ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ; ಕಾನೂನು ಉಲ್ಲಂಘಿಸಿದರೆ ಗರಿಷ್ಠ 3 ಅಲ್ಲ 10 ವರ್ಷ ಜೈಲು ಶಿಕ್ಷೆ, 10 ಮುಖ್ಯ ಅಂಶಗಳಿವು
Karnataka Microfinance Law: ಕರ್ನಾಟಕದ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಯ ಕರಡು ಅಂತಿಮಗೊಳಿಸಿ ರಾಜ್ಯಪಾಲ ಥಾವರ್‌ಚಂದ ಗೆಹ್ಲೋಟ್ ಅವರ ಅನುಮೋದನೆಗೆ ಕಳುಹಿಸಿದೆ. ಇಂದು ಅಥವಾ ನಾಳೆ (ಫೆ 5) ಈ ಸುಗ್ರೀವಾಜ್ಞೆ ಆದೇಶಕ್ಕೆ ರಾಜ್ಯಪಾಲರು ಸಹಿ ಹಾಕುವ ಸಾಧ್ಯತೆ ಇದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. 10 ಮುಖ್ಯ ಅಂಶಗಳ ವಿವರ ಇಲ್ಲಿದೆ.

Karnataka Microfinance Law: ಕರ್ನಾಟಕದಲ್ಲಿ ಹೆಚ್ಚಾಗಿರುವ ಮೈಕ್ರೋ ಫೈನಾನ್ಸ್ ಸಾಲ ವಸೂಲಾತಿ ಅಕ್ರಮ ತಡೆಯಲು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಲು ಮುಂದಾಗಿದೆ. ಈಗಾಗಲೇ ಸುಗ್ರೀವಾಜ್ಞೆಯ ಕರಡು ಅಂತಿಮಗೊಳಿಸಿ ರಾಜ್ಯಪಾಲ ಥಾವರ್‌ಚಂದ ಗೆಹ್ಲೋಟ್ ಅವರ ಅನುಮೋದನೆಗೆ ಕಳುಹಿಸಿದೆ. ಇಂದು ಅಥವಾ ನಾಳೆ (ಫೆ 5) ಈ ಸುಗ್ರೀವಾಜ್ಞೆ ಆದೇಶಕ್ಕೆ ರಾಜ್ಯಪಾಲರು ಸಹಿ ಹಾಕುವ ಸಾಧ್ಯತೆ ಇದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಪ್ರಸ್ತಾವಿತ ಸುಗ್ರೀವಾಜ್ಞೆಯಲ್ಲಿ ಮೈಕ್ರೋ ಫೈನಾನ್ಸ್ ಕಾನೂನು ಉಲ್ಲಂಘನೆಗೆ ಜೈಲು ಶಿಕ್ಷೆಯನ್ನು 3 ವರ್ಷ ಇದ್ದದ್ದನ್ನು 10 ವರ್ಷಕ್ಕೆ ಹೆಚ್ಚಿಸಲಾಗಿದೆ. ದಂಡವನ್ನು 5 ಲಕ್ಷ ರೂಪಾಯಿಗೆ ಏರಿಸಲಾಗಿದೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ಕೆ ಪಾಟೀಲ್ ನೇತೃತ್ವದ ತಜ್ಞರ ಸಮಿತಿ ಶಿಕ್ಷೆ ಪ್ರಮಾಣ ಹೆಚ್ಚಿಸಲು ಶಿಫಾರಸು ಮಾಡಿತು ಎಂದು ಮೂಲಗಳು ಹೇಳಿವೆ.
ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗೆ ಸುಗ್ರೀವಾಜ್ಞೆ; 10 ಮುಖ್ಯ ಅಂಶಗಳಿವು
1) ನೋಂದಣಿ ಆಗದ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾಲ ವಸೂಲಿಗೆ ಯಾವುದೇ ರೀತಿಯಲ್ಲೂ ಸಾಲಗಾರರ ಮೇಲೆ ಸಾಲ ಮರುಪಾವತಿ ಮಾಡುವಂತೆ ಒತ್ತಡ ಹಾಕುವಂತಿಲ್ಲ. ಸಾಲ ವಸೂಲಿ ಮಾಡಲು ಹೋದವರು ಕಿರುಕುಳ ನೀಡಿದ್ದು ಸಾಬೀತಾದರೆ ಅಂಥವರಿಗೆ ಗರಿಷ್ಠ 10 ವರ್ಷ ಜೈಲು ಶಿಕ್ಷೆಯಾಗಲಿದೆ.
2) ಸಾಲಗಾರರು ಮತ್ತು ಸಾಲ ನೀಡಿದವರ ನಡುವಿನ ವ್ಯಾಜ್ಯಗಳನ್ನು ಪರಿಹರಿಸಲು ಓಂಬುಡ್ಸ್‌ಮನ್ ನೇಮಕ ಮಾಡುವುದಕ್ಕೆ ಸರ್ಕಾರಕ್ಕೆ ಅವಕಾಶ ಇರಲಿದೆ.
3) ಸಾಲ ವಸೂಲಿ ಮಾಡುವುದಕ್ಕಾಗಿ ಸಾಲಗಾರರಿಗೆ ಅವಮಾನ, ಹಿಂಸೆ, ಹಲ್ಲೆ, ಬಲವಂತವಾಗಿ ಆಸ್ತಿ, ದಾಖಲೆಗಳನ್ನು ಕಿತ್ತುಕೊಂಡರೆ ಶಿಕ್ಷೆ, ದಂಡಕ್ಕೆ ಅವಕಾಶ ದಬ್ಬಾಳಿಕೆ, ದೌರ್ಜನ್ಯ, ಗೂಂಡಾಗಳು, ಬಾಡಿಗೆ ವ್ಯಕ್ತಿಗಳ ಬಳಕೆ, ಮನೆಗೆ ಭೇಟಿ ನೀಡುವುದು, ದಿನದ ಕೆಲಸಕ್ಕೆ ಕಿರುಕುಳ ನೀಡಿದರೆ ಅಂತಹ ಕಂಪನಿಗಳ ಲೈಸನ್ಸ್ ರದ್ದು
4) ಮೈಕ್ರೋ ಫೈನಾನ್ಸ್ ಸ್ಥಳೀಯವಾಗಿ ಕಚೇರಿ ಹೊಂದಿರಬೇಕು. ಗ್ರಾಹಕರಿಂದ ಸ್ವೀಕರಿಸಿದ ಹಣಕ್ಕೆ ಸಹಿ ಮಾಡಿದ ರಸೀದಿ ಹೊಂದಿರಬೇಕಾದ್ದು ಕಡ್ಡಾಯವಾಗಿರುತ್ತದೆ.
5) ಸಾಲ ಪಡೆದವರು ಬಡ್ಡಿ, ಕಂತು ಪಾವತಿ, ಇನ್ನಿತರ ವಿವರಗಳನ್ನು ಕೇಳಿದಾಗ ಕಂಪನಿಗಳು ಒದಗಿಸಬೇಕು
6) ಮೈಕ್ರೋ ಫೈನಾನ್ಸ್ ಕಂಪನಿಗಳ ಮೇಲ್ವಿಚಾರಣೆ ಪ್ರಾಧಿಕಾರದ ಹೊಣೆಗಾರಿಕೆ ಜಿಲ್ಲಾಧಿಕಾರಿಗಳದ್ದು, ಅವರಿಗೆ ಬೇರೆ ಅಧಿಕಾರಿಗಳನ್ನೂ ನೇಮಿಸುವ ಅಧಿಕಾರವೂ ಇರುತ್ತದೆ.
7) ಸಕಾರಣಗಳು ಇದ್ದರೆ ಅಂತಹ ಸಂದರ್ಭದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಯ ಲೈಸನ್ಸ್ ರದ್ದುಗೊಳಿಸು ವಂತೆ ಆರ್‌ಬಿಐಗೆ ಶಿಫಾರಸ್ಸು ಮಾಡಲು ಪ್ರಾಧಿಕಾರಕ್ಕೆ ಅವಕಾಶ ಇರಲಿದೆ.
8) ಗ್ರಾಹಕರಿಗೆ ವಿಧಿಸುವ ಬಡ್ಡಿ ದರ ಎಷ್ಟು ಎಂಬುದನ್ನು ಸ್ಪಷ್ಟವಾಗಿ ಮೈಕ್ರೋ ಫೈನಾನ್ಸ್ ಕಂಪನಿಗಳು ತಮ್ಮ ಕಚೇರಿ ಫಲಕದಲ್ಲಿ ಪ್ರದರ್ಶಿಸಬೇಕು. ಗ್ರಾಹಕರೊಂದಿಗೆ ಪತ್ರ, ಮೌಖಿಕವಾಗಿ ಕನ್ನಡದಲ್ಲಿ ವ್ಯವಹರಿಸಬೇಕು.
9) ಲೈಸನ್ಸ್ ರಹಿತ ಸಂಸ್ಥೆಗಳು ಸಾಲ ವಸೂಲಿಗೆ ಕಿರುಕುಳ ನೀಡಿದರೆ ಅಂತಹ ಸನ್ನಿವೇಶದಲ್ಲಿ ಗ್ರಾಹಕರು ಪರಿಹಾರ ಪಡೆಯಬಹುದು. ಅದೇ ರೀತಿ, ಸಾಲಮುಕ್ತರಾಗಿಸುವಂತೆ ಕೋರಬಹುದು
10) 3 ತಿಂಗಳಿಗೊಮ್ಮೆ ಸಾಲ ಪಡೆದವರು, ಸಾಲ ವಿತರಣೆ ಮೊತ್ತ ಮತ್ತು ಬಡ್ಡಿ ವಿವರ ಪ್ರಾಧಿಕಾರಕ್ಕೆ ಒದಗಿಸಬೇಕು ಈ ನಿಯಮವನ್ನು ಪಾಲಿಸದಿದ್ದರೆ ಸಂಸ್ಥೆಯವರಿಗೆ ಆರು ತಿಂಗಳವರೆಗೆ ಜೈಲು ಶಿಕ್ಷೆ ಮತ್ತು 10 ಸಾವಿರ ರೂಪಾಯಿ ದಂಡ ವಿಧಿಸಲು ಸುಗ್ರೀವಾಜ್ಞೆಯಲ್ಲಿ ಅವಕಾಶ ನೀಡಲಾಗಿದೆ.
ರಾಜ್ಯಪಾಲರ ಸಹಿಗಾಗಿ ಕಾಯುತ್ತಿದೆ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ
ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಸೋಮವಾರ ಬೆಂಗಳೂರಿನಲ್ಲಿ ಉಪಸ್ಥಿತರಿರಲಿಲ್ಲ. ಮಂಗಳವಾರ (ಫೆ.5) ನಗರಕ್ಕೆ ವಾಪಸಾಗಲಿದ್ದು, ಬಹುತೇಕ ಮಂಗಳವಾರ ಅಥವಾ ಬುಧವಾರ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಗೆ ರಾಜ್ಯಪಾಲರ ಸಹಿ ಬೀಳುವ ಸಾಧ್ಯತೆಯಿದೆ. ಹೀಗಾಗಿ, ರಾಜ್ಯಪಾಲರು ಯಾವುದೇ ಸ್ಪಷ್ಟನೆ ಕೇಳದಿದ್ದರೆ ಶೀಘ್ರ ಸುಗ್ರೀವಾಜ್ಞೆ ಜಾರಿಯಾಗಲಿದೆ ಎಂದು ಕರ್ನಾಟಕ ಸರ್ಕಾರದ ಮೂಲಗಳು ತಿಳಿಸಿವೆ.
