MLC Elections2024: ವಿಧಾನಪರಿಷತ್‌ನ 5 ಸ್ಥಾನಕ್ಕೆ ಅಭ್ಯರ್ಥಿ ಪ್ರಕಟಿಸಿದ ಕಮಲ ಪಕ್ಷ; ಜೆಡಿಎಸ್‌ಗೆ ಒಂದು ಸ್ಥಾನ
ಕರ್ನಾಟಕದಲ್ಲಿ ಮುಂದಿನ ತಿಂಗಳು ನಡೆಯಲಿರುವ ವಿಧಾನಪರಿಷತ್ತಿನ ಆರು ಸ್ಥಾನಗಳಿಗೆ ಬಿಜೆಪಿ ಐದು ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ.
ಬೆಂಗಳೂರು: ಕರ್ನಾಟಕದ ಶಿಕ್ಷಕರು ಹಾಗೂ ಪದವೀಧರರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ನಡೆಯಲಿರುವ 6 ಸ್ಥಾನಗಳ ಚುನಾವಣೆಗೆ ಬಿಜೆಪಿ ಐದು ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಜೆಡಿಎಸ್‌ಗೆ ಒಂದು ಸ್ಥಾನವನ್ನು ಬಿಟ್ಟುಕೊಟ್ಟಿದೆ. ಆರು ಕ್ಷೇತ್ರದಲ್ಲಿ ಬಿಜೆಪಿಗೆ ನಾಲ್ಕು ಹಾಗೂ ಜೆಡಿಎಸ್‌ಗೆ ಎರಡು ಕ್ಷೇತ್ರ ಬಿಟ್ಟುಕೊಡುವ ಕುರಿತು ಮಾತುಕತೆಗಳು ನಡೆದಿದ್ದವು, ಅಲ್ಲದೇ ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಸಹ ಜೆಡಿಎಸ್‌ಗೆ ಎರಡು ಕ್ಷೇತ್ರ ಬಿಟ್ಟುಕೊಡುವ ವಿಚಾರವನ್ನು ಮೈಸೂರಿನಲ್ಲಿ ಪ್ರಸ್ತಾಪಿಸಿದ್ದರು. ಇದರ ನಡುವೆ ಶನಿವಾರ ಸಂಜೆ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದೆ. ಈ ಕುರಿತು ಜೆಡಿಎಸ್ ಇನ್ನೂ ತನ್ನ ಪ್ರತಿಕ್ರಿಯೆ ನೀಡಿಲ್ಲ.
ಕಲಬುರಗಿ ಕೇಂದ್ರಿತ ಈಶಾನ್ಯ ಪದವೀಧರರ ಕ್ಷೇತ್ರಕ್ಕೆ ವಿಧಾನಪರಿಷತ್ ಮಾಜಿ ಸದಸ್ಯ ಅಮರನಾಥ್ ಪಾಟೀಲ್. ಬೆಂಗಳೂರು ಪದವೀಧರ ಕ್ಷೇತ್ರಕ್ಕೆ ಹಾಲಿ ಸದಸ್ಯ ಅ.ದೇವೇಗೌಡ, ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಹಾಲಿ ಸದಸ್ಯ ವೈ.ಎ.ನಾರಾಯಣ ಸ್ವಾಮಿ, ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಮುಖಂಡ ಇ.ಸಿ.ನಿಂಗರಾಜಗೌಡ ಹಾಗೂ ನೈರುತ್ಯ ಪದವೀಧರರ ಕ್ಷೇತ್ರಕ್ಕೆ ಚನ್ನಗಿರಿ ಹಾಗೂ ಶಿವಮೊಗ್ಗದ ವೈದ್ಯ ಡಾ.ಧನಂಜಯ ಸರ್ಜಿ ಅವರ ಹೆಸರನ್ನು ಪ್ರಕಟಿಸಲಾಗಿದೆ. ಆದರೆ ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ಯಾರ ಹೆಸರನ್ನೂ ಪ್ರಕಟಿಸಿಲ್ಲ. ಇದನ್ನು ಜೆಡಿಎಸ್‌ಗೆ ಬಿಟ್ಟು ಕೊಡಲಾಗಿದೆಯೇ ಎನ್ನುವ ಕುರಿತು ಇನ್ನಷ್ಟೇ ಸ್ಪಷ್ಟನೆ ಹೊರ ಬರಬೇಕಿದೆ.
ಈ ಚುನಾವಣೆಯಲ್ಲಿ ಬಿಜೆಪಿಗೆ ನಾಲ್ಕು ಹಾಗೂ ಜೆಡಿಎಸ್‌ಗೆ ಎರಡು ಕ್ಷೇತ್ರ ಎನ್ನುವ ಕುರಿತು ಚರ್ಚೆಗಳು ನಾಯಕರ ಹಂತದಲ್ಲಿ ನಡೆದಿದ್ದವು. ಮೈಸೂರು ದಕ್ಷಿಣ ಶಿಕ್ಷಕರ ಕ್ಷೇತ್ರ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ಜಾ.ದಳಕ್ಕೆ ಬಿಟ್ಟುಕೊಡುವ ಕುರಿತು ಚರ್ಚೆಗಳಾಗಿದ್ದವು. ಮೈಸೂರಿನಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಹಾಲಿ ಸದಸ್ಯರಾಗಿರುವ ಜೆಡಿಎಸ್ ನ ಎಸ್.ಎಲ್.ಬೋಜೇಗೌಡ ಅವರು ಪ್ರಬಲ ಆಕಾಂಕ್ಷಿಗಳು. ಆದರೆ ಏಕಾಏಕಿ ಐದು ಕ್ಷೇತ್ರಗಳ ಹೆಸರನ್ನು ಪ್ರಕಟಿಸಿರುವುದು ಗಮನಿಸಿದರೆ ಮೈತ್ರಿ ಬಗ್ಗೆಯೇ ಅನುಮಾನ ಮೂಡುತ್ತಿವೆ.
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಮಾಜಿ ಸಚಿವ ರೇವಣ್ಣ ಅವರ ಪ್ರಕರಣದ ನಂತರ ಕರ್ನಾಟಕದಲ್ಲಿ ಜೆಡಿಎಸ್‌ನೊಂದಿಗೆ ಬಿಜೆಪಿ ಅಂತರ ಕಾಯ್ದುಕೊಂಡಿದೆ. ಇದೇ ವಿಚಾರವಾಗಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮೂರು ದಿನದ ಹಿಂದೆ ಜೆಡಿಎಸ್ ಒಂಟಿಯಾಗಿ ಚುನಾವಣೆ ಎದುರಿಸಲಿದೆ ಎಂದು ಹೇಳಿದ್ದರು. ಇದರ ನಡುವೆ ವಿಧಾನಪರಿಷತ್ ಚುನಾವಣೆಯಲ್ಲಿ ಮೈತ್ರಿ ವಿಚಾರದಲ್ಲಿ ಗೊಂದಗಳು ಏರ್ಪಟ್ಟಂತೆ ಕಾಣುತ್ತಿವೆ.
ಮೈಸೂರಿನಲ್ಲಿ ಶನಿವಾರ ಮಧ್ಯಾಹ್ನ ಮಾತನಾಡಿದ್ದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಜೆಡಿಎಸ್‌ಗೆ ಎರಡು ಸ್ಥಾನ ನಮಗೆ ನಾಲ್ಕು ಸ್ಥಾನ ಎಂದು ಸ್ಪಷ್ಟವಾಗಿಯೇ ಹೇಳಿದ್ದರು. ಇದಾದ ಕೆಲವೇ ಹೊತ್ತಿನಲ್ಲಿ ದೆಹಲಿಯಲ್ಲಿ ಬಿಜೆಪಿ ರಾಷ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಹೊರಡಿಸಿರುವ ಪ್ರಕರಣೆಯಲ್ಲಿ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗಿದೆ.
ಯಾರಿದ್ದಾರೆ ಸದಸ್ಯರು?
ಇದರಲ್ಲಿ ರಾಜ್ಯದ ಕಲಬುರಗಿ ಕೇಂದ್ರಿತ ಈಶಾನ್ಯ ಪದವೀಧರರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಡಾ.ಚಂದ್ರಶೇಖರ್ ಬಿ. ಪಾಟೀಲ್ ಇದ್ದಾರೆ. ಇದು ಕಲಬುರಗಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ ಹಾಗೂ ಯಾದಗಿರಿ ಜಿಲ್ಲಾ ವ್ಯಾಪ್ತಿ ಒಳಗೊಂಡಿದೆ. ಶಿವಮೊಗ್ಗ ಕೇಂದ್ರಿತ ನೈರುತ್ಯ ಪದವೀಧರರ ಕ್ಷೇತ್ರದಲ್ಲಿ ಜಾ.ದಳದ ಆಯನೂರು ಮಂಜುನಾಥ್ ಸದಸ್ಯರಿದ್ದು ಆ ಸ್ಥಾನ ಈಗ ಖಾಲಿಯಿದೆ. ಇದು ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು ಹಾಗೂ ಶಿವಮೊಗ್ಗ ವ್ಯಾಪ್ತಿ ಒಳಗೊಂಡಿದೆ. ಬೆಂಗಳೂರು ಪದವೀಧರರ ಕ್ಷೇತ್ರದಲ್ಲಿ ಬಿಜೆಪಿಯ ಎ.ದೇವೇಗೌಡ ಇದ್ಧಾರೆ. ಇದು ಬೆಂಗಳೂರು ನಗರ ವ್ಯಾಪ್ತಿಯನ್ನು ಒಳಗೊಂಡಿರುವ ಕೇತ್ರ.
ತುಮಕೂರು ಕೇಂದ್ರ ಇರುವ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಬಿಜೆಪಿಯ ವೈ.ಎ.ನಾರಾಯಣಸ್ವಾಮಿ ಹಾಲಿ ಸದಸ್ಯರು. ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ರಾಜೀನಾಮೆ ನೀಡಿದ್ದ ನಾರಾಯಣಸ್ವಾಮಿ ಸೋತರೂ ಮತ್ತೆ ವಿಧಾನಪರಿಷತ್‌ಗೆ ನಡೆದಿದ್ದ ಚುನಾವಣೆಯಲ್ಲಿ ಗೆದ್ದಿದ್ದರು. ಈಗ ಮತ್ತೆ ಚುನಾವಣೆ ಎದುರಿಸಲು ಅಣಿಯಾಗುತ್ತಿದ್ದಾರೆ.
ಶಿವಮೊಗ್ಗ ಕೇಂದ್ರಿತ ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ ನ ಎಸ್.ಎಲ್.ಭೋಜೇಗೌಡ ಇದ್ದಾರೆ. ಈ ಕ್ಷೇತ್ರವು ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ವ್ಯಾಪ್ತಿಯಲ್ಲಿದೆ. ಇನ್ನು ಮೈಸೂರು ಕೇಂದ್ರಿತ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಜಾ.ದಳದಿಂದ ಗೆದ್ದು ರಾಜೀನಾಮೆ ನೀಡಿ ಈಗ ಕಾಂಗ್ರೆಸ್ ಸೇರಿರುವ ಹಿರಿಯ ಸದಸ್ಯ ಮರಿತಿಬ್ಬೇಗೌಡ ಇದ್ದಾರೆ. ಈ ಕ್ಷೇತ್ರವು ಮೈಸೂರು, ಮಂಡ್ಯ, ಹಾಸನ ಹಾಗೂ ಚಾಮರಾಜನಗರ ಜಿಲ್ಲೆಯ ವ್ಯಾಪ್ತಿ ಒಳಗೊಂಡಿದೆ. ಮಂಗಳೂರು. ಬೆಂಗಳೂರು, ಕಲಬುರಗಿ, ಮೈಸೂರು ಹಾಗೂ ತುಮಕೂರು ಜಿಲ್ಲಾಧಿಕಾರಿಗಳು ಈ ಚುನಾವಣೆಗಳಿಗೆ ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸುವರು. ನೋಂದಾಯಿತ ಶಿಕ್ಷಕರು ಚುನಾವಣೆ ಮತದಾರರು.
ಚುನಾವಣೆ ಯಾವಾಗ
ವಿಧಾನಪರಿಷತ್ ಚುನಾವಣೆ ಅಧಿಸೂಚನೆ ಜಾರಿಯಾಗಿ ನಾಮಪತ್ರ ಸಲ್ಲಿಕೆ ಶುರುವಾಗಿದೆ. ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕ: ಮೇ 16, 2024 . ನಾಮಪತ್ರಗಳ ಪರಿಶೀಲನೆ: ಮೇ 17, 2024. ನಾಮಪತ್ರ ಹಿಂದಕ್ಕೆ ಪಡೆಯಲು ಕೊನೇ ದಿನಾಂಕ: ಮೇ 20, 2024
ಮತದಾನ ದಿನ: ಜೂನ್ 03, 2024. ಮತ ಎಣಿಕೆ ದಿನ: ಜೂನ್ 06, 2024 ಎಂದು ಈಗಾಗಲೇ ಘೋಷಿಸಲಾಗಿದೆ.