ಅಗ್ನಿ ಅನಾಹುತದಲ್ಲಿ 3 ಮನೆಗಳು ಬೆಂಕಿಗೆ ಆಹುತಿ: ಶಾಸಕ ಜಿ. ಟಿ. ದೇವೇಗೌಡರಿಂದ ತಲಾ 1 ಲಕ್ಷ ರೂ ವೈಯಕ್ತಿಕ ಪರಿಹಾರ
ಚಾಮುಂಡೇಶ್ವರಿ ಕ್ಷೇತ್ರದ ಮೈಸೂರು ತಾಲ್ಲೂಕು ಇಲವಾಲ ಹೋಬಳಿ ಆನಂದೂರು ಗ್ರಾಮದಲ್ಲಿ ಬೆಂಕಿ ಅನಾಹುತ 3 ಮನೆಗಳು ಬೆಂಕಿಗೆ ಆಹುತಿಯಾಗಿದ್ದು, ಸ್ಥಳಕ್ಕೆ ಶಾಸಕ ಜಿ. ಟಿ. ದೇವೇಗೌಡ ಬೇಟಿ ನೀಡಿ, ನೊಂದ ಕುಟುಂಬಗಳಿಗೆ ಸಾಂತ್ವನ ಹೇಳಿ ವೈಯಕ್ತಿಕವಾಗಿ ಪ್ರತಿ ಕುಟುಂಬಕ್ಕೆ ಒಂದೊಂದು ಲಕ್ಷ ಪರಿಹಾರ ನೀಡಿದರು.

ಮೈಸೂರು: ಅಗ್ನಿ ಅವಘಡದಿಂದ ಸಂಪೂರ್ಣವಾಗಿ ಮನೆಗಳು ಸುಟ್ಟು ಹೋಗಿದ್ದ ಮೂವರು ಕುಟುಂಬದವರಿಗೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ. ಟಿ. ದೇವೇಗೌಡ ಅವರು ಶನಿವಾರೇ ಗೌಡ, ವೆಂಕಟೇಶ್ ಗೌಡ,ಶ್ರೀನಿವಾಸ್ ಗೌಡ ಅವರಿಗೆ ವೈಯಕ್ತಿಕವಾಗಿ ಒಂದು ಲಕ್ಷ ರೂಪಾಯಿ ಪರಿಹಾರವನ್ನು ವಿತರಿಸಿದರು. ಮೈಸೂರು ತಾಲ್ಲೂಕಿನ ಬೋರೆ ಆನಂದೂರು ಗ್ರಾಮಕ್ಕೆ ಭಾನುವಾರ ಭೇಟಿ ನೀಡಿ ಮನೆಯನ್ನು ಕಳೆದುಕೊಂಡ ಮೂವರು ಕುಟುಂಬದವರ ಜೊತೆ ಸಮಾಲೋಚನೆ ನಡೆಸಿದರಲ್ಲದೆ, ಧೈರ್ಯ ತುಂಬಿದರು.
ಆಕಸ್ಮಿಕವಾಗಿ ನಡೆದಿರುವ ಘಟನೆಯಿಂದ ಮನೆಯಲ್ಲಿ ಒಂದು ವಸ್ತುಗಳು ಇಲ್ಲದಂತೆ ಸುಟ್ಟು ಹೋಗಿದೆ. ನಮಗೆ ಆಹಾರ ಪದಾರ್ಥಗಳು ಇಲ್ಲದಂತಾಗಿದೆ ಎಂದು ಅಳಲು ತೋಡಿಕೊಂಡರು. ಈ ವೇಳೆ ಎಲ್ಲರಿಗೂ ಭರವಸೆ ಮಾತುಗಳನ್ನಾಡಿ ವೈಯಕ್ತಿಕವಾಗಿ ಮೂವರು ಕುಟುಂಬದವರಿಗೆ ತಲಾ ಒಂದು ಲಕ್ಷ ರೂ.ಪರಿಹಾರದ ಹಣವನ್ನು ವಿತರಿಸಿದರು. ಕಂದಾಯ,ವಿದ್ಯುತ್ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ವರದಿ ಕೊಡಲಿದ್ದಾರೆ. ಸರ್ಕಾರದ ವತಿಯಿಂದ ಬೇಗನೆ ಪರಿಹಾರ ಕೊಡಿಸಲಾಗುವುದು, ಗ್ರಾಮದವರು ಯಾವುದೇ ರಾಜಕೀಯ ಮಾಡದೆ ಸಂಕಷ್ಟದ ಸಮಯದಲ್ಲಿ ಮನೆ ಕಳೆದುಕೊಂಡವರಿಗೆ ಸಹಕಾರ ನೀಡಬೇಕು ಎಂದು ಹೇಳಿದರು.
ಅಲ್ಲಿಂದಲೇ ತಾಲ್ಲೂಕು ತಹಸಿಲ್ದಾರ ಮತ್ತಿತರರ ಜತೆಗೆ ಮಾತನಾಡಿ ವರದಿ ಕೊಡುವಂತೆ ಸೂಚಿಸಿದರು. ಇದೇ ಸಂದರ್ಭದಲ್ಲಿ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಎನ್. ಬಿ. ಮಂಜು ಅವರು ತಲಾ ಒಂದು ಲಕ್ಷ ರೂ.ಕೊಡುವುದಾಗಿ ಭರವಸೆ ನೀಡಿದರು. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ. ಎಂ. ಮುನಿಗೋಪಾಲರಾಜು,ಅಧೀಕ್ಷಕ ಅಭಿಯಂತರ ಸುನಿಲ್ ಮತ್ತಿತರ ಅಧಿಕಾರಿಗಳು ಹಾಜರಿದ್ದರು.
ಬೆಳ್ಳಂಬೆಳಗ್ಗೆ ಹಾಜರು
ಕಾರ್ಯ ನಿಮಿತ್ತ ಬೆಂಗಳೂರಿಗೆ ತೆರಳಿದ್ದ ಜಿ. ಟಿ. ದೇವೇಗೌಡರು ಮುಂಜಾನೆ ಹೊರಟು ನೇರವಾಗಿ ಬೋರೆ ಆನಂದೂರು ಗ್ರಾಮಕ್ಕೆ ಹಾಜರಾಗಿದ್ದರು. ಗ್ರಾಮದ ಜನರು ಮನೆಯಿಂದ ಹೊರಗೆ ಬರುವ ಮುನ್ನವೇ ಹಾಜರಿದ್ದ ಜಿ.ಟಿ.ದೇವೇಗೌಡರನ್ನು ನೋಡಿ ಸಂತ್ರಸ್ಥ ಕುಟುಂಬವರಲ್ಲಿ ಸಂತಸವನ್ನುಂಟು ಮಾಡಿತು.ಘಟನೆ ನಡೆದ ವಿಷಯ ತಿಳಿದು ದೂರವಾಣಿ ಮೂಲಕ ಅಗತ್ಯ ಕ್ರಮಕ್ಕೆ ಸೂಚನೆ ಕೊಟ್ಟಿದ್ದರಿಂದ ನಿಧಾನವಾಗಿ ಬರಬಹುದು ಎನ್ನುವಂತೆ ಭಾವಿಸಿದ್ದರು. ಆದರೆ, ಕ್ಷೇತ್ರದ ವ್ಯಾಪ್ತಿಯ ಹಳ್ಳಿಯ ಕುಟುಂಬ ಸಂಕಷ್ಟಕ್ಕೆ ಸಿಲುಕಿದ್ದರಿಂದಾಗಿ ಮುಂಜಾನೆಯೇ ದೌಡಾಯಿಸಿ ಗಮನ ಸೆಳೆದರು.