Karnataka New DGP: ಕರ್ನಾಟಕ ಮುಂದಿನ ಡಿಜಿಪಿ ಯಾರು? ಪೊಲೀಸ್ ಮುಖ್ಯಸ್ಥರ ಹುದ್ದೆಗೆ ಇಬ್ಬರ ಹೆಸರು ಪ್ರಸ್ತಾಪ
Karnataka New DGP: ಕರ್ನಾಟಕ ಪೊಲೀಸ್ ಮಹಾನಿರ್ದೇಶಕರ ಹುದ್ದೆಗೆ ಹೊಸಬರನ್ನು ನೇಮಕ ಮಾಡುವ ಪ್ರಕ್ರಿಯೆ ಶುರುವಾಗಿದೆ. ಈ ಮಾಸಾಂತ್ಯಕ್ಕೆ ಹಾಲಿ ಡಿಜಿಪಿ ಡಾ.ಅಲೋಕ್‌ಮೋಹನ್ ನಿವೃತ್ತರಾಗಲಿದ್ದಾರೆ.

Karnataka New DGP:ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರಾಗಿರುವ ಡಾ.ಅಲೋಕ್‌ಮೋಹನ್ ಅವರು ಈ ವರ್ಷದ ಏಪ್ರಿಲ್ ಅಂತ್ಯಕ್ಕೆ ಸೇವೆಯಿಂದ ನಿವೃತ್ತರಾಗಲಿದ್ದು. ಕರ್ನಾಟಕದ ಪೊಲೀಸ್ ಮುಖ್ಯಸ್ಥರ ಹುದ್ದೆ ಖಾಲಿಯಾಗಲಿದೆ. ಈ ಹುದ್ದೆಗೆ ಹೊಸ ಪೊಲೀಸ್ ಮಹಾನಿರ್ದೇಶಕರನ್ನು ನೇಮಿಸಬೇಕಾಗಿದ್ದು, ಏಪ್ರಿಲ್ ಮೂರನೇ ಇಲ್ಲವೇ ನಾಲ್ಕನೇ ವಾರದಂದು ಹೆಸರು ಅಂತಿಮವಾಗಬಹುದು. ಇಬ್ಬರ ಹೆಸರು ಆ ಹುದ್ದೆಗೆ ಚಾಲ್ತಿಯಲ್ಲಿದೆ. ಸದ್ಯ ಕರ್ನಾಟಕ ಲೋಕಾಯುಕ್ತ ಪೊಲೀಸ್ ಮಹಾನಿರ್ದೇಶಕರಾಗಿರುವ ಪ್ರಶಾಂತ್‌ಕುಮಾರ್ ಠಾಕೂರ್ ಸೇವಾ ಹಿರಿತನ ಹೊಂದಿದ್ದು ಅವರನ್ನು ಆಯ್ಕೆ ಮಾಡಬಹುದು. ಕರ್ನಾಟಕದಲ್ಲಿ ಅಲ್ಪಸಂಖ್ಯಾತ ಅಧಿಕಾರಿಯೊಬ್ಬರು ಡಿಜಿಪಿಯಾಗಿ , ಅದು ಕನ್ನಡಿಗರೊಬ್ಬರು ಮಹಾನಿರ್ದೇಶಕರಾಗಿ ನೇಮಕಗೊಂಡಿಲ್ಲ. ಇದರಿಂದ ಸದ್ಯ ಸಿಐಡಿ ಡಿಜಿಪಿಯಾಗಿರುವ ಡಾ.ಎಂ.ಎ. ಸಲೀಂ ಅವರನ್ನು ಡಿಜಿಪಿಯಾಗಿ ನೇಮಕ ಮಾಡುವ ಸಾಧ್ಯತೆಗಳು ದಟ್ಟವಾಗಿವೆ.
ಕರ್ನಾಟಕದ ಪೊಲೀಸ್ ಪಡೆಯ ಮುಖ್ಯಸ್ಥರನ್ನು ಹಿರಿತನದ ಆಧಾರದ ಮೇಲೆಯೇ ನೇಮಕ ಮಾಡಿಕೊಂಡು ಬರುತ್ತಿರುವ ಉದಾಹರಣೆಯಿದೆ. ಎಲ್ಲಾ ರಾಜ್ಯಗಳು ಇದೇ ಪದ್ದತಿಯಿದೆ. ಆದರೆ ಕೆಲವೊಮ್ಮೆ ಆಯಾ ರಾಜ್ಯ ಸರ್ಕಾರಗಳು ಕೆಲವೊಮ್ಮೆ ಹಿರಿತನಕ್ಕಿಂತ ಅರ್ಹತೆ ಹಾಗೂ ಸಾಮಾಜಿಕ ನ್ಯಾಯದ ಅಂಶವನ್ನು ಪರಿಗಣಿಸಿರುವ ಉದಾಹರಣೆಯಿದೆ.
ಈ ಬಾರಿಯೂ ಡಿಜಿಪಿ ಡಾ.ಅಲೋಕ್‌ಮೋಹನ್ ಅವರು ನಿವೃತ್ತಿಯಾಗುತ್ತಿದ್ದು. ಹೊಸ ಮಹಾನಿರ್ದೇಶಕರ ನೇಮಕ ಪ್ರಕ್ರಿಯೆ ಶುರುವಾಗಿದೆ. ಅಲೋಕ್‌ಮೋಹನ್ ಅವರು ಸುದೀರ್ಘ 38 ವರ್ಷಗಳ ಪೊಲೀಸ್ ಸೇವೆ ನಂತರ ನಿವೃತ್ತರಾಗುತ್ತಿದ್ದಾರೆ. ಅವರು ಮೂರು ತಿಂಗಳ ಮಟ್ಟಿಗೆ ಸೇವಾವಧಿ ವಿಸ್ತರಣೆಗೆ ಕೋರಿಕೊಂಡಿದ್ದರೂ ಅದನ್ನು ಮಾನ್ಯ ಮಾಡುವ ಸಾಧ್ಯತೆ ಕಡಿಮೆ.
ಪ್ರಶಾಂತ್ ಠಾಕೂರ್ ಹಿರಿತನ, ಇಲ್ಲ ಚುರುಕುತನ
ಈ ನಡುವೆ 1992 ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ, ಸದ್ಯ ಲೋಕಾಯುಕ್ತ ಡಿಜಿಪಿಯಾಗಿರುವ ಪ್ರಶಾಂತ್‌ಕುಮಾರ್ ಠಾಕೂರ್ ಹೆಸರು ಹಿರಿತನದ ಮೇಲೆ ಪರಿಗಣನೆಗೆ ಬರಲಿದೆ. ಆದರೆ ಅವರು ಕರ್ನಾಟಕ ಸೇವೆಯಲ್ಲಿ ಎಸ್ಪಿಯಂತಹ ಹುದ್ದೆ ನಂತರ ಪ್ರಮುಖ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿಲ್ಲ. ಸಾರ್ವಜನಿಕ ಸ್ನೇಹಿಯೂ ಅಲ್ಲ. ಅಲ್ಲದೇ ಉನ್ನತ ಹುದ್ದೆಯಲ್ಲಿರುವವರು ಕೆಲವೊಮ್ಮೆ ಸಿಎಂ, ಗೃಹ ಸಚಿವರ ಸಹಿತ ಪ್ರಮುಖರೊಂದಿಗೆ ಉತ್ತಮ ಸಂಬಂಧ ಹೊಂದಿರಬೇಕಾಗುತ್ತದೆ. ಠಾಕೂರ್ ಇದರಿಂದ ಕೊಂಚ ದೂರವೇ. ಅದೇ ಅವರಿಗೆ ನಗೆಟಿವ್ ಅಂಶ. ಈ ಕಾರಣದಿಂದ ಇವರಿಗೆ ಉನ್ನತ ಹುದ್ದೆ ನೀಡುವ ವಿಚಾರದಲ್ಲಿ ಸಿಎಂ ಆದಿಯಾಗಿ ಹಿರಿಯರಿಗೆ ಮನಸು ಇದ್ದಂತಿಲ್ಲ.
ಇವರನ್ನು ಬಿಟ್ಟರೆ ಮುಂದೆ 1993 ನೇ ಸಾಲಿನ ಐಪಿಎಸ್ ಅಧಿಕಾರಿಗಳಾದ ಡಾ.ಎಂ.ಎ.ಸಲೀಂ, ಡಾ.ರಾಮಚಂದ್ರರಾವ್, ಡಾ.ಮಾಲಿನಿ ಕೃಷ್ಣಮೂರ್ತಿ ಅವರ ಹೆಸರು ಇದೆ. ಇದರಲ್ಲಿ ಮಾಲಿನಿ ಬರುವ ಜುಲೈಗೆ ನಿವೃತ್ತಿಯಾಗುವರು. ಸಲೀಂ ಹಾಗೂ ರಾಮಚಂದ್ರರಾವ್ ಅವರಿಗೆ ಬಹುತೇಕ ಒಂದು ವರ್ಷ ಸೇವಾವಧಿ ಇದೆ. ಇದರಲ್ಲಿ ಸಲೀಂ ಹಾಗೂ ರಾಮಚಂದ್ರರಾವ್ ಅವರ ಹೆಸರು ಪರಿಗಣನೆಯಲ್ಲಿತ್ತು. ಒಂದು ತಿಂಗಳಿನಿಂದ ರಾಮಚಂದ್ರರಾವ್ ಅವರ ಹೆಸರು ಮಲಪುತ್ರಿ ರನ್ಯಾರಾವ್ ಬಹುಕೋಟಿ ಚಿನ್ನಸಾಗಣೆ ಪ್ರಕರಣದಲ್ಲಿ ತಳುಕು ಹಾಕಿಕೊಂಡಿದೆ. ಇದರಿಂದ ಅವರ ಹೆಸರು ಬಹುತೇಕ ಹಿಂದಕ್ಕೆ ಹೋಗಿದೆ.
ಸಲೀಂ ಸಮರ್ಥತೆ
ಡಾ.ಸಲೀಂ ಅವರು ಮೂರು ದಶಕದ ಅವಧಿಯಲ್ಲಿ ಒಳ್ಳೆಯ ಕೆಲಸ ಮಾಡಿಕೊಂಡು ಬಂದಿದ್ದಾರೆ. ಕುಶಾಲನಗರ ಎಎಸ್ಪಿ, ಉಡುಪಿ, ಹಾಸನ ಎಸ್ಪಿ, ಮೈಸೂರು ನಗರ ಪೊಲೀಸ್ ಆಯುಕ್ತ, ದಾವಣಗೆರೆ ಐಜಿಪಿ, ಬೆಂಗಳೂರು ನಗರ ಸಂಚಾರ ವಿಭಾಗದ ಮುಖ್ಯಸ್ಥರಾಗಿ ಈಗ ಸಿಐಡಿ ಡಿಜಿಪಿಯಾಗಿದ್ದಾರೆ. ಸಂಚಾರ ವಿಷಯದಲ್ಲಿಯೇ ಪಿಎಚ್‌ಡಿ ಮಾಡಿದ್ದಾರೆ. ಮೈಸೂರು ನಗರ ಪೊಲೀಸ್ ಆಯುಕ್ತರಾಗಿದ್ದಾಗ ಕೈಗೊಂಡ ಸಂಚಾರ ಸುಧಾರಣೆಗಳು ಗಮನ ಸೆಳೆದಿವೆ. ಬೆಂಗಳೂರಿನಲ್ಲಿ ಕೂಡ ಇದೇ ನಿಟ್ಟಿನಲ್ಲಿ ಕೆಲಸ ಮಾಡಿದವರು. ಕಾರ್ಯದಕ್ಷತೆ ಜತೆಗೆ ಸಲೀಂ ಅವರು ತುಮಕೂರು ಜಿಲ್ಲೆಯವರು. ಕನ್ನಡಿಗರು. ಜತೆಗೆ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವರು ಎನ್ನುವುದು ಸೇರಿದಂತೆ ಹಲವು ಮೂರ್ನಾಲ್ಕು ಕಾರಣದಿಂದಲೂ ಅವರೇ ಡಿಜಿಪಿಯಾಗಲು ಅರ್ಹರು ಎನ್ನುವ ಅಂಶಗಳನ್ನು ಪಟ್ಟಿ ಮಾಡಲಾಗಿದೆ.
ಕರ್ನಾಟಕದಲ್ಲಿ ಎಂಬತ್ತರ ದಶಕದಲ್ಲಿ ನಿಜಾಮುದ್ದೀನ್ ನಂತರ ಕೇರಳದ ಎಆರ್ ಇನ್ಫಂಟ್ ಅವರು ಡಿಜಿಪಿಯಾಗಿದ್ದರು. ಈಗ ಸಲೀಂ ಅವರನ್ನು ಬಿಟ್ಟರೆ ಆ ವರ್ಗದವರು ಡಿಜಿಪಿಯಾಗುವುದಕ್ಕೆ ಬಹು ವರ್ಷವೇ ಕಾಯಬೇಕು. ಅದರಲ್ಲೂ ಕನ್ನಡಿಗರಲ್ಲಿ ಯಾರು ಇತ್ತೀಚಿನ ವರ್ಷಗಳಲ್ಲಿ ಡಿಜಿಪಿಯಾಗಿಲ್ಲ ಎನ್ನುವುದು ಅವರ ಪರವಾದ ಅಂಶಗಳು.
ಹಿಂದಿನ ನೇಮಕ ವಿವಾದ
ಹಿಂದೆ ಹಿರಿತನ ಆಧರಿಸಿ ಡಿಜಿಪಿ ಹುದ್ದೆಗೆ ಬೇರೆಯವರನ್ನು ನೇಮಿಸಿದ ಉದಾಹರಣೆ ಕರ್ನಾಟಕದಲ್ಲಿದೆ. ಶ್ರೀನಿವಾಸುಲು ಅವರನ್ನು ಜನತಾದಳ ಸರ್ಕಾರ ಬದಲಾಯಿಸಿದಾಗ ಅವರು ನ್ಯಾಯಾಲಯ ಮೊರೆ ಹೋಗಿ ಹುದ್ದೆ ಪಡೆದುಕೊಂಡಿದ್ದರು. ಹಾಗೇನಾದರೂ ಹುದ್ದೆ ತಪ್ಪಿಸಿದರೆ ಪ್ರಶಾಂತ್‌ಕುಮಾರ್ ಠಾಕೂರ್ ಕಾನೂನು ಸಮರಕ್ಕೆ ಇಳಿಯುವರೇ ಎನ್ನುವ ಪ್ರಶ್ನೆಗಳು ಇವೆ. ಈ ಎಲ್ಲಾ ಅಂಶಗಳನ್ನು ಗಮನಿಸಿಯೇ ಡಿಜಿಪಿ ಹುದ್ದೆಗೆ ಸಿಎಂ ಅಧ್ಯಕ್ಷತೆಯ ಸಮಿತಿ ಆಯ್ಕೆ ಪಟ್ಟಿಯನ್ನು ಸದ್ಯವೇ ಅಂತಿಮಗೊಳಿಸಬಹುದು ಎಂದು ಮೂಲಗಳು ತಿಳಿಸಿವೆ.

ವಿಭಾಗ