ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟಿನಿಂದ ಹುಟ್ಟಿಕೊಳ್ಳುತ್ತಿದೆ ಹೊಸ ಹೊಸ ಸಮಸ್ಯೆ; ಆನ್‌ಲೈನ್ ಕೋಚಿಂಗ್, ವರ್ಕ್‌ಫ್ರಮ್ ಹೋಂಗೆ ಸಲಹೆ
ಬೆಂಗಳೂರಿನಲ್ಲಿ ದಿನೇ ದಿನೇ ನೀರಿನ ಬಿಕ್ಕಟ್ಟು ಹೆಚ್ಚುತ್ತಿದೆ. ಇದರಿಂದ ಹೊಸ ಹೊಸ ಸಮಸ್ಯೆಗಳು ಹುಟ್ಟಿಕೊಳ್ಳುತ್ತಿವೆ. ನಗರದ ಟೆಕಿಗಳು ವರ್ಕ್‌ಫ್ರಂ ಹೋಮ್ ಆಯ್ಕೆ ನೀಡುವುದು ಉತ್ತಮ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅಗ್ನಿಶಾಮದಳಕ್ಕೂ ನೀರಿನ ಕಾವು ತಾಕಿದೆ. (ವರದಿ: ಎಚ್. ಮಾರುತಿ)
ಬೆಂಗಳೂರು: ಈ ವರ್ಷ ಸಿಲಿಕಾನ್ ಸಿಟಿಯಲ್ಲಿ ಬಿಸಿಲ ಬೇಗೆಯ ಜೊತೆಗೆ ನೀರಿನ ಸಮಸ್ಯೆಯೂ ಎದುರಾಗಿದೆ. ನೀರಿನ ಅಭಾವ ಯಾವ ಮಟ್ಟಕ್ಕೆ ಕಾಡುತ್ತಿದೆ ಎಂದರೆ ಹೋಟೆಲ್, ಕೈಗಾರಿಕೆ, ಶಾಲಾ-ಕಾಲೇಜು ಉದ್ಯಾನವನಗಳನ್ನೂ ಕಾಡದೇ ಬಿಟ್ಟಿಲ್ಲ.
ನೀರಿನ ಸಮಸ್ಯೆಯಿಂದಾಗಿ ಕೆಲವು ಕೋಚಿಂಗ್ ಸೆಂಟರ್‌ಗಳು ಆನ್‌ಲೈನ್ ಕೋಚಿಂಗ್ ಆರಂಭಿಸಿವೆ. ಐಟಿ ಬಿಟಿ ಸಂಸ್ಥೆಗಳು ವರ್ಕ್‌ಫ್ರಮ್ ಹೋಂ ಆರಂಭಿಸಿವೆ. ಈ ಸಂಬಂಧ ಕೋವಿಡ್ -19 ಅವಧಿಯಲ್ಲಿ ನಡೆಸಿದಂತೆ ಈಗಲೂ ಆನ್‌ಲೈನ್ ತರಗತಿಗಳನ್ನು ನಡೆಸಲು ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರದ ಅನುಮತಿ ಕೋರಿವೆ.
ಇನ್ನೂ ಕೆಲವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ವರ್ಕ್‌ಫ್ರಮ್ ಹೋಂಗೆ ಸಲಹೆ
ಐಟಿ ಬಿಟಿ ಸಂಸ್ಥೆಗಳು ವರ್ಕ್ ಫ್ರಮ್ ಹೋಂ ಪದ್ಧತಿಯನ್ನು ಮತ್ತೆ ಆರಂಭಿಸಬೇಕು. ಇದರಿಂದ ಸಾವಿರಾರು ಉದ್ಯೋಗಿಗಳು ತಮ್ಮ ತಮ್ಮ ಊರುಗಳಿಗೆ ಹಿಂತಿರುಗುತ್ತಾರೆ. ಇದರಿಂದ ಬೆಂಗಳೂರಿನ ಮೇಲೆ ಅವಲಂಬನೆ ಕಡಿಮೆಯಾಗಲಿದ್ದು, ನೀರಿನ ಉಳಿತಾಯವಾಗಲಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಮನೆಯಿಂದಲೇ ಕೆಲಸ ಕಡ್ಡಾಯಗೊಳಿಸಿದರೆ ಕಚೇರಿ ಮತ್ತು ಮನೆ ಎರಡೂ ಕಡೆ ನೀರಿನ ಉಳಿತಾಯವಾಗುತ್ತದೆ.
ಈ ಹಿಂದೆಯೂ ಮನೆಯಿಂದಲೇ ಕೆಲಸ ಮಾಡುವ ಅನುಭವವಿದ್ದು, ನಾವು ಸಿದ್ದ. ಈ ಪದ್ಧತಿ ಜಾರಿಯಾದರೆ ನಮ್ಮ ನಮ್ಮ ಊರುಗಳಿಗೆ ಹಿಂದಿರುಗುತ್ತೇವೆ. ಸಿಲಿಕಾನ್ ಸಿಟಿಯಲ್ಲಿ ನೀರಿನ ಸಮಸ್ಯೆ ಕಡಿಮೆ ಮಾಡಿದ ಪುಣ್ಯ ನಮ್ಮದಾಗುತ್ತದೆ ಎಂದು ಬರೆದುಕೊಂಡಿದ್ದಾರೆ.
ಮತ್ತೊಬ್ಬ ಟೆಕ್ಕಿ ನಾವು ಕಚೇರಿಯಲ್ಲಿ ಇಂದು ಯಾರು ಸ್ನಾನ ಮಾಡಿಲ್ಲ ಎಂದು ಕಂಡುಹಿಡಿಯುವ ಆಟ ಆಡುತ್ತಿದ್ದೇವೆ ಎಂದು ಎಕ್ಸ್‌ನಲ್ಲಿ ಬರೆದಿದ್ದಾರೆ. ಮತ್ತೊಬ್ಬರು ಸ್ನಾನಕ್ಕೆ ನೀರಿಲ್ಲದೆ ಪರ್ಫ್ಯೂಮ್ ಹಾಕಿಕೊಂಡು ಕಚೇರಿಗೆ ಹೋಗುತ್ತಿದ್ದೇವೆ ಎಂದು ಅಳಲು ತೋಡಿಕೊಂಡಿದ್ದಾರೆ.
ಇದೇ ಪರಿಸ್ಥಿತಿ ಮುಂದುವರೆದರೆ ಬೆಂಗಳೂರು ಮತ್ತು ಗ್ರಾಮೀಣ ಕರ್ನಾಟಕದಲ್ಲಿ ಕುಡಿಯುವ ನೀರಿಗೆ ಭಾರಿ ಅಭಾವ ಉಂಟಾಗುತ್ತದೆ.
ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ಪ್ರತಿದಿನ ಬತ್ತಿ ಹೋಗಿರುವ ಕೆರೆಗಳಿಗೆ 1300 ಎಂಎಲ್‌ಡಿ ಸಂಸ್ಕರಿತ ನೀರನ್ನು ಹರಿಸಲು ಬಿಬಿಎಂಪಿ ನಿರ್ಧರಿಸಿದೆ.
ಕಾವೇರಿ ನೀರನ್ನು ಕುಡಿಯುವ ಉದ್ದೇಶ ಹೊರತುಪಡಿಸಿ ಅನ್ಯ ಉದ್ದೇಶಗಳಿಗೆ ಬಳಸಿದರೆ ಮಾರ್ಚ್ 15 ರಿಂದ 5000 ರೂಪಾಯಿ ದಂಡ ವಿಧಿಸುವುದಾಗಿ ಆದೇಶ ಹೊರಡಿಸಿರುವುದು ಸ್ವಂತ ಮನೆಗಳನ್ನು ಹೊಂದಿರುವವರಿಗೆ ಆತಂಕ ಉಂಟು ಮಾಡಿದೆ. ಕುಡಿಯುವ ನೀರನ್ನು ಕಾರು ತೊಳೆಯಲು ಮತ್ತು ಗಿಡಗಳಿಗೆ ನೀರುಣಿಸಲು ಬಳಸುವಂತಿಲ್ಲ ಎಂದು ಆದೇಶ ಹೇಳಿದೆ.
ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಅನ್ಯ ಉದ್ದೇಶಗಳಿಗೆ ಸಂಸ್ಕರಿತ ನೀರು ಲಭ್ಯವಿರುತ್ತದೆ. ಆದರೆ ಸ್ವಂತ ಮನೆಗಳಲ್ಲಿ ವಾಸಿಸುವವರಿಗೆ ಇರುವುದಿಲ್ಲ ಎನ್ನುತ್ತಾರೆ.
ಸಾಮಾನ್ಯವಾಗಿ ಮನೆಗಳಲ್ಲಿ ಸಣ್ಣ ಕೈತೋಟಗಳಿರುತ್ತವೆ. ಅಲ್ಲಿನ ಗಿಡಗಳಿಗೆ ನೀರಿನ ಅವಶ್ಯಕತೆ ಇರುತ್ತದೆ. ಸಣ್ಣ ಪ್ರಮಾಣದಲ್ಲಿ ಕಾವೇರಿ ನೀರನ್ನು ಬಳಕೆ ಮಾಡಿದರೆ ತಪ್ಪೇನು ಎಂದು ಪ್ರಶ್ನಿಸುತ್ತಾರೆ.
ಅಗ್ನಿಶಾಮಕ ದಳಕ್ಕೂ ಕಾಡುವ ನೀರಿನ ಅಭಾವ
ಮತ್ತೊಂದು ಕಡೆ ಅಗ್ನಿಶಾಮಕ ದಳಕ್ಕೂ ನೀರಿನ ಕೊರತೆ ಕಾಡಲು ಆರಂಭಿಸಿದೆ. ಬೆಂಕಿ ನಂದಿಸಲು ಪ್ರತಿದಿನ 5-6 ಕರೆಗಳು ಬರುತ್ತಿವೆ. ಬೇಸಿಗೆಯಲ್ಲಿ ಬೆಂಕಿ ಹೊತ್ತಿಕೊಳ್ಳುವ ಪ್ರಕರಣಗಳು ಹೆಚ್ಚು. ಆದರೆ ಅಷ್ಟು ಪ್ರಮಾಣದಲ್ಲಿ ನೀರು ಲಭ್ಯವಾಗುತ್ತಿಲ್ಲ ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅನೇಕ ಪ್ಲೇ ಹೋಂ ಮತ್ತು ಪ್ರೀ ನರ್ಸರಿಗಳಲ್ಲಿ ನೀರಿನ ಕೊರತೆ ಉಂಟಾಗಿದ್ದು, ಬಂದ್ ಮಾಡುವುದು ಅನಿವಾರ್ಯ ಎಂದು ಹೇಳುತ್ತಿದ್ದಾರೆ.
ಹೋಟೆಲ್‌ನಲ್ಲೂ ನೀರಿಲ್ಲ
ಹೋಟೆಲ್‌ಗಳಲ್ಲೂ ನೀರಿನ ಅಭಾವ ಎದುರಾಗಿದೆಯಾದರೂ ಇದುವರೆಗೂ ಯಾವುದೇ ಹೋಟೆಲ್ ಮುಚ್ಚಿಲ್ಲ. ಪರಿಸ್ಥಿತಿ ಹದಗೆಟ್ಟರೆ ಸಣ್ಣ ಮತ್ತು ಮಧ್ಯಮ ವರ್ಗದ ಹೋಟೆಲ್‌ಗಳನ್ನು ಮುಚ್ಚಬೇಕಾಗಿ ಬರಬಹುದು ಎಂದು ಹೋಟೆಲ್ ಮಾಲೀಕರು ಹೇಳುತ್ತಾರೆ.
ಈ ಮಧ್ಯೆ ಬಿಬಿಎಂಪಿ ಮತ್ತು ಜಲಮಂಡಳಿ ನೀರು ಪೂರೈಕೆಗೆ ಕೆಎಂಎಫ್‌ನಿಂದ ಹಾಲಿನ ಟ್ಯಾಂಕರ್‌ಗಳನ್ನು ಪಡೆಯುವುದಾಗಿ ತಿಳಿಸಿದೆ.
ಬೆಂಗಳೂರಿನ ನೀರಿನ ಸಮಸ್ಯೆಗೆ ಸಂಬಂಧಿಸಿ ಈ ಸ್ಟೋರಿಗಳನ್ನು ಓದಿ
Bangalore Water Crisis: ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು, ತವರಿನತ್ತ ಹೊರಟರು ಟೆಕ್ಕಿಗಳು ನಗರ ಬಿಟ್ಟು