Karnataka Covid guidelines: ರಾಜ್ಯದಲ್ಲಿ ಮಾಸ್ಕ್ ಕಡ್ಡಾಯ; ಹೊಸ ವರ್ಷಾಚರಣೆಗೂ ಷರತ್ತುಗಳು ಅನ್ವಯ
“ರಾಜ್ಯದಲ್ಲಿ ಹೊಸ ವರ್ಷಾಚರಣೆಗಳು ಮಧ್ಯರಾತ್ರಿ 1 ಗಂಟೆಯೊಳಗೆ ಮುಗಿಯಬೇಕು. ಕೋವಿಡ್ ಬಗ್ಗೆ ಭಯಪಡುವ ಅಗತ್ಯವಿಲ್ಲ. ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ” ಎಂದು ಸಚಿವ ಸುಧಾಕರ್ ಹೇಳಿದ್ದಾರೆ.
ಕೋವಿಡ್ ಪ್ರಕರಣಗಳು ಹೆಚ್ಚಳವಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಕಠಿಣ ನಿಬಂಧನೆಗಳನ್ನು ಜಾರಿಗೊಳಿಸಿದೆ. ಇಂದಿನಿಂದ ಅನ್ವಯವಾಗುವಂತೆ, ಶಾಲಾ-ಕಾಲೇಜುಗಳು, ಮಾಲ್‌ಗಳು ಮತ್ತು ಚಿತ್ರಮಂದಿರಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಿದೆ. ಈ ಮಾರ್ಗಸೂಚಿಯು ತಕ್ಷಣದಿಂದಲೇ ಜಾರಿಗೆ ಬರಲಿದೆ. ಅಲ್ಲದೆ ಹೊಸ ವರ್ಷಾಚರಣೆಗೂ ಕೆಲ ನಿಯಮಗಳನ್ನು ರೂಪಿಸಿದೆ.
ಹೊಸ ವರ್ಷಾಚರಣೆ ಹತ್ತಿರ ಬರುತ್ತಿದ್ದು, ಜನರು ಸಂಭ್ರಮದಿಂದ ಹೊಸ ಕ್ಯಾಲೆಂಡರ್ ವರ್ಷದ ಸ್ವಾಗತಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಹೀಗಾಗಿ ಹೊಸ ವರ್ಷಾಚರಣೆಗೂ ಮುಂಚಿತವಾಗಿ, ರಾಜ್ಯ ಸರ್ಕಾರವು ಪಬ್‌ಗಳು, ಬಾರ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಮಾಸ್ಕ್‌ಗಳನ್ನು ಕಡ್ಡಾಯಗೊಳಿಸಿದೆ. ಈ ನಿಟ್ಟಿನಲ್ಲಿ ಮಧ್ಯರಾತ್ರಿಯ ಭಾರಿ ಸಂಭ್ರಮಕ್ಕೆ ಸಣ್ಣ ಬ್ರೇಕ್ ಹಾಕಲಾಗಿದೆ.
ಈ ಹಿನ್ನೆಲೆಯಲ್ಲಿ ತಜ್ಞರು ಮತ್ತು ಸರ್ಕಾರಿ ಅಧಿಕಾರಿಗಳೊಂದಿಗಿನ ಸಭೆಯ ಬಳಿಕ ಮಾತನಾಡಿದ ಆರೋಗ್ಯ ಸಚಿವ ಸುಧಾಕರ್, "ಚಿತ್ರ ಮಂದಿರಗಳು, ಶಾಲೆಗಳು ಮತ್ತು ಕಾಲೇಜುಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಪಬ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಬಾರ್‌ಗಳಲ್ಲಿ ಹೊಸ ವರ್ಷವನ್ನು ಆಚರಿಸುವ ಸಂದರ್ಭದಲ್ಲಿಯೂ ಮಾಸ್ಕ್ ಹಾಕಿಕೊಳ್ಳುವುದು ಕಡ್ಡಾಯ," ಎಂದು ಹೇಳಿದ್ದಾರೆ.
ಹೊಸ ವರ್ಷದ ರಾತ್ರಿಯ ಆಚರಣೆಗಳು ಮಧ್ಯರಾತ್ರಿ 1 ಗಂಟೆಗೆ ಮುಕ್ತಾಯಗೊಳ್ಳಬೇಕು ಎಂದು ಸಚಿವರು ಹೇಳಿದ್ದಾರೆ. “ರಾಜ್ಯದಲ್ಲಿ ಹೊಸ ವರ್ಷಾಚರಣೆಗಳು ಮಧ್ಯರಾತ್ರಿ 1 ಗಂಟೆಯೊಳಗೆ ಮುಗಿಯಬೇಕು. ಕೋವಿಡ್ ಬಗ್ಗೆ ಭಯಪಡುವ ಅಗತ್ಯವಿಲ್ಲ. ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ” ಎಂದು ಸಚಿವರು ಹೇಳಿದ್ದಾರೆ.
ಕರ್ನಾಟಕ ಸರ್ಕಾರವು ಈಗಾಗಲೇ ಒಳಾಂಗಣ ಮತ್ತು ಹವಾನಿಯಂತ್ರಿತ ಕೊಠಡಿಗಳಲ್ಲಿ ಫೇಸ್ ಮಾಸ್ಕ್ ಅನ್ನು ಕಡ್ಡಾಯಗೊಳಿಸಿದೆ.
ಸದ್ಯ 21 ಶೇಕಡ ಜನರಿಗೆ ಬೂಸ್ಟರ್ ಡೋಸ್ ನೀಡಲಾಗಿದೆ. ಇದನ್ನು 50 ಶೇಕಡಕ್ಕೆ ಏರಿಸಬೇಕಿದೆ. ಸರ್ಕಾರಕ್ಕೆ ಜನರ ಸಹಕಾರ ಅಗತ್ಯ. ಬೂಸ್ಟರ್ ಡೋಸ್ ಕಡ್ಡಾಯವಲ್ಲ, ಅತ್ಯವಶ್ಯಕವಾಗಿದೆ. ಈ ಮೊದಲ ಎರಡು ಡೋಸ್ ಅನ್ನೂ ನಾವು ಕಡ್ಡಾಯ ಮಾಡಿರಲಿಲ್ಲ. ಹೀಗಿದ್ದರೂ ಜನರು ಸ್ವಯಂ ಪ್ರೇರಣೆಯಿಂದ ಪಡೆದಿದರು. ಹೀಗಾಗಿ ಬೂಸ್ಟರ್ ಡೋಸ್ ಸಹ ಪಡೆಯಬೇಕು ಎಂದು ಸಚಿವ ಸುಧಾಕರ್ ಮನವಿ ಮಾಡಿದ್ದಾರೆ.
ಈ ನಡುವೆ ಚೀನಾದಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ 35 ವರ್ಷದ ವ್ಯಕ್ತಿಯ ಕೋವಿಡ್ ವರದಿ ಪಾಸಿಟಿವ್ ಬಂದಿದೆ. ಆದರೆ ಯಾವ ತಳಿ ಎಂಬುದು ಪತ್ತೆಯಾಗಿಲ್ಲ. ಸೋಂಕಿತನನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ರವಾನಿಸಿ ಐಸೋಲೇಷನ್ ಮಾಡಲಾಗಿದೆ. ಇದು ಯಾವ ತಳಿ ಎಂದು ಪತ್ತೆಹಚ್ಚಲು ವ್ಯಕ್ತಿಯ ಮಾದರಿಯನ್ನು ಜಿನೋಮಿಕ್ ಸೀಕ್ವೆನ್ಸಿಂಗ್‌ಗೆ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಸಚಿವ ಡಾ.ಸುಧಾಕರ್, ಚೀನಾದಿಂದ ಬೆಂಗಳೂರಿಗೆ ಬಂದಿದ್ದ ಆಗ್ರಾದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದಿದೆ. ಆದ್ರೆ ಯಾವ ತಳಿ ಎಂಬುದು ಇನ್ನೂ ಪತ್ತೆಯಾಗಿಲ್ಲ. ಕೊರೊನಾ ಪಾಸಿಟಿವ್ ಬಂದಾಕ್ಷಣ ಯಾರೂ ಭಯ ಪಡುವ ಅಗತ್ಯವಿಲ್ಲ. ಮುಂಜಾಗ್ರತಾ ಕ್ರಮ ತಗೆದುಕೊಂಡರೆ ಸಾಕು. ಸರ್ಕಾರ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ ಹಾಗೂ ನಮ್ಮ ಕೋವಿಡ್ ವ್ಯಾಕ್ಸಿನೇಷನ್ ಪರಿಣಾಮಕಾರಿಯಾಗಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ ಎಂದು ಹೇಳಿದರು.
ಇಂದು ಬೆಳಗ್ಗೆ ಈ ಬಗ್ಗೆ ಟ್ವೀಟ್ ಮಾಡಿದ್ದ ಸಚಿವ ಸುಧಾಕರ್, "ಡಿಸೆಂಬರ್ 24ರವರೆಗೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ 2,867 ಪ್ರಯಾಣಿಕರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಅವರಲ್ಲಿ 12 ಜನರಿಗೆ ಕೊರೊನಾ ದೃಢಪಟ್ಟಿದೆ. ರೂಪಾಂತರಗಳನ್ನು ಪತ್ತೆಹಚ್ಚಲು ಎಲ್ಲಾ 12 ಮಂದಿ ಸೋಂಕಿತರ ಮಾದರಿಯನ್ನು ಜೀನೋಮಿಕ್ ಪರೀಕ್ಷೆಗೆ ಕಳುಹಿಸಲಾಗಿದೆ" ಎಂದು ಹೇಳಿದ್ದಾರೆ.