Lokayukta Raids: ಕರ್ನಾಟಕದ 8 ಭ್ರಷ್ಟ ಅಧಿಕಾರಿಗಳ ನಿವಾಸಗಳ ಮೇಲೆ ಲೋಕಾಯುಕ್ತ ದಾಳಿ; ಆಸ್ತಿ, ಚಿನ್ನ, ಬೆಳ್ಳಿ ಆಭರಣ ಕಂಡು ದಂಗು
Lokayukta Raids: ಕರ್ನಾಟಕದ 8 ಭ್ರಷ್ಟ ಅಧಿಕಾರಿಗಳ ನಿವಾಸಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದು, ಆಸ್ತಿ ಪಾಸ್ತಿ, ಚಿನ್ನ,, ಬೆಳ್ಳಿ ಆಭರಣ ವಶಪಡಿಸಿಕೊಂಡಿದ್ದಾರೆ. (ವರದಿ- ಎಚ್. ಮಾರುತಿ, ಬೆಂಗಳೂರು)

Lokayukta Raids: ಬೆಂಗಳೂರು ಸೇರಿದಂತೆ ರಾಜ್ಯದ 8 ಭಾಗಗಳಲ್ಲಿ ಲೋಕಾಯುಕ್ತ ಪೊಲೀಸರು ಇಂದು (ಮಾರ್ಚ್ 6) ದಾಳಿ ನಡೆಸಿ ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ. ಬೆಂಗಳೂರು ನಗರದಲ್ಲಿ ಎರಡು ಕಡೆ, ಕೋಲಾರ, ಕಲಬುರಗಿ, ದಾವಣಗೆರೆ, ತುಮಕೂರು, ಬಾಗಲಕೋಟೆ ಹಾಗೂ ವಿಜಯಪುರದಲ್ಲಿ ದಾಳಿ ನಡೆದಿದೆ.
ಬೆಂಗಳೂರಿನಲ್ಲಿ ಎರಡು ಕಡೆ ಲೋಕಾಯುಕ್ತ ದಾಳಿ
ಬೆಂಗಳೂರಿನ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಲ್ಲಿ ಗ್ರೂಪ್ ಎ ಮುಖ್ಯ ಎಂಜಿನಿಯರ್ ಆಗಿರುವ ಟಿ.ಡಿ ನಂಜುಂಡಪ್ಪ ಮತ್ತು ಗುಣಮಟ್ಟ ನಿಯಂತ್ರಣ ಮತ್ತು ಗುಣಮಟ್ಟ ಭರವಸೆ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಹೆದ್ದಾರಿ ಗ್ರೇಡ್-1 ಎಂಜಿನಿಯರ್ ಆಗಿರುವ ಎಚ್.ಬಿ ಕಳೇಶಪ್ಪ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆದಿದ್ದು, ತಪಾಸಣೆ ನಡೆದಿದೆ.
ಕೋಲಾರ, ದಾವಣಗೆರೆ, ತುಮಕೂರು, ವಿಜಯಪುರ, ಚಾಮರಾಜನಗರಗಳಲ್ಲಿ ಲೋಕಾಯುಕ್ತ ದಾಳಿ
ಕೋಲಾರದ ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಜಿ. ನಾಗರಾಜ್, ದಾವಣಗೆರೆಯ ಆರೋಗ್ಯ ಇಲಾಖೆಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಘಟಕದ ಜಿಲ್ಲಾ ಸಂಖ್ಯಾಶಾಸ್ತ್ರೀಯ ಅಧಿಕಾರಿ ಜಿ. ಎಸ್. ನಾಗರಾಜು, ತುಮಕೂರಿನ ತಾವರಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಉಪಮುಖ್ಯ ವೈದ್ಯಾಧಿಕಾರಿ ಡಾ.ಪಿ.ಜಗದೀಶ್, ಕಲಬುರಗಿಯ ಯೋಜನಾ ಅನುಷ್ಠಾನ ಘಟಕದ ಜಗನ್ನಾಥ್, ವಿಜಯಪುರ ಗೃಹ ಮಂಡಳಿ ಎಫ್‌ಡಿಎ ಶಿವಾನಂದ ಶಿವಶಂಕರ ಮತ್ತು ಬಾಗಲಕೋಟೆಯ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರಥಮ ವಿಭಾಗದ ಸಹಾಯಕ ಅಧಿಕಾರಿ ಮಾಳಪ್ಪ ಸಾಬಣ್ಣದುರ್ಗದ ಅವರ ಮೇಲೆ ದಾಳಿ ನಡೆಸಲಾಗಿದೆ.
ಕೋಲಾರದ ನಾಗರಾಜ್ ಅವರಿಗೆ ಸೇರಿದ ಮೂರು ಕಡೆ ದಾಳಿ ನಡೆದಿದೆ. ಪ್ರಸ್ತುತ ನಾಗರಾಜ್ ಬೆಂಗಳೂರು ರಾಜಾಜಿನಗರ ಬೆಸ್ಕಾಂ ಎಇಇ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಾಗರಾಜ್ ಅವರ ಕೆ.ಆರ್.ಪುರಂ ಬಳಿಯ ಪ್ರಿಯದರ್ಶಿನಿ ಬಡಾವಣೆ ಹಾಗೂ ರಾಜಾಜಿನಗರ ಬೆಸ್ಕಾಂ ಕಚೇರಿ ಮತ್ತು ಸಂಬಂಧಿಕರೊಬ್ಬರ ಮನೆ ಮೇಲೆ ದಾಳಿ ನಡೆದಿದೆ. ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕು ಮೂಲದ ನಾಗರಾಜ್ ಕೊಳ್ಳೇಗಾಲ ಬಳಿ 6 ಎಕರೆ ಜಮೀನು, ಬೆಂಗಳೂರಿನಲ್ಲಿ ಒಂದು ಮನೆ, ಎರಡು ನಿವೇಶನಗಳನ್ನು ಸಂಪಾದಿಸಿರುವ ಮಾಹಿತಿ ಲಭ್ಯವಾಗಿದೆ. ಕೋಲಾರ ತಾಲ್ಲೂಕು ನರಸಾಪುರ ಬಳಿ ಭೂಮಿ ಹೊಂದಿದ್ದಾರೆ.
ಕಲಬರುಗಿ, ಬೀದರ್‌ಗಳಲ್ಲೂ ಲೋಕಾಯುಕ್ತ ಪೊಲೀಸರ ದಾಳಿ
ಕಲಬುರಗಿ ಲೋಕೋಪಯೋಗಿ ಮುಖ್ಯ ಇಂಜಿನಿಯರ್ ಜಗನ್ನಾಥ್ ಹಲಿಂಗೆ ಮನೆಯಲ್ಲಿ ನಗದು ಚಿನ್ನದ ಖಜಾನೆಯೇ ಪತ್ತೆಯಾಗಿದೆ. ಆಳಂದದಲ್ಲಿ 30 ಎಕರೆ ಜಮೀನು, ಬೀದರ್, ಬಸವ ಕಲ್ಯಾಣದಲ್ಲೂ ಆಸ್ತಿ ಪತ್ತೆಯಾಗಿದೆ. 1 ಕೆ.ಜಿ ಗೂ ಅಧಿಕ ಬೆಳ್ಳಿ, 150 ಗ್ರಾಂ ಚಿನ್ನಾಭರಣ, 1.20 ಲಕ್ಷ ನಗದು, ಜಮೀನು, ಮನೆ ಸೇರಿದಂತೆ ಆಸ್ತಿಯ ದಾಖಲೆಗಳು ಪತ್ತೆಯಾಗಿವೆ. 30 ಕ್ಕೂ ಹೆಚ್ಚು ಗೋಲ್ಡ್ ಕಾಯಿನ್. ಡೈಮಂಡ್ ರಿಂಗ್ ಪತ್ತೆಯಾಗಿದೆ.ಸದ್ಯಕ್ಕೆ ಜಗನ್ನಾಥ ದಂಪತಿಗಳು ಬೆಂಗಳೂರಿನಲ್ಲಿ ವಾಸವಾಗಿದ್ದಾರೆ ಎಂದು ತಿಳಿದು ಬಂದಿದೆ.
ದಾವಣಗೆರೆ ಜಿಲ್ಲಾ ಆಹಾರ ಸುರಕ್ಷತಾ ಹಾಗೂ ಗುಣಮಟ್ಟ ಘಟಕದ ಜಿಲ್ಲಾ ಸಾಂಖಿಕ ಅಧಿಕಾರಿ ಡಾ.ಜಿ.ಎಸ್.ನಾಗರಾಜು ಅವರಿಗೆ ಸೇರಿದ ಐದು ಸ್ಥಳಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ನಗರದ ಎಸ್.ನಿಜಲಿಂಗಪ್ಪ ಬಡಾವಣೆಯ ನಾಗರಾಜು ಅವರ ಮನೆ, ತಂದೆ ಷಣ್ಮುಖಪ್ಪ ಅವರ ನಿವಾಸ, ಫಾರಂಹೌಸ್, ಕಚೇರಿ ಹಾಗೂ ಕುಟುಂಬದ ಹಿಡಿದಲ್ಲಿರುವ ಸಹಕಾರ ಸಂಘದ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಚಿನ್ನಾಭರಣ, ಹಣ ಸೇರಿ ಸಂಪತ್ತು ಪತ್ತೆಯಾಗಿದೆ.
(ವರದಿ- ಎಚ್. ಮಾರುತಿ, ಬೆಂಗಳೂರು)


