Yatindra Siddaramaiah: ಯತೀಂದ್ರ ಸಿದ್ದರಾಮಯ್ಯಗೆ ಎಂಎಲ್ಸಿ ಸ್ಥಾನ ಪಕ್ಕ, ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್‌
ಕನ್ನಡ ಸುದ್ದಿ  /  ಕರ್ನಾಟಕ  /  Yatindra Siddaramaiah: ಯತೀಂದ್ರ ಸಿದ್ದರಾಮಯ್ಯಗೆ ಎಂಎಲ್ಸಿ ಸ್ಥಾನ ಪಕ್ಕ, ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್‌

Yatindra Siddaramaiah: ಯತೀಂದ್ರ ಸಿದ್ದರಾಮಯ್ಯಗೆ ಎಂಎಲ್ಸಿ ಸ್ಥಾನ ಪಕ್ಕ, ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್‌

Karnataka Politics ಕರ್ನಾಟಕ ವಿಧಾನಸಭೆಯಿಂದ ವಿಧಾನಪರಿಷತ್‌ ಗೆ ನಡೆಯುವ ಚುನಾವಣೆಗೆ ಕಾಂಗ್ರೆಸ್‌ ಪಟ್ಟಿ ಬಿಡುಗಡೆ ಮಾಡಿದೆ. ಸಿಎಂ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ, ಸಚಿವ ಬೋಸರಾಜು ಸ್ಥಾನ ಪಡೆದಿದ್ದಾರೆ.

ಡಾ.ಯತೀಂದ್ರ ಸಿದ್ದರಾಮಯ್ಯ, ಸಚಿವ ಬೋಸರಾಜು, ಹಾಲಿ ಸದಸ್ಯ ಗೋವಿಂದರಾಜು ಅವಕಾಶ ಪಡೆದಿದ್ದಾರೆ.
ಡಾ.ಯತೀಂದ್ರ ಸಿದ್ದರಾಮಯ್ಯ, ಸಚಿವ ಬೋಸರಾಜು, ಹಾಲಿ ಸದಸ್ಯ ಗೋವಿಂದರಾಜು ಅವಕಾಶ ಪಡೆದಿದ್ದಾರೆ.

ಬೆಂಗಳೂರು: ಕರ್ನಾಟಕ ವಿಧಾನಸಭೆಯಿಂದ ವಿಧಾನಪರಿಷತ್ತಿನ 11 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಅವರಿಗೆ ಟಿಕೆಟ್‌ ಪಕ್ಕಾ ಆಗಿದೆ. ಕಳೆದ ವಾರ ಇದೇ ವಿಚಾರದಲ್ಲಿ ಸಾಕಷ್ಟು ಚರ್ಚೆಗಳಾಗಿದ್ದವು. ಯತೀಂದ್ರ ಸಿದ್ದರಾಮಯ್ಯ ಅವರು ಕಳೆದ ವರ್ಷ ತಮ್ಮ ತಂದೆಗೆ ವರುಣಾ ಕ್ಷೇತ್ರ ಬಿಟ್ಟುಕೊಟ್ಟಿದ್ದರಿಂದ ಅವರಿಗೆ ಈ ಬಾರಿ ವಿಧಾನಪರಿಷತ್‌ಗೆ ನೇಮಕ ಮಾಡಲಾಗಿದೆ. ಭಾನುವಾರ ಪಟ್ಟಿಯನ್ನು ಬಿಡುಗಡೆ ಮಾಡಿರುವ ಕಾಂಗ್ರೆಸ್‌ ಸಚಿವ ಎನ್‌.ಎಸ್.ಬೋಸರಾಜು, ಹಾಲಿ ಸದಸ್ಯ ಕೆ.ಗೋವಿಂದರಾಜು ಸಹಿತ ಎಂಟು ಮಂದಿ ಹೆಸರನ್ನು ಅಂತಿಮಗೊಳಿಸಿದೆ. ಈಗಾಗಲೇ ಬಿಜೆಪಿ ಕೂಡ ಪಟ್ಟಿ ಬಿಡುಗಡೆ ಮಾಡಿತ್ತು.

ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಎಂಟು ಮಂದಿಯನ್ನು ಕರ್ನಾಟಕ ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆಯಲಿರುವ ಚುನಾವಣೆಗೆ ಅಭ್ಯರ್ಥಿಗಳನ್ನಾಗಿಸಲು ಅನುಮೋದನೆ ನೀಡಿದ್ದಾರೆ ಎಂದು ಪಕ್ಷದ ರಾಷ್ಟ್ರಿಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ತಿಳಿಸಿದ್ದಾರೆ.

ಹಾಲಿ ಸಚಿವ ಎನ್‌.ಎಸ್.ಬೋಸರಾಜು(ರಾಯಚೂರು), ಹಾಲಿ ಸದಸ್ಯ ಕೆ.ಗೋವಿಂದರಾಜು( ಬೆಂಗಳೂರು), ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ( ಮೈಸೂರು), ವಸಂತಕುಮಾರ್‌( ರಾಯಚೂರು), ಐವಾನ್‌ ಡಿಸೋಜಾ( ದಕ್ಷಿಣ ಕನ್ನಡ), ಬಿಲ್ಕಿಸ್‌ ಬಾನು( ಶಿವಮೊಗ್ಗ), ಜಗದೇವ್‌ ಗುತ್ತೇದಾರ್‌( ಕಲಬುರಗಿ) ಹಾಗೂ ಸದ್ಯವೇ ಪ್ರಕಟವಾಗಲಿರುವ ಮರು ಚುನಾವಣೆಗೆ ಬಸನಗೌಡ ಬಾದರ್ಲಿ( ಸಿಂಧನೂರು) ಅವರ ಹೆಸರು ಪ್ರಕಟಿಸಲಾಗಿದೆ.

́ಏಳು ಸ್ಥಾನಗಳಿಗೆ ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿತ್ತು. 300 ಕ್ಕೂ ಅಧಿಕ ಮಂದಿ ಆಕಾಂಕ್ಷಿಗಳಾಗಿದ್ದರು. ಮಾಜಿ ಸಚಿವರು, ಶಾಸಕರ ದಂಡೇ ಲಾಬಿ ನಡೆಸಿತ್ತು. ಇತ್ತೀಚಿಗಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್‌ ಗೆ ಬಂದಿದ್ದ ಇಬ್ಬರು ಪರಿಷತ್‌ ಸದಸ್ಯರಾದ ತೇಜಸ್ವಿನಿ ಗೌಡ, ಕೆ.ಪಿ.ನಂಜುಂಡಿ ಸಹಿತ ಹಲವರು ಪ್ರಯತ್ನ ನಡೆಸಿದ್ದರು. ಆದರೆ ಕಾಂಗ್ರೆಸ್‌ ಹೈ ಕಮಾಂಡ್‌ ಅಳೆದು ತೂಗಿ ಪಟ್ಟಿಯನ್ನು ಪ್ರಕಟಿಸಿದೆ.ಇದರಿಂದ ಒಕ್ಕಲಿಗರು. ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರಿಗೂ ಅವಕಾಶ ಮಾಡಿಕೊಡಲಾಗಿದೆ.

ಯತೀಂದ್ರ ಆಯ್ಕೆ ಏಕೆ?

ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಕಳೆದ ಬಾರಿ ವರುಣಾ ಕ್ಷೇತ್ರದ ಶಾಸಕರಾಗಿದ್ದರು.ಅಲ್ಲಿಂದಲೇ ಅವರು ಸ್ಪರ್ಧಿಸಲು ಅಣಿಯಾಗಿದ್ದರು. ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ಪರ್ಧಿಸಬೇಕಾಗಿತ್ತು. ಪಕ್ಷದ ಸೂಚನೆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ವರುಣಾದಿಂದಲೇ ಸ್ಪರ್ಧಿಸಿ ಗೆದ್ದಿದ್ದರು. ಆಗ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದ ಡಾ.ಯತೀಂದ್ರ ಅವರಿಗೆ ಲೋಕಸಭೆ ಚುನಾವಣೆ ಇಲ್ಲವೇ ಎಂಎಲ್ಸಿ ಸ್ಥಾನ ನೀಡುವ ಅಭಯವನ್ನು ನೀಡಲಾಗಿತ್ತು. ಕೊನೆಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸದ ಯತೀಂದ್ರ ಅವರನ್ನು ಈಗ ಎಂಎಲ್ಸಿ ಸ್ಥಾನಕ್ಕೆ ನೇಮಕ ಮಾಡಲಾಗಿದೆ.

ಮುಂದೆ ಅಧಿಕಾರ ಬಿಡುವ ಸನ್ನಿವೇಶ ಎದುರಾದರೆ ಯತೀಂದ್ರ ಅವರನ್ನು ಸಚಿವರನ್ನಾಗಿ ಮಾಡಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿಸಬೇಕು ಎನ್ನುವ ಇರಾದೆ ಸಿದ್ದರಾಮಯ್ಯ ಅವರಲ್ಲಿದೆ. ಈ ಕಾರಣದಿಂದಲೇ ಮಗನಿಗೆ ಪರಿಷತ್‌ ಸ್ಥಾನ ಕೊಡಿಸಿದ್ದಾರೆ ಎನ್ನುವ ಮಾತುಗಳು ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬಂದಿವೆ.

ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಎನ್‌.ಎಸ್.ಬೋಸರಾಜು ಅವರು ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತರು. ಹಾಲಿ ಪರಿಷತ್‌ನಲ್ಲಿ ಪಕ್ಷದ ನಾಯಕರೂ ಹೌದು. ಈ ಕಾರಣದಿಂದ ಅವರಿಗೆ ಮತ್ತೊಂದು ಅವಕಾಶವನ್ನು ಮಾಡಿಕೊಡಲಾಗಿದೆ.

ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆ ದಿನ

ಕೇಂದ್ರ ಚುನಾವಣಾ ಆಯೋಗ ದಿನಾಂಕವನ್ನುಈಗಾಗಲೇ ಪರಿಷತ್‌ ಚುನಾವಣೆಗೆ ದಿನಾಂಕಗಳನ್ನು ಪ್ರಕಟಿಸಿದ್ದು ಜೂನ್ 13 ರಂದು ಮತದಾನ ನಡೆಯಲಿದೆ. ನಾಮಪತ್ರ ಸಲ್ಲಿಸಲು ಜೂನ್ 3 ಕೊನೆಯ ದಿನವಾಗಿದ್ದು, ಜೂನ್ 4ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಜೂನ್ 6ರಂದು ನಾಮಪತ್ರ ವಾಪಸ್ ಪಡೆಯಲು ಕೊನೆ ದಿನವಾಗಿರುತ್ತದೆ. ಮತದಾನ ದಿನ ಸಂಜೆ ಐದು ಗಂಟೆಗೆ ಮತ ಎಣಿಕೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಮಾಹಿತಿ ನೀಡಿದೆ.ವಿಧಾನಸಭೆಯಿಂದ ವಿಧಾನಪರಿಷತ್‌ ಗೆ ಆಯ್ಕೆಯಾಗಿರುವ 11 ಸದಸ್ಯರ ಅವಧಿ ಜೂನ್ 17 ರಂದು ಕೊನೆಗೊಳ್ಳಲಿದೆ.

ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜ್, ರಘುನಾಥ ರಾವ್ ಮಲ್ಕಾಪುರೆ, ಎನ್. ರವಿಕುಮಾರ್, ಎಸ್.ರುದ್ರೇಗೌಡ, ಕೆ.ಹರೀಶ್ ಕುಮಾರ್, ಮುನಿರಾಜುಗೌಡ ಪಿ.ಎಂ ಮತ್ತು ಬಿ.ಎಂ. ಫಾರೂಕ್, ಅರವಿಂದ ಕುಮಾರ್ ಅರಳಿ, ಅವರ ಅವಧಿ ಕೊನೆಗೊಳ್ಳಲಿದೆ. ಬಿಜೆಪಿಯ ಡಾ.ತೇಜಸ್ವಿನಿ ಗೌಡ ಮತ್ತು ಕೆ.ಪಿ. ನಂಜುಂಡಿ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದಾರೆ.


(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner