Karnataka Naxal News: ಪೊಲೀಸ್ ಕಸ್ಟಡಿ ಅಂತ್ಯ; ನಕ್ಸಲ್ ನಾಯಕ ಬಿಜಿಕೆ, ಸಾವಿತ್ರಿ ಮರಳಿ ಕೇರಳ ಜೈಲಿಗೆ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Naxal News: ಪೊಲೀಸ್ ಕಸ್ಟಡಿ ಅಂತ್ಯ; ನಕ್ಸಲ್ ನಾಯಕ ಬಿಜಿಕೆ, ಸಾವಿತ್ರಿ ಮರಳಿ ಕೇರಳ ಜೈಲಿಗೆ

Karnataka Naxal News: ಪೊಲೀಸ್ ಕಸ್ಟಡಿ ಅಂತ್ಯ; ನಕ್ಸಲ್ ನಾಯಕ ಬಿಜಿಕೆ, ಸಾವಿತ್ರಿ ಮರಳಿ ಕೇರಳ ಜೈಲಿಗೆ

Karnataka Naxal News: ಕೇರಳ ಪೊಲೀಸರು ಬಂಧಿಸಿ ಕರ್ನಾಟಕದಲ್ಲಿನ ಪ್ರಕರಣಗಳ ವಿಚಾರಣೆಗೆ ಕರೆ ತಂದಿದ್ದ ನಕ್ಸಲ್‌ ನಾಯಕ ಬಿ.ಜಿ.ಕೃಷ್ಣಮೂರ್ತಿ ಹಾಗೂ ಸಾವಿತ್ರಿ ಅವರನ್ನು ದಕ್ಷಿಣ ಕನ್ನಡದಿಂದ ಕೇರಳದ ಜೈಲಿಗೆ ಕಳುಹಿಸಲಾಯಿತು.ವರದಿ: ಹರೀಶ ಮಾಂಬಾಡಿ, ಮಂಗಳೂರು

ಬೆಳ್ತಂಗಡಿ ಪೊಲೀಸ್‌ ವಿಚಾರಣೆ ಬಳಿಕ ಬಿ.ಜಿ.ಕೃಷ್ಣಮೂರ್ತಿ ಹಾಗೂ ಸಾವಿತ್ರಿ ಅವರನ್ನು ಕೇರಳ ಪೊಲೀಸರು ಕರೆದೊಯ್ದರು.
ಬೆಳ್ತಂಗಡಿ ಪೊಲೀಸ್‌ ವಿಚಾರಣೆ ಬಳಿಕ ಬಿ.ಜಿ.ಕೃಷ್ಣಮೂರ್ತಿ ಹಾಗೂ ಸಾವಿತ್ರಿ ಅವರನ್ನು ಕೇರಳ ಪೊಲೀಸರು ಕರೆದೊಯ್ದರು.

Karnataka Naxal News: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ನಕ್ಸಲ್ ಚಟುವಟಿಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆಗಾಗಿ ಕೇರಳದ ಜೈಲಿನಿಂದ ಬಾಡಿ ವಾರೆಂಟ್ ಮೂಲಕ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದ ಇಬ್ಬರು ನಕ್ಸಲ್ ನಾಯಕರುಗಳ ಪೊಲೀಸ್‌ಕಸ್ಟಡಿಯ ಅವಧಿ ಮುಗಿದ ಹಿನ್ನಲೆಯಲ್ಲಿ ಅವರನ್ನು ಶುಕ್ರವಾರ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಲಯದ ಆದೇಶದಂತೆ ಕೇರಳದ ಜೈಲಿಗೆ ಮರಳಿ ಕಳುಹಿಸಲಾಗಿದೆ 2021ರ ನವೆಂಬರ್ 8ರಂದು ಕೇರಳ ರಾಜ್ಯದ ಪೊಲೀಸರು ನಕ್ಸಲ್ ನಾಯಕರಾದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ನಿವಾಸಿ ನಕ್ಸಲ್ ಪಶ್ಚಿಮ ಘಟ್ಟದ ವಿಶೇಷ ಸಮಿತಿಯ ಕಾರ್ಯದರ್ಶಿಯಾಗಿದ್ದ ಬಿ.ಜಿ.ಕೃಷ್ಣಮೂರ್ತಿ (50) ಮತ್ತು ಚಿಕ್ಕಮಗಳೂರು ಜಿಲ್ಲೆಯ ಕಳಸ ನಿವಾಸಿ ಸಾವಿತ್ರಿ (36)ಯನ್ನು ಬಂಧಿಸಿದ್ದರು. ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಬಿ.ಜಿ.ಕೃಷ್ಣಮೂರ್ತಿ ವಿರುದ್ಧ 53 ಪ್ರಕರಣ ,ಸಾವಿತ್ರಿ ವಿರುದ್ಧ 22 ಪ್ರಕರಣ ತನಿಖೆಯಲ್ಲಿದೆ.

2012-2013ರಲ್ಲಿ ನಡೆದ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾಮಚಂದ್ರ ಭಟ್ ಮನೆಯ ಅಂಗಳದಲ್ಲಿದ್ದ ಕಾರು, ಬೈಕ್ ಗೆ ಬೆಂಕಿ ಹಚ್ಚಿದ ಪ್ರಕರಣ,ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಕಾರ್ಯತಡ್ಕ ಗ್ರಾಮದಲ್ಲಿ ನಕ್ಸಲ್ ಬೆಂಬಲಿತ ಬ್ಯಾನರ್ ಹಾಕಿದ ಪ್ರಕರಣ,ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಮಲವಂತಿಗೆ ಗ್ರಾಮದಲ್ಲಿ ಭಾರಿ ಸ್ಪೋಟಕ ಪತ್ತೆ ಪ್ರಕರಣದಲ್ಲಿ ಇವರಿಬ್ಬರು ಆರೋಪಿಗಳಾಗಿದ್ದು ಬೆಳ್ತಂಗಡಿ ಪೊಲೀಸರು ಇಬ್ಬರನ್ನು ಬಾಡಿ ವಾರೆಂಟ್ ಮೂಲಕ ಕೇರಳ ರಾಜ್ಯದ ತ್ರಿಶೂರ್ ಜೈಲಿನಿಂದ ಏ.7 ರಂದು ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ತನಿಖೆ ನಡೆಸಿದ್ದರು.

ಏ.11 ರಂದು ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಬೆಳ್ತಂಗಡಿ ಹೆಚ್ಚುವರಿ ಸಿವಿಲ್ ಮತ್ತು ಜೆಎಮ್ಎಫ್ಸಿ ನ್ಯಾಯಾಲಯದ ನ್ಯಾಯಾಧೀಶರಾದ ವಿಜಯೇಂದ್ರ ಟಿ.ಎಸ್ ಮುಂದೆ ಹಾಜರುಪಡಿಸಿದ್ದು. ನ್ಯಾಯಾಲಯ ವಾಪಸ್ ಕೇರಳದ ತ್ರಿಶೂರ್ ಜೈಲಿಗೆ ಕಳುಹಿಸಲು ಆದೇಶ ಮಾಡಿದ್ದು ಅದರಂತೆ ಇಬ್ಬರು ನಕ್ಸಲರನ್ನು ಬೆಳ್ತಂಗಡಿ ಪೊಲೀಸರು ಬಿಗಿ ಭದ್ರತೆಯಲ್ಲಿ ಕೇರಳದ‌ ಜೈಲಿಗೆ ಕಳುಹಿಸಲಾಗಿದೆ.

ಬಿ ಜಿ ಕೃಷ್ಣಮೂರ್ತಿ ಅವರು ಚಿಕ್ಕಮಗಳೂರು ಜಿಲ್ಲೆ ನೆಮ್ಮಾರು ಬುಕ್ಕಡಿಬೈಲ್ ಗ್ರಾಮದ ಮೂಲದವರು. ಶಿವಮೊಗ್ಗದಲ್ಲಿ ಹಲವಾರು ಸಾಮಾಜಿಕ ಹೋರಾಟಗಳಲ್ಲಿ ಬಿ ಜಿ ಕೃಷ್ಣಮೂರ್ತಿ ಸಕ್ರಿಯವಾಗಿದ್ದರು. ಕರ್ನಾಟಕದಲ್ಲಿ ಮೂರು ದಶಕದ ಹಿಂದೆಯೇ ನಕ್ಸಲ್ ಚಳುವಳಿ ಹುಟ್ಟಿಕೊಂಡಾಗ ಇವರು ಹೋರಾಟದಲ್ಲಿ ಸೇರಿಕೊಂಡರು.

ಕೃಷ್ಣಮೂರ್ತಿ ಮತ್ತವರ ತಂಡವರು ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಉಡುಪಿ ಭಾಗದ ಅರಣ್ಯ ಭಾಗದಲ್ಲಿ ಸಂಚಾರ ನಡೆಸುತ್ತಾ,‌‌ ಸರ್ಕಾರಗಳ‌ ವಿರುದ್ಧ ಜನ ಸಂಘಟನೆಯನ್ನು ಮಾಡುವುದನ್ನು ಎರಡು ದಶಕದಿಂದಲೂ ಮಾಡಿಕೊಂಡು ಬಂದಿದ್ದರು. ಕೆಲವು ಕಡೆ ಸರ್ಕಾರಕ್ಕೆ ಬೆದರಿಸುವ ಕೆಲಸವನ್ನು ಮಾಡುತ್ತಿದ್ದರು. ಮೂರು ಜಿಲ್ಲೆ ಗಡಿ ಭಾಗಗಳ ಅರಣ್ಯ ಪ್ರದೇಶದ ಅಂಚಿನ ಗ್ರಾಮಗಳಲ್ಲಿ ಕರಪತ್ರ ಹಂಚುವುದು, ಬ್ಯಾನರ್ ಕಟ್ಟುವುದು ಮಾಡುತ್ತಿದ್ದರು. ಮನೆಗಳಿಗೆ ನುಗ್ಗಿ ಬೆದರಿಕೆ ಹಾಕುವುದು ನಡೆದಿತ್ತು. ಸರ್ಕಾರ ಇವರನ್ನು ತಡೆಯುವ ಪ್ರಯತ್ನ ನಡೆಸಿದಾಗ ಇವರು ಉಗ್ರ ಸ್ವರೂಪದ ಹೋರಾಟಕ್ಕೆ ಇಳಿದರು. ಇದರ ಪರಿಣಾಮವಾಗಿ ಆಗುಂಬೆ ಬಳಿಯ ಅರಣ್ಯ ಇಲಾಖೆ ಚೆಕ್ ಪೋಸ್ಟ್​ ಸುಟ್ಟ ಪ್ರಕರಣ ಸಹಿತ ಹಲವು ಹಿಂಸಾಚಾರದ ಪ್ರಕರಣ ದಾಖಲಾಗಿದ್ದವು.

ಇದಲ್ಲದೇ ಬಿದರಗೋಡಿನ ಮನೆಯೊಂದರಲ್ಲಿ ದರೋಡೆ ನಡೆಸಿದ ಪ್ರಕರಣವೂ ಇವರ ಮೇಲಿತ್ತು. ಆಣಂತರ ಹೊಸಗದ್ದೆ ಬಳಿ ಕೆಎಸ್​ಆರ್​ಟಿಸಿ ಬಸ್ ಸುಟ್ಟ ಪ್ರಕರಣಗಳು ನಡೆದ್ದವು. ಈ ಮೂರು ಪ್ರಕರಣ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದವು. ಸಾಕೇತ್ ರಾಜನ್ ರನ್ನು ಪೊಲೀಸರು ಶೂಟೌಟ್ ಮಾಡಿದ ಮೇಲೆ ರಾಜ್ಯದ ನಕ್ಸಲ್ ನೇತೃತ್ವವನ್ನುಬಿಜಿಕೆ ವಹಿಸಿಕೊಂಡಿದ್ದರು. ಆನಂತರ ಕೇರಳಕ್ಕೂ ನಕ್ಸಲ್‌ ಚಟುವಟಿಕೆ ವಿಸ್ತರಿಸಿ ಅಲ್ಲಿಯೂ ಅವರ ವಿರುದ್ದ ಪ್ರಕರಣ ದಾಖಲಾಗಿದ್ದವು.

ಕರ್ನಾಟಕದಲ್ಲಿ ಈಗಾಗಲೇ ಏಳು ಮಂದಿ ನಕ್ಸಲರು ಶರಣಾಗಿದ್ದಾರೆ. ಅವರಿಗೆ ಪ್ಯಾಕೇಜ್‌ ಅನ್ನು ಸರ್ಕಾರ ಘೋಷಿಸಿದೆ. ಇದೇ ರೀತಿ ಬಿ ಜಿ ಕೃಷ್ಣಮೂರ್ತಿ ಹಾಗು ಸಾವಿತ್ರಿ ಅವರನ್ನು ಮುಖ್ಯ ವಾಹಿನಿಗೆ ತರುವ ಪ್ರಯತ್ನ ನಡೆದಿವೆ.

ವರದಿ: ಹರೀಶ ಮಾಂಬಾಡಿ, ಮಂಗಳೂರು

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.
Whats_app_banner