ಮನೆಯಲ್ಲಿರೋ ಸಾಕುಪ್ರಾಣಿಗಳ ಆರೈಕೆ ತಲೆನೋವಾಗಿದೆಯೇ, ಎಷ್ಟು ಗಂಟೆ ಏನು ಆಹಾರ ಕೊಡಬೇಕು ಗೊತ್ತಾಗ್ತಾ ಇಲ್ವ, ಬಿಬಿಎಂಪಿ ಮಾರ್ಗಸೂಚಿ ಚೆಕ್ ಮಾಡಿ
ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಸಲಹೆ ಮತ್ತು ಕರ್ನಾಟಕ ಸಾಕು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆ-1960 ಆಧರಿಸಿ ಸಾಕು ಪ್ರಾಣಿಗಳಿಗೆ ಆಹಾರ ನೀಡಲು ಮಾರ್ಗಸೂಚಿಯನ್ನು ಬಿಬಿಎಂಪಿ ಬಿಡುಗಡೆ ಮಾಡಿದೆ. ಯಾವಾಗ ಆಹಾರ ನೀಡಬೇಕು, ಹೇಗೆ ನೋಡಿಕೊಳ್ಳಬೇಕು ಇಲ್ಲಿದೆ ನಿಯಮಗಳ ಪಟ್ಟಿ. (ವರದಿ: ಎಚ್.ಮಾರುತಿ, ಬೆಂಗಳೂರು)

ಬೆಂಗಳೂರು: ಪ್ರಾಣಿಗಳಿಗೆ ಹೇಗೆ, ಯಾವ ಸಮಯಕ್ಕೆ ಆಹಾರ ನೀಡಬೇಕು ಎಂದು ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ (ಬಿಬಿಎಂಪಿ) ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಸಲಹೆ ಮತ್ತು ಕರ್ನಾಟಕ ಸಾಕು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆ-1960 ಆಧರಿಸಿ ಈ ಮಾರ್ಗಸೂಚಿಗಳನ್ನು ಸಿದ್ದಪಡಿಸಲಾಗಿದೆ. ಪ್ರಾಣಿ ಸಮುದಾಯದ ಸಂರಕ್ಷಣೆ ಮತ್ತು ಸಾರ್ವಜನಿಕರ ಸುರಕ್ಷತೆಯಿಂದ ಈ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ನಾಯಿ ಮತ್ತು ಬೆಕ್ಕುಗಳಿಗೆ ಆಹಾರ ನೀಡುವಾಗ ಸಾಕಷ್ಟು ಅಂತರ ಕಾಪಾಡಿಕೊಳ್ಳಬೇಕು. ನಾಯಿ ಮತ್ತು ಬೆಕ್ಕುಗಳು ಆಹಾರಕ್ಕಾಗಿ ಆಕ್ರಮಣ ಮಾಡದಂತೆ ನೋಡಿಕೊಳ್ಳಲು ಸಾದ್ಯವಾದರೆ ಮಾತ್ರ ಸಾರ್ವಜನಿಕರು ಅವುಗಳಿಗೆ ಆಹಾರ ನೀಡಬೇಕು ಎಂದೂ ಸಲಹೆ ನೀಡಿದೆ.
ಬಿಬಿಎಂಪಿ ಮಾರ್ಗಸೂಚಿಯಲ್ಲಿ ಏನಿದೆ?
1) ರಾತ್ರಿ 11.30ರ ನಂತರ ಮತ್ತು ಬೆಳಗಿನ ಜಾವ 5 ಗಂಟೆಗೂ ಮೊದಲು ಆಹಾರ ನೀಡಬಾರದು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.
2) ಪ್ರಾಣಿಗಳಿಗೆ ಹಸಿ ಮಾಂಸ ಮತ್ತು ಹೆಚ್ಚಿನ ಸಕ್ಕರೆ ಅಂಶವಿರುವ ಬಿಸ್ಕೆಟ್ ಗಳನ್ನು ನೀಡಬಾರದು. ಇಂತಹ ಆಹಾರಗಳು ಪ್ರಾಣಿಗಳ ಚುರುಕುತನವನ್ನು ಹೆಚ್ಚಿಸುತ್ತವೆ ಎಂದು ಸಲಹೆ ನೀಡಲಾಗಿದೆ. ಪ್ರಾಣಿಗಳ ಕ್ರೌರ್ಯವನ್ನು ತಡೆಗಟ್ಟಲು ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಆಹಾರ ಪದಾರ್ಥಗಳನ್ನು ಎಸೆಯಬಾರದು.
3) ನಿಗದಿತ ಸ್ಥಳಗಳಲ್ಲಿ ಮಾತ್ರ ನಾಯಿ ಬೆಕ್ಕುಗಳಿಗೆ ಆಹಾರ ನೀಡಬೇಕು. ಈ ಪ್ರಾಣಿಗಳಲ್ಲಿ ಆಕ್ರಮಣಶೀಲತೆಯನ್ನು ತಡೆಯಲು ನಿಯಮಿತವಾಗಿ ಆಹಾರ ನೀಡಬೇಕು, ಇದರಿಂದ ಸಾರ್ವಜನಿಕರಿಗೆ ಪ್ರಾಣಿಗಳಿಂದಾಗುವ ತೊಂದರೆಯನ್ನು ತಪ್ಪಿಸಬಹುದಾಗಿದೆ.
4) ಮಾಲೀಕರು ತಮ್ಮ ಮಾಲೀಕತ್ವದ ಪ್ರಾಣಿಗಳಿಗೆ ನೋವುಂಟು ಮಾಡುವ, ಅಸ್ವಸ್ಥಗೊಳಿಸುವಂತಹ ಕೆಲಸಕ್ಕೆ ಮುಂದಾಗದಂತೆ ಪ್ರದೇಶ ನಿವಾಸಿಗಳ ಸಂಘಗಳು ಮತ್ತು ಅಪಾರ್ಟ್‌ಮೆಂಟ್ ಮಾಲೀಕರಿಗೆ ಉಪ ನಿಯಮಗಳನ್ನು ರೂಪಸಿಬೇಕು.
5) ಪರಿಸರ ಸಂರಕ್ಷಣೆ ಮತ್ತು ಸಾಕು ಪ್ರಾಣಿಗಳನ್ನು ಸಾಕುವ ಹಕ್ಕು ಎಲ್ಲ ನಾಗರೀಕರಿಗೆ ಇರುವುದಿರಂದ ಸಾಕು ಪ್ರಾಣಿಗಳನ್ನು ಸಾಕುವುದನ್ನು ಅಪಾರ್ಟ್‌ಮೆಂಟ್ ಸಂಘಗಳು ನಿಷೇಧಿಸುವಂತಿಲ್ಲ.
6) ಸಾಕು ಪ್ರಾಣಿಗಳನ್ನು ಕೋಲಿನಿಂದ ಬೆದರಿಸುವುದು ಅಥವಾ ಹೊಡೆಯುವುದನ್ನು ಮಾಡುವಂತಿಲ್ಲ. ಸಾಕು ಪ್ರಾಣಿಗಳೊಂದಿಗೆ ಹೇಗೆ ವರ್ತಿಸಬೇಕು ಎಂದು ಭದ್ರತಾ ಸಿಬ್ಬಂದಿ ತರಬೇತಿ ನೀಡಬೇಕು.
7) ಸಾರ್ವಜನಿಕ ಪ್ರದೇಶಗಳಲ್ಲಿ ಸಾಕು ಪ್ರಾಣಿಗಳಿಗೆ ಅವಕಾಶ ಇರಬಾರದು. ಪ್ರಾಣಿಗಳ ಸಂರಕ್ಷಣೆಗೆ ಹಾಲಿ ಇರುವ ಕಾನೂನು ನಿಯಮಗಳನ್ನು ಪಾಲಿಸಬೇಕು ಎಂದೂ ಹೇಳಲಾಗಿದೆ.
ಪ್ರಾಣಿ ಸಾಕಣೆ ನಿಷೇಧಿಸುವುದು ಸರಿಯಲ್ಲ
ಪ್ರಾಣಿಗಳನ್ನು ಸಾಕುವುದನ್ನು ನಿಷೇಧಿಸುವುದು ಅಸಾಧ್ಯ. ಆದರೆ ಇಂತಹ ಸಾಕು ಪ್ರಾಣಿಗಳಿಂದ ಸಾರ್ವಜನಿಕರಿಗೆ, ಪರಿಸರಕ್ಕೆ ತೊಂದರೆ ಉಂಟಾಗದಂತೆ ಎಚ್ಚರಿಕೆವಹಿಸಬೇಕು. ಸಾಕು ಪ್ರಾಣಿಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಜಂತುಹುಳು ನಿರೋಧಕ, ಲಸಿಕೆ ಮತ್ತು ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿಸಬೇಕು. ಈ ಮೂಲಕ ಸಾಕು ಪ್ರಾಣಿಗಳ ಮಾಲೀಕರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಬಿಬಿಎಂಪಿ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
(ವರದಿ: ಎಚ್.ಮಾರುತಿ, ಬೆಂಗಳೂರು)
