ಕನ್ನಡ ಸುದ್ದಿ  /  ಕರ್ನಾಟಕ  /  Mlc Elections2024: ಪರಿಷತ್‌ ಚುನಾವಣೆ, ನೈರುತ್ಯ- ದಕ್ಷಿಣ ಕ್ಷೇತ್ರಗಳಲ್ಲಿ ಬಿಜೆಪಿ, ಜೆಡಿಎಸ್‌ಗೆ ಬಂಡಾಯ ಬಿಸಿ

MLC Elections2024: ಪರಿಷತ್‌ ಚುನಾವಣೆ, ನೈರುತ್ಯ- ದಕ್ಷಿಣ ಕ್ಷೇತ್ರಗಳಲ್ಲಿ ಬಿಜೆಪಿ, ಜೆಡಿಎಸ್‌ಗೆ ಬಂಡಾಯ ಬಿಸಿ

ದಕ್ಷಿಣ ಹಾಗೂ ನೈರುತ್ಯ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರದಲ್ಲಿ ಜೆಡಿಎಸ್‌ ಹಾಗೂ ಬಿಜೆಪಿ ಬಂಡಾಯದ ಸನ್ನಿವೇಶ ಎದುರಿಸುತ್ತಿವೆ. ಗುರುವಾರ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿರುವುದರಿಂದ ಸ್ಪಷ್ಟ ಚಿತ್ರಣ ಸಿಗಬಹುದು.

ವಿಧಾನಪರಿಷತ್ತಿನ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ಗೆ ಬಂಡಾಯ ಎದುರಾಗಿದೆ.
ವಿಧಾನಪರಿಷತ್ತಿನ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ಗೆ ಬಂಡಾಯ ಎದುರಾಗಿದೆ.

ಬೆಂಗಳೂರು: ಕರ್ನಾಟಕದ ವಿಧಾನಪರಿಷತ್ತಿನ ಆರು ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಗೆ ಬಂಡಾಯದ ಬಿಸಿ ಎದುರಾಗಿದೆ. ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಯಾರೂ ಎನ್ನುವ ಗೊಂದಲ ಇನ್ನು ಮುಂದುವರಿದಿದೆ. ಗುರುವಾರ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿರುವುದರಿಂದ ಈ ಗೊಂದಲ ಬಗೆಹರಿಯುವ ವಿಶ್ವಾಸವನ್ನು ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಹೊಂದಿದ್ದಾರೆ. ಆದರೂ ಉಭಯ ಪಕ್ಷಗಳ ನಾಯಕರಲ್ಲಿ ಇದು ಪ್ರತಿಷ್ಠೆ ಪ್ರಶ್ನೆಯಾಗಿರುವುದರಿಂದ ಗೊಂದಲ ಇನ್ನಷ್ಟು ಹೆಚ್ಚಬಹುದು. ಅದೇ ರೀತಿ ಶಿವಮೊಗ್ಗ ಕೇಂದ್ರಿತ ನೈರುತ್ಯ ಪದವೀಧರರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಬಂಡಾಯವನ್ನು ಎದುರಿಸುತ್ತಿದೆ. ಈಗಾಗಲೇ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಬಂಡಾಯ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದಾರೆ. ಪದವೀಧರರ ಕ್ಷೇತ್ರಕ್ಕೂ ನಾಮಪತ್ರ ಸಲ್ಲಿಸಲು ಸಿದ್ದತೆ ನಡೆಸಿದ್ದು ಇಲ್ಲಿಯೂ ಬಂಡಾಯ ಎದುರಾಗಲಿದೆಯಾ ಎನ್ನುವ ಕುತೂಹಲವಿದೆ.

ಟ್ರೆಂಡಿಂಗ್​ ಸುದ್ದಿ

ದಕ್ಷಿಣ ಶಿಕ್ಷಕರ ಕ್ಷೇತ್ರ

ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಈಗಾಗಲೇ ಆ ಪಕ್ಷದ ಮುಖಂಡ ನಿಂಗರಾಜೇಗೌಡ ಅವರನ್ನು ಅಭ್ಯರ್ಥಿಯನ್ನಾಗಿ ಅಧಿಕೃತವಾಗಿ ಘೋಷಿಸಿದೆ. ಅವರು ನಾಮಪತ್ರವನ್ನು ಕೂಡ ಸಲ್ಲಿಸಿದ್ದಾರೆ. ಇದರ ನಡುವೆ ಈ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಡಬೇಕು ಎಂದು ಜೆಡಿಎಸ್‌ನ ಎಚ್‌.ಡಿ.ದೇವೇಗೌಡ ಹಾಗೂ ಎಚ್‌ಡಿ ಕುಮಾರಸ್ವಾಮಿ ಅವರು ಬಿಜೆಪಿ ವರಿಷ್ಠರೊಂದಿಗೆ ಮಾತನಾಡಿದ್ದರ ಫಲವಾಗಿ ಇದನ್ನು ಜೆಡಿಎಸ್‌ಗೆ ಬಿಟ್ಟು ಕೊಡಲಾಗಿದೆ ಎನ್ನಲಾಗುತ್ತಿದೆ.

ಈ ಕಾರಣದಿಂದಲೇ ನಿಂಗರಾಜೇಗೌಡ ಅವರು ನಾಮಪತ್ರವನ್ನು ಸಲ್ಲಿಸಿದರೂ ಯಾವುದೇ ಮುಖಂಡರು ಬಂದಿರಲಿಲ್ಲ. ಬಿಫಾರಂ ಕೂಡ ಕೊಟ್ಟಿರಲಿಲ್ಲ. ಇದರಿಂದ ಈ ಕ್ಷೇತ್ರ ಅಂತಿಮ ಹೇಳಲಾಗಿದೆ. ಈ ಗೊಂದಲವನ್ನು ಸ್ಥಳೀಯ ಮಟ್ಟದಲ್ಲಿ ಹೇಗೆ ಬಗೆಹರಿಸುತ್ತಾರೆ ಎನ್ನುವ ಚರ್ಚೆಗಳೂ ಇವೆ.

ಇನ್ನು ಈ ಕ್ಷೇತ್ರ ಜೆಡಿಎಸ್‌ಗೆ ಬಿಟ್ಟು ಕೊಟ್ಟರೂ ಇಲ್ಲಿ ಮಾಜಿ ಸಚಿವ ಸಾ.ರಾ.ಮಹೇಶ್‌ ಬೆಂಬಲಿಗ, ಜಂಗಲ್‌ ರೆಸಾರ್ಟ್ಸ್‌ ಲಿ. ಮಾಜಿ ಅಧ್ಯಕ್ಷ ವಿವೇಕಾನಂದ ಅವರನ್ನು ಅಭ್ಯರ್ಥಿ ಎಂದು ಘೋಷಿಸಲಾಗಿದೆ. ಈಗಾಗಲೇ ಎರಡು ಬಾರಿ ಪದವೀಧರರ ಕ್ಷೇತ್ರದಿಂದ ಸ್ಪರ್ಧಿಸಿ ಎರಡು ಬಾರಿ ಸೋತಿರುವ ವಿಧಾನಪರಿಷತ್‌ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅವರೂ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಅವರೂ ಬಂಡಾಯವಾಗಿ ಕಣಕ್ಕಿಳಿಯುವ ಸಾಧ್ಯತೆಯೂ ಇದೆ. ಇದರಿಂದ ಈ ಕೇತ್ರದಲ್ಲಿ ಒಂದು ಕಡೆ ಬಿಜೆಪಿ ಗೊಂದಲ, ಮತ್ತೊಂದು ಕಡೆ ಜೆಡಿಎಸ್‌ನ ಬಂಡಾಯ ಯಾವ ಸ್ವರೂಪಕ್ಕೆ ಹೋಗಲಿದೆಯೋ ಗೊತ್ತಿಲ್ಲ.

ನೈರುತ್ಯ ಶಿಕ್ಷಕ- ಪದವೀಧರರ ಕ್ಷೇತ್ರ

ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು ಹಾಗೂ ಶಿವಮೊಗ್ಗ, ದಾವಣಗೆರೆ ಜಿಲ್ಲೆಯ ಭಾಗವಾಗಿರುವ ನೈರುತ್ಯ ಶಿಕ್ಷಕರು ಹಾಗೂ ಪದವೀಧರ ಕ್ಷೇತ್ರದಲ್ಲಿ ಬಂಡಾಯ ಏರ್ಪಟ್ಟಿದೆ. ನೈರುತ್ಯ ಶಿಕ್ಷಕರ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಡಲಾಗಿದ್ದು. ಹಾಲಿ ಸದಸ್ಯ ಎಸ್.ಎಲ್‌.ಭೋಜೇಗೌಡ ಮತ್ತೊಮ್ಮೆ ಕಣಕ್ಕೆ ಇಳಿಯಲಿದ್ದಾರೆ. ಇಲ್ಲಿ ಬಿಜೆಪಿಯ ಮೂರ್ನಾಲ್ಕು ಮಂದಿ ಆಕಾಂಕ್ಷಿಗಳಿದ್ದರು. ಅವರಲ್ಲಿ ಹರೀಶ್‌ ಆಚಾರ್ಯ ನಾಮಪತ್ರ ಕೂಡ ಸಲ್ಲಿಸಿದ್ದು ಬಂಡಾಯದ ಬಾವುಟ ಹಾರಿಸಿದ್ದಾರೆ.

ಅದೇ ರೀತಿ ನೈರುತ್ಯ ಪದವೀಧರರ ಕ್ಷೇತ್ರದಲ್ಲೂ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿದೆ. ಇಲ್ಲಿ ಡಾ.ಧನಂಜಯ ಸರ್ಜಿ ಅವರಿಗೆ ಟಿಕೆಟ್‌ ನೀಡಲಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ ತಪ್ಪಿದ್ದ ಮಾಜಿ ಶಾಸಕ ರಘುಪತಿ ಭಟ್‌ ಪ್ರಬಲ ಆಕಾಂಕ್ಷಿಯಾಗಿದ್ದರು. ಅವರಿಗೆ ಅವಕಾಶ ಸಿಗದೇ ಇರುವುದರಿಂದ ಸ್ಪರ್ಧೆ ಮಾಡುವುದಾಗಿ ಹೇಳಿದ್ಧಾರೆ. ಆದರೆ ನಾಮಪತ್ರ ಸಲ್ಲಿಸಿದರೆ ಆನಂತರ ಬಂಡಾಯದ ಚಿತ್ರಣ ಸಿಗಲಿದೆ. ಎರಡು ಕ್ಷೇತ್ರಗಳಲ್ಲಿ ಒಬ್ಬರು ಬ್ರಾಹ್ಮಣರಿಗೆ ಅವಕಾಶ ನೀಡುವಂತಹ ಬೇಡಿಕೆ ಇತ್ತು. ಎರಡೂ ಕಡೆ ಸಿಗದೇ ಇರುವುದರಿಂದ ಬಿಜೆಪಿಯಲ್ಲಿರುವ ಕೆಲ ಬ್ರಾಹ್ಮಣ ಸಮುದಾಯದ ಆಕಾಂಕ್ಷಿಗಳು ಅಸಮಾಧಾನಗೊಂಡಿದ್ದಾರೆ ಎನ್ನಲಾಗುತ್ತಿದೆ.

ಪದವೀಧರರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮಾಜಿ ಶಾಸಕ ಆಯನೂರು ಮಂಜುನಾಥ್‌ ಅವರಿಗೆ ಟಿಕೆಟ್‌ ನೀಡಿದೆ. ಅಲ್ಲಿಯೂ ಎರಡು ಬಾರಿ ಸೋತಿದ್ದ ಎಸ್‌ ಪಿ ದಿನೇಶ್‌ ಬಂಡಾಯವಾಗಿ ನಾಮಪತ್ರ ಸಲ್ಲಿಸಿದ್ದಾರೆ, ಹೀಗಿದ್ದರೂ ಮೂರು ಕ್ಷೇತ್ರಗಳ ಚಿತ್ರಣ ನಾಮಪತ್ರ ಸಲ್ಲಿಕೆ, ವಾಪಾಸ್‌ ಪಡೆದ ನಂತರ ಸ್ಪಷ್ಟವಂತೂ ಆಗಲಿದೆ.

IPL_Entry_Point