ಮಂಗಳೂರು: ಮನೆ ಬಿಟ್ಟು ಹೋದ ಹೆಂಡತಿ; ಮದುವೆ ಬ್ರೋಕರ್‌ನನ್ನು ಹತ್ಯೆ ಮಾಡಿದ ಗಂಡ, ಆರೋಪಿಯ ಬಂಧನ
ಹೆಂಡತಿ ಮನೆ ಬಿಟ್ಟು ಹೋದ ವಿಚಾರದಲ್ಲಿ ಕೋಪಗೊಂಡ ಪತಿಯೊಬ್ಬ, ಮದುವೆ ಮಾಡಿಸಿದ ಬ್ರೋಕರ್‌ನನ್ನೇ ಹತ್ಯೆ ಮಾಡಿದ ಘಟನೆ ಮಂಗಳೂರು ಹೊರವಲಯದ ವಳಚಿಲ್‌ನಲ್ಲಿ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಮಂಗಳೂರು: ಹೆಂಡತಿ ಮನೆ ಬಿಟ್ಟು ಹೋದ ವಿಚಾರದಲ್ಲಿ ಕೋಪಗೊಂಡ ಪತಿ ಮದುವೆ ಬ್ರೋಕರ್ ನನ್ನು ಹತ್ಯೆ ಮಾಡಿದ ಘಟನೆ ನಡೆದಿದೆ. ನಗರದ ಹೊರವಲಯದ ವಳಚಿಲ್‌ನಲ್ಲಿ ಮೇ 22, 2025 ರಂದು ರಾತ್ರಿ 9:30 ಗಂಟೆ ಸುಮಾರಿಗೆ ನಡೆದ ಚಾಕು ಇರಿತದ ಘಟನೆಯಲ್ಲಿ ಸುಲೇಮಾನ್ (50) ಸಾವನ್ನಪ್ಪಿದ್ದಾರೆ. ಇವರ ಇಬ್ಬರು ಪುತ್ರರಾದ ರಿಯಾಬ್ ಮತ್ತು ಸಿಯಾಬ್ ಗಾಯಗೊಂಡಿದ್ದಾರೆ.
ಮನೆ ಬಿಟ್ಟು ಹೋದ ಹೆಂಡತಿ; ಮದುವೆ ಬ್ರೋಕರ್‌ನನ್ನು ಹತ್ಯೆ ಮಾಡಿದ ಗಂಡ
ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿರುವ ಮಾಹಿತಿಯ ಪ್ರಕಾರ, ಮೃತ ಸುಲೇಮಾನ್, ವಿವಾಹ ದಲ್ಲಾಳಿಯಾಗಿ ಕೆಲಸ ಮಾಡುತ್ತಿದ್ದರು. ಇವರು ಆರೋಪಿ ಮುಸ್ತಫಾ (30) ನಿಗೆ ಶಾಹೀನಾಜ್ ಎಂಬ ಮಹಿಳೆಯೊಂದಿಗೆ ಸುಮಾರು ಎಂಟು ತಿಂಗಳ ಹಿಂದೆ ವಿವಾಹವನ್ನು ಏರ್ಪಾಡು ಮಾಡಿದ್ದರು. ಆದರೆ, ವೈವಾಹಿಕ ಜೀವನದಲ್ಲಿ ಉಂಟಾದ ಕಲಹದಿಂದ ಶಾಹೀನಾಜ್ ಎರಡು ತಿಂಗಳ ಹಿಂದೆ ತಮ್ಮ ಮನೆಗೆ ಮರಳಿದ್ದರು. ಇದರಿಂದ ಮುಸ್ತಫಾ ಮತ್ತು ಸುಲೇಮಾನ್ ನಡುವೆ ಒಡಕು ಉಂಟಾಗಿತ್ತು.
ಗುರುವಾರ ರಾತ್ರಿ ಮುಸ್ತಫಾ ಸುಲೇಮಾನ್‌ಗೆ ಅವಾಚ್ಯ ಶಬ್ದಗಳಲ್ಲಿ ಕರೆ ಮಾಡಿದ್ದಾನೆ . ಇದಕ್ಕೆ ಪ್ರತಿಕ್ರಿಯೆಯಾಗಿ, ಸುಲೇಮಾನ್ ತಮ್ಮ ಇಬ್ಬರು ಪುತ್ರರಾದ ರಿಯಾಬ್ ಮತ್ತು ಸಿಯಾಬ್ ಜೊತೆಗೆ ವಳಚಿಲ್‌ನಲ್ಲಿರುವ ಮುಸ್ತಫಾ ಮನೆಗೆ ವಿಷಯವನ್ನು ಚರ್ಚಿಸಲು ತೆರಳಿದ್ದರು. ರಿಯಾಬ್ ಮತ್ತು ಸಿಯಾಬ್ ರಸ್ತೆಯ ಬದಿಯಲ್ಲಿ ಕಾಯುತ್ತಿದ್ದಾಗ, ಮುಸ್ತಫಾನ ಜೊತೆ ಮಾತನಾಡುವುದಕ್ಕಾಗಿ ಸುಲೇಮಾನ್ ಹೋಗಿದ್ದರು. ಆದರೆ, ಚರ್ಚೆ ಫಲಕಾರಿಯಾಗದೇ, ಹಿಂತಿರುಗಿ ಬರುವ ಸಮಯದಲ್ಲಿ, ಮುಸ್ತಫಾ ತನ್ನ ಮನೆಯಿಂದ ಕೂಗುತ್ತಾ, ಬೆದರಿಕೆಯನ್ನು ಹಾಕುತ್ತಾ ಓಡಿಬಂದು, ಚಾಕುವಿನಿಂದ ಸುಲೇಮಾನ್‌ರ ಬಲಗಡೆ ಕುತ್ತಿಗೆಗೆ ಇರಿದಿದ್ದಾನೆ. ಸುಲೇಮಾನ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಬಳಿಕ, ಮುಸ್ತಫಾ ರಿಯಾಬ್‌ನ ಬಲಗೈ ಮತ್ತು ಸಿಯಾಬ್‌ನ ಎಡಗಡೆ ಎದೆಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ. ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನು ರಾತ್ರಿ 11 ಜನಪ್ರಿಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಸುಲೇಮಾನ್ ಆಸ್ಪತ್ರೆಗೆ ತಲುಪುವ ಮೊದಲೇ ಮೃತಪಟ್ಟಿದ್ದಾರೆ . ರಿಯಾಬ್ ಮತ್ತು ಸಿಯಾಬ್ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ದೂರಿನ ಆಧಾರದ ಮೇಲೆ, ಮಂಗಳೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS), 2023 ರ ಸೆಕ್ಷನ್ 103(1), 109(1), 118(1), 351(2), 351(3), ಮತ್ತು 352 ರ ಅಡಿಯಲ್ಲಿ ಕ್ರೈಂ ಸಂಖ್ಯೆ 41/2025 ದಾಖಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ. ಆರೋಪಿ ಮುಸ್ತಫಾನನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ.
(ವರದಿ- ಹರೀಶ್ ಮಾಂಬಾಡಿ, ಮಂಗಳೂರು)