ಕ್ಯಾಬಿನೆಟ್ ಉಪ ಸಮಿತಿ ವರದಿಯೇ ಬಂದಿಲ್ಲ,ವಿಶ್ವ ವಿದ್ಯಾಲಯಗಳನ್ನು ಮುಚ್ಚುವ ಬಗ್ಗೆ ತೀರ್ಮಾನ ಆಗಿಲ್ಲ: ಸಿಎಂ
ಕರ್ನಾಟಕದಲ್ಲಿ ಮೂರು ವರ್ಷದ ಹಿಂದೆ ಆರಂಭಗೊಂಡಿದ್ದ ಒಂಬತ್ತು ವಿಶ್ವವಿದ್ಯಾನಿಲಯಗಳನ್ನು ಮುಚ್ಚುವ ತೀರ್ಮಾನ ಮಾಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರು: ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಪ್ರಮುಖ ವಿಶ್ವವಿದ್ಯಾಲಯಗಳನ್ನು ವಿಭಜಿಸಿ ಹೊಸದಾಗಿ ರೂಪಿಸಿದ ಒಂಬತ್ತು ವಿಶ್ವವಿದ್ಯಾಲಯಗಳ ಭವಿಷ್ಯ ಹೊಯ್ದಾಟ ಶುರುವಾಗಿದೆ. ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಉಪಸಮಿತಿ ಮುಚ್ಚುವ ಕುರಿತು ಪ್ರಸ್ತಾಪಿಸಿದ್ದರೆ, ಬಿಜೆಪಿ ಇದನ್ನು ಪ್ರಬಲವಾಗಿ ವಿರೋಧಿಸುತ್ತಿದೆ. ಕರ್ನಾಟಕದ ವಿಧಾನಮಂಡಲ ಅಧಿವೇಶನದಲ್ಲೂ ಈ ಕುರಿತು ಚರ್ಚಗಳು ನಡೆದಿವೆ. ಇದರ ನಡುವೆಯೇ ವಿಶ್ವ ವಿದ್ಯಾಲಯಗಳನ್ನು ಮುಚ್ಚುವ ಬಗ್ಗೆ ತೀರ್ಮಾನ ಆಗಿಲ್ಲ: ಕ್ಯಾಬಿನೆಟ್ ಉಪ ಸಮಿತಿ ವರದಿಯೇ ಇನ್ನೂ ಬಂದಿಲ್ಲ. ಉಪ ಸಮಿತಿ ವರದಿ ಬರುವ ಮೊದಲೇ ಬಿಜೆಪಿಗೆ ಆತಂಕ ಏಕೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದಲ್ಲಿ ತಿಳಿಸಿದರು.
ಈ ಬಗ್ಗೆ ವಿರೋಧ ಪಕ್ಷದ ಸದಸ್ಯರು ವ್ಯಕ್ತಪಡಿಸಿದ ಆತಂಕಕ್ಕೆ ಉತ್ತರಿಸಿದ ಸಿಎಂ, ಉಪ ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ಈ ಸಂಗತಿಯ ಕೂಲಂಕುಷ ಪರಿಶೀಲನೆಗೆ ಉಪ ಸಮಿತಿ ರಚಿಸಲಾಗಿದೆ. ಉಒ ಸಮಿತಿ ವರದಿ ಕೊಡುವುದು ಬಾಕಿ ಇದೆ. ವರದಿ ಬರುತ್ತಿದ್ದಂತೆ ಅದನ್ನು ಕ್ಯಾಬಿನೆಟ್ ಮುಂದೆ ಇಟ್ಟು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ವರದಿ ಬರುವ ಮೊದಲೇ ವಿವಿಗಳನ್ನು ಮುಚ್ಚುತ್ತೇವೆ ಎನ್ನುವುದು ಸರಿಯಲ್ಲ. ಇಂಥಾ ತೀರ್ಮಾನ ನಮ್ಮಿಂದ ಆಗಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.
ಡಿಸಿಎಂ ನೇತೃತ್ವದಲ್ಲಿ ಸಮಿತಿ
ಕರ್ನಾಟಕದಲ್ಲಿ ರಚಿಸಲಾದ ಹೊಸ ವಿಶ್ವವಿದ್ಯಾನಿಲಯಗಳ ಪ್ರಗತಿ ಕುರಿತು ಚರ್ಚೆಗಳು ನಡೆದಿದ್ದವು. ಇದು ರಾಜ್ಯದ ಶೈಕ್ಷಣಿಕ ವಿಚಾರ, ಇದರಲ್ಲಿ ವೈಯಕ್ತಿಕ ಉದ್ದೇಶವೇನಿಲ್ಲ. ವಿದ್ಯಾರ್ಥಿಗಳ ಭವಿಷ್ಯ ನಮಗೆ ಮುಖ್ಯ. ಉಪನ್ಯಾಸಕರು ಮೈಸೂರಿನಿಂದ ಚಾಮರಾಜನಗರ, ಮಂಡ್ಯಗೆ ಹೋಗಲು ತಯಾರಿಲ್ಲ. ಸೀನಿಯಾರಿಟಿಗೆ ತೊಂದರೆಯಾಗುತ್ತೆಂಬ ಆತಂಕ ಅವರಿಗಿದೆ. ಈ ಹಿಂದೆ ಒಂದು ವಿಶ್ವವಿದ್ಯಾಲಯಕ್ಕೆ 2 ಕೋಟಿ ರೂ. ಮೀಸಲು ಇಡಲಾಗಿತ್ತು. ಈಗ ಹೊಸ ವಿವಿಗೆ ಜಮೀನು ಇಲ್ಲ, ಅಲ್ಲಿಗೆ ಹೋಗುವವರೂ ಇಲ್ಲವೆಂದು ಸಭೆಯಲ್ಲಿ ಸಚಿವರು, ಅಧಿಕಾರಿಗಳು ಅಭಿಪ್ರಾಯ ತಿಳಿಸಿದ್ದಾರೆ. ಈ ವಿಚಾರವನ್ನು ಸಂಪುಟ ಮುಂದೆ ಇಡುತ್ತೇವೆ. ಮುಖ್ಯಮಂತ್ರಿಗಳಿಗೂ ಈ ಕುರಿತು ವಿವರಣೆ ನೀಡಲಾಗುತ್ತದೆ ಎಂದು ಹೇಳಿದ್ದರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್.
ವರದಿಯಲ್ಲಿ ಏನಿದೆ
ಕರ್ನಾಟಕದಲ್ಲಿ ಬೆಂಗಳೂರು ವಿವಿ ವಿಭಜಿಸಿ ಬೆಂಗಳೂರು ಮಹಾರಾಣಿ ಕ್ಲಸ್ಟರ್, ಬೆಂಗಳೂರು ನೃಪತುಂಗ ವಿಶ್ವವಿದ್ಯಾನಿಲಯ, ಮೈಸೂರು ವಿಶ್ವವಿದ್ಯಾನಿಲಯ ವಿಭಜಿಸಿ ಹಾಸನ, ಚಾಮರಾಜನಗರ ಹಾಗೂ ಮಂಡ್ಯ, ಬೆಳಗಾವಿ ವಿವಿ ವಿಭಜಿಸಿ ಬಾಗಲಕೋಟೆ, ಕರ್ನಾಟಕ ವಿವಿ ವಿಭಜಿಸಿ ಹಾವೇರಿ, ಕಲಬುರಗಿ ವಿವಿ ವಿಭಜಿಸಿ ರಾಯಚೂರು, ಬೀದರ್, ಬಳ್ಳಾರಿ ವಿವಿ ವಿಭಜಿಸಿ ಕೊಪ್ಪಳ. ಮಂಗಳೂರು ವಿವಿ ವಿಭಜಿಸಿ ಕೊಡಗು ವಿಶ್ವವಿದ್ಯಾನಿಲಯ ಸ್ಥಾಪನೆ ಮಾಡಲಾಗಿತ್ತು. ಆದರ ಕರ್ನಾಟಕ ಸರ್ಕಾರವು ಬಿಜೆಪಿ ಆಡಳಿತಾವಧಿಯಲ್ಲಿ ಸ್ಥಾಪಿಸಲಾದ ಹತ್ತು ಹೊಸ ವಿಶ್ವವಿದ್ಯಾಲಯಗಳ ಪೈಕಿ ಒಂಬತ್ತು ವಿಶ್ವವಿದ್ಯಾಲಯಗಳನ್ನು ಮುಚ್ಚಲು ನಿರ್ಧರಿಸಿದೆ. ಬೀದರ್ ವಿಶ್ವವಿದ್ಯಾಲಯವನ್ನು ಮಾತ್ರ ಉಳಿಸಿಕೊಂಡು ಕೊಡಗು, ಮಂಡ್ಯ, ಹಾಸನ , ಚಾಮರಾಜನಗರ, ಕೊಪ್ಪಳ, ಬಾಗಲಕೋಟೆ, ಹಾವೇರಿ, ಬೆಂಗಳೂರಿನ ಎರಡು ವಿಶ್ವವಿದ್ಯಾಲಯ ಮುಚ್ಚುವ ಸಾಧ್ಯತೆಯಿದೆ. ಆರ್ಥಿಕ ಸಂಕಷ್ಟ ಮತ್ತು ಭೂಮಿ ಕೊರತೆ, ಅಧ್ಯಾಪಕರು, ಸಿಬ್ಬಂದಿ ನೇಮಕ, ಕಟ್ಟಡಗಳ ನಿರ್ಮಾಣವೂ ಪ್ರಮುಖ ಕಾರಣ ಎಂದು ವರದಿಯಲ್ಲಿ ಉಲ್ಲೇಖವಾಗಿದೆ ಎನ್ನಲಾಗುತ್ತಿದೆ.
ಹೊಸ ವಿಶ್ವವಿದ್ಯಾಲಯಗಳನ್ನು ನಡೆಸಲು ಸರ್ಕಾರ ದೊಡ್ಡ ಮೊತ್ತದ ಹಣ ನೀಡಬೇಕು. ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆ ಮತ್ತು ಕಾರ್ಯಾಚರಣೆಗೆ 342 ಕೋಟಿ ಅಗತ್ಯವಿದೆ. ವಿಶ್ವವಿದ್ಯಾಲಯಗಳ ಸ್ಥಾಪನೆಗೆ 100 ರಿಂದ 200 ಎಕರೆ ವಿಸ್ತೀರ್ಣದ ಜಾಗ ಅಗತ್ಯವಿದೆ. ಬಹುತೇಕ ವಿಶ್ವವಿದ್ಯಾಲಯಗಳಿಗೆ ಅಷ್ಟು ಪ್ರಮಾಣದ ಜಮೀನು ಲಭ್ಯವಿಲ್ಲ. 342 ಕೋಟಿ ಮೊತ್ತ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ವೇತನ ಮೂಲಸೌಕರ್ಯ, ಸಲಕರಣೆ, ವಾಹನ, ಪೀಠೋಪಕರಣ ಇತರೆ ವಸ್ತುಗಳ ಖರೀದಿಸುವ ಅಗತ್ಯವಿದೆ ಎಂಬುದು ವರದಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.
ವಿವಿಧೆಡೆ ಹೋರಾಟ
ಈ ನಡುವೆ ವಿಶ್ವವಿದ್ಯಾನಿಲಯ ಮುಚ್ಚುವ ಕುರಿತು ಚರ್ಚೆಗಳು ನಡೆದಿರುವ ನಡುವೆಯೇ ಕೊಡಗು, ಚಾಮರಾಜನಗರ ಸಹಿತ ಹಲವು ಭಾಗಗಳಲ್ಲಿ ಈಗಾಗಲೇ ಹೋರಾಟಗಳು ನಡೆದಿವೆ. ಹೊಸ ವಿಶ್ವವಿದ್ಯಾಲಯ ಮುಚ್ಚಬೇಡಿ. ಆರ್ಥಿಕ ಶಕ್ತಿ ತುಂಬಿ ಎನ್ನುವ ಒತ್ತಾಯವನ್ನು ಮಾಡಲಾಗಿದೆ.
