ಪಠ್ಯವನ್ನು ನುಡಿ ಏಕಭಾಷೆ ತಂತ್ರಾಂಶದಲ್ಲಿ ಟೈಪ್ ಮಾಡಿ ನಿಗದಿತ ಅವಧಿಯೊಳಗೆ ಹಾರ್ಡ್ ಮತ್ತು ಸಾಫ್ಟ್ ಪ್ರತಿಯನ್ನು ಪ್ರಾಧಿಕಾರಕ್ಕೆ ಸಲ್ಲಿಸಬೇಕು. ಅಭ್ಯರ್ಥಿಗಳು ಯೋಜನೆಯನ್ನು ಪೂರ್ಣಗೊಳಿಸಿ ಸಲ್ಲಿಸಿದ ಪಠ್ಯವನ್ನು ಮೌಲ್ಯಮಾಪನ ಸಮಿತಿ/ತಜ್ಞರು ಪರಿಶೀಲಿಸಿ ಶಿಫಾರಸು ಮಾಡಿದ ಬಳಿಕ ಫೆಲೋಶಿಪ್ ಮೊತ್ತವನ್ನು ಪಾವತಿಸಲಾಗುವುದು. ಯೋಜನೆಯನ್ನು ತೃಪ್ತಿಕರವಾಗಿ ಪೂರೈಸದಿದ್ದರೆ ಯಾವುದೇ ಮೊತ್ತವನ್ನು ಪಾವತಿಸಲಾಗುವುದಿಲ್ಲ. ಯೋಜನೆಯ ಮಧ್ಯದಲ್ಲಿ ಯಾವುದೇ ಮೊತ್ತವನ್ನು ಪಾವತಿಸಲಾಗುವುದಿಲ್ಲ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ತಿಳಿಸಿದೆ.
ಯೋಜನೆಯ ಅಂಗವಾಗಿ ಸಲ್ಲಿಸಿದ ಪಠ್ಯದ ಹಕ್ಕುಗಳು ಪ್ರಾಧಿಕಾರದ್ದಾಗಿರುತ್ತವೆ. ಅವುಗಳನ್ನು ಪ್ರಕಟಿಸುವ ಹಕ್ಕನ್ನು ಪ್ರಾಧಿಕಾರವು ಕಾಯ್ದಿರಿಸಿದೆ. ಪ್ರಕಟಣೆಗಾಗಿ ಯಾವುದೇ ಪ್ರತ್ಯೇಕ ರಾಯಧನ ಅಥವಾ ಸಂಭಾವನೆಯನ್ನು ಪಾವತಿಸಲಾಗುವುದಿಲ್ಲ. ಮೊದಲ ಹಂತದಲ್ಲಿ ಪ್ರಸ್ತಾವನೆಗಳನ್ನು ಪರಿಶೀಲನೆ ನಡೆಸಿ ಆಯ್ಕೆಯಾದವರನ್ನು ಸಂದರ್ಶನಕ್ಕೆ ಕರೆಯಲಾಗುವುದು. ಸಂದರ್ಶನದ ಬಳಿಕ ಅಂತಿಮ ಆಯ್ಕೆಯನ್ನು ಮಾಡಲಾಗುವುದು. ಅಭ್ಯರ್ಥಿಗಳು ಸ್ವಂತ ವೆಚ್ಚದಲ್ಲಿ ಸಂದರ್ಶನಕ್ಕೆ ಹಾಜರಾಗಬೇಕಾಗುತ್ತದೆ.
ಕುವೆಂಪು ಭಾಷಾಭಾರತಿ ಫೆಲೊಷಿಪ್ ಅರ್ಜಿ ನಮೂನೆ ಪಿಡಿಎಫ್ ಇಲ್ಲಿದೆ | ಡೌನ್‌ಲೋಡ್ ಮಾಡಿಕೊಳ್ಳಿ

ವಿಭಾಗ