ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಶರಣಾದ 6 ನಕ್ಸಲರಿಗೆ ನ್ಯಾಯಾಂಗ ಬಂಧನ; ಜನವರಿ 30 ರವರೆಗೆ ಪರಪ್ಪನ ಅಗ್ರಹಾರ ಜೈಲಿಗೆ ವರ್ಗಾವಣೆ
Karnataka Naxal Surrender: ಮುಖ್ಯಮಂತ್ರಿ ಸಮ್ಮುಖದಲ್ಲಿ ಶರಣಾದ 6 ನಕ್ಸಲರಿಗೆ ನ್ಯಾಯಾಂಗ ಬಂಧನವನ್ನು ಎನ್‌ಐಎ ಕೋರ್ಟ್ ವಿಧಿಸಿದೆ. ಜನವರಿ 30 ರವರೆಗೆ ಪರಪ್ಪನ ಅಗ್ರಹಾರ ಜೈಲಿಗೆ ವರ್ಗಾವಣೆ ಮಾಡಲಾಗಿದೆ. ಶರಣಾದ ನಕಲ್ಸರು ಮತ್ತು ಸರ್ಕಾರದ ಜವಬ್ದಾರಿಗಳೇನು? ಎಂಬಿತ್ಯಾದಿ ವಿವರ ಇಲ್ಲಿದೆ.(ವರದಿ- ಎಚ್. ಮಾರುತಿ, ಬೆಂಗಳೂರು)
Karnataka Naxal Surrender: ರಾಜ್ಯ ಸರ್ಕಾರದ ಮುಂದೆ ನಿನ್ನೆ ಶರಣಾಗಿದ್ದ 6 ನಕ್ಸಲ್ ನಾಯಕರಿಗೆ ಜನವರಿ 30 ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಲಾಗಿದೆ. ಎಲ್ಲ ಅರು ಮಂದಿ ನಕ್ಸಲರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ. ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎದುರು ಶರಣಾಗಿದ್ದ ಮುಂಡಗಾರು ಲತಾ, ಸುಂದರಿ ಕೊತ್ಲೂರು, ವನಜಾಕ್ಷಿ ಬಾಳೆಹೊಳೆ, ಜಿಶಾ, ವಸಂತ್, ಮಾರೆಪ್ಪ ಅರೋಲಿ ಅವರನ್ನು ರಾಷ್ಟ್ರೀಯ ತನಿಖಾ ದಳದ (ಎನ್ ಐ ಎ) ವಿಶೇಷ ಕೋರ್ಟ್‌ನ ನ್ಯಾಯಾಧೀಶರಾದ ಗಂಗಾಧರ್ ಅವರ ಮುಂದೆ ಹಾಜರುಪಡಿಸಲಾಗಿತ್ತು. ಚಿಕ್ಕಮಗಳೂರು ಡಿವೈಎಸ್‌ಪಿ ಬಾಲಾಜಿ ಸಿಂಗ್ ಎಲ್ಲ ನಕ್ಸಲರನ್ನೂ ಹಾಜರುಪಡಿಸಿದ್ದರು. ಶರಣಾಗಿರುವ ನಕ್ಸಲರನ್ನು ಜನವರಿ 30ರವರೆಗೆ ಅಂದರೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಇಂದು ಕೋರ್ಟ್ ನಿಂದ ನೇರವಾಗಿ ಪರಪ್ಪನ ಅಗ್ರಹಾರ ಜೈಲಿಗೆ ಪೊಲೀಸರು ಕರೆದುಕೊಂಡು ಹೋಗಲಿದ್ದಾರೆ.
ಕರ್ನಾಟಕ ಈಗ ನಕ್ಸಲ್ ಮುಕ್ತ ರಾಜ್ಯ; ಸಿಎಂ ಸಿದ್ದರಾಮಯ್ಯ ಘೋಷಣೆ
ಕರ್ನಾಟಕ ಈಗ ನಕ್ಸಲ್ ಮುಕ್ತ ರಾಜ್ಯ ಎಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಘೋಷಿಸಿದ್ದಾರೆ. ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಸಂಕೀರ್ಣದ ಆವರಣದಲ್ಲಿರುವ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಡಿಸಿಪಿ ಹೆಚ್.ಟಿ. ಶೇಖರ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ನ್ಯಾಯಾಲಯಕ್ಕೆ ಹಾಜರುಪಡಿಸುವುದಕ್ಕೂ ಮುನ್ನ ಎಲ್ಲ ನಕ್ಸಲರನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿತ್ತು. ನಿನ್ನೆ ಶರಣಾದ ನಕ್ಸಲರಲ್ಲಿ ನಾಲ್ವರು ಮಹಿಳೆಯರು, ಇಬ್ಬರು ಪುರುಷ ನಕ್ಸಲರಿದ್ದಾರೆ.
ಕರ್ನಾಟಕದಲ್ಲಿ ಉಳಿದಿರೋದು ಒಬ್ಬ ನಕ್ಸಲ್; ರವೀಂದ್ರ ಎಲ್ಲಿದ್ದಾನೆ
ಕರ್ನಾಟಕದಲ್ಲಿ ಬಾಕಿ ಇದ್ದ 8 ನಕ್ಸಲರ ಪೈಕಿ ವಿಕ್ರಂಗೌಡ ಅವರನ್ನು ಎನ್‌ಕೌಂಟರ್ ಮಾಡಲಾಗಿದೆ. ಉಳಿದ 7 ಮಂದಿಯ ಪೈಕಿ 6 ನಕ್ಸಲರು ಶರಣಾಗತಿಯಾಗಿದ್ದಾರೆ. ಆದರೆ ಏಕೈಕ ನಕ್ಸಲ್ ರವೀಂದ್ರ ಶರಣಾಗಿಲ್ಲ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮೂಲದ ರವೀಂದ್ರ ವಿರುದ್ಧ 14 ಪಪ್ರಕರಣಗಳಿವೆ. ಈತ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ. ಕಳೆದ 18 ವರ್ಷಗಳಿಂದ ನಕ್ಸಲ್ ರವೀಂದ್ರ ಭೂಗತನಾಗಿದ್ದಾನೆ.
ನಕ್ಸಲರು ಶರಣಾಗಿದ್ದರೂ ಇವರ ವಿರುದ್ಧ ದಾಖಲಾಗಿರುವ ಅಪರಾಧಗಳ ಕಾನೂನು ಪ್ರಕ್ರಿಯೆ ನ್ಯಾಯಾಲಯದಲ್ಲಿ ಮುಂದುವರಿಯುತ್ತವೆ. ಇವರ ವಿರುದ್ಧ ಇರುವ ಪ್ರಕರಣಗಳನ್ನು ಹಿಂಪಡೆಯುವುದು ಅಸಾಧ್ಯ. ಆದರೆ ಸರ್ಕಾರ ಶರಣಾದ ನಕ್ಸಲರಿಗೆ ಉಚಿತ ಕಾನೂನು ಸೇವೆ ಒದಗಿಸಬಹುದು ಮತ್ತು ತ್ವರಿತ ವಿಚಾರಣೆಗಾಗಿ ತ್ವರಿತಗತಿ ನ್ಯಾಯಾಲಯ ರಚನೆ ಮಾಡಲೂಬಹುದು.
ನಕ್ಸಲರು ಪೂರೈಸಬೇಕಾದ ಹೊಣೆಗಾರಿಕೆಗಳು
ನಕ್ಸಲ್ ಶರಣಾಗತಿ ನಿಯಮಾವಳಿ ಪ್ರಕಾರ ಶರಣಾಗತರಾದ ನಕ್ಸಲರು ತಮ್ಮ ನಿಜವಾದ ಹೆಸರು, ಗುರುತು, ಚಟುವಟಿಕೆ, ಸಂಘಟನೆಯ ಹೆಸರು, ಶಸ್ತ್ರಾಸ್ತ್ರ ಸರಬರಾಜು ಮೂಲದ ಬಗ್ಗೆ ಮಾಹಿತಿ ನೀಡಬೇಕು. ಅಲ್ಲದೆ ಸಂಘಟನೆಗೆ ಹಣಕಾಸು ನೆರವು ಒದಗಿಸುವವರ ಬಗ್ಗೆ ಮಾಹಿತಿ ಕೊಡಬೇಕು. ಹಿಂದೆ ಭಾಗಿಯಾಗಿದ್ದ ಅಪರಾಧಗಳ ಮಾಹಿತಿ ಮತ್ತು ಬಳಸಿದ ಆಯುಧಗಳ ಮಾಹಿತಿಯನ್ನು ನೀಡಬೇಕಿದೆ. ಮಾಧ್ಯಮಗಳ ಮುಂದೆ ಸ್ವ ಇಚ್ಛೆಯಿಂದ ಶರಣಾಗುತ್ತಿದ್ದೇನೆ ಎಂದು ಹೇಳಿಕೆ ನೀಡಬೇಕಿದೆ.
ಶರಣಾದ ನಕ್ಸಲರ ಮೇಲೆ ಎರಡು ವರ್ಷಗಳವರೆಗೆ ನಿಗಾವಹಿಸಲಾಗುತ್ತದೆ. ಆಂತರಿಕ ಭದ್ರತಾ ವಿಭಾಗದ ಡಿವೈಎಸ್ಪಿ ಶ್ರೇಣಿಯ ಪೊಲೀಸ್ ಅಧಿಕಾರಿಯು ಈ ಶರಣಾಗತ ನಕ್ಸಲರಿಗೆ ಸಂಪರ್ಕಾಧಿಕಾರಿಯಾಗಿರುತ್ತಾರೆ. ಈ ಅಧಿಕಾರಿಯು ಶರಣಾಗತರಾದ ವ್ಯಕ್ತಿಗಳ ಚಲನವಲನದ ಬಗ್ಗೆ ನಿಗಾವಹಿಸಿ ಪ್ರತಿ ತಿಂಗಳು ಎರಡು ವರ್ಷಗಳವರೆಗೆ ಕರ್ನಾಟಕ ಸರ್ಕಾರಕ್ಕೆ ವರದಿ ಸಲ್ಲಿಸುತ್ತಾರೆ.
(ವರದಿ- ಎಚ್. ಮಾರುತಿ, ಬೆಂಗಳೂರು)