Honey Trap: ಸಿಐಡಿಗೆ ಸಚಿವ ಕೆಎನ್‌ ರಾಜಣ್ಣ ಮಧುಬಲೆ ಯತ್ನ ಪ್ರಕರಣ ತನಿಖೆ ಹೊಣೆ: ಗೃಹ ಇಲಾಖೆಯಿಂದ ಅಧಿಕೃತ ಆದೇಶ
ಕನ್ನಡ ಸುದ್ದಿ  /  ಕರ್ನಾಟಕ  /  Honey Trap: ಸಿಐಡಿಗೆ ಸಚಿವ ಕೆಎನ್‌ ರಾಜಣ್ಣ ಮಧುಬಲೆ ಯತ್ನ ಪ್ರಕರಣ ತನಿಖೆ ಹೊಣೆ: ಗೃಹ ಇಲಾಖೆಯಿಂದ ಅಧಿಕೃತ ಆದೇಶ

Honey Trap: ಸಿಐಡಿಗೆ ಸಚಿವ ಕೆಎನ್‌ ರಾಜಣ್ಣ ಮಧುಬಲೆ ಯತ್ನ ಪ್ರಕರಣ ತನಿಖೆ ಹೊಣೆ: ಗೃಹ ಇಲಾಖೆಯಿಂದ ಅಧಿಕೃತ ಆದೇಶ

Honey Trap: ಸಚಿವ ಕೆ.ಎನ್‌.ರಾಜಣ್ಣ ಅವರನ್ನು ಮಧುಬಲೆಗೆ ಕೆಡವುವ ಪ್ರಯತ್ನಕ್ಕೆ ಸಂಬಂಧಿಸಿದ ದೂರಿನ ಹಿನ್ನೆಲೆಯಲ್ಲಿ ಸಿಐಡಿ ತನಿಖೆಗೆ ಸೂಚನೆ ನೀಡಲಾಗಿದೆ.

ಸಚಿವ ಕೆಎನ್‌ ರಾಜಣ್ಣ ಅವರ ಮಧುಬಲೆ ಪ್ರಕರಣವನ್ನು ಸಿಐಡಿ ತನಿಖೆ ಮಾಡಲಿದೆ.
ಸಚಿವ ಕೆಎನ್‌ ರಾಜಣ್ಣ ಅವರ ಮಧುಬಲೆ ಪ್ರಕರಣವನ್ನು ಸಿಐಡಿ ತನಿಖೆ ಮಾಡಲಿದೆ.

Honey Trap: ಕರ್ನಾಟಕದಲ್ಲಿ ಭಾರೀ ಸದ್ದು ಮಾಡಿರುವ ಸಹಕಾರ ಸಚಿವ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌.ರಾಜಣ್ಣ ಹಾಗೂ ಅವರ ಪುತ್ರ ರಾಜೇಂದ್ರ ರಾಜಣ್ಣ ಅವರನ್ನು ಮಧುಬಲೆ( ಹನಿ ಟ್ರ್ಯಾಪ್‌)ಗೆ ಸಿಲುಕಿಸುವ ಪ್ರಯತ್ನದ ಪ್ರಕರಣವನ್ನು ಕೇಂದ್ರ ತನಿಖಾ ದಳ(ಸಿಐಡಿ)ಗೆ ಒಪ್ಪಿಸಲಾಗಿದೆ. ಈ ಸಂಬಂಧ ಕರ್ನಾಟಕ ಗೃಹ ಸಚಿವಾಲಯವು ಅಧಿಕೃತ ಆದೇಶವನ್ನು ಹೊರಡಿಸಿದೆ. ತಮ್ಮನ್ನು ಮಧುಬಲೆಗೆ ಸಿಲುಕಿಸಲು ಹಲವರು ಪ್ರಯತ್ನಿಸಿದ್ದರು. ಎರಡು ಮೂರು ಬಾರಿ ಕಚೇರಿ, ಅತಿಥಿಗೃಹಕ್ಕೂ ಕೆಲವರು ಬಂದಿದ್ದರು. ಇದರ ಹಿಂದೆ ದುರುದ್ದೇಶವಿರಬಹುದು ಎಂದು ಸಚಿವ ಕೆ.ಎನ್‌.ರಾಜಣ್ಣ ಅವರು ಕರ್ನಾಟಕ ವಿಧಾನಮಂಡಲದ ಅಧಿವೇಶನದಲ್ಲಿಯೇ ಬಹಿರಂಗವಾಗಿ ಆರೋಪಿಸಿದ್ದರು. ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದ ಸರ್ಕಾರ ಈಗ ತನಿಖೆ ಆದೇಶವನ್ನು ಹೊರಡಿಸಿದೆ.

ಕೆಲ ದಿನಗಳ ಹಿಂದೆ ಸಚಿವ ರಾಜಣ್ಣ ಅವರು ತಮ್ಮ ವಿರುದ್ದ ಮಧುಬಲೆಯ ಪ್ರಯತ್ನಗಳು ನಡೆದಿವೆ. ಕೆಲವರು ಇದಕ್ಕಾಗಿಯೇ ಪ್ರಯತ್ನಿಸುತ್ತಿದ್ದಾರೆ ಎನ್ನುವ ಅಸಮಾಧಾನವನ್ನು ಹೊರ ಹಾಕಿದ್ದರು. ಸದನದಲ್ಲಿಯೇ ಈ ವಿಚಾರ ಪ್ರಸ್ತಾಪಿಸಿದ್ದರಿಂದ ಗೃಹ ಸಚಿವ ಡಾ.ಪರಮೇಶ್ವರ್‌ ಹಾಗೂ ಸಿಎಂ ಸಿದ್ದರಾಮಯ್ಯ ಕೂಡ ಉತ್ತರ ನೀಡಿದ್ದರು. ಸಚಿವರು ದೂರು ನೀಡಿದರೆ ಕ್ರಮ ಕೈಗೊಳ್ಳುವುದಾಗಿಯೂ ಹೇಳಲಾಗಿತ್ತು.

ಇದಲ್ಲದೇ ಸಚಿವ ರಾಜಣ್ಣ ಪುತ್ರ ರಾಜೇಂದ್ರ ರಾಜಣ್ಣ ಕೂಡ ತಮ್ಮ ವಿರುದ್ದ ಕೊಲೆ ಯತ್ನವೂ ನಡೆದಿದೆ ಎನ್ನುವ ಗಂಭೀರ ಆರೋಪ ಮಾಡಿದ್ದರು.

ಬಿಜೆಪಿ ಕೂಡ ಸಚಿವರ ವಿರುದ್ದವೇ ಈ ರೀತಿ ಆದರೆ ಇನ್ನು ಸಾಮಾನ್ಯರ ಗತಿ ಏನು. ಇದರ ಹಿಂದೆ ಯಾರಿದ್ದಾರೆ ಎನ್ನುವುದನ್ನು ಬಯಲು ಮಾಡಬೇಕು ಎಂದು ಒತ್ತಾಯಿಸಿತ್ತು. ಕಾಂಗ್ರೆಸ್‌ ಹೈಕಮಾಂಡ್‌ ಕೂಡ ವರದಿಯನ್ನು ಕೇಳಿತ್ತು.

ಬಳಿಕ ನಾಲ್ಕು ಪುಟಗಳ ವಿವರವಾದ ದೂರನ್ನು ಗೃಹ ಸಚಿವರಿಗೆ ಸಚಿವ ಕೆ.ಎನ್.ರಾಜಣ್ಣ ಸಲ್ಲಿಸಿದ್ದರು. ಅದರಲ್ಲಿ ಮಧುಬಲೆಗೆ ಪ್ರಯತ್ನಿಸಿದ ಮಾಹಿತಿಗಳು ಇದ್ದವು. ಇದರಲ್ಲಿ ಯಾವುದೇ ರಾಜಕೀಯ ಪಿತೂರಿ ಇಲ್ಲ. ವೈಯಕ್ತಿಕ ಕಾರಣದಿಂದ ಹೀಗೆ ಮಾಡಿರಬಹುದು.ತನಿಖೆಯಾಗಬೇಕು ಎನ್ನುವುದನ್ನು ರಾಜಣ್ಣ ಪತ್ರದಲ್ಲಿ ಉಲ್ಲೇಖಿಸಿದ್ದರು.

ಸಚಿವರು ನೀಡಿದ ದೂರಿನ ಪ್ರತಿಯನ್ನು ಡಿಜಿಪಿ ಅವರಿಗೆ ಗೃಹ ಸಚಿವ ಜಿ.ಪರಮೇಶ್ವರ್‌ ಅವರು ಕಳುಹಿಸಿದ್ದರು. ಇದರೊಟ್ಟಿಗೆ ರಾಜಣ್ಣ ಪುತ್ರ ರಾಜೇಂದ್ರ ಕೂಡ ಡಿಜಿಪಿ ಅವರನ್ನು ಭೇಟಿಯಾಗಿ ವಿವರ ಒದಗಿಸಿದ್ದರು.

ಈ ಹಿನ್ನೆಲೆಯಲ್ಲಿ ಕರ್ನಾಟಕ ಗೃಹ ಸಚಿವಾಲಯವು ಇದನ್ನು ಸಿಐಡಿ ತನಿಖೆಗೆ ವಹಿಸಿದೆ. ಸಿಐಡಿಯ ಹಿರಿಯ ಐಪಿಎಸ್‌ ದರ್ಜೆಯ ಅಧಿಕಾರಿಯೇ ಈ ಪ್ರಕರಣದ ಕುರಿತು ತನಿಖೆ ನಡೆಸುವರು ಎಂದು ಮೂಲಗಳು ತಿಳಿಸಿವೆ.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.
Whats_app_banner