ಕರ್ನಾಟಕದ 16 ಜಿಲ್ಲೆಗಳಲ್ಲಿ ಡೇ ಕೇರ್ ಕೀಮೋಥೆರಪಿ ಕೇಂದ್ರ ಶುರು, ಯಾವೆಲ್ಲ ಆಸ್ಪತ್ರೆ, ಕ್ಯಾನ್ಸರ್ ರೋಗಿಗಳಿಗೆ ಏನು ಸೌಲಭ್ಯ ಸಿಗಲಿದೆ
ಕರ್ನಾಟಕದ 16 ಜಿಲ್ಲಾ ಆಸ್ಪತ್ರೆಗಳಲ್ಲಿ ಇಂದಿನಿಂದ ಡೇ ಕೇರ್ ಕೀಮೋಥೆರಪಿ ಸೌಲಭ್ಯ ಸಿಗಲಿದೆ. ಯಾವೆಲ್ಲ ಆಸ್ಪತ್ರೆಗಳಲ್ಲಿ ಯಾವ ಸಂಸ್ಥೆ ಈ ಸೌಲಭ್ಯ ಒದಗಿಸುತ್ತದೆ, ಕ್ಯಾನ್ಸರ್ ರೋಗಿಗಳಿಗೆ ಏನೇನು ಸೌಲಭ್ಯ ಸಿಗಲಿದೆ ಎಂಬಿತ್ಯಾದಿ ಪೂರ್ಣ ವಿವರ ಇಲ್ಲಿದೆ.

ಬೆಂಗಳೂರು: ಕ್ಯಾನ್ಸರ್ ರೋಗಿಗಳ ಅನುಕೂಲಕ್ಕಾಗಿ ಕರ್ನಾಟಕದ 16 ಜಿಲ್ಲಾ ಆಸ್ಪತ್ರೆಗಳಲ್ಲಿ ‘ಡೇ ಕೇರ್ ಕಿಮೋಥೆರಪಿ’ ಕೇಂದ್ರಗಳು ಇಂದು ಕಾರ್ಯಾರಂಭ ಮಾಡುತ್ತಿವೆ. ಕ್ಯಾನ್ಸರ್ ರೋಗಿಗಳು, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಲ್ಲಿ (ಎಸ್‌ಎಎಸ್‌ಟಿ) ನೋಂದಾಯಿತ ತೃತೀಯ ಹಂತದ ಕ್ಯಾನ್ಸರ್ ಆಸ್ಪತ್ರೆಗಳಲ್ಲಿ ಪ್ರಾರಂಭಿಕ ಚಿಕಿತ್ಸೆ ಪಡೆದ ನಂತರ ಮುಂದುವರಿದ ಕಿಮೋಥೆರಪಿ ಚಿಕಿತ್ಸೆಯನ್ನು ‘ಹಬ್–ಆ್ಯಂಡ್–ಸ್ಪೋಕ್’ ಮಾದರಿಯಲ್ಲಿ ಜಿಲ್ಲಾ ಆಸ್ಪತ್ರೆಗಳಲ್ಲಿ ಸ್ಥಾಪಿಸುವ ‘ಡೇ ಕೇರ್ ಕಿಮೋಥೆರಪಿ ಕೇಂದ್ರ’ಗಳಲ್ಲಿ ಪಡೆಯಬಹುದು.
ಕರ್ನಾಟಕದ 16 ಜಿಲ್ಲೆಗಳಲ್ಲಿ ಡೇ ಕೇರ್ ಕೀಮೋಥೆರಪಿ ಕೇಂದ್ರ
ಡೇ ಕೇರ್ ಕೀಮೋಥೆರಪಿ ಕೇಂದ್ರ ಸ್ಥಾಪನೆ ಮೂಲಕ ಕ್ಯಾನ್ಸರ್ ಆರೈಕೆಯಲ್ಲಿ ನಗರ– ಗ್ರಾಮೀಣ ಅಸಮಾನತೆ ಕಡಿಮೆ ಮಾಡಿ, ಪರಿಣಾಮಕಾರಿ ಆರೈಕೆ, ಆಸ್ಪತ್ರೆ ವೆಚ್ಚ ಕಡಿತ ಮಾಡುವ ಜೊತೆಗೆ, ಚಿಕಿತ್ಸೆ ಪಡೆಯುವುದನ್ನು ನಿಲ್ಲಿಸುವವರ ಸಂಖ್ಯೆ ಕಡಿಮೆ ಮಾಡಲಾಗುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರಗಳಲ್ಲಿ ಸಂಜೀವಿನಿ ಆಸ್ಪತ್ರೆ, ಮೈಸೂರು ಜಿಲ್ಲಾ ಆಸ್ಪತ್ರೆಯಲ್ಲಿ ಕಿದ್ವಾಯಿ ಆಸ್ಪತ್ರೆ, ತುಮಕೂರಲ್ಲಿ ಸಿದ್ಧಾರ್ಥ ವೈದ್ಯಕೀಯ ಕಾಲೇಜು, ಕೋಲಾರದಲ್ಲಿ ಆರ್‌ಎಲ್ ಜಾಲಪ್ಪ ವೈದ್ಯಕೀಯ ಕಾಲೇಜು, ಬಾಗಲಕೋಟೆಯಲ್ಲಿ ನಿಜಲಿಂಗಪ್ಪ ವೈದ್ಯಕೀಯ ಕಾಲೇಜು ಆಸ್ಪತ್ರೆ, ದಾವಣಗೆರೆ, ಚಿತ್ರದುರ್ಗ, ವಿಜಯನಗರ, ಹಾವೇರಿ, ಬಳ್ಳಾರಿಗಳಲ್ಲಿ ಹುಬ್ಬಳ್ಳಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಧಾರವಾಡದಲ್ಲಿ ಎಚಸಿಜಿ ಆಸ್ಪತ್ರೆ, ದಕ್ಷಿಣ ಕನ್ನಡದಲ್ಲಿ ಕೆಎಂಸಿ ಮಂಗಳೂರು, ಉಡುಪಿ, ವಿಜಯಪುರದಲ್ಲಿ ಜಿಲ್ಲಾ ಆಸ್ಪತ್ರೆಗಳು ಡೇ ಕೇರ್ ಕೀಮೋಥೆರಪಿ ಕೇಂದ್ರದ ಸೇವೆಗಳನ್ನು ಒದಗಿಸಲಿವೆ.
ಡೇ ಕೇರ್ ಕೀಮೋಥೆರಪಿ ಕೇಂದ್ರದ ಸೌಲಭ್ಯ
- ಈಗಾಗಲೇ ಚಿಕಿತ್ಸೆ ಪಡೆಯುತ್ತಿರುವ ಕ್ಯಾನ್ಸರ್ ರೋಗಿಗಳು ಮುಂದುವರಿಕೆಯ ಕೀಮೋಥೆರಪಿ ಚಿಕಿತ್ಸೆ ಪಡೆಯಬಹುದು.
- ನೋವು ನಿರ್ವಹಣೆಯ ಚಿಕಿತ್ಸೆ ಪಡೆಯಬಹುದು ಮತ್ತು ಸಮಾಲೋಚನಾ ಸೇವೆಗಳು
- ಜಿಲ್ಲಾ ಆಸ್ಪತ್ರೆಗಳಿಂದ ತೃತೀಯ ಹಂತದ ಆಸ್ಪತ್ರೆಗಳ ಮೂಲಕ ಟೆಲಿಮೆಡಿಸಿನ ಸೇವೆ ಮತ್ತು ಅಗತ್ಯ ತಜ್ಞರ ಸೇವೆಗಳು
ಡೇ ಕೇರ್ ಕೀಮೋಥೆರಪಿ ಕೇಂದ್ರದ ಉಪಯೋಗಗಳು
- ಕ್ಯಾನ್ಸರ್ ರೋಗಿಗಳ ಆಸ್ಪತ್ರೆ ಮತ್ತು ಪ್ರಯಾಣದ ವೆಚ್ಚ ಕಡಿಮೆಯಾಗಲಿದೆ
- ಚಿಕಿತ್ಸೆಯಿಂದ ವಂಚಿತರಾಗುವ ಕ್ಯಾನ್ಸರ್ ರೋಗಿಗಳ ಪ್ರಕರಣ ಇಳಿಕೆಯಾಗಲಿದೆ
- ತಪಾಸಣೆ ಮತ್ತು ಆರಂಭಿಕ ಹಂತದಲ್ಲೇ ಚಿಕಿತ್ಸೆ ಕೂಡ ಕ್ಯಾನ್ಸರ್ ರೋಗಿಗಳಿಗೆ ಸಿಗಲಿದೆ
- ಕ್ಯಾನ್ಸರ್ ಚಿಕಿತ್ಸೆ ವಿಚಾರದಲ್ಲಿ ನಗರ - ಗ್ರಾಮೀಣ ಅಸಮಾನತೆಯನ್ನು ಈ ಕೇಂದ್ರಗಳು ಕಡಿಮೆ ಮಾಡುತ್ತವೆ
ಜಿಲ್ಲಾ ಆಸ್ಪತ್ರೆಗಳಲ್ಲಿ ಡೇ ಕೇರ್ ಕಿಮೋಥೆರಪಿ ಕೇಂದ್ರಗಳನ್ನು ಆರಂಭಿಸಿ, ಅಲ್ಲಿನ ಸಿಬ್ಬಂದಿಗೆ ಎಸ್ಎಎಸ್‌ಟಿ ನೋಂದಾಯಿತ ಆಸ್ಪತ್ರೆಯ ಸಿಬ್ಬಂದಿ ಮೂಲಕವೇ ತರಬೇತಿ ಕೊಡಿಸಲಾಗುತ್ತದೆ. ಚಿಕಿತ್ಸೆಗೆ ಅಗತ್ಯವಿರುವ ಔಷಧವನ್ನೂ ಆ ಆಸ್ಪತ್ರೆಯೇ ಒದಗಿಸಲಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಹಬ್ ಮತ್ತು ಸ್ಟೋಕ್ ಆಸ್ಪತ್ರೆ ಮಾದರಿ
ಹಬ್ ಆಸ್ಪತ್ರೆಗಳ ಪಾತ್ರ: ಹಬ್ ಆಸ್ಪತ್ರೆಗಳು ಎಂದರೆ SAST ನೊಂದಾಯಿತ ತೃತೀಯ ಹಂತದ ಕ್ಯಾನ್ಸರ್ ಕೇಂದ್ರಗಳು. ಇವು, ಕ್ಲಿನಿಕಲ್ ಸೇವೆಗಳು ಎಂದರೆ, ಸಂಕೀರ್ಣ ಚಿಕಿತ್ಸಾ ವಿತರಣೆ, ಕೀಮೋಥೆರಪಿಯನ್ನು ನಿರ್ವಹಣೆ ಬಯಾಪ್ಸಿಗಳನ್ನು ನಡೆಸುವುದು. ಸುಧಾರಿತ ಸ್ಟೋಕ್ ಕೇಂದ್ರಗಳಿಗೆ ರೋಗಶಾಸ್ತ್ರ ಮತ್ತು ವಿಕಿರಣಶಾಸ್ತ್ರಬೆಂಬಲವನ್ನು ಒದಗಿಸುವುದು ಮಾಡುತ್ತವೆ.
ತರಬೇತಿ ಮತ್ತು ಸಾಮರ್ಥ್ಯ ವೃದ್ಧಿ, ರೆಫರಲ್, ಟೆಲಿಮೆಡಿಸಿನ್ ಮತ್ತು ಸ್ಪೋಕ್ ಕೇಂದ್ರಗಳಿಗೆ ಔಷಧ ರವಾನೆ, ಗುಣಮಟ್ಟದ ಭರವಸೆ ಮತ್ತು ಮೇಲ್ವಿಚಾರಣೆಗಳನ್ನು ಈ ಹಬ್ ಆಸ್ಪತ್ರೆಗಳು ನಿರ್ವಹಿಸುತ್ತವೆ.
ಸ್ಟೋಕ್ ಕೇಂದ್ರಗಳ ಪಾತ್ರ: ಸ್ಟೋಕ್ ಕೇಂದ್ರಗಳು ಎಂದರೆ ಜಿಲ್ಲಾ ಡೇ ಕೇರ್ ಕೀಮೋಥೆರಪಿ ಘಟಕಗಳು. ಇವು ಹಬ್‌ನೊಂದಿಗೆ ಸಮನ್ವಯ (ರೆಫರಲ್ ವ್ಯವಸ್ಥೆ, ವಿಕಿರಣ/ ಶಸ್ತ್ರಚಿಕಿತ್ಸೆ ಅಗತ್ಯವಿರುವ ರೋಗಿಗಳನ್ನು ಗುರುತಿಸಿ ಮತ್ತು ಕೇಂದ್ರಗಳಿಗೆ ವರ್ಗಾಯಿಸಿ, ನೈಜ-ಸಮಯದ ರೆಫರಲ್ ಮಾಡಲಾಗುವುದು) ಸಾಧಿಸಿ ಕೆಲಸ ಮಾಡುತ್ತವೆ. ಮುಖ್ಯವಾಗಿ, ರೋಗಿಯ ಆರೈಕೆ(ಕೀಮೋಥೆರಪಿ ಆಡಳಿತ, ಸಹಾಯಕ/ ಉಪಶಮನಕಾರಿ ಕೀಮೋ ಪೂರ್ವ-ಕೀಮೋ ವರ್ಕಪ್, ಮೂಲಭೂತ ಪ್ರಯೋಗಾಲಯ ಪರೀಕ್ಷೆಗಳು (CBC, LFT, RFT) ಇಸಿಜಿ ಮೇಲ್ವಿಚಾರಣೆಯನ್ನು ಮತ್ತು ಒದಗಿಸುವುದು ಮಾಡುತ್ತವೆ. ಇದಲ್ಲದೆ, ಬೆಂಬಲ ಸೇವೆಗಳು, ಉಪಶಮನಕಾರಿ ಆರೈಕೆ ಹಾಗೂ ಔಷಧ ವಿತರಣೆಗೂ ಗಮನಕೊಡುತ್ತವೆ.
ಕರ್ನಾಟಕದಲ್ಲಿ ವಾರ್ಷಿಕವಾಗಿ ಕ್ಯಾನ್ಸರ್‌ನ 70 ಸಾವಿರ ಹೊಸ ಪ್ರಕರಣಗಳು ವರದಿಯಾಗುತ್ತಿವೆ. ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ಬೆಳಗಾವಿ ಮತ್ತು ಮೈಸೂರು ನಗರಗಳಿಗೆ ಕಿಮೋಥೆರಪಿ ಸೇವೆ ಪಡೆಯಲು ಶೇ 60ರಷ್ಟು ರೋಗಿಗಳು 100 ಕಿ.ಮೀಗೂ ಹೆಚ್ಚು ಪ್ರಯಾಣಿಸುತ್ತಾರೆ. ಪುನರಾವರ್ತಿತ ಭೇಟಿ ವೆಚ್ಚದಿಂದ ಹೆಚ್ಚಿನ ರೋಗಿಗಳು ಚಿಕಿತ್ಸೆಯಿಂದ ವಂಚಿತರಾಗುತ್ತಿದ್ದಾರೆ. ಇದನ್ನು ತಪ್ಪಿಸಲು ರಾಜ್ಯ ಸರ್ಕಾರವು ಜಿಲ್ಲಾ ಆಸ್ಪತ್ರೆಗಳಲ್ಲಿ ಡೇ ಕೇರ್ ವ್ಯವಸ್ಥೆ ಆರಂಭಿಸಿದೆ ಎಂದು ಕರ್ನಾಟಕದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿವರಿಸಿದರು.