ಕರ್ನಾಟಕ ಪರಿಸರ ಸ್ನೇಹಿ ಸಾರಿಗೆ ನೀತಿ 2025-30 ಬಿಡುಗಡೆ: 5 ವರ್ಷಗಳಲ್ಲಿ ಸಾಂಪ್ರದಾಯಿಕ ವಾಹನಗಳ ಇ.ವಿ. ರೂಪಾಂತರಕ್ಕೆ ವಿಶೇಷ ಒತ್ತು
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಪರಿಸರ ಸ್ನೇಹಿ ಸಾರಿಗೆ ನೀತಿ 2025-30 ಬಿಡುಗಡೆ: 5 ವರ್ಷಗಳಲ್ಲಿ ಸಾಂಪ್ರದಾಯಿಕ ವಾಹನಗಳ ಇ.ವಿ. ರೂಪಾಂತರಕ್ಕೆ ವಿಶೇಷ ಒತ್ತು

ಕರ್ನಾಟಕ ಪರಿಸರ ಸ್ನೇಹಿ ಸಾರಿಗೆ ನೀತಿ 2025-30 ಬಿಡುಗಡೆ: 5 ವರ್ಷಗಳಲ್ಲಿ ಸಾಂಪ್ರದಾಯಿಕ ವಾಹನಗಳ ಇ.ವಿ. ರೂಪಾಂತರಕ್ಕೆ ವಿಶೇಷ ಒತ್ತು

ಕರ್ನಾಟಕದಲ್ಲಿ ಮುಂದಿನ ಐದು ವರ್ಷದಲ್ಲಿ ಸಾಂಪ್ರದಾಯಿಕ ವಾಹನಗಳು ವಿದ್ಯುತ್‌ ವಾಹನಗಳಾಗಿ ಬದಲಾಗಲಿವೆ. ಬೆಂಗಳೂರಿನಲ್ಲಿ ನಡೆದಿರುವ ಹೂಡಿಕೆದಾರರ ಸಮಾವೇಶದಲ್ಲಿ ಸಾರಿಗೆ ನೀತಿ ಬಿಡುಗಡೆ ಮಾಡಲಾಗಿದೆ.

ಬೆಂಗಳೂರಿನಲ್ಲಿ ನಡೆದ ಹೂಡಿಕೆದಾರರ ಸಮಾವೇಶದಲ್ಲಿ ಸಾರಿಗೆ ನೀತಿಯೂ ಬಿಡುಗಡೆಯಾಗಿದೆ.
ಬೆಂಗಳೂರಿನಲ್ಲಿ ನಡೆದ ಹೂಡಿಕೆದಾರರ ಸಮಾವೇಶದಲ್ಲಿ ಸಾರಿಗೆ ನೀತಿಯೂ ಬಿಡುಗಡೆಯಾಗಿದೆ.

ಬೆಂಗಳೂರು: ಈಗಾಗಲೇ ಭಾರತದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಬಳಕೆ ಹೆಚ್ಚಾಗಿದೆ. ದ್ವಿಚ್ರಕವಾಹನ, ನಾಲ್ಕು ಚಕ್ರಗಳ ವಾಹನಗಳ ಬಳಕೆಯಲ್ಲಿ ಹಲವು ನಗರಗಳು ಮುಂಚೂಣಿಯಲ್ಲಿವೆ. ಕರ್ನಾಟಕವೂ ವಿದ್ಯುತ್‌ ವಾಹನಗಳ ಬಳಕೆಗೆ ನಿರಂತರವಾಗಿ ಉತ್ತೇಜನ ನೀಡುತ್ತಲೇ ಬರುತ್ತಿದೆ. ಇದರ ಮುಂದುವರೆದ ಭಾಗವಾಗಿ ಪರಿಸರ ಸ್ನೇಹಿ ಸಾರಿಗೆ ನೀತಿ ರೂಪಿಸಿದೆ. ವಿದ್ಯುತ್ ಮತ್ತು ಹೈಡ್ರೋಜನ್ ಚಾಲಿತ ವಾಹನ ತಯಾರಿಕೆ ವಲಯಕ್ಕೆ ಮುಂದಿನ 5 ವರ್ಷಗಳಲ್ಲಿ 50 ಸಾವಿರ ಕೋಟಿ ರೂ. ಹೂಡಿಕೆ ಆಕರ್ಷಿಸಿ, 1 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಿರುವ ಮುಂದಿನ ಐದು ವರ್ಷಗಳ ಅವಧಿಯ ಪರಿಸರಸ್ನೇಹಿ ಸಾರಿಗೆ ನೀತಿಯನ್ನು ಇಂಧನ ಸಚಿವ ಕೆ ಜೆ ಜಾರ್ಜ್ ಶುಕ್ರವಾರ ಹೂಡಿಕೆದಾರರ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಬಿಡುಗಡೆ ಮಾಡಿದರು.

ನೀತಿಯ ಬಗ್ಗೆ ಪತ್ರಿಕಾ ಹೇಳಿಕೆಯಲ್ಲಿ ಮಾಹಿತಿ ನೀಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ‌ ಬಿ ಪಾಟೀಲ, ಇದಕ್ಕಾಗಿ ಗೌರಿಬಿದನೂರು, ಧಾರವಾಡ ಮ್ತತು ಹಾರೋಹಳ್ಳಿಯಲ್ಲಿ ಪರಿಸರಸ್ನೇಹಿ ಇಂಧನ ಕ್ಲಸ್ಟರ್ ಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದ್ದಾರೆ.

ಭಾರತದ ಇ.ವಿ.ವಲಯದಲ್ಲಿ ರಾಜ್ಯವು 3ನೇ ಸ್ಥಾನದಲ್ಲಿದ್ದು, ನಮ್ಮಲ್ಲಿ 2.50 ಲಕ್ಷ ಇ.ವಿ.ಚಾಲಿತ ವಾಹನಗಳಿವೆ. ಬ್ಯಾಟರಿ ಪ್ಯಾಕ್, ಕೋಶಗಳ ತಯಾರಿಕೆ, ಬಿಡಿಭಾಗಗಳ ಉತ್ಪಾದನೆ, ಒಇಎಂ, ಚಾರ್ಜಿಂಗ್, ಪರೀಕ್ಷಾರ್ಥ ಮೂಲಸೌಕರ್ಯ ಹಾಗೂ ಆರ್ & ಡಿ ಇವುಗಳಿಗೆ ಈಗಾಗಲೇ 25 ಸಾವಿರ ಕೋಟಿ ರೂ. ಬಂದಿದೆ. ಹೊಸ ನೀತಿಯಲ್ಲಿ ಚಾರ್ಜಿಂಗ್ ಮೂಲಸೌಕರ್ಯ ಮತ್ತು ಹೈಡ್ರೋಜನ್ ಕೇಂದ್ರಗಳ ಜಾಲದ ಅಭಿವೃದ್ಧಿಗೆ ಒತ್ತು ಕೊಡಲಾಗಿದೆ. ಜೊತೆಗೆ ಈಗ ಓಡಾಡುತ್ತಿರುವ ದ್ವಿಚಕ್ರ, ತ್ರಿಚಕ್ರ ಮತ್ತು ನಾಲ್ಕು ಚಕ್ರಗಳ ವಾಹನಗಳ ರೆಟ್ರೋ-ಫಿಟ್ಟಿಂಗ್ ಪ್ರೋತ್ಸಾಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಬಿಎಂಟಿಸಿ ವ್ಯಾಪ್ತಿಯ ಹೊರಗೆ ಕಡಿಮೆ ದೂರದಲ್ಲಿರುವ ಸೇವೆಗಳಿಗೆ ಇ.ವಿ. ಬಸ್ ಸೇವೆಗಳನ್ನು ಹೆಚ್ಚಿಸಲಾಗುವುದು. ಜತೆಗೆ ಇ-ಕಾಮರ್ಸ್ ಮತ್ತು ವಿತರಣಾ ಕಂಪನಿಗಳು ತಮ್ಮ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು 2030ರ ವೇಳೆಗೆ ಇ.ವಿ/ಹೈಡ್ರೋಜನ್ ಚಾಲಿತವಾಗಿ ಬದಲಿಸಿಕೊಳ್ಳಲು ಒತ್ತು ಕೊಡಲಾಗಿದೆ. ಅಲ್ಲದೆ ನಗರಪಾಲಿಕೆ, ಪುರಸಭೆ, ಪಟ್ಟಣ ಪಂಚಾಯಿತಿಗಳು ಘನತ್ಯಾಜ್ಯ ನಿರ್ವಹಣೆಗೆ ಇರುವ ವಾಹನಗಳನ್ನು ಕೂಡ ರೂಪಾಂತರಿಸಿ ಕೊಳ್ಳುವಂತೆ ಮಾಡಲಾಗುವುದು. ಖಾಸಗಿ ಕಂಪನಿಗಳು ಮತ್ತು ಶಾಲಾವಾಹನಗಳಿಗೂ ಇದನ್ನು ಅನ್ವಯಿಸಲಾಗುವುದು ಎಂದು ಅವರು ವಿವರಿಸಿದ್ದಾರೆ.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.
Whats_app_banner