Micro Finance: ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್‌ಗಳಿಗೆ ಕಡಿವಾಣ, ಪ್ರತಿ ಜಿಲ್ಲೆಯಲ್ಲೂ ಕೆಎಎಸ್ ಅಧಿಕಾರಿಯೇ ಒಂಬುಡ್ಸ್‌ಮನ್
Micro Finance: ಮೈಕ್ರೋ ಫೈನಾನ್ಸ್‌ಗಳ ಕೆಲವರ ನಡವಳಿಕೆಯಿಂದ ಕರ್ನಾಟಕದಲ್ಲಿ ಸೃಷ್ಟಿಯಾಗಿರುವ ಭಯದ ವಾತಾವರಣ ಕಡಿಮೆ ಮಾಡಲು ಸರ್ಕಾರವು ಕಾನೂನು ಬಿಗಿಗೊಳಿಸಲು ಮುಂದಾಗಿದೆ. ಅಲ್ಲದೇ ಪ್ರತೀ ಜಿಲ್ಲೆಯಲ್ಲಿ ಒಂಬುಡ್ಸ್‌ಮನ್ ನೇಮಿಸಲಿದೆ.

ಬೆಂಗಳೂರು: ನಿಮ್ಮ ಊರುಗಳಲ್ಲಿ ಮೈಕ್ರೋ ಫೈನಾನ್ಸ್ ಹೆಸರಿನಲ್ಲಿ ತೊಂದರೆ ಕೊಡಲಾಗುತ್ತಿದೆಯೇ, ಬೆದರಿಕೆ ಹಾಕುವುದು, ಮನೆ ಜಪ್ತಿಗೆ ಅಕ್ರಮವಾಗಿ ಪ್ರಯತ್ನಿಸುತ್ತಿದ್ದರೆ ಅಂತಹವರ ವಿರುದ್ದ ಕಠಿಣ ಕ್ರಮಕ್ಕೆ ಕರ್ನಾಟಕ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಪ್ರತಿ ಜಿಲ್ಲೆಯಲ್ಲೂ ಅಪರ ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಒಂಬುಡ್ಸ್‌ಮನ್ ನೇಮಕ ಮಾಡಲಾಗುತ್ತಿದೆ. ಕಿರುಕುಳ ನೀಡಿದರೆ ಇಲ್ಲವೇ ತೊಂದರೆ ಕೊಟ್ಟರೆ ಕೂಡಲೇ ಒಂಬುಡ್ಸ್‌ಮನ್‌ಗೆ ದೂರು ನೀಡಿದರೆ ಅವರು ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಿದ್ದಾರೆ. ಇದಲ್ಲದೇ ಮೈಕ್ರೋಫೈನಾನ್ಸ್‌ಗಳ ಕಾರ್ಯವೈಖರಿ ಹೇಗಿರಬೇಕು ಎನ್ನುವ ಹಲವಾರು ಸೂಚನೆಗಳನ್ನು ಕರ್ನಾಟಕ ಸರ್ಕಾರ ನೀಡಿದೆ. ಸದ್ಯವೇ ಕಠಿಣ ಕಾನೂನು ರಚನೆಗೆ ಸುಗ್ರಿವಾಜ್ಞೆಯನ್ನು ಕೂಡ ಹೊರಡಿಸಲಾಗುತ್ತಿದೆ.
ಬೆಂಗಳೂರಿನಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಹಾಗೂ ಕಂದಾಯ ಸಚಿವ ಕೃಷ್ಣಬೈರೇಗೌಡ ಹಾಗೂ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ನೇತೃತ್ವದಲ್ಲಿ ನಡೆದ ಸಮಿತಿ ಸಭೆಯಲ್ಲಿ ಹಲವಾರು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಮೈಕ್ರೋ ಫೈನಾನ್ಸ್ ಗಳ ಆಟಾಟೋಪಗಳಿಗೆ ಕಡಿವಾಣ ಹಾಕಲು ಹೊಸ ಕಾನೂನು ರೂಪಿಸುವ ನಿಟ್ಟಿನಲ್ಲಿ ನಡೆದ ಮಹತ್ವದ ಸಭೆಯಲ್ಲಿ ಪ್ರಮುಖ ಸೂಚನೆಗಳನ್ನೂ ನೀಡಲಾಯಿತು.
ಮೈಕ್ರೋ ಫೈನಾನ್ಸ್‌ಗಳು ನೀಡುವ ಸಾಲದ ಎಲ್ಲಾ ವಿವರಗಳನ್ನು ಪತ್ತೆಹಚ್ಚುವ ಜತೆಗೆ ನವೀಕರಿಸಲು ಪೂರಕವಾಗಿ ಆನ್‌ಲೈನ್ ಪೋರ್ಟಲ್ ಅನ್ನು ರೂಪಿಸುವದಕ್ಕೆ ಸೂಚಿಸಲಾಯಿತು. ಈ ರೀತಿಯ ಆರ್ಥಿಕ ವಹಿವಾಟಿನಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸುವುದು ಮತ್ತು ಬಡವರನ್ನು ಸಾಲದ ಸುಳಿಗಳಲ್ಲಿ ಸಿಲುಕಿಸುವ ಚಕ್ರ ಬಡ್ಡಿ ಸಾಲವನ್ನು ತಡೆಗಟ್ಟುವುದು ಸೇರಿದಂತೆ ಹಲವಾರು ಪ್ರಮುಖ ವಿಚಾರಗಳ ಕುರಿತು ಸಚಿವರ ಸಭೆಯಲ್ಲಿ ಚರ್ಚೆಗಳು ನಡೆದವು.
ಸಭೆಯಲ್ಲಿ ಕೈಗೊಂಡ ನಿರ್ಧಾರಗಳು ಹೀಗಿವೆ.
1. ಈ ಸಭೆಯಲ್ಲಿ ಸಾಮರ್ಥ್ಯಕ್ಕಿಂತ ಅಧಿಕ ಸಾಲ ನೀಡುವ ಮೂಲಕ ಬಡವರನ್ನ ಸಾಲದ ಸುಳಿಗೆ ಸಿಲುಕಿಸುತ್ತಿರುವ ಹುನ್ನಾರವನ್ನು ತಡೆಯಲು ಆನ್‌ಲೈನ್ ಪೋರ್ಟಲ್ ಮಾಡಿ ಯಾರಿಗೆ ಎಷ್ಟು ಸಾಲ ನೀಡಲಾಗಿದೆ ಎಂದು ಅಪ್ಡೇಟ್ ಮಾಡಬೇಕು.
2. ಸಾಲಕ್ಕಾಗಿ ಅರ್ಜಿ ಸಲ್ಲಿಕೆ ಹಾಗೂ ಸಾಲ ನೀಡುವ ಸಂಪೂರ್ಣ ಪ್ರಕ್ರಿಯೆಯನ್ನು ಆನ್ಲೈನ್ ಮೂಲಕವೇ ನಿಭಾಯಿಸಬೇಕು.
3. ಸಾಲಕ್ಕೆ ವಿಧಿಸುವ ಬಡ್ಡಿ ದರದ ಪ್ರಮಾಣ ಪಾರದರ್ಶಕ ಹಾಗೂ ಆರ್‌ಬಿಐ ನೀತಿಗೆ ಅನುಗುಣವಾಗಿರಬೇಕು.
4. ಮೈಕ್ರೋ ಫೈನಾನ್ಸ್ ಕಂಪೆನಿಗಳು ಕಡ್ಡಾಯವಾಗಿ ರಾಜ್ಯದಲ್ಲಿ ನೋಂದಣಿಯಾಗಿರಬೇಕು.
5. ಯಾವುದೇ ಸಂದರ್ಭದಲ್ಲಿ ಈ ನೋಂದಣಿಯನ್ನ ಸರ್ಕಾರ ತಿರಸ್ಕರಿಸಬದುದು
6. ಮೈಕ್ರೋ ಫೈನಾನ್ಸ್ ಕಂಪೆನಿಗಳ ವ್ಯವಹಾರವನ್ನ ವಿಚಾರಣೆಗೆ ಪ್ರತಿ ಜಿಲ್ಲೆಯಲ್ಲಿ ಅಪರ ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಒಳಗೊಂಡ ಒಂಬುಡ್ಸ್‌ಮನ್ ನೇಮಕ ಮಾಡಬೇಕು.
7. ಈ ಕಂಪೆನಿಗಳು ಸಾಲದ ಹೆಸರಲ್ಲಿ ಬಡ ಜನರಿಂದ ಯಾವ ವಸ್ತುಗಳು-ಆಸ್ತಿಗಳನ್ನು ಅಡಮಾನ ಇಡಿಸಿಕೊಳ್ಳುವಂತಿಲ್ಲ.
8. ಸಾಲ ಮರುಪಾವತಿ ಮಾಡದವರ ವಿರುದ್ಧ ಮಧ್ಯವರ್ತಿಗಳ ಮೂಲಕ ದಬ್ಬಾಳಿಕೆ ಮಾಡುವಂತಿಲ್ಲ ಎಂಬುದೂ ಸೇರಿದಂತೆ ಹಲವು ಪ್ರಮುಖ ವಿಚಾರಗಳನ್ನು ಕಾನೂನಿನ ಚೌಕಟ್ಟಿನೊಳಗೆ ತರುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
