Monsoon Crop: ಜೂನ್‌ನಲ್ಲಿ ಮಳೆ ಕೊರತೆಯಿಂದ ಬಿತ್ತನೆ ಕುಂಠಿತ; ಅನ್ನದಾತರಿಗೆ ಜುಲೈನಲ್ಲಿ ವರುಣ ಕೃಪೆ ತೋರುವ ವಿಶ್ವಾಸ
ಜುಲೈನಲ್ಲಿ ಉತ್ತಮ ಮಳೆಯಾಗಲಿದ್ದು, ಬಿತ್ತನೆ ಕಾರ್ಯಕ್ಕೆ ಅನುಕೂಲವಾಗಲಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಜೂನ್‌ನಲ್ಲಿ ಮಳೆ ಕೊರತೆಯಾಗಿರುವುದು ಅನ್ನದಾತರ ಆತಂಕಕ್ಕೆ ಕಾರಣವಾಗಿದೆ.
ಬೆಂಗಳೂರು: ಕರ್ನಾಟಕದಲ್ಲಿ (Karnataka) ಮುಂಗಾರು ಮಳೆ (Monsoon Rain) ಕಳೆದ ವರ್ಷಕ್ಕೆ ಹೋಲಿಸಿಕೊಂಡರೆ ಈ ಬಾರಿ ಆರಂಭದಲ್ಲೇ ಕೊರತೆಯಾಗಿದೆ. ಇದರಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ಬಿತ್ತನೆಯಾಗಿಲ್ಲ (Sowing). ಇಷ್ಟೊತ್ತಿಗಾಗಲೇ ಕೆಲವು ಪ್ರದೇಶಗಳಲ್ಲಿ ತೊಗರಿ ಸೇರಿದಂತೆ ಹಲವು ಬೆಳೆಗಳ ಬಿತ್ತನೆ ಕಾರ್ಯ ಮುಗಿಯಬೇಕಿತ್ತು. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದ ಹಿನ್ನೆಲೆಯಲ್ಲಿ ಅದು ಸಾಧ್ಯವಾಗಿಲ್ಲ. 2023ರ ಜೂನ್‌ನಲ್ಲಿ ಮಳೆ ಕಡಿಮೆಯಾಗಿರುವುದು ರೈತರ (Farmers) ಆತಂಕಕ್ಕೆ ಕಾರಣವಾಗಿದೆ.
ಮಂಡ್ಯ, ಮೈಸೂರು, ರಾಮನಗರ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಅನ್ನದಾತರು ಹೊಲವನ್ನು ಹದ ಮಾಡಿಟ್ಟು ಬಿತ್ತನೆಗಾಗಿ ಕಾದು ಕುಳಿತಿದ್ದಾರೆ. ತುಮಕೂರು ಭಾಗದಲ್ಲಿನ ಮಳೆಯ ಬಗ್ಗೆ ಮಾಹಿತಿ ನೀಡಿದ ಪತ್ರಕರ್ತರಾದ ತೋವಿನಕೆರೆ ಪದ್ಮರಾಜು ಅವರು, ಮಧುಗಿರಿ, ಕೊರಟಗೆರೆ, ಶಿರಾ, ಪಾವಗಡ ಈ ಪ್ರದೇಶದ ಮಳೆಯಾಶ್ರಿತವಾಗಿದ್ದು, ಕಳೆದ ವರ್ಷದಷ್ಟು ಈ ಬಾರಿ ನಿರೀಕ್ಷಿತ ಮಳೆಯಾಗಿಲ್ಲ.
ನಮ್ಮ ಭಾಗದಲ್ಲಿ 2022ರ ಮಾರ್ಚ್, ಏಪ್ರಿಲ್, ಮೇ ಹಾಗೂ ಜೂನ್ ನಲ್ಲಿ 500 ಮಿಲಿ ಮೀಟರ್ ಮಳೆಯಾಗಿತ್ತು. ಈ ವರ್ಷದ ನಾಲ್ಕು ತಿಂಗಳಲ್ಲಿ ಇನ್ನೂ 100 ಎಂಎಂ ಮಳೆಯಾಗಿಲ್ಲ. ಕಳೆದ ಬಾರಿ ಅತಿವೃಷ್ಟಿ, ಈ ಬಾರಿ ಅನಾವೃಷ್ಟಿಯಾದಂತಿದೆ. ಇಷ್ಟೊತ್ತಿಗಾಗಲೇ ತೊಗರಿ ಬಿತ್ತನೆಯಾಗಬೇಕಿತ್ತು. ಮಳೆಯ ಕೊರೆತೆಯಿಂದಾಗಿ ಸಂಪೂರ್ಣ ಬಿತ್ತನೆಯಾಗಿಲ್ಲ. ರಾಗಿ ಬಿತ್ತನೆಯದ್ದೂ ಇದೇ ಪರಿಸ್ಥಿತಿದ್ದು, ಈ ತಿಂಗಳ (ಜುಲೈ) ಕೊನೆಯ ವೇಳೆಗೆ ಬಿತ್ತನೆ ಮಾಡುವ ಸಾಧ್ಯತೆ ಇದೆ. ಒಟ್ಟಾರೆಯಾಗಿ ಹೇಳಬೇಕಾದರೆ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಬಿತ್ತನೆ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.
ಬಿತ್ತನೆ ಕಾರ್ಯಕ್ಕೆ ಸಿದ್ಧತೆ: 2022ರ ಮೇ ತಿಂಗಳ ಕೊನೆಯ ವೇಳೆಗೆ ಮಧುಗಿರಿ ತಾಲೂಕುವರೆಗೆ ಕೆರೆಗಳು ಕೊಡಿಯಾಗಿದ್ದವು. ಆದರೆ ಈ ಬಾರಿ ಕೆರೆಗಳಿಗೆ ನೀರು ಬಂದಿಲ್ಲ. 2022ರ ಜೂನ್‌ನಲ್ಲಿ ಒಳ್ಳೆಯ ಮಳೆಯಾಗಿತ್ತು. ಆದರೆ ಈ ವರ್ಷ ಕಡಿಮೆಯಾಗಿದ್ದು, ಅಲ್ಪ ಸ್ವಲ್ಪ ಮಳೆಯಿಂದಾಗಿ ಬಿತ್ತನೆ ಕಾರ್ಯಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ ಎಂದು ವಿವರಿಸಿದ ಪದ್ಮರಾಜು ಅವರು, ನಮ್ಮ ಮನಸ್ಥಿತಿ ಹೇಗೆ ಅಂದರೆ ಕಳೆದ ಬಾರಿ ಚೆನ್ನಾಗಿ ಮಳೆಯಾಗಿತ್ತು, ಹೀಗಾಗಿ ಈ ಸಲ ಕಡಿಮೆಯಾಗಿದೆ ಅಂತ ನಮ್ಮಲ್ಲೇ ಮಾತನಾಡಿಕೊಳ್ಳುತ್ತೇವೆ. ನನ್ನ ಅನುಭದಲ್ಲಿ ಹೇಳವುದಾದರೆ ಹಣೆಬರ ಚೆನ್ನಾಗಿದ್ದರೆ ಉತ್ತಮ ಮಳೆಯಾಗಿ ಬೆಳೆಯೂ ಆಗುತ್ತದೆ ಎಂದಿದ್ದಾರೆ.
ಇದು ಹಳೆ ಮೈಸೂರು ಭಾಗದ ಪರಿಸ್ಥಿಯಾದರೆ ಉತ್ತರ ಕರ್ನಾಟಕದ ಚಿತ್ರಣವೇ ಬೇರೆ ಇದೆ. ವಾಡಿಕೆಯಂತೆ ಜೂನ್ ಮೊದಲ ವಾರದಲ್ಲಿ ಮಳೆ ಸುರಿಯಬೇಕಾಗಿತ್ತು, ಉತ್ತರ ಕರ್ನಾಟಕ ಭಾಗದಲ್ಲಿ ರೋಹಿಣಿ ಮಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತೆ. ಈ ವರ್ಷ ರೋನಿ ಮಳೆ (ರೋಹಿಣಿ ಮಳೆ) ಆಗದೇ ಇರೋದ್ರಿಂದ ಹಲವು ಬೆಳೆಗಳಲ್ಲಿ ಬಿತ್ತನೆ ಕಾರ್ಯ ವಿಳಂಬವಾಗಿದ್ದು, ಕೃಷಿ ಚಟುವಟಿಕೆ ಮೇಲೆ ಭಾರಿ ಪೆಟ್ಟನ್ನು ನೀಡಿದೆ. ಅರಿಶಿಣ ಹಾಗೂ ತೊಗರಿ ಬೆಳೆಯನ್ನು ರೈತರು ಜೂನ್ ಮೊದಲನೇ ವಾರವೇ ಬಿತ್ತನೆ ಕಾರ್ಯ ಮಾಡಬೇಕಾಗಿತ್ತು. ಆದರೆ ವಾಡಿಕೆಯಂತೆ ಮಳೆ ಬಾರದೇ ಇರುವುದರಿಂದ ಇದುವರೆಗೆ ಬಿತ್ತನೆ ಕಾರ್ಯ ಸಾಧ್ಯವಾಗಿಲ್ಲ, ಇನ್ಮುಂದೆ ಬಿತ್ತನೆ ಕಾರ್ಯ ಮಾಡಿದ್ರೆ ಸರಿಯಾಗಿ ಬೆಳೆಯೋದಿಲ್ಲ ಇದರಿಂದ ತೊಗರಿ ಮತ್ತು ಅರಿಶಿನ ಬಿತ್ತನೆಗೆ ಸಂಗ್ರಹಿಸಿದ ಬೀಜಗಳು ರೈತರಲ್ಲೇ ನಾಶವಾಗುತ್ತಿವೆ.
ವಾಡಿಕೆಯಂತೆ ಮಳೆ ಬಾರದೆ ಹಾಗೂ ಕಳೆದ ಎರಡು ಮೂರು ತಿಂಗಳಿನಿಂದ ಕೃಷ್ಣಾ ನದಿಯಲ್ಲಿ ನೀರು ಬರಿದಾಗಿದೆ. ಪರಿಣಾಮವಾಗಿ ಕಬ್ಬು ಬೆಳೆಗಾರರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸದ್ಯ ಹಲವು ಕಬ್ಬಿನ ತೋಟಗಳು ಒಣಗಿ ನಿಂತು ರೈತರಿಗೆ ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದ್ದು, ಇನ್ನು ಕೆಲವು ರೈತರು ಸರಿಯಾಗಿ ನೀರು ಇಲ್ಲದೇ ಇರೋದ್ರಿಂದ ಕಬ್ಬು ಬೆಳೆಯನ್ನು ನಾಶ ಪಡಿಸುತ್ತಿದ್ದಾರೆ.
ಕೃಷ್ಣ ನದಿ ಖಾಲಿ ಖಾಲಿ: ಚಿಕ್ಕೋಡಿ, ಅಥಣಿ, ರಾಯಬಾಗ್ ತಾಲೂಕಿನಲ್ಲಿ ಕೃಷ್ಣಾ ನದಿ ಹರಿದು, ಈ ಭಾಗದಲ್ಲಿ ಕಬ್ಬು ಬೆಳೆಗಾರರು ಹೆಚ್ಚಾಗಿ ಹೊಂದಿದ್ದಾರೆ. ಆದರೆ ವಾಡಿಕೆಯಂತೆ ಮಳೆ ಬಾರದೇ ಇದ್ದಾಗ ಕೃಷ್ಣ ನದಿ ಖಾಲಿಯಾದ ಹಿನ್ನೆಲೆಯಲ್ಲಿ ಕಬ್ಬು ಬೆಳೆಗೆ ನೀರು ಇಲ್ಲದೆ ಇರೋದ್ರಿಂದ ಲಕ್ಷಾಂತರ ರೂಪಾಯಿ ಬೆಳೆ ಒಣಗಿ ನಿಂತಿದೆ. ಒಂದು ಎಕರೆ ಕಬ್ಬು ಬೆಳೆಯಲಿಕ್ಕೆ 40,000 ಖರ್ಚು ಮಾಡಿದ ರೈತ ಇನ್ನೇನು ಐದಾರು ತಿಂಗಳಲ್ಲಿ ಸಕ್ಕರೆ ಕಾರ್ಖಾನೆಗೆ ಕಬ್ಬು ಸರಬರಾಜು ಆಗುತ್ತಿತ್ತು, ಆದರೆ ಮಳೆ ಆಗದ ಪರಿಣಾಮವಾಗಿ ಸದ್ಯ ಈಗ ಬೆಳೆಗಳಿಗೆ ನೀರು ಕಡಿಮೆಯಾಗಿ ಸಂಪೂರ್ಣವಾಗಿ ಒಣಗಿದ್ದು ಅಕ್ಷರಶಃ ಅನ್ನದಾತರು ಕಂಗಾಲಾಗಿದ್ದಾರೆ. ಆಗಿರುವ ಹಾನಿಯನ್ನು ಸರ್ಕಾರ ಸರಿ ಹೊಂದಿಸಿ ಕೊಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಬ್ಬು ಬೆಳೆಗಾರು ಮನವಿ ಸಲ್ಲಿಸುತ್ತಿದ್ದಾರೆ.
ಜುಲೈ ತಿಂಗಳ ಮಳೆಯ ವಿಚಾರವಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಜೊತೆ ಮಾತನಾಡಿದ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರದ ಅಧಿಕಾರಿಯೊಬ್ಬರು, ಜುಲೈನಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜೂನ್ ತಿಂಗಳಲ್ಲಿ ಆಗಿರುವ ನಷ್ಟವನ್ನು ಜುಲೈನಲ್ಲಾದರೂ ಮಳೆರಾಯ ಸರಿದೂಗಿಸುತ್ತಾನಾ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಆಹಾರ ಪದಾರ್ಥಗಳ ಬೆಲೆ ಭಾರೀ ಏರಿಕೆ! ಇದೇ ಕಾರಣವೇ?
ವಿಭಾಗ