ಕೇಂದ್ರ ಬಜೆಟ್ ವಿರುದ್ಧ ಕರ್ನಾಟಕ ಸಚಿವರ ಗುಡುಗು; ಪರಮೇಶ್ವರ, ಎಂಬಿಪಿ, ಕೃಷ್ಣ ಬೈರೇಗೌಡ, ಖಂಡ್ರೆ, ಹೆಬ್ಬಾಳ್ಕರ್ ಏನಂದ್ರು?
ಕನ್ನಡ ಸುದ್ದಿ  /  ಕರ್ನಾಟಕ  /  ಕೇಂದ್ರ ಬಜೆಟ್ ವಿರುದ್ಧ ಕರ್ನಾಟಕ ಸಚಿವರ ಗುಡುಗು; ಪರಮೇಶ್ವರ, ಎಂಬಿಪಿ, ಕೃಷ್ಣ ಬೈರೇಗೌಡ, ಖಂಡ್ರೆ, ಹೆಬ್ಬಾಳ್ಕರ್ ಏನಂದ್ರು?

ಕೇಂದ್ರ ಬಜೆಟ್ ವಿರುದ್ಧ ಕರ್ನಾಟಕ ಸಚಿವರ ಗುಡುಗು; ಪರಮೇಶ್ವರ, ಎಂಬಿಪಿ, ಕೃಷ್ಣ ಬೈರೇಗೌಡ, ಖಂಡ್ರೆ, ಹೆಬ್ಬಾಳ್ಕರ್ ಏನಂದ್ರು?

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ 2025 ವಿರುದ್ಧ ಕರ್ನಾಟಕದ ಸಚಿವರಾದ ಗೃಹ ಸಚಿವ ಜಿ ಪರಮೇಶ್ವರ, ಲಕ್ಷ್ಮಿ ಹೆಬ್ಬಾಳ್ಕರ್​, ಕೃಷ್ಣ ಬೈರೇಗೌಡ, ಈಶ್ವರ್​ ಖಂಡ್ರೆ, ಎಂಬಿ ಪಾಟೀಲ್ ಕಿಡಿಕಾರಿದ್ದಾರೆ.

ಕೇಂದ್ರ ಬಜೆಟ್ ವಿರುದ್ಧ ಕರ್ನಾಟಕದ ಸಚಿವರ ಗುಡುಗು; ಪರಮೇಶ್ವರ, ಎಂಬಿಪಿ, ಕೃಷ್ಣ ಬೈರೇಗೌಡ, ಖಂಡ್ರೆ, ಹೆಬ್ಬಾಳ್ಕರ್ ಏನಂದ್ರು
ಕೇಂದ್ರ ಬಜೆಟ್ ವಿರುದ್ಧ ಕರ್ನಾಟಕದ ಸಚಿವರ ಗುಡುಗು; ಪರಮೇಶ್ವರ, ಎಂಬಿಪಿ, ಕೃಷ್ಣ ಬೈರೇಗೌಡ, ಖಂಡ್ರೆ, ಹೆಬ್ಬಾಳ್ಕರ್ ಏನಂದ್ರು

ಬೆಂಗಳೂರು (ಫೆಬ್ರವರಿ 1): ಪ್ರಧಾನಿ ನರೇಂದ್ರ ಮೋದಿ 3ನೇ ಅವಧಿಯ ಎರಡನೇ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ದಾಖಲೆಯ 8ನೇ ಕೇಂದ್ರ ಬಜೆಟ್​ ವಿರುದ್ಧ ಕರ್ನಾಟಕದ ಸಚಿವರು ಟೀಕಾ ಪ್ರಹಾರ ನಡೆಸಿದ್ದಾರೆ. ಆಯವ್ಯಯದಲ್ಲಿ ರಾಜ್ಯಕ್ಕೆ ಅನ್ಯಾಯ ಮಾಡಲಾಗಿದೆ. ಈ ಬಜೆಟ್ ರೈತರು ಮತ್ತು ಸಾಮಾನ್ಯ ಜನರ ವಿರುದ್ಧವಾಗಿದೆ ಎಂದು ಸಚಿವರಾದ ಗೃಹ ಸಚಿವ ಜಿ ಪರಮೇಶ್ವರ, ಲಕ್ಷ್ಮಿ ಹೆಬ್ಬಾಳ್ಕರ್​, ಕೃಷ್ಣ ಬೈರೇಗೌಡ, ಈಶ್ವರ್​ ಖಂಡ್ರೆ ಸೇರಿದಂತೆ ಎಲ್ಲಾ ಸಚಿವರು ಕಿಡಿಕಾರಿದ್ದಾರೆ.

ಬಜೆಟ್‌ನಲ್ಲಿ ಮೋಸ ಮಾಡಲಾಗಿದೆ ಎಂದ ಪರಮೇಶ್ವರ

ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2025-26ನೇ ಸಾಲಿನ ಆಯವ್ಯಯ, ದೇಶದಲ್ಲೇ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ 2ನೇ ಸ್ಥಾನ ಪಡೆದಿರುವ ಕರ್ನಾಟಕವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ದಕ್ಷಿಣ ಭಾಗದ ರಾಜ್ಯಗಳ ಜನರ ತೆರಿಗೆಯ ಸಂಪತ್ತನ್ನು ಉತ್ತರ ಭಾರತ ರಾಜ್ಯಗಳ ಅಭಿವೃದ್ಧಿಗೆ ಸುರಿಯಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದ ಅಭಿವೃದ್ಧಿಯನ್ನು ನಿರ್ಲಕ್ಷಿಸಲಾಗಿದೆ ಎಂದು ಪರಮೇಶ್ವರ ಬೇಸರ ವ್ಯಕ್ತಪಡಿಸಿದ್ದಾರೆ.

ರೈತರ ಆದಾಯ ಹೆಚ್ಚಿಸುವಂಥ ಬಲಿಷ್ಟವಾದ ಯೋಜನೆಗಳನ್ನು ರೂಪಿಸಿಲ್ಲ. ಯುವಕರ ನಿರುದ್ಯೋಗ ಸಮಸ್ಯೆಗೆ ಪರಿಹಾರಗಳಿಲ್ಲ. ಕೇಂದ್ರ ಸರ್ಕಾರದಲ್ಲಿ ಕರ್ನಾಟಕದ ಮೂವರು ಸಚಿವರಿದ್ದರೂ ರಾಜ್ಯಕ್ಕೆ ಯಾವುದೇ ಪ್ರಯೋಜನವಾಗಿಲ್ಲ. ರಾಜ್ಯದಲ್ಲಿನ ಮಹಾನಗರಗಳ ಸುರಕ್ಷತೆಗೆ ಮತ್ತು ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ನೀಡುವ ನಿರೀಕ್ಷೆಯು ಹುಸಿಯಾಗಿದೆ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಕರ್ನಾಟಕದ ಜನತೆಗೆ ಬಜೆಟ್‌ನಲ್ಲಿ ಮತ್ತೊಮ್ಮೆ ಮೋಸ ಮಾಡಿದೆ ಎಂದಿದ್ದಾರೆ.

ಕಲ್ಯಾಣ ಕರ್ನಾಟಕ ಕಡೆಗಣಿಸಿದ ಕೇಂದ್ರ: ಈಶ್ವರ ಖಂಡ್ರೆ ಕಿಡಿ

ಕೇಂದ್ರ ಬಜೆಟ್ ರೈತರ ಬೇಡಿಕೆ ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ರೈತರು ಬೆಳೆದ ಬೆಳೆಗೆ ನಿಶ್ಚಿತ ಬೆಲೆ ಬರಬೇಕು. ಇಂದು ಅನ್ನದಾತರ ಸ್ಥಿತಿ ಅನಿಶ್ಚಿತತೆಯಿಂದ ಕೂಡಿದೆ. ರೈತರ ಕಷ್ಟಾರ್ಜಿತಕ್ಕೆ ನಿರ್ದಿಷ್ಟ ಬೆಲೆ ನೀಡುವ ಎಂಎಸ್​ಪಿ ಕಾಯಿದೆ ಬಗ್ಗೆ ಪ್ರಕಟಿಸದ ಬಜೆಟ್ ಇದಾಗಿದೆ. ಪ್ರಕೃತಿ ವಿಕೋಪದಿಂದ ಮತ್ತು ಸಾಲದ ಹೊರೆ ತಾಳದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ರೈತರ ಕೃಷಿ ಸಾಲ ಮನ್ನಾ ಬಗ್ಗೆ ಈ ಬಜೆಟ್​ನಲ್ಲಿ ಯಾವುದೇ ಘೋಷಣೆ ಮಾಡಿಲ್ಲ ಎಂದೂ ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.

ಬಜೆಟ್ ನಲ್ಲಿ ಬಿಜೆಪಿ ಮತ್ತು ಎನ್.ಡಿ.ಎ.ಯೇತರ ರಾಜ್ಯಗಳಿಗೆ ಘೋರ ಅನ್ಯಾಯ ಮಾಡಲಾಗಿದೆ. ಹಿಂದುಳಿದ ಈಶಾನ್ಯ ಭಾರತದ ಅಭಿವೃದ್ಧಿಗೆ ಆದ್ಯತೆ ನೀಡುವ ಕೇಂದ್ರ ಸರ್ಕಾರ, ಹಿಂದುಳಿದ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಕಿಂಚಿತ್ತೂ ಗಮನ ಹರಿಸಿಲ್ಲ. ಮಲ್ಲಿಕಾರ್ಜುನ ಖರ್ಗೆ ಹಿಂದುಳಿದ ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳ ಅಭಿವೃದ್ಧಿಗೆ 5 ಸಾವಿರ ಕೋಟಿ ಹಂಚಿಕೆ ಮಾಡುವಂತೆ ಕೇಂದ್ರ ವಿತ್ತ ಸಚಿವರಿಗೆ ಮನವಿ ಮಾಡಿದ್ದರು. ಆದರೆ, ಇದಕ್ಕೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಬಜೆಟ್ ಕರ್ನಾಟಕಕ್ಕೆ ಕರಾಳ ದಿನವಾಗಿದೆ; ಕೃಷ್ಣ ಬೈರೇಗೌಡ

ಬಜೆಟ್ ಕರ್ನಾಟಕಕ್ಕೆ ಕರಾಳ ದಿನವಾಗಿದೆ. ಕರ್ನಾಟಕದ ಯಾವ ಬೇಡಿಕೆಯೂ ಈಡೇರಿಲ್ಲ, ನ್ಯಾಯ ಕೊಡುವ ಕೆಲಸವೂ ಆಗಿಲ್ಲ. ನಮ್ಮೆಲ್ಲರ ತೆರಿಗೆ ಬೇರೆ ರಾಜ್ಯದ ಪಾಲಾಗುತ್ತಿದೆ. ಬಿಹಾರ ರಾಜ್ಯಕ್ಕೆ ಐದಾರು ಯೋಜನೆ ಕೊಟ್ಟಿದ್ದಾರೆ. ಹಾಗಾದರೆ ಕರ್ನಾಟಕದವರು ಕಡ್ಲೆ ಬೀಜ ತಿನ್ನೋಕೆ ಇರುವುದೇ? ತೆರಿಗೆ ಕಟ್ಟಿದ ಕನ್ನಡಿಗರು ಕಾಣ್ತಿಲ್ಲ. ಕರ್ನಾಟಕಕ್ಕೆ ದ್ರೋಹ ಮಾಡಲಾಗಿದೆ. ಕಲ್ಯಾಣ ಕರ್ನಾಟಕ, ಮಲೆನಾಡು ಕರ್ನಾಟಕ್ಕೆ ಏನೂ ನೀಡಿಲ್ಲ ಎಂದಿದ್ದಾರೆ ಕಂದಾಯ ಸಚಿವ ಕೃಷ್ಣ ಬೈರೇಗೌಡ.

11495 ಕೋಟಿ ಫೈನಾನ್ಸ್ ಕಮೀಷನ್ ಕೊಡಲು ಹೇಳಿತ್ತು. ಬರಲೇ ಬೇಕಾದ ಅನುದಾನ ದ ಬಗ್ಗೆ ಚಕಾರ ಎತ್ತಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಇಂದು ಪೈಸಾ ಕೂಡ ಕೊಟ್ಟಿಲ್ಲ. ಬೆಂಗಳೂರು ದೇಶಕ್ಕೆ ಉದ್ಯೋಗ ಕೊಡ್ತಿದೆ. ರಪ್ತಿನ ಮೂಲಕ ದೇಶಕ್ಕೆ ಹೆಚ್ಚಿನ ಆದಾಯ ಕೊಡ್ತಿದೆ. ಆದ್ರೂ ಬಜೆಟ್​ನಲ್ಲಿ ಏನು ಕೊಟ್ಟಿಲ್ಲ. ಯುಪಿ, ಬಿಹಾರ ಮಾತ್ರ ಕೇಂದ್ರಕ್ಕೆ ಕಾಣುತ್ತಿದೆ, ಕರ್ನಾಟಕ ಕಾಣ್ತಿಲ್ಲ. ನಮ್ಮ ರಾಜ್ಯ ಕೇವಲ ದುಡಿಯವ ಆಳಿನ ರೀತಿ ಕಾಣುತ್ತಿದೆ. ಇದನ್ನ ನಾನು ಖಂಡಿಸುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಹಾರ ಚುನಾವಣೆಯ ಪ್ರಣಾಳಿಕೆಯಂತಿದೆ ಎಂದ ಲಕ್ಷ್ಮಿ ಹೆಬ್ಬಾಳ್ಕರ್​

ಮುಂಬರುವ ಬಿಹಾರ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ಮಂಡಿಸಿದ್ದಾರೆ ಎನಿಸುತ್ತಿದೆ. ಬಜೆಟ್‌ನಿಂದ ರಾಜ್ಯಕ್ಕೆ ಸಂಪೂರ್ಣ ಅನ್ಯಾಯವಾಗಿದೆ. ಬಿಹಾರ ಜನರ ಒಲೈಕೆಗಾಗಿ ಪ್ರಮುಖ ಐದಾರು ಯೋಜನೆಗಳನ್ನು ಘೋಷಿಸಿದರೆ, ಕರ್ನಾಟಕಕ್ಕೆ ನಯಾ ಪೈಸೆ ನೀಡಿಲ್ಲ. ಬೆಂಗಳೂರಿಗೆ ವಿಶೇಷ ಅನುದಾನ ನಿರೀಕ್ಷಿಸಲಾಗಿತ್ತು. ಆದರೆ ನಿರಾಸೆ ಉಂಟಾಗಿದೆ ಎಂದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ಕಿಡಿಕಾರಿದ್ದಾರೆ.

ರಾಜ್ಯಕ್ಕೆ ಈ ಬಾರಿಯೂ ಸಿಗಲಿಲ್ಲ ಏಮ್ಸ್: ಎಂ‌ಬಿ ಪಾಟೀಲ

ಕೇಂದ್ರ ಸರಕಾರದ ಬಜೆಟ್ ತೀರಾ ನಿರಾಶಾದಾಯಕವಾಗಿದೆ. ಮಧ್ಯಮ ವರ್ಗದ ಆದಾಯ ತೆರಿಗೆದಾರರಿಗೆ ಭಾರೀ ಲಾಭ ತಂದುಕೊಡುವಂತೆ ಕಣ್ಣೊರೆಸುವ ತಂತ್ರಗಳನ್ನು ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ. ಜಿಡಿಪಿ ಬೆಳವಣಿಗೆ ಹೆಚ್ಚಿಸುವಂತಹ ಯಾವ ಅಂಶವೂ ಬಜೆಟ್ಟಿನಲ್ಲಿ ಇಲ್ಲದಿರುವುದು ಕಳವಳಕಾರಿ ಅಂಶವಾಗಿದೆ. ಬಂಡವಾಳ ವೆಚ್ಚದಲ್ಲಿ ಗಣನೀಯ ಏರಿಕೆ ಮಾಡದೆ ಇರುವುದು ಚಿಂತಿಸುವಂತಹ ವಿಷಯವಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂಬಿ ಪಾಟೀಲ ಹೇಳಿದ್ದಾರೆ.

12 ಲಕ್ಷ ರೂಪಾಯಿವರೆಗೆ ತೆರಿಗೆ ವಿನಾಯಿತಿ ಅಂದಿದ್ದಾರೆ. ಆದರೆ ಅದಕ್ಕಿಂತ ಒಂದು ರೂಪಾಯಿ ಹೆಚ್ಚಿನ ಆದಾಯ ಬಂದರೂ ಈ ವಿನಾಯಿತಿ ಸಿಗುವುದಿಲ್ಲ. ಬದಲಿಗೆ ಶೇ.20ಕ್ಕೂ ಹೆಚ್ಚು ತೆರಿಗೆ ವಿಧಿಸುತ್ತಾರೆ. ಇದರ ಬದಲು ತೆರಿಗೆದಾರರಿಗೆ ನೇರವಾಗಿ ಮತ್ತು ಸುಲಭವಾಗಿ ಪ್ರಯೋಜನ ಸಿಗುವಂತೆ ನೋಡಿಕೊಳ್ಳಬೇಕಾಗಿತ್ತು. ಸಮಾಜದ ಈ ನಿರೀಕ್ಷೆಗೆ ಸ್ಪಂದಿಸಲು ನರೇಂದ್ರ ಮೋದಿ ಸರಕಾರ ವಿಫಲವಾಗಿದೆ. ಇದರ ಬಿಸಿ ಮುಂದಿನ ದಿನಗಳಲ್ಲಿ ಜನರಿಗೆ ಗೊತ್ತಾಗಲಿದೆ’ ಎಂದಿದ್ದಾರೆ.

ದೇಶದ ಒಟ್ಟಾರೆ ರಫ್ತು ವಹಿವಾಟಿನಲ್ಲಿ ರಾಜ್ಯದ ಪಾಲು ಅಧಿಕವಾಗಿದೆ. ಆದ್ದರಿಂದ ನಮಗೆ ಏನನ್ನಾದರೂ ಹೆಚ್ಚಿನದನ್ನು ಕೊಡಬೇಕಿತ್ತು. ಉತ್ತರ ಕರ್ನಾಟಕದ ಅಭಿವೃದ್ಧಿಗೂ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿಲ್ಲ. ಈ ಬಾರಿಯಾದರೂ ಉತ್ತರ ಕರ್ನಾಟಕಕ್ಕೆ ಅಖಿಲ ಭಾರತ ವೈದ್ಯಕೀಯ ಸಂಸ್ಥೆ (ಏಮ್ಸ್) ಮಂಜೂರು ಮಾಡುತ್ತಾರೆ ಎನ್ನುವ ನಿರೀಕ್ಷೆ ಕೂಡ ಹುಸಿಯಾಗಿದೆ. ಒಟ್ಟಿನಲ್ಲಿ ಇದು ಜನವಿರೋಧಿ ಬಜೆಟ್ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಟೀಕಿಸಿದ್ದಾರೆ.

Whats_app_banner