ಕರ್ನಾಟಕ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಗೆ ಸಹಿ ಹಾಕಿದ್ರು ರಾಜ್ಯಪಾಲ ಗೆಹ್ಲೋಟ್, ಕಿರು ಸಾಲ ಕಿರುಕುಳ ತಡೆಗೆ ಬಲ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಗೆ ಸಹಿ ಹಾಕಿದ್ರು ರಾಜ್ಯಪಾಲ ಗೆಹ್ಲೋಟ್, ಕಿರು ಸಾಲ ಕಿರುಕುಳ ತಡೆಗೆ ಬಲ

ಕರ್ನಾಟಕ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಗೆ ಸಹಿ ಹಾಕಿದ್ರು ರಾಜ್ಯಪಾಲ ಗೆಹ್ಲೋಟ್, ಕಿರು ಸಾಲ ಕಿರುಕುಳ ತಡೆಗೆ ಬಲ

Karnataka Micro Finance Ordinance 2025: ಕರ್ನಾಟಕ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಇಂದು (ಫೆ 12) ಸಹಿ ಹಾಕಿದರು. ಇದರೊಂದಿಗೆ, ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗೆ ಕರ್ನಾಟಕ ಸರ್ಕಾರ ಮಹತ್ವದ ಕ್ರಮಕ್ಕೆ ಅವಕಾಶ ಸಿಕ್ಕಿದಂತಾಗಿದೆ.

ಕರ್ನಾಟಕ ಕಿರು ಸಾಲ ಸುಗ್ರೀವಾಜ್ಞೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಇಂದು (ಫೆ 12) ಸಹಿ ಹಾಕಿದರು,. (ಸಾಂಕೇತಿಕ ಚಿತ್ರ)
ಕರ್ನಾಟಕ ಕಿರು ಸಾಲ ಸುಗ್ರೀವಾಜ್ಞೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಇಂದು (ಫೆ 12) ಸಹಿ ಹಾಕಿದರು,. (ಸಾಂಕೇತಿಕ ಚಿತ್ರ)

Karnataka Micro Finance Ordinance 2025: ಮಹತ್ವದ ಬೆಳವಣಿಗೆಯೊಂದರಲ್ಲಿ ಕರ್ನಾಟಕ ಸರ್ಕಾರ ರಾಜಭವನಕ್ಕೆ ಕಳುಹಿಸಿದ್ದ ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗೆ ಸಂಬಂಧಿಸಿದ ಕರ್ನಾಟಕ ಮೈಕ್ರೋ ಫೈನಾನ್ಸ್‌ ಸುಗ್ರೀವಾಜ್ಞೆ 2025ಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸಹಿ ಹಾಕಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ವಿವರಣೆ ಕೋರಿ ಮೈಕ್ರೋ ಫೈನಾನ್ಸ್‌ ಕಿರುಕುಳ ತಡೆಗೆ ಸಂಬಂಧಿಸಿದ ಸುಗ್ರೀವಾಜ್ಞೆಯನ್ನು ಕಳೆದ ವಾರ ವಾಪಸ್ ಕಳುಹಿಸಿದ್ದರು. ಬಳಿಕ ರಾಜ್ಯ ಸರ್ಕಾರ ಆ ವಿವರಣೆಗಳೊಂದಿಗೆ ಸುಗ್ರೀವಾಜ್ಞೆಯನ್ನು ಮತ್ತೆ ರಾಜಭವನಕ್ಕೆ ಕಳುಹಿಸುತ್ತಿ. ಇದೀಗ, ಆ ಸುಗ್ರೀವಾಜ್ಞೆಗೆ ರಾಜ್ಯಪಾಲರು ಸಹಿ ಹಾಕಿದ್ದಾರೆ.

ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ (ಒತ್ತಡ ತಂತ್ರಗಳ ನಿಷೇಧ) ಸುಗ್ರೀವಾಜ್ಞೆ- 2025

ಮೈಕ್ರೋ ಫೈನಾನ್ಸ್ ಕಂಪನಿಗಳು, ಲೇವಾದೇವಿದಾರರು, ಖಾಸಗಿ ವ್ಯಕ್ತಿಗಳು ಸಾಲಗಾರರಿಂದ ಬಲವಂತದ ಸಾಲ ವಸೂಲಿ ಮತ್ತು ಸಾಲ ಪಡೆದವರಿಗೆ ಕಿರುಕುಳ ತಪ್ಪಿಸುವ ಉದ್ದೇಶದಿಂದ ರೂಪಿಸಿದ ‘ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ (ಒತ್ತಡ ತಂತ್ರಗಳ ನಿಷೇಧ) ಸುಗ್ರೀವಾಜ್ಞೆ- 2025’ಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ ವಿಸ್ತೃತ ಸ್ಪಷ್ಟಿಕರಣಗಳನ್ನು ರಾಜ್ಯಪಾಲರಿಗೆ ನೀಡಿತ್ತು.

'ಸಹಜ ನ್ಯಾಯ ಹಾಗೂ ಸಾಲ ನೀಡುವವರ ಮೂಲಭೂತ ಹಕ್ಕುಗಳಿಗೆ ಸುಗ್ರೀವಾಜ್ಞೆಯ ಅಂಶಗಳು ವಿರುದ್ಧವಾಗಿದೆ ಎಂದು ಹಲವು ಆಕ್ಷೇಪಗಳೊಂದಿಗೆ ವಿವರಣೆ ಕೋರಿ ರಾಜ್ಯಪಾಲರು ಫೆ. 7ರಂದು ಸರ್ಕಾರಕ್ಕೆ ಹಿಂದಿರುಗಿಸಿದ್ದರು. ರಾಜ್ಯಪಾಲರ ಆಕ್ಷೇಪಣೆಗಳಿಗೆ ಕಾನೂನು ಇಲಾಖೆ ಸಮರ್ಥನೆ ಸಿದ್ಧಪಡಿಸಿ, ಸ್ಪಷ್ಟಿಕರಣಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಳುಹಿಸಿತ್ತು. ಅವರು ಅದನ್ನು ಅನುಮೋದಿಸಿದ್ದರು. ಸುಗ್ರೀವಾಜ್ಞೆಯು ವ್ಯಕ್ತಿ ಮೂಲಭೂತ ಹಕ್ಕನ್ನು ನಿರ್ಬಂಧಿಸುವುದಿಲ್ಲ, ಸಾಲದಾತರ ಹಿತಾಸಕ್ತಿಯನ್ನು ನಿರ್ಲಕ್ಷಿಸಿಲ್ಲ ಹಾಗೂ ಸಾಲ ವಸೂಲಾತಿಯನ್ನು ನಿರ್ಬಂಧಿಸುವುದಿಲ್ಲ ಎಂದು ಸಚಿವ ಎಂಬಿ ಪಾಟೀಲ್ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ವಿವರಣೆ ನೀಡಿದರು.

ಸುಗ್ರೀವಾಜ್ಞೆ ಸಂಬಂಧಿಸಿದ ಸ್ಪಷ್ಟೀಕರಣದಲ್ಲಿ ಏನಿತ್ತು

ಕಿರುಬಂಡವಾಳ ಸಂಸ್ಥೆಗಳು (ಎಂಎಫ್‌ಐ) ಕಿರುಕುಳ ನೀಡಿದ ನಂತರ ಒಂದು ಡಜನ್‌ಗಿಂತಲೂ ಹೆಚ್ಚು ಜನ ಆತ್ಮಹತ್ಯೆ ಮಾಡಿಕೊಂಡ ಕಾರಣ, ಸಣ್ಣ ಸಾಲಗಾರರ ಹಿತಾಸಕ್ತಿಗಳನ್ನು ರಕ್ಷಿಸಲು ಶಾಸನವನ್ನು ಜಾರಿಗೆ ತರಲು ಸರ್ಕಾರವು ಸುಗ್ರೀವಾಜ್ಞೆ ಮಾರ್ಗವನ್ನು ಆಯ್ಕೆ ಮಾಡಿಕೊಂಡಿತು. ಆದಾಗ್ಯೂ, ರಾಜ್ಯಪಾಲರು ಕಳೆದ ಶುಕ್ರವಾರ ಸುಗ್ರೀವಾಜ್ಞೆಯನ್ನು ಹಿಂದಿರುಗಿಸಿದ್ದರು, ಇದು ಸಾಲಗಾರರಿಗೆ ಮಾತ್ರ ರಕ್ಷಣೆ ನೀಡುತ್ತಿದೆ. ಸಾಲ ನೀಡಿದವರಿಗೆ ಯಾವುದೇ ರಕ್ಷಣೆ ಇಲ್ಲ ಎಂದು ಸೂಚಿಸಿ, ಸ್ಪಷ್ಟೀಕರಣ ನೀಡುವಂತೆ ಹೇಳಿ ಹಿಂದಿರುಗಿಸಿದ್ದರು.

ನೋಂದಾಯಿಸದೇ ಇರುವ ಮತ್ತು ಸಾಲ ನೀಡಲು ಪರವಾನಗಿ ಹೊಂದಿರದ ಯಾವ ವ್ಯಕ್ತಿಯೂ ಯಾರಿಗೂ ಸಾಲ ಕೊಡುವ ಹಾಗೂ ಹೆಚ್ಚಿನ ಬಡ್ಡಿ ಮತ್ತು ಚಕ್ರಬಡ್ಡಿ ಅಥವಾ ದಂಡದ ಬಡ್ಡಿ ವಿಧಿಸುವಂತಹ ಅಧಿಕಾರ ಹೊಂದಿರುವುದಿಲ್ಲ. ಸಾಲವನ್ನು ಖಾಸಗಿಯಾಗಿ, ಪರವಾನಗಿ ಪಡೆಯದೆ ನೀಡಿ ಹೆಚ್ಚಿನ ಬಡ್ಡಿ ವಸೂಲಿ ಮಾಡಿದರೆ ಅದು ಅಕ್ರಮ. ಅಂತಹ ಸಾಲವು ವಸೂಲಿಗೆ ಅರ್ಹವೂ ಅಲ್ಲ, ಯೋಗ್ಯವೂ ಅಲ್ಲ ಎಂದೂ ರಾಜ್ಯಪಾಲರಿಗೆ ನೀಡಿರುವ ಸ್ಪಷ್ಟಿಕರಣದಲ್ಲಿ ಕರ್ನಾಟಕ ಸರ್ಕಾರ ವಿವರಿಸಿತ್ತು.

ಕಾನೂನು ಪ್ರಕಾರ ನೋಂದಾಯಿತ ಸಂಸ್ಥೆ ಅಥವಾ ವ್ಯಕ್ತಿಗಳು ನಿಯಮಾನುಸಾರ ನಿಜವಾಗಿ ಸಾಲ ನೀಡಿದವರು ವಸೂಲಿ ಮಾಡಬಾರದು ಅಥವಾ ಅಂತಹ ಸಾಲಗಳು ವಸೂಲಿಗೆ ಅರ್ಹವಲ್ಲ ಎಂದು ಎಲ್ಲೂ ಹೇಳಿಲ್ಲ. ಕೇವಲ ಸಾಲ ವಸೂಲಾತಿ ಮಾಡಲು ಕಾನೂನು ಬಾಹಿರ ಕ್ರಮಗಳನ್ನು ಅನುಸರಿಸುವುದು, ಸಾಲಗಾರರಿಗೆ ಹಿಂಸೆ ಮಾಡುವುದು ಮತ್ತು ಒತ್ತಡ ತಂತ್ರ ಹೇರುವುದು ಹಾಗೂ ಕಿರುಕುಳಕ್ಕೆ ಕಾರಣವಾಗುವುದನ್ನು ತಡೆಯುವುದಕ್ಕಾಗಿ ಈ ಸುಗ್ರೀವಾಜ್ಞೆ ಜಾರಿಗೊಳಿಸುತ್ತಿರುವುದಾಗಿ ಕರ್ನಾಟಕ ಸರ್ಕಾರ ರಾಜ್ಯಪಾಲರಿಗೆ ಸ್ಪಷ್ಟೀಕರಣ ನೀಡಿದೆ. ಈ ಸುಗ್ರೀವಾಜ್ಞೆಯ ಅಂಶಗಳು ಈ ಸಲದ ಕರ್ನಾಟಕ ಬಜೆಟ್ ಅಧಿವೇಶನದಲ್ಲಿ ಚರ್ಚೆಯಾಗಲಿದೆ.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
Whats_app_banner